ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Team Udayavani, Apr 26, 2024, 3:32 PM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಹಾಲಾಡಿ, ಗುಡ್ಡಟ್ಟು ಗ್ರಾಮದ ಹೊಳೆಸಾಲಿನ ಮೂಲಕ ಹರಿದು ಬರುವ ವಾರಾಹಿ ಕಾಲುವೆ
ನೀರು ಕೊರ್ಗಿ ಗ್ರಾ.ಪಂ. ವ್ಯಾಪ್ತಿಯ ಹೆಸ್ಕಾತ್ತೂರು ಕಟ್ಟಿನಬುಡದ ಸಮೀಪದಲ್ಲಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟಿನಲ್ಲಿ ಹಲಗೆ ಅಳವಡಿಸಿದ್ದರಿಂದ ಅಪಾರ ಪ್ರಮಾಣದಲ್ಲಿ ಶೇಖರಣೆಯಾಗುತ್ತಿದೆ.
ಭೌಗೋಳಿಕವಾಗಿ ತಗ್ಗು ಪ್ರದೇಶದಲ್ಲೇನೋ ಅಂತರ್ಜಲ ಮಟ್ಟ ವೃದ್ಧಿಯಾಗಿದೆ ಹೊರತು, ಕಿಂಡಿ ಅಣೆಕಟ್ಟಿನ ಬುಡದಲ್ಲಿ ಸಂಗ್ರಹವಾಗಿ ಹೊರಹೋಗುವ ಹೆಚ್ಚುವರಿ ನೀರು ಮಾತ್ರ ಪರಿಸರದಲ್ಲಿನ ಸುಮಾರು ನೂರಾರು ಎಕರೆಗೂ ಅಧಿಕ ಕೃಷಿಭೂಮಿ ಹಾಗೂ ಜನರ ನಿತ್ಯಬಳಕೆಗೆ ಸಮರ್ಪಕವಾಗಿ ಬಳಕೆಯಾಗದೇ ಪೋಲಾಗುತ್ತಿರುವುದು ವಿಪರ್ಯಾಸ.
ಪೋಲಾಗುತ್ತಿರುವ ಅಪಾರ ಪ್ರಮಾಣದ ನೀರು ಕೃಷಿ ಚಟುವಟಿಕೆಗೆ ಸದ್ವಿನಿಯೋಗವಾಗುವ ನಿಟ್ಟಿನಿಂದ ಹೊಳೆ ಸಾಲಿನ ಒಂದು ದಂಡೆಗೆ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಿ, ಬೇಸಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
400+ ಮನೆಗಳಿಗೆ ನೀರಿನ ಸಮಸ್ಯೆ
ಗ್ರಾಮದ ಮೂಲ ಸೆಲೆಯಾದ ಕಟ್ಟಿನಬುಡದಲ್ಲಿ ಸಂಗ್ರಹವಾದ ವಾರಾಹಿ ಕಾಲುವೆ ನೀರನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಗ್ರಾಮೀಣ ರೈತರು ಭತ್ತದ ಕೃಷಿ ಹಾಗೂ ಅಡಿಕೆಯನ್ನು ಬೆಳೆದಿದ್ದರು. ಪ್ರಸ್ತುತ ಏರುತ್ತಿರುವ ತಾಪಮಾನದ ನಡುವೆ ಬತ್ತಿ ಹೋದ ಜಲಮೂಲಗಳಿಗೆ ಜೀವಕಳೆ ತುಂಬುವ ನಿಟ್ಟಿನಿಂದ ಕಟ್ಟಿನಬುಡದ ಸಮೀಪದಲ್ಲಿನ ದುರ್ಬಲವಾಗಿರುವ ಮಣ್ಣಿನ ತಡೆಗೋಡೆಯ ಪರಿಣಾಮ ಸೋರಿಕೆಯಾಗಿ ನೂರಾರು ಎಕರೆ ಕೃಷಿ ಭೂಮಿಗಳಿಗೆ ಆಸರೆಯಾಗಬೇಕಾಗಿದ್ದ ಅಪಾರ ಪ್ರಮಾಣದ ನೀರು ಹೊಳೆಯನ್ನು ಸೇರುತ್ತಿದೆ.
ಈಗಿರುವ ಮಣ್ಣಿನ ದಂಡೆಯ ಬದಲಿಗೆ ವೈಜ್ಞಾನಿಕವಾಗಿ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಿ, ಹರಿಯುವ ನೀರನ್ನು ನೈಸರ್ಗಿಕವಾಗಿರುವ ತೋಡಿನ ಮೂಲಕ ಹಾರ್ಯಾಡಿ ಬಯಲು ಪ್ರದೇಶಗಳೆಡೆಗೆ ಹರಿದು ಹೋಗಲು ಅವಕಾಶ ಕಲ್ಪಿಸಿದಾಗ ಮಾತ್ರ ಕೃಷಿ ಹಾಗೂ ಪರಿಸರದ ಸುಮಾರು 400ಕ್ಕೂ ಅಧಿಕ ಮನೆಗಳಿಗೆ ಎದುರಾಗುವ ಹಲವು ದಶಕಗಳ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಗ್ರಾಮದ ಅಂತರ್ಜಲ ವೃದ್ಧಿಯಾಗಿ ಜಾನುವಾರು ಹಾಗೂ ಪ್ರಾಣಿ, ಪಕ್ಷಿಗಳಿಗೂ ಕೂಡ ಕುಡಿಯುವ ನೀರಿಗೆ ಪ್ರಯೋಜನವಾಗುವುದು ಎನ್ನುವುದು ಸ್ಥಳೀಯ ನಿವಾಸಿ ಗಾಯತ್ರಿ ಜಿ. ಕೆದ್ಲಾಯ ಹಾರ್ಯಾಡಿ ಅವರ ಅಭಿಪ್ರಾಯ.
ನನಸಾಗದ ದಶಕಗಳ ಕನಸು
ಗ್ರಾ.ಪಂ.ವ್ಯಾಪ್ತಿಯ ಜಲಮೂಲಗಳಲ್ಲಿ ಒಂದಾದ ಕಟ್ಟಿನಬುಡದಲ್ಲಿ ಸಂಗ್ರಹವಾಗಿರುವ ವಾರಾಹಿ ಕಾಲುವೆ ನೀರು ಗ್ರಾಮದ ನೈಸರ್ಗಿಕವಾಗಿರುವ ತೋಡಿಗೆ ಹರಿಸಬೇಕು ಎನ್ನುವ ಗ್ರಾಮಸ್ಥರ ಹಲವು ದಶಕಗಳ ಕನಸು ನನಸಾಗದೆ ಉಳಿದಿದೆ.
ಮುಂದಿನ ದಿನಗಳಲ್ಲಿ ಈಗಿರುವ ಹೊಳೆಸಾಲಿನ ಬದಿಯಲ್ಲಿ ಅಸಮರ್ಪಕವಾದ ಮಣ್ಣಿನ ದಂಡೆಗೆ ಕಾಯಕಲ್ಪ ಕಲ್ಪಿಸುವ ನಿಟ್ಟಿನಿಂದ ಸುಮಾರು 30ಅಡಿ ಉದ್ದದ ಕಾಂಕ್ರೀಟ್ ವಾಲ್(ಸೇತುವೆಯ ವರೆಗೆ) ನಿರ್ಮಿಸಿದಾಗ ಮಾತ್ರ ಸಂಗ್ರಹವಾದ ಹೆಚ್ಚುವರಿ ನೀರು ನೈಸರ್ಗಿಕವಾಗಿರುವ ತೋಡಿನಲ್ಲಿ ಹರಿದು ಬತ್ತಿದ ಜಲಮೂಲಗಳಿಗೆ ಆಸರೆಯಾಗುವುದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಕೊರ್ಗಿ ಗ್ರಾ.ಪಂ. ಸದಸ್ಯ ರಾಘವೇಂದ್ರ ಶೆಟ್ಟಿ ಹೆಸ್ಕಾತ್ತೂರು ಆಗ್ರಹಿಸಿದ್ದಾರೆ.
ಅಂತರ್ಜಲ ವೃದ್ಧಿ
ಸುಮಾರು 30 ವರ್ಷಗಳ ಹಿಂದೆ ಹೆಸ್ಕಾತ್ತೂರು ಗ್ರಾಮದಲ್ಲಿ ಬೇಸಗೆಯಲ್ಲಿ ತಲೆದೋರುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಿಂದ ಕಟ್ಟಿನಬುಡ ಎಂಬಲ್ಲಿ ನೂರಾರು ಗ್ರಾಮಸ್ಥರು ಒಂದಾಗಿ ಶ್ರಮದಾನ ಮಾಡಿ ಹೊಳೆಗೆ ಅಡ್ಡಲಾಗಿ ಮಣ್ಣಿನ ದಂಡೆ ನಿರ್ಮಿಸಿ ಜಲಮೂಲಗಳ ಸಂರಕ್ಷಣ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಜತೆಗೆ ಗ್ರಾಮದ ಅಂತರ್ಜಲ ವೃದ್ಧಿಗಾಗಿ ಶ್ರಮಿಸುತ್ತಿದ್ದರು. ಗ್ರಾಮದ ಆರಾಧ್ಯಮೂರ್ತಿ ಗುಡ್ಡಟ್ಟು ಶ್ರೀ ವಿನಾಯಕ ಶ್ರೀಸನ್ನಿಧಿಯಲ್ಲಿನ ತೀರ್ಥ ಬಾವಿಯ ಅಂತರ್ಜಲ ವೃದ್ಧಿಗೂ ಕೂಡ ಈ ಕಟ್ಟಿನಬುಡದಲ್ಲಿ ಸಂಗ್ರಹವಾಗುವ ಜಲಮೂಲಗಳೇ ಆಶ್ರಯವಾಗಿದೆ ಎನ್ನುವುದು ವಿಶೇಷ.
*ಸಂಜೀವ ಮಡಿವಾಳ ಕಟ್ಟಿನಬುಡ, ಸ್ಥಳೀಯರು
* ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.