![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Oct 9, 2024, 1:33 PM IST
ಬೆಳ್ಮಣ್: ನವರಾತ್ರಿ ವೇಷ ಎಂದರೆ ಈಗ ಎಲ್ಲ ಕಡೆ ಹುಲಿಗಳದೇ ಅಬ್ಬರ. ಕೆಲವು ಕಡೆ ಶಾರ್ದೂಲ, ಕರಡಿಗಳು ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವರು ಪ್ರೇತ, ಪೈಂಟರ್ ಮೊದಲಾದ ವೇಷ ಧರಿಸಿ ಮನರಂಜನೆ ನೀಡುತ್ತಾರೆ. ಆದರೆ, ಹಿಂದೆ ನೂರಾರು ಮಾರ್ನೆಮಿ ವೇಷಗಳಿದ್ದವು. ಮೀನು ಮಾರುವುದು, ಮಗು ಆಡಿಸುವುದು, ವಿದೇಶದಿಂದ ಬಂದವನು, ಕಲ್ಲು ಒಡೆಯುವವನು.. ಹೀಗೆ ವೈವಿಧ್ಯಮಯ ವೇಷಗಳಿದ್ದವು. ಕೆಲವೊಂದು ವೇಷಗಳಲ್ಲಿ ಅವಹೇಳನದ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ಕಾನೂನೇ ತಡೆ ಒಡ್ಡಿದೆ. ಕೆಲವು ವೇಷಗಳು ಮುಂದುವವರಿಲ್ಲದೆ ನಿಂತಿದೆ.
ನವರಾತ್ರಿ ಸಂದರ್ಭದಲ್ಲಿ ಹಿಂದೆ ಎಲ್ಲಾ ಕಡೆ ಕಂಡುಬರುತ್ತಿದ್ದ ಜಕ್ಕ ಮದೀನಾ ವೇಷ ಅದರಲ್ಲೊಂದು. ಬಣ್ಣ ಬಣ್ಣದ ವೇಷ ಹಾಕಿಕೊಂಡು, ಚಿತ್ರ ವಿಚಿತ್ರ ಹೆಜ್ಜೆಗಳ ಕುಣಿತ ಪ್ರದರ್ಶಿಸುವ ತಂಡಗಳು ಗಮನ ಸೆಳೆಯುತ್ತಿದ್ದವು. ಇದರಲ್ಲಿ ಒಂದು ಹುಡುಗಿಯ ಪಾತ್ರವೂ ಇರುತ್ತಿತ್ತು. ಈಗ ಇದು ಹೆಚ್ಚಿನ ಕಡೆ ಕಣ್ಮರೆಯಾಗಿದೆ. ಆದರೆ, ಕಡಂದಲೆಯ ಯುವಕರ ತಂಡವೊಂದು ಕಳೆದ ಏಳು ವರ್ಷಗಳಿಂದ ಜಕ್ಕಮದೀನಾ ವೇಷ ಧರಿಸಿ ಮನರಂಜನೆ ನೀಡುತ್ತಾ, ಕಲೆಯನ್ನೂ ಉಳಿಸುತ್ತಿದೆ.
ದಿನವೊಂದಕ್ಕೆ 25 ಸಾವಿರ ರೂ. ಆದಾಯ
ಸುಮಾರು 6 ಮಂದಿಯ ಈ ತಂಡ ನವರಾತ್ರಿಯ ಸಂದರ್ಭ ದಿನವೊಂದಕ್ಕೆ 25 ಸಾವಿರ ರೂ. ಆದಾಯ ಗಳಿಸುತ್ತದೆ ಎಂದು ತಂಡದ ಪ್ರಮುಖ ಉಮೇಶ್ ಅವರೇ ಹೇಳುತ್ತಾರೆ. ಕೆಲವೊಮ್ಮೆ ಮೆರವಣಿಗೆಗಳ ಟ್ಯಾಬ್ಲೋಗಳಲ್ಲಿಯೂ ಈ ತಂಡ ಪ್ರದರ್ಶನ ನೀಡಿ ಭಾರೀ ಆದಾಯ ಗಳಿಸುತ್ತದೆ. ಈ ತಂಡಕ್ಕೆ ರಂಗನಟ ಸುಧಾಕರ ಸಾಲ್ಯಾನ್ ಸಂಕಲಕರಿಯ ಪ್ರೋತ್ಸಾಹ ನೀಡುತ್ತಿದ್ದು ವಿವಿಧ ಟ್ಯಾಬ್ಲೋಗಳಲ್ಲಿಯೂ ಅವಕಾಶ ನೀಡಿದ್ದಾರೆ.
ಜಕ್ಕ ಮದೀನಾ.. ಮುಂಬೈ ಸೆ ಆನಾ…
ಇದು ಮುಂಬಯಿಯಿಂದ ಬಂದ ಒಂದು ತಂಡ ಎಂಬ ನೆಲೆಯಲ್ಲಿ ಹಾಡುಗಳನ್ನು ಹಾಡುತ್ತದೆ. ಹೀಗಾಗಿ ಹಿಂದಿ, ಕನ್ನಡ, ತುಳು, ಉರ್ದು ಹೀಗೆ ಹಲವು ಭಾಷೆಗಳನ್ನು ಬೆರೆಸಿ ಪೋಣಿಸಿದ ಹಾಡುಗಳನ್ನು ಹಾಡಿ ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ.
ಅರೆ ಮುಂಬೈ ಸೆ ಆನಾ… ಕಟೀಲು ಜಾನಾ, ಕಪ್ಪರುಟ್ಟಿ ಖಾನಾ.. ಎಂಬಿತ್ಯಾದಿ ಹಲವು ಸ್ವರಚಿತ ಹಾಡುಗಳನ್ನು ತಂಡ ಹಾಡುತ್ತದೆ. ಕಡಂದಲೆಯ ಈ ತಂಡ ಬೆಳಿಗ್ಗೆ 9 ಗಂಟೆಯಿಂದ ಸಂಜೆಯವರೆಗೆ ವಿವಿಧ ಅಂಗಡಿ, ಮನೆ, ಮಠ, ಮಂದಿರಗಳಿಗೆ ಭೇಟಿ ನೀಡುತ್ತದೆ. ಕೊಟ್ಟ ಹಣವನ್ನು ಪಡೆದು ಖುಷಿಯಿಂದ ತೆರಳುವ ಈ ತಂಡ ದಾರಿ ಮಧ್ಯೆ ಸಿಗುವ ದೇವಳಗಳಲ್ಲಿ ಊಟ ಮುಗಿಸಿ ಮುಂದುವರಿಯುತ್ತದೆ.
ಕಲೆ ಉಳಿದು ಬೆಳೆಯಬೇಕು
ಇದು ನಮ್ಮದೇ ಪರಿಕಲ್ಪನೆ, ಕಳೆದ 7 ವರ್ಷಗಳಿಂದ ಈ ಪ್ರದರ್ಶನ ನೀಡುತ್ತಿದ್ದೇವೆ. ಯಾವುದೇ ಅಪಹಾಸ್ಯ ಮಾಡದೆ ಭಾಷೆಯ ಮಿಶ್ರಣದ ಮೂಲಕವೇ ಮನೋರಂಜನೆ ನೀಡುತ್ತೇವೆ. ಈ ಕಲೆ ಉಳಿದು ಬೆಳೆಯಬೇಕು ಎನ್ನುವುದು ನಮ್ಮ ನಿಜವಾದ ಹಂಬಲ.-ಉಮೇಶ್ ಶಿವಪುರ, ಕಡಂದಲೆ, ಜಕ್ಕ ಮದೀನಾ ತಂಡದ ಪ್ರಮುಖ
ಇವರಿಗೆ ಪ್ರೋತ್ಸಾಹ ಅಗತ್ಯ
ಈ ತಂಡ ಅದ್ಬುತ ಕಲಾ ಪ್ರದರ್ಶನ ನೀಡುತ್ತಿದೆ. ಕಲಾಭಿಮಾನಿಗಳಿಗೆ ಒಂದು ರೀತಿಯ ರಸದೌತಣ ನೀಡಿ ಹಣ ಸಂಪಾದಿಸುತ್ತದೆ. ದಿನಕ್ಕೆ ನೂರಾರು ಮನೆ, ಅಂಗಡಿಗಳಿಗೆ ಭೇಟಿ ನೀಡಿ ದೇವಸ್ತಾನಗಳಿಗೂ ತೆರಳಿ ಪ್ರದರ್ಶನ ನೀಡುತ್ತಿದ್ದಾರೆ. ಇವರಿಗೆ ಪ್ರೋತ್ಸಾಹ ಅಗತ್ಯ.
-ಸುಧಾಕರ ಸಾಲ್ಯಾನ್, ಸಂಕಲಕರಿಯ, ರಂಗ ನಟ
ಜಕ್ಕಮದೀನಾ ಡ್ರೆಸ್ ವಿಚಿತ್ರ
ಜಕ್ಕ ಮದೀನಾ ವೇಷಗಳು ಧರಿಸುವ ಬಟ್ಟೆ ವಿಚಿತ್ರವಾಗಿರುತ್ತದೆ. ಮುಖಕ್ಕೂ ಗಮನ ಸೆಳೆಯುವ ಬಣ್ಣ ಹಾಕುತ್ತಾರೆ. ಪುರುಷ ಪಾತ್ರಗಳು ಟೊಪ್ಪಿ ಹಾಕುವುದು, ಫ್ರಿಲ್ ಇರುವ ಪ್ಯಾಂಟ್ ಧರಿಸುತ್ತವೆ. ಕೈಯಲ್ಲಿ ತಮಟೆ ಮತ್ತು ತಾಳೆ. ಅವರು ಒಬ್ಬರಿಗೊಬ್ಬರು ಉತ್ತರಿಸುತ್ತಾ ಉತ್ತಮ ಸಂವಹನ ನಡೆಸುತ್ತಾರೆ. ಇದರಲ್ಲಿರುವ ಹುಡುಗಿ ಬಣ್ಣ ಬಣ್ಣದ ದಿರಸು ಹಾಕುತ್ತಾಳೆ. ಹೀಗಾಗಿ ಕೆಲವು ಮದುವೆಗಳಲ್ಲಿ ತುಂಬಾ ಬಣ್ಣದ ಬಟ್ಟೆ ಹಾಕಿದ ಹುಡುಗಿಯರನ್ನು ಎಂಥ ಇದು ಜಕ್ಕ ಮದೀನಾ ಡ್ರೆಸ್’ ಎಂದು ಛೇಡಿಸುವುದು ಉಂಟು!
ಒಂಬತ್ತು ದಿನವೂ ಹಾಡು ಹಾಡು!
ಉಮೇಶ್ ಶಿವಪುರ ನೇತೃತ್ವದ ಈ ತಂಡದಲ್ಲಿ ರಾಘು, ಸುಂದರ, ಶೇಖರ, ರವಿ ಮತ್ತಿತರರು ಸೇರಿ 6 ಮಂದಿ ಇದ್ದಾರೆ. ಇಬ್ಬರ ಕೈಯಲ್ಲಿ ತಾಳ, ಇಬ್ಬರ ಕೈಯಲ್ಲಿ ತಮ್ಮಟೆಯ ಸದ್ದು ಬಿಟ್ಟರೆ ಇವರದ್ದು ಸ್ವತಃ ಬಾಯಿಯದ್ದೇ ಶಬ್ದ ಜಾಸ್ತಿ. ನವರಾತ್ರಿಯ ಎಲ್ಲಾ ದಿನಗಳಲ್ಲಿ ತಮ್ಮ ಪ್ರದರ್ಶನ ನೀಡುವ ಈ ತಂಡ ಅಷ್ಟಮಿಯ ಸಂದರ್ಭ ಉಡುಪಿಯಲ್ಲೂ ಪ್ರದರ್ಶನ ನೀಡುತ್ತದೆ.ಇಡೀ ದಿನ ಭಾರೀ ಬೊಬ್ಬಿಟ್ಟರೂ ಒಂಭತ್ತು ದಿನಗಳಲ್ಲಿಯೂ ಸ್ವರ ಕಳೆದು ಕೊಳ್ಳದೇ ಉಳಿಯುವುದು ಅಚ್ಚರಿಗೆ ಕಾರಣವಾಗಿದೆ. ಮಾತ್ರವಲ್ಲ ತಂಡ ಉತ್ತಮ ವಿಚಾರಗಳನ್ನಷ್ಟೇ ಹೇಳುತ್ತದೆ.
-ಶರತ್ ಶೆಟ್ಟಿ ಮುಂಡ್ಕೂರು
You seem to have an Ad Blocker on.
To continue reading, please turn it off or whitelist Udayavani.