Gantihole;ಅಂಕಪಟ್ಟಿ ಪರಿಶೀಲನೆ; ದುಬಾರಿ ಶುಲ್ಕ ಇಳಿಸುವಂತೆ ಕುಲಪತಿಗೆ ಶಾಸಕ ಗಂಟಿಹೊಳೆ ಮನವಿ
Team Udayavani, May 19, 2023, 7:22 AM IST
ಕುಂದಾಪುರ: ಪದವೀಧರರು ಉದ್ಯೋಗಕ್ಕೆ ಸೇರುವ ಸಂದರ್ಭ ಸಲ್ಲಿಸುವ ಅಂಕಪಟ್ಟಿಯ ಪರಿಶೀಲನೆ (ವೆರಿಫಿಕೇಶನ್) ಕಡ್ಡಾಯ. ಆದರೆ ಅಂಕಪಟ್ಟಿ ಪರಿಶೀಲನೆಗೆ ಮಂಗಳೂರು ವಿ.ವಿ.ಯ ವಿದ್ಯಾರ್ಥಿಗಳು ದುಬಾರಿ ಶುಲ್ಕ ತೆರಬೇಕಾಗಿದ್ದು, ಇದನ್ನು ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಿ.ವಿ.ಯ ಉಪಕುಲಪತಿಗಳಿಗೆ ಬೈಂದೂರಿನ ನೂತನ ಶಾಸಕ ಗುರುರಾಜ್ ಗಂಟಿಹೊಳೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಪದವೀಧರ ತನ್ನ 6 ಸೆಮಿಸ್ಟರ್‌ಗಳು 6 ಅಂಕಪಟ್ಟಿಗಳನ್ನು ಪರಿಶೀಲಿಸಲು 9 ಸಾವಿರ ರೂ. ಮೂಲ ಶುಲ್ಕ ಹಾಗೂ ಇತರ ಶುಲ್ಕ ಸೇರಿ ಒಟ್ಟು 10,800 ರೂ. ಪಾವತಿಸಬೇಕಾಗುತ್ತದೆ. ಇದು ಮಂಗಳೂರು ವಿ.ವಿ.ಯಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅದರಲ್ಲೂ ಪ್ರಮುಖವಾಗಿ ಗ್ರಾಮಾಂತರ ಪ್ರದೇಶದ ಬಡ ಮಕ್ಕಳಿಗೆ ಹೊರೆಯಾಗಿದೆ. ರಾಜ್ಯದಲ್ಲಿಯೇ ತುಮಕೂರು ವಿ.ವಿ.ಯು 6 ವಿಷಯಗಳ ಅಂಕಪಟ್ಟಿಗೆ ಕೇವಲ 501 ರೂ. ಶುಲ್ಕವನ್ನಷ್ಟೇ ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಮಂಗಳೂರು ವಿ.ವಿ.ಯ ಉಪ ಕುಲಪತಿಗಳು ಉತ್ತಮ ನಿರ್ಧಾರವನ್ನು ಕೈಗೊಂಡು ಕರಾವಳಿಯ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದಾಗಿ ಅವರು ವಿನಂತಿಸಿಕೊಂಡಿದ್ದಾರೆ.
ರಾಜ್ಯದಲ್ಲಿಯೇ ಮಂಗಳೂರು ವಿ.ವಿ. ಮಾತ್ರ ಪ್ರತೀ ಅಂಕಪಟ್ಟಿಗೆ 1,500 ರೂ. ಶುಲ್ಕವನ್ನು ವಿಧಿಸುತ್ತಿದೆ. ವಿದ್ಯಾರ್ಥಿಗಳು ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದು, ಮಂಗಳೂರು ವಿ.ವಿ.ಯಲ್ಲಿ ಮಾತ್ರ ಯಾಕಿಷ್ಟು ದುಬಾರಿ ಅನ್ನುವುದಕ್ಕೆ ಸಂಬಂಧಪಟ್ಟವರು ಉತ್ತರಿಸಲಿ. ಶುಲ್ಕ ಕಡಿಮೆ ಮಾಡಲಿ.
– ಗುರುರಾಜ್ ಗಂಟಿಹೊಳೆ, ಬೈಂದೂರು ಶಾಸಕರು