ಗಂಗೊಳ್ಳಿ: ಬ್ರೇಕ್‌ವಾಟರ್ ಕಾಮಗಾರಿಯಲ್ಲಿ ಬಿರುಕು
Team Udayavani, Sep 21, 2021, 3:30 AM IST
ಗಂಗೊಳ್ಳಿ : ಕಳೆದ ಸುಮಾರು ಎರಡು ವರ್ಷದ ಹಿಂದಷ್ಟೇ ಪೂರ್ಣಗೊಂಡಿದ್ದ ಸುಮಾರು 102 ಕೋಟಿ ರೂ. ವೆಚ್ಚದ ಬ್ರೇಕ್ ವಾಟರ್ ಕಾಮಗಾರಿ ದಿನೇ ದಿನೇ ಕುಸಿತಕ್ಕೊಳಗಾಗುತ್ತಿದ್ದು, ಮೀನುಗಾರರಲ್ಲಿ ಆತಂಕ ಸೃಷ್ಟಿಸಿದೆ. ಕಾಂಕ್ರೀಟ್ ಅನ್ನು ಜೋಡಿಸಿದಲ್ಲಿ ಭಾರೀ ಪ್ರಮಾಣದಲ್ಲಿ ಅಂತರ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಕಾಂಕ್ರೀಟ್ ಜೋಡಣೆ ಮಾಡಿದಲ್ಲಿ ಸಣ್ಣ ಪ್ರಮಾಣದ ಅಂತರ ಇರುತ್ತದೆ. ಆದರೆ ಇಲ್ಲಿನ ಗಾತ್ರ ಸ್ಥಳೀಯರಲ್ಲಿ ಅನುಮಾನ ಮೂಡಿಸಿದೆ.
ತಡೆಗೋಡೆ:
ಇಲ್ಲಿನ ಸಮುದ್ರದಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಸಿ ಅದರಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಷಿಣ ದಿಕ್ಕಿನಲ್ಲಿ ಪಶ್ಚಿಮಕ್ಕೆ ಸುಮಾರು 700 ಮೀ. ಉದ್ದದ ತಡೆಗೋಡೆ ನಿರ್ಮಿಸಲಾಗಿತ್ತು. ಈ ತಡೆಗೋಡೆ ಮೇಲೆ ಕಾಂಕ್ರೀಟ್ ಹಾಸು ಹಾಕಲಾಗಿತ್ತು.
ಸೀವಾಕ್ ಬೇಡಿಕೆ:
ತಡೆಗೋಡೆ ಕಾಮಗಾರಿಯಲ್ಲಿ ನೂರಾರು ಪ್ರವಾಸಿಗರು ಹಾಗೂ ಸ್ಥಳೀಯರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಈ ಪ್ರದೇಶದಲ್ಲಿ ವಿಹರಿಸುತ್ತಿದ್ದರು. ಮಲ್ಪೆ, ಕುಂದಾಪುರದ ಕೋಡಿಯಲ್ಲಿ ನಿರ್ಮಾಣ ಮಾಡಿದ ಸೀವಾಕ್ ಮಾದರಿಯಲ್ಲೇ ಇಲ್ಲೂ ಸೀವಾಕ್ ನಿರ್ಮಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದರು. ಇನ್ನೂ ಈ ಬೇಡಿಕೆ ಈಡೇರಿಲ್ಲ.
ಅಪೂರ್ಣ :
ಗಂಗೊಳ್ಳಿ ಬಂದರಿನಲ್ಲಿ ಅನುಷ್ಠಾನಗೊಂಡಿರುವ ಸುಮಾರು 102 ಕೋಟಿ ರೂ. ವೆಚ್ಚದ ಬ್ರೇಕ್ ವಾಟರ್ ಕಾಮಗಾರಿ ಅಪೂರ್ಣಗೊಂಡಿದ್ದು, ಈ ಬಗ್ಗೆ ಸ್ಥಳೀಯ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ ಬ್ರೇಕ್ ವಾಟರ್ ಕಾಮಗಾರಿಯ ತಡೆಗೋಡೆ ಕುಸಿಯುತ್ತಿರುವುದು ಮೀನುಗಾರರನ್ನು ಚಿಂತೆಗೀಡು ಮಾಡಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ತುರ್ತು ರಕ್ಷಣ ಕಾಮಗಾರಿ ನಿರ್ವಹಿಸಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.
ಕುಸಿತ:
ಇದೀಗ ತಡೆಗೋಡೆಯ ಒಂದು ಭಾಗದಲ್ಲಿ ಕಲ್ಲು ಜಾರಿ ಕಡಲ ಒಡಲು ಸೇರುತ್ತಿದ್ದು, ತಡೆಗೋಡೆ ಕುಸಿಯಲಾರಂಭಿಸಿದೆ. ಕಳೆದ ವರ್ಷ ಕೂಡ ತಡೆಗೋಡೆ ಕುಸಿತಕ್ಕೊಳಗಾಗಿದ್ದು, ಬಳಿಕ ಅದನ್ನು ದುರಸ್ತಿಗೊಳಿಸಲಾಗಿತ್ತು. ಇದೀಗ ಮತ್ತೆ ತಡೆಗೋಡೆ ಕುಸಿತದ ಲಕ್ಷಣ ಕಾಣಿಸಿಕೊಳ್ಳುತ್ತಿದ್ದು ಪರಿಣಾಮ ತಡೆಗೋಡೆಯ ಮೇಲಿನ ಕಾಂಕ್ರೀಟ್ ಹಾಸಿನಲ್ಲಿ ಮತ್ತು ಸುತ್ತಲೂ ನಿರ್ಮಿಸಲಾಗಿರುವ ತಡೆಗೋಡೆಯಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದೆ.
ಬ್ರೇಕ್‌ವಾಟರ್ ಕಾಮಗಾರಿಯಲ್ಲಿ ಉಂಟಾದ ಲೋಪ ಸರಿಪಡಿಸುವ ಜತೆಗೆ ಸೀವಾಕ್ ಮಾದರಿಯಲ್ಲಿ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅದರ ಉಪಯೋಗ ದೊರೆಯುವಂತೆ ಮಾಡಲಿ. ಸಂಬಂಧಪಟ್ಟ ಇಲಾಖೆ ಈ ಕುರಿತು ಮುತುವರ್ಜಿ ವಹಿಸಲಿ.–ವೆಂಕಟೇಶ ಖಾರ್ವಿ,ಮೀನುಗಾರರು, ಗಂಗೊಳ್ಳಿ
ಕಾಂಕ್ರೀಟ್ ಸ್ಲ್ಯಾಬ್‌ಗಳ ಜೋಡಣೆ ಸಂದರ್ಭ ಇಡುವಂತಹ ಅಂತರ ಇದಾಗಿದೆ. ಕೆಲವೆಡೆ ಇಟ್ಟ ಅಂತರ ತುಸು ಹೆಚ್ಚಾಗಿರಬಹುದು. ಆದರೆ ಅನಗತ್ಯ ಆತಂಕ ಬೇಡ. ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ದೋಷಗಳಿದ್ದರೆ ಸರಿಪಡಿಸಲಾಗುವುದು. ಇನ್ನೂ 300 ಮೀ. ಹೆಚ್ಚುವರಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾಗಬೇಕಿದೆ.–ಉದಯ ಕುಮಾರ್‌ಎಂಜಿನಿಯರ್, ಮೀನುಗಾರಿಕೆ ಇಲಾಖೆ ಬಂದರು ವಿಭಾಗ ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.