ಕುಂದಾಪುರ ತಾಲೂಕಿನಲ್ಲೆಡೆ ಭಾರೀ ಮಳೆ, ಮನೆಗೆ ಹಾನಿ
Team Udayavani, Jul 7, 2018, 6:00 AM IST
ಕೋಟೇಶ್ವರ: ಕೋಟೇಶ್ವರದಲ್ಲಿ ಶುಕ್ರವಾರದಂದು ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇಲ್ಲಿನ ಕಾಗೇರಿಯ ಕಿರುಸೇತುವೆಯಿಂದ ಕೋಣಿ ರಸ್ತೆಯ ತಿರುವಿನವರೆಗೆ ಜಲಾವೃತ ಗೊಂಡಿತು.
ಸರಕಾರಿ ಪದವಿ ಕಾಲೇಜು ಸಹಿತ ಕಿರು ಕೈಗಾರಿಕೋದ್ಯಮದ ಫ್ಯಾಕ್ಟರಿಗಳಿಗೆ ತೆರಳುವ ಮಂದಿ ಆ ಮಾರ್ಗವಾಗಿ ಸಾಗಲು ಕಷ್ಟ ಪಡಬೇಕಾದ ಸನ್ನಿವೇಶ ಎದುರಾಯಿತು.
ಹೂಳೆತ್ತದ ಕಾಗೇರಿ ತೋಡು
ಕಾಗೇರಿಗೆ ಸಾಗುವ ರಸ್ತೆಯ ಹೂಳೆತ್ತದೇ ಹಲವು ವರ್ಷ ಕಳೆದಿದ್ದು ಈ ಮಾರ್ಗವಾಗಿ ಮಳೆ ನೀರಿನ ಹೊರ ಹರಿವಿಗೆ ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವುದರಿಂದ ಅಲ್ಲಲ್ಲಿ ನೀರು ನಿಂತು ಕೃತಕ ನೆರೆ ಉಂಟಾಗಿದೆ. ಶುಕ್ರವಾರದಂದು ಕೋಟೇಶ್ವರ, ಬೀಜಾಡಿ, ಗೋಪಾಡಿ, ವಕ್ವಾಡಿ ಪರಿಸರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಇದೇ ರೀತಿಯಲ್ಲಿ ಮಳೆ ಮುಂದುವರಿದಲ್ಲಿ ತಗ್ಗು ಪ್ರದೇಶದ ಅನೇಕ ಕೃಷಿ ಭೂಮಿಗಳು ಜಲಾವೃತಗೊಂಡು ಕೃಷಿ ಹಾನಿಯಾಗುವ ಭೀತಿ ಇದೆ.
ಕೊಲ್ಲೂರಿನಲ್ಲಿ ಭಾರೀ ಮಳೆ
ಕೊಲ್ಲೂರು, ಜಡ್ಕಲ್, ಮುದೂರು ಸಹಿತ ವಂಡ್ಸೆ, ಇಡೂರು ಕುಂಜ್ಞಾಡಿ, ಹೊಸೂರು, ಕೆರಾಡಿ ಪರಿಸರದಲ್ಲಿ ಜು.6ರಂದು ಮುಸಲಧಾರೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕುಂದಾಪುರ: ತಾಲೂಕಿನೆಲ್ಲೆಡೆ ಶುಕ್ರವಾರ ಬೆಳಗ್ಗಿ ನಿಂದಲೇ ಭಾರೀ ಮಳೆಯಾಗಿದೆ. ಜು. 6ರಿಂದ ಪುನರ್ವಸು ನಕ್ಷತ್ರ ಆರಂಭಗೊಂಡಿದ್ದು, ಬೆಳಗ್ಗಿನಿಂದ ಸಂಜೆಯ ವರೆಗೂ ನಿರಂತರ ಮಳೆಯಾಗಿದ್ದು, ಕುಂದಾಪುರ, ಬೈಂದೂರು ತಾಲೂಕಿನ ತಗ್ಗು ಪ್ರದೇಶ ಗಳಲ್ಲಿ ಕೃತಕ ನೆರೆ ಭೀತಿ ಆವರಿಸಿದೆ.
ಭಾರೀ ಮಳೆಯಿಂದಾಗಿ ಕಾಮಗಾರಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಲ್ಲಲ್ಲಿ ನೀರು ನಿಂತು
ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು.
ಮೊಳಹಳ್ಳಿ : ಮನೆ ಕುಸಿತ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೊಳಹಳ್ಳಿ ಗ್ರಾಮದ ಅಣ್ಣಪ್ಪ ಮೊಗೇರ ಅವರು ವಾಸ್ತವ್ಯವಿರುವ ಬಾಡಿಗೆ ಮನೆಯ ಗೋಡೆ ಕುಸಿದು, ಸುಮಾರು 20 ಸಾವಿರ ರೂ. ನಷ್ಟ ಸಂಭವಿಸಿದೆ.