ಇಕ್ಕಟ್ಟಿನ ರಸ್ತೆಯೊಳಗೆ ಬಂಧಿಯಾದ ಅಗ್ನಿಶಾಮಕ ಠಾಣೆ
Team Udayavani, Sep 14, 2021, 3:20 AM IST
ಬಸ್ರೂರು: ಕುಂದಾಪುರ ತಾ| ವ್ಯಾಪ್ತಿಯ ಅಗ್ನಿ ಶಾಮಕ ಠಾಣೆಯನ್ನು ಕೋಣಿಯಲ್ಲಿ ತೆರೆಯಲಾಗಿದ್ದು, ಆದರೆ ಠಾಣೆಯನ್ನು ಸಂಪರ್ಕಿಸುವ ರಸ್ತೆಯು ಕಿರಿದಾಗಿರುವುದರಿಂದ ಅಗ್ನಿಶಾಮಕ ವಾಹನ ಸಂಚಾರವೇ ಸವಾಲಾಗಿ ಪರಿಣಮಿಸಿದೆ. ಇದರಿಂದಾಗಿ ಇಲ್ಲಿನ ಅಗ್ನಿಶಾಮಕ ಠಾಣೆಯು ಇಕ್ಕಟ್ಟಿನ ರಸ್ತೆಯೊಳಗೆ ಬಂಧಿಯಾದಂತಾಗಿದೆ.
ಕೋಣಿ ವಿಸ್ತಾರವಾದ ಗ್ರಾಮ. ಅನೇಕ ಒಳರಸ್ತೆಗಳನ್ನು ಹೊಂದಿರುವ ಕೋಣಿಯ ಪ್ರೌಢಶಾಲೆಯ ಸಮೀಪ ಕುಂದಾಪುರ ಅಗ್ನಿಶಾಮಕ ಠಾಣೆಯಿದೆ. ಕೋಣಿ ಶಾಲಾ ರಸ್ತೆ ಅಗಲ ಕಿರಿದಾದ ಇಕ್ಕಟ್ಟಿನ ರಸ್ತೆ. ಈ ರಸ್ತೆಯಲ್ಲಿ ಸುಮಾರು 300 ಮೀ. ಸಾಗಿದರೆ ಅಗ್ನಿಶಾಮಕ ಠಾಣೆ ಸಿಗುತ್ತದೆ. ಕೋಣಿ ಎಚ್.ಎಂ.ಟಿ. ರಸ್ತೆಯೂ ಅಗಲ ಕಿರಿದಾಗಿದ್ದು, ಈ ರಸ್ತೆಯಲ್ಲಿ ಸುಮಾರು 400 ಮೀ. ಸಾಗಿದರೆ ಕೋಣಿ ಪ್ರೌಢಶಾಲೆಯ ಸಮೀಪವೂ ಈ ಅಗ್ನಿಶಾಮಕ ಠಾಣೆಯನ್ನು ತಲುಪಬಹುದು.
ಕುಂದಾಪುರ ತಾಲೂಕಿನ ಯಾವ ಕಡೆಯಿಂದ, ಯಾವ ಮೂಲೆಯಿಂದ ಕರೆ ಬಂದರೂ ಅಗ್ನಿಶಾಮಕ ವಾಹನ ಈ ಇಕ್ಕಟ್ಟಿನ ರಸ್ತೆಯಲ್ಲೆ ಸಾಗಿ ರಾಜ್ಯ ಹೆದ್ದಾರಿ ತಲುಪಬೇಕಾಗಿದೆ. ಎದುರಿನಿಂದ ಯಾವುದೇ ಲಘುವಾಹನ ಬಂದರೂ ಎರಡೂ ವಾಹನಗಳು ಅಲ್ಲೆ ಜಾಮ್ ಆಗುತ್ತವೆ. ತುರ್ತು ಸೇವೆ ಸಲ್ಲಿಸಬೇಕಾದ ಅಗ್ನಿಶಾಮಕ ವಾಹನ ಈ ಇಕ್ಕಟ್ಟಿನ ರಸ್ತೆಯೊಳಗೆ ಆಗಾಗ ಈ ರೀತಿಯಾಗಿ ಬಂಧಿಯಾಗುತ್ತಲೇ ಇರುತ್ತದೆ. ಇದು ನಿಜಕ್ಕೂ ದುರಂತದ ಸಂಗತಿ.
ವಿಸ್ತರಣೆಗೆ ಬೇಡಿಕೆ:
ಕುಂದಾಪುರ ತಾಲೂಕಿನ ಯಾವುದೇ ಪ್ರದೇಶದಲ್ಲಿ ಏನಾದರೂ ಅಗ್ನಿ ಅನಾಹುತ, ಇನ್ನಿತರ ಅವಘಡಗಳು ಸಂಭವಿಸಿದಾಗ ತುರ್ತಾಗಿ ಅಲ್ಲಿಗೆ ಹೋಗಿ ಕಾರ್ಯಾಚರಣೆ ಮಾಡುವಂತಹ ಅಗ್ನಿ ಶಾಮಕ ವಾಹನ ಸಂಚರಿಸಲು ಕಿರಿದಾದ ರಸ್ತೆಯಿಂದಾಗಿ ಭಾರೀ ಸಮಸ್ಯೆಯಾಗುತ್ತಿದೆ.
ಈ ಬಗ್ಗೆ ಸಂಬಂಧಪಟ್ಟವರು ಆದಷ್ಟು ಬೇಗ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅಗ್ನಿ ಶಾಮಕ ದಳದ ವಾಹನ ಸಂಚರಿಸುವ ರಸ್ತೆಯ ವಿಸ್ತರಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಗ್ನಿಶಾಮಕ ಠಾಣೆಗೆ ಸಾಗುವ ಈ ಇಕ್ಕಟ್ಟಿನ ರಸ್ತೆಯ ವಿಸ್ತರಣೆಯ ಬಗ್ಗೆ ಶೀಘ್ರ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ರಸ್ತೆ ವಿಸ್ತರಣೆ ಸಂಬಂಧ ಪಂಚಾಯತ್‌ನಿಂದ ಪ್ರಯತ್ನಿಸಲಾಗುವುದು. – ವಸಂತಿ ಮೊಗವೀರ, ಅಧ್ಯಕ್ಷೆ, ಕೋಣಿ ಗ್ರಾ.ಪಂ.
ಅಗ್ನಿಶಾಮಕ ಠಾಣೆಗೆ ಸಾಗುವ ಅಗಲ ಕಿರಿದಾದ ರಸ್ತೆಯನ್ನು ವಿಸ್ತರಿಸುವ ಬಗ್ಗೆ ಮುಂದಿನ ಗ್ರಾಮ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ.-ರಂಗನಾಥ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ,ಕೋಣಿ
-ದಯಾನಂದ ಬಳ್ಕೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.