ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ!
ಕಾಮಗಾರಿಯಿಂದಾಗಿ ಅವ್ಯವಸ್ಥೆ ; ಇನ್ನೂ ಪೂರ್ಣಗೊಳ್ಳದ ಕಾಮಗಾರಿ
Team Udayavani, Jan 6, 2021, 4:32 AM IST
ಕೋಡಿಯಲ್ಲಿ ಪೂರ್ಣಗೊಂಡ ಟ್ಯಾಂಕ್ ಕಾಮಗಾರಿ
ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಅದರಲ್ಲಿಯೂ ಕುಂದಾಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎಂದರೆ ಯಾರೂ ನಂಬಲಾರರು. ಏಕೆಂದರೆ ಜಪ್ತಿಯಲ್ಲಿ ಶುದ್ಧೀಕರಣಗೊಂಡು ಪೈಪ್‌ಲೈನ್ ಹಾದು ಹೋಗುವ ದಾರಿ ಮಧ್ಯದ 6 ಪಂಚಾಯತ್‌ಗಳಿಗೆ ನೀರು ಕೊಡುತ್ತಿದೆ ಪುರಸಭೆ. ಇಲ್ಲೂ 24 ತಾಸು ನೀರು ಸರಬರಾಜಿಗೆ ವ್ಯವಸ್ಥೆಯಾಗುತ್ತಿದೆ. ಅಂತದ್ದರಲ್ಲೂ ನೀರಿನ ಸಮಸ್ಯೆ ಎಂದರೆ ನಂಬಲೇಬೇಕು. ಅದೂ ತಾಂತ್ರಿಕ ಸಮಸ್ಯೆ! ಅಧಿಕಾರಿಗಳ ಉದಾಸೀನದಿಂದಾಗಿ ಉಂಟಾದ ಸಮಸ್ಯೆ.
ಸಮಯ ಇಲ್ಲ
ಕುಡಿಯುವ ನೀರು ಸರಬರಾಜಿಗೆ ಸಮಯ ನಿಗದಿ ಮಾಡಿಲ್ಲ. ತಡರಾತ್ರಿ ನಳ್ಳಿಯಲ್ಲಿ ನೀರು ಬಂದರೆ, ನಡು ಮಧ್ಯಾಹ್ನ ನೀರು ಬಂದರೆ ಹಿಡಿದಿಡುವುದು ಹೇಗೆ ಎನ್ನುವುದು ನಗರದ ಜನತೆಯ ಪ್ರಶ್ನೆ. ಇಷ್ಟಲ್ಲದೇ ನಳ್ಳಿ ನೀರಿನ ವೇಗದಲ್ಲೂ ನಿಧಾನಗತಿಯಿದ್ದು ಒಂದು ಕೊಡ ತುಂಬಲು ತುಂಬ ಹೊತ್ತು ಕಾಯಬೇಕಾದ ಸ್ಥಿತಿ ಇದೆ ಎಂಬ ದೂರಿದೆ. ಹೊಸದಾಗಿ ನಳ್ಳಿ ಸಂಪರ್ಕಕ್ಕೆ ಅರ್ಜಿ ನೀಡಿದರೂ ಸಂಬಂಧಪಟ್ಟ ಸಂಸ್ಥೆಯವರು ಸ್ಪಂದಿಸುತ್ತಿಲ್ಲ. ನಳ್ಳಿ ನೀರಿನ ಸಂಪರ್ಕ ನೀಡುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ. ಈ ಕುರಿತು ಜನರ ಸಮಸ್ಯೆಗೆ ಸ್ಪಂದಿಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರವರೆಗೂ ದೂರು ಹೋಗಿದೆ. ಸಭೆಗಳಲ್ಲಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟರೇ ಸ್ವತಃ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಪುರಸಭೆ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ಹೇಳುವಂತೆ ಅಧಿಕಾರಿಗಳು ಇದಕ್ಕೆಲ್ಲ ಪೂರಕವಾಗಿ ಜನರಿಗೆ ಬೇಕಾದಂತೆ ಇರುವುದೇ ಇಲ್ಲ ಎಂದು. ಪುರಸಭೆ ಸದಸ್ಯ ಗಿರೀಶ್ ಜಿ.ಕೆ. ಅವರು ಕೂಡಾ ಅನೇಕರಿಗೆ ನಳ್ಳಿ ನೀರಿನ ಸಂಪರ್ಕ ನೀಡಿಲ್ಲ ಎಂದು ದೂರುತ್ತಾರೆ. ಪುರಸಭೆ ಸದಸ್ಯೆ ಪ್ರಭಾವತಿ ಅವರು, ಸಮಯಕ್ಕೆ ಸರಿಯಾಗಿ ನಳ್ಳಿ ನೀರು ಬರುತ್ತಿಲ್ಲ. ಒಂದೇ ಪೈಪಿನಲ್ಲಿ ಅನೇಕ ಕಡೆಗಳಿಗೆ ಸಂಪರ್ಕ ನೀಡಿದ ಕಾರಣ ನೀರಿನ ಹರಿವು ಕಡಿಮೆ ಇರುತ್ತದೆ. ಹೊತ್ತಲ್ಲದ ಹೊತ್ತಿನಲ್ಲಿ ನೀರು ಬಿಡುವ ಕಾರಣ ವಾರ್ಡ್‌ನ ನಾಗರಿಕರಿಂದ ದೂರುಗಳು ಬರುತ್ತಿವೆ. ನಳ್ಳಿ ನೀರು ಸರಬರಾಜಿಗೆ ನಿರ್ದಿಷ್ಟ ಸಮಯ ನಿಗದಿ ಮಾಡಬೇಕು. ಸಂಜೆ ಹಾಗೂ ಬೆಳಗ್ಗೆ ತಲಾ 2 ಗಂಟೆ ಅವಧಿ ನೀಡಿದರೂ ಸಾಕಾಗುತ್ತದೆ. 24 ತಾಸಿನ ನೀರು ನೀಡುವ ಕಾಮಗಾರಿ ಸಮರ್ಪಣೆ ಆಗುವವರೆಗೆ ಇಂತಹ ವ್ಯವಸ್ಥೆಯಾದರೂ ಜಾರಿಗೆ ಬರಲಿ ಎನ್ನುತ್ತಾರೆ.
ಕಾಮಗಾರಿ
ನಗರದಲ್ಲಿ 24 ತಾಸು ಕುಡಿಯುವ ನೀರು ನೀಡಬೇಕೆಂದು 35.5 ಕೋ.ರೂ.ಗಳ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಪುರಸಭೆ ವ್ಯಾಪ್ತಿಯ ಜನರಿಗೆ ಹಾಗೂ ವಾಣಿಜ್ಯ ಉದ್ದೇಶಕ್ಕೆ ನಿರಂತರ 24 ತಾಸು ನೀರುಣಿಸಲು ಈ ಯೋಜನೆ ಹಮ್ಮಿ ಕೊಳ್ಳಲಾಗಿದೆ. ಇದರಲ್ಲಿ 23.1 ಕೋ.ರೂ.ಗಳ ಕಾಮಗಾರಿ ನಡೆಯುತ್ತಿದ್ದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಸಾಲದಿಂದ ಕರ್ನಾಟಕ ಸಮಗ್ರ ಕುಡಿಯುವ ನೀರು ನಿರ್ವಹಣೆ ಹೂಡಿಕೆ ಯೋಜನೆ ಮೂಲಕ ಜಲಸಿರಿ ಎಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಕರ್ನಾಟಕ ಸಮಗ್ರ ನೀರು ನಿರ್ವಹಣೆ ಹೂಡಿಕೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೆ ಕೋಲ್ಕತ್ತಾದ ಮೆ| ಜಿ.ಕೆ. ಡಬ್ಲೂé ಕನ್ಸಲ್ಟ್ ಸಂಸ್ಥೆ ತಾಂತ್ರಿಕ ಸಲಹೆ ನೀಡುತ್ತಿದೆ. 2017ರಲ್ಲಿ ಟೆಂಡರ್ ಮಂಜೂರಾಗಿದ್ದು 25 ತಿಂಗಳಲ್ಲಿ ಕಾಮಗಾರಿ ಮುಗಿಯಬೇಕಿತ್ತು. 2021 ಬಂದರೂ ಕಾಮಗಾರಿ ಪೂರ್ಣವಾಗಿಲ್ಲ. ಕಾಮಗಾರಿ ಪೂರ್ಣವಾದ ಬಳಿಕ 96 ತಿಂಗಳುಗ ಳ ಕಾಲ ಅಂದರೆ 8 ವರ್ಷಗಳ ಕಾಲ ಅದರ ನಿರ್ವಹಣೆಯನ್ನು ಕಾಮಗಾರಿ ನಿರ್ವಹಿಸಿದ ಸಂಸ್ಥೆ ಮಾಡಬೇಕು. ಉಚಿತವೇನೂ ಅಲ್ಲ. ಅದಕ್ಕಾಗಿ 12.4 ಕೋ.ರೂ. ನೀಡಲಾಗುತ್ತದೆ.
ಟ್ಯಾಂಕ್ ಪೂರ್ಣ
ಸಂಗಂ ಬಳಿ, ಕೋಡಿ ಸಮುದ್ರ ತೀರದ ಬಳಿ ಟ್ಯಾಂಕ್ ಕಾಮಗಾರಿ ಪೂರ್ಣವಾಗಿದೆ. ಪೈಪ್‌ಲೈನ್ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಮನೆಮನೆಗೆ ಪೈಪ್ ಅಳವಡಿಸಿ ನಳ್ಳಿ ಹಾಕುವ ಕಾರ್ಯವೂ ಅಂತಿಮ ಹಂತದಲ್ಲಿದೆ. ನಳ್ಳಿಗಳಿಗೆ ಮೀಟರ್ ಹಾಕುವ ಕಾರ್ಯ ಮುಕ್ತಾಯ ಹಂತದಲ್ಲಿದೆ.
ಅಂತಿಮ ಹಂತ
ಟ್ಯಾಂಕ್‌ಗಳ ನಿರ್ಮಾಣ ಪೂರ್ಣವಾದ ಕಾರಣ ಈಗ ಬಲ್ಕ್ ಮೀಟರ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಗಾಂಧಿ ಮೈದಾನ ಬಳಿ ಬಲ್ಕ್ ಮೀಟರ್ ಹಾಕಲಾಗಿದ್ದು ಆಶ್ರಯ ಕಾಲನಿಯಲ್ಲಿ ಇನ್ನಷ್ಟೇ ಅಳವಡಿಸಬೇಕಿದೆ. ಜಪ್ತಿ ಬಳಿ ಇದಕ್ಕೆ ಸಂಬಂಧಿಸಿದ ಕೆಲಸಗಳು ಇನ್ನೂ ಪೂರ್ಣವಾಗಿಲ್ಲ. ವಿದ್ಯುತ್‌ಗೆ ಸಂಬಂಧಿಸಿದ ಹಾಗೂ ನೀರು ಮೇಲೆತ್ತುವ ಕೆಲಸಗಳಿಗೆ ಅಂತಿಮ ಪರಿಶೀಲನೆ ನಡೆಯಬೇಕಿದೆ. ಎರಡು ಟ್ಯಾಕ್‌ಗಳಿಂದ ಒಟ್ಟು 6 ಸಾವಿರ ನೀರಿನ ಸಂಪರ್ಕ ನೀಡಲಾಗುತ್ತಿದೆ. 32 ಕಿ.ಮೀ. ಪೈಪ್ ಅಳವಡಿಸಲಾಗುತ್ತಿದೆ. ಕೋಡಿ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕುಡಿಯಲು ಉಪ್ಪು ನೀರು. ಎಲ್ಲಿ ಬಾವಿ ತೋಡಿದರೂ ಉಪ್ಪುನೀರು. ಕೃಷಿಗೂ ಉಪ್ಪುನೀರು. ಆದ್ದರಿಂದ ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಈ ಕಾಮಗಾರಿ ಶೀಘ್ರ ಪೂರ್ಣಗೊಳ್ಳುವ ಅಗತ್ಯವಿದೆ.
ವಿಶೇಷ ಸಭೆ
ಕುಡಿಯುವ ನೀರಿನ ಕಾಮಗಾರಿ ಕುರಿತು ಅನೇಕ ದೂರುಗಳಿವೆ. ಯುಜಿಡಿ ಹಾಗೂ ಕುಡಿಯುವ ನೀರಿನ ಕಾಮಗಾರಿ ಸಮಸ್ಯೆ ಕುರಿತಂತೆ ಪುರಸಭೆಯಲ್ಲಿ ವಿಶೇಷ ಸಭೆ ಕರೆಯಲಾಗಿದೆ. ಇಲ್ಲಿನ ಅಧಿಕಾರಿ, ಸಿಬಂದಿ ಸ್ಪಂದಿಸದ ಕಾರಣ ಹಿರಿಯ ಅಧಿಕಾರಿಗಳನ್ನೇ ಬರಹೇಳಿ ಸಭೆ ನಡೆಸುವಂತೆ ಸದಸ್ಯರ ಒತ್ತಾಯದಂತೆ ಹಿಂದಿನ ಮೀಟಿಂಗ್‌ನಲ್ಲೂ ನಿರ್ಣಯಿಸಲಾಗಿತ್ತು. ಆ ಸಭೆಯಲ್ಲಿ ಇದನ್ನು ಚರ್ಚಿಸಲಾಗುವುದು. ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದೆ. ಬೇಗ ಪೂರ್ಣಗೊಳ್ಳಲಿದೆ.
-ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷರು, ಪುರಸಭೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.