46 ದಿನಗಳಲ್ಲಿ ಮೊಟ್ಟೆಯೊಡೆದ ಕಡಲಾಮೆ ಮರಿಗಳು
Team Udayavani, May 5, 2019, 6:19 AM IST
ಉಪ್ಪುಂದ: ತ್ರಾಸಿ ಸಮೀಪದ ಸನ್ಯಾಸಿಬಲೆ ಕಡಲ ತೀರದಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಪತ್ತೆಯಾಗಿದ್ದ ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳಿಂದ ಅವಧಿಗೂ ಮುನ್ನ ಅಂದರೆ 46 ದಿನಗಳಲ್ಲಿಯೇ ಮೊಟ್ಟೆ ಒಡೆದು ಮರಿಗಳು ಹೊರಬಂದಿರುವುದು ಅಚ್ಚರಿ ಮೂಡಿಸಿದೆ.
ಸಮುದ್ರದಲ್ಲಿರುವ ಆಲಿವ್ ರಿಡ್ಲೆà, ಗ್ರೀನ್ ಟರ್ಟಲ್ ಕಡಲಾಮೆಗಳು ಹೆಚ್ಚಾಗಿ ಮಾರ್ಚ್ ತಿಂಗಳಿನಲ್ಲಿ ಮೊಟ್ಟೆ ಇಡುತ್ತವೆ. 2019ರ ಮಾ. 20ರಂದು 100ಕ್ಕೂ ಮಿಕ್ಕಿ ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳು ಕಂಚುಗೋಡು ಗ್ರಾಮದ ಸನ್ಯಾಸಿಬಲೆ ಕಡಲ ತೀರದಲ್ಲಿ ದೊರಕಿದ್ದವು. ಕಡಲಾಮೆ ಮೊಟ್ಟೆಗಳು ಪತ್ತೆಯಾದ ತತ್‌ಕ್ಷಣ ಸ್ಥಳೀಯರು ಕಡಲಾಮೆ ಸಂರಕ್ಷಣೆ ಕಾರ್ಯನಿರತ ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಇಲಾಖೆಯ ಅಧಿಕಾರಿಗಳ ಸಹಾಯದಿಂದ ದೊರಕಿದ ಮೊಟ್ಟೆಗಳ ಬೆಳವಣಿಗೆಗೆ ಹ್ಯಾಚರಿ ನಿರ್ಮಿಸಿ ಸಂರಕ್ಷಿಸಿದ್ದರು.
ಸ್ಥಳೀಯರಾದ ದಾಮು ಗಣಪತಿ ಖಾರ್ವಿ, ರಾಘವೇಂದ್ರ ಖಾರ್ವಿ, ನಮೋ ಸದಾಶಿವ, ಸತೀಶ ಖಾರ್ವಿ, ಶೇಖರ ಖಾರ್ವಿ, ಶರತ್, ವಿನೋದ, ಅನಿಷ್ ಖಾರ್ವಿ, ವಿನೋದ ಖಾರ್ವಿ ಮತ್ತಿತರರು ಕಡಲಾಮೆ ಮೊಟ್ಟೆ ಸಂರಕ್ಷಣೆಯಲ್ಲಿ ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಯ ಕಾರ್ಯಕರ್ತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸಿದ್ದರು.
52 ದಿನಗಳು ಬೇಕು
ಕಡಲಾಮೆ ಮೊಟ್ಟೆಯಲ್ಲಿ ಮರಿಗಳ ಪೂರ್ಣ ಬೆಳವಣಿಗೆಗೆ 52 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಹ್ಯಾಚರಿಯಲ್ಲಿ 46 ದಿನಗಳಿಗೆ ಮೊಟ್ಟೆ ಒಡೆದು ಮರಿಗಳು ಹೊರಬಂದಿರುವ ಕಡಲಾಮೆ ಮರಿಗಳು ಸ್ಥಳೀಯರಲ್ಲಿಯೂ ಆಶ್ಚರ್ಯ ಮೂಡಿಸಿದೆ. ಬಹುತೇಕ ಮೊಟ್ಟೆಗಳಿಂದ ಮರಿಗಳು ಹೊರ ಬಂದಿದ್ದು, ಇವುಗಳನ್ನು ಕಡಲು ಶಾಂತವಾಗಿರುವ ಸಮಯ ನೋಡಿಕೊಂಡು, ಚಂದ್ರನ ಬೆಳಕಿನಲ್ಲಿ ಮತ್ತೆ ಸಮುದ್ರಕ್ಕೆ ಬಿಡಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.