ಕಮಲಶಿಲೆ-ಹಳ್ಳಿಹೊಳೆ ಮುಖ್ಯ ರಸ್ತೆ; 6 ಕಿ.ಮೀ. ಅಂತರದಲ್ಲಿ 5ಕ್ಕೂ ಹೆಚ್ಚು ಅಪಾಯಕಾರಿ ತಿರುವು
Team Udayavani, Sep 19, 2020, 4:40 AM IST
ಕಮಲಶಿಲೆ - ಹಳ್ಳಿಹೊಳೆ ಮಾರ್ಗದಲ್ಲಿರುವ ಅಪಾಯಕಾರಿ ತಿರುವು.
ಕುಂದಾಪುರ: ಕಮಲಶಿಲೆಯಿಂದ ಹಳ್ಳಿಹೊಳೆ ಮೂಲಕವಾಗಿ ಕೊಲ್ಲೂರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯ 6 ಕಿ.ಮೀ. ಅಂತರದಲ್ಲಿ 5ಕ್ಕೂ ಹೆಚ್ಚು ಅಪಾಯಕಾರಿ ತಿರುವುಗಳಿದ್ದು, ಆಗಾಗ ಅಪಘಾತಗಳು ಸಂಭವಿಸುತ್ತಲೇ ಇದೆ. ರಸ್ತೆಯ ವಿಸ್ತರಣೆಗೆ ಅನುದಾನ ಮಂಜೂರಾಗಿದ್ದರೂ, ಅಲ್ಲಲ್ಲಿ ಡೀಮ್ಡ್ ಫಾರೆಸ್ಟ್ ಕಾನೂನು ಅಡ್ಡಿಯಾಗಿದೆ. 6 ಕಿ.ಮೀ. ಉದ್ದದ ಕಮಲಶಿಲೆ - ಹಳ್ಳಿಹೊಳೆ ರಸ್ತೆಯ ಕೇವಲ 2.5 ಕಿ.ಮೀ.ವರೆಗೆ ಮಾತ್ರ ವಿಸ್ತರಣೆಯಾಗಿದೆ.
ಕಮಲಶಿಲೆಯಿಂದ ಹಳ್ಳಿಹೊಳೆಯವರೆಗಿನ ಸುಮಾರು 6 ಕಿ.ಮೀ.ವರೆಗಿನ ರಸ್ತೆಯಲ್ಲಿ ಕನಿಷ್ಠ 5ಕ್ಕೂ ಹೆಚ್ಚು ಅಪಾಯಕಾರಿ ತಿರುವುಗಳಿವೆ. ಇದು ಕಿರಿದಾದ ರಸ್ತೆಯಾಗಿದ್ದು, ಬಸ್ ಮತ್ತಿತರ ಘನ ವಾಹನಗಳು ಬಂದಲ್ಲಿ ಇತರ ವಾಹನಗಳು ರಸ್ತೆಯಿಂದ ಕೆಳಗಿಳಿಯಲೇಬೇಕಾಗಿದೆ. ರಸ್ತೆಯ ಅಂಚುಗಳು ಮಳೆಗೆ ಹಾನಿಯಾಗಿರುವುದರಿಂದ ರಸ್ತೆಯಿಂದ ಕೆಳಗೆ ವಾಹನವನ್ನು ಇಳಿಸುವುದು ಕೂಡ ಅಪಾಯಕಾರಿಯಾಗಿದೆ.
ಇನ್ನೂ ಈ ಮಾರ್ಗವಾಗಿ ಪ್ರತಿ ದಿನ ಹತ್ತಾರು ಟ್ರಿಪ್‌ಗ್ಳಲ್ಲಿ ಸರಕಾರಿ ಹಾಗೂ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಈಗ ಕೊರೊನಾ ಹಿನ್ನೆಲೆಯಲ್ಲಿ ಕೆಲ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಕೆಲವು ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಸಿದ್ದಾಪುರ, ಮತ್ತಿತರ ಕಡೆಯಿಂದ ಕಮಲಶಿಲೆ ಮೂಲಕವಾಗಿ ಕೊಲ್ಲೂರಿಗೆ ಯಾತ್ರಾರ್ಥಿಗಳ ನೂರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ.
ತಿರುವು ತೆರವಿಗೆ ಆಗ್ರಹ
ಈ ರಸ್ತೆಯ ವಿಸ್ತರಣೆ ಮಾಡಬೇಕು ಎನ್ನುವುದು ಈ ಭಾಗದ ಜನರ ಬಹು ವರ್ಷಗಳ ಬೇಡಿಕೆಯಾಗಿದೆ. ಪ್ರತಿನಿತ್ಯ ಹತ್ತಾರು ಬಸ್, ಇತರೆ ವಾಹನಗಳು ಸಂಚರಿಸುವುದರಿಂದ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಬಗ್ಗೆ ಸ್ಥಳೀಯರು ಒತ್ತಾಯಿಸುತ್ತಲೇ ಬಂದಿದ್ದಾರೆ. ಇದಲ್ಲದೆ ರಸ್ತೆ ವಿಸ್ತರಣೆ ಮಾಡಿದರೆ 5-6 ಅಪಾಯಕಾರಿ ತಿರುವು ಗಳು ಕೂಡ ತೆರವಾಗಬಹುದು. ಇದರಿಂದ ಸುಗಮ ಸಂಚಾರಕ್ಕೂ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.
10-12 ಕಿ.ಮೀ. ಬಾಕಿ
ಪ್ರಮುಖವಾಗಿ ಸಿದ್ದಾಪುರದಿಂದ ಕಮಲಶಿಲೆ- ಹಳ್ಳಿಹೊಳೆ – ಮುದೂರು- ಜಡ್ಕಲ್‌ವರೆಗಿನ 34 ಕಿ.ಮೀ. ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯು ಹಂತ – ಹಂತವಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದೆ. ಅದರಲ್ಲಿ ಕಮಲಶಿಲೆ – ಹಳ್ಳಿಹೊಳೆ ಹಾಗೂ ಚಕ್ರ ಮೈದಾನದ ಅನಂತರ ಕೆಲ ಭಾಗ ಸೇರಿದಂತೆ ಅಲ್ಲಲ್ಲಿ ಮೀಸಲು ಅರಣ್ಯ ಪ್ರದೇಶ ಬರುವುದರಿಂದ ವಿಸ್ತರಣೆಗೆ ಅಡ್ಡಿಯಾಗಿದೆ. 34 ಕಿ.ಮೀ. ಪೈಕಿ ಇನ್ನು 10-12 ಕಿ.ಮೀ. ರಸ್ತೆ ವಿಸ್ತರಣೆ ಬಾಕಿಯಿದೆ ಎನ್ನುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
2.5 ಕಿ.ಮೀ. ಮಾತ್ರ ವಿಸ್ತರಣೆ
ಹಳ್ಳಿಹೊಳೆ – ಕಮಲಶಿಲೆ 6 ಕಿ.ಮೀ. ಉದ್ದದ ಮುಖ್ಯ ರಸ್ತೆಯ ವಿಸ್ತರಣೆಗೆ ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರ ಮುತುವರ್ಜಿಯಲ್ಲಿ 1.40 ಕೋ.ರೂ. ಅನುದಾನ ಮಂಜೂರಾಗಿತ್ತು. ಕಳೆದ ಫೆಬ್ರವರಿಯಲ್ಲಿ ಕಾಮಗಾರಿ ಕೂಡ ನಡೆದಿತ್ತು. ಆದರೆ ಇದರಲ್ಲಿ ಅಲ್ಲಲ್ಲಿ ಒಟ್ಟು 2.5 ಕಿ.ಮೀ. ಮಾತ್ರ ವಿಸ್ತರಣೆಯಾಗಿದೆ. ಇನ್ನೂ 3 ಕಿ.ಮೀ. ಗಿಂತಲೂ ಹೆಚ್ಚು ಕಡೆಗಳಲ್ಲಿ ವಿಸ್ತರಣೆಯಾಗಬೇಕಿದೆ.
ಡೀಮ್ಡ್ ಫಾರೆಸ್ಟ್ ಅಡ್ಡಿ
ಕಮಲಶಿಲೆ – ಹಳ್ಳಿಹೊಳೆ ರಸ್ತೆ ವಿಸ್ತರಣೆಗೆ ಅನುದಾನ ಮಂಜೂರಾಗಿ, 2.5 ಗಿಂತಲು ಹೆಚ್ಚು ದೂರದವರೆಗೆ ರಸ್ತೆ ವಿಸ್ತರಣೆಯಾಗಿದೆ. ಆದರೆ ಪೂರ್ಣ 6 ಕಿ.ಮೀ. ವಿಸ್ತರಣೆ ಮಾಡಲು ಡೀಮ್ಡ್ ಫಾರೆಸ್ಟ್ ನಿಯಮ ಅಡ್ಡಿಯಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಅರಣ್ಯ ಇಲಾಖೆಗೆ ಅನುಮತಿ ಕೇಳಿದರೂ, ಅವಕಾಶ ನೀಡಿಲ್ಲ. ಆನ್‌ಲೈನ್ ಅನುಮತಿಗೆ ಬೇಡಿಕೆ ಸಲ್ಲಿಸುವಂತೆ ತಿಳಿಸಿದ್ದಾರೆ. ಅದು ಮತ್ತಷ್ಟು ವಿಳಂಬವಾಗಲಿದೆ.
– ರಾಘವೇಂದ್ರ ನಾಯಕ್, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
ಅಪಾಯಕಾರಿ ತಿರುವು
ಕಮಲಶಿಲೆಯಿಂದ ಹಳ್ಳಿಹೊಳೆ ರಸ್ತೆ ವಾಹನ ಸಂಚಾರ ನಿಬಿಡ ರಸ್ತೆಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಅನೇಕ ಕಡೆಗಳಲ್ಲಿ ತಿರುವುಗಳಿದ್ದು, ಆಗಾಗ ವಾಹನಗಳ ಅಪಘಾತ, ನಿಯಂತ್ರಣ ತಪ್ಪಿ ಚರಂಡಿಗೆ ಬೀಳುವ ನಿದರ್ಶನಗಳು ನಡೆಯುತ್ತಲೇ ಇರುತ್ತವೆ.
– ರಾಘವೇಂದ್ರ ಜೋಗಿ, ಕಮಲಶಿಲೆ, ಸ್ಥಳೀಯರು
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.