ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ
Team Udayavani, Mar 28, 2024, 8:00 AM IST
ಕುಂದಾಪುರ: ಕನ್ನಡಕುದ್ರು, ಮೂವತ್ತುಮುಡಿ ಪರಿಸರದಲ್ಲಿ ಕೀಟ ಬಾಧೆಯಿಂದ ತೆಂಗಿನ ಮರಗಳು ಸಾಯುವ ಸ್ಥಿತಿಗೆ ತಲುಪಿ ಬೆಳೆಗಾರರು ಕಂಗಾಲಾಗಿರುವ ಬಗೆಗಿನ ಉದಯವಾಣಿ ವರದಿಗೆ ಸ್ಪಂದಿಸಿರುವ ಕೃಷಿ ವಿಜ್ಞಾನಿಗಳು ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
“ಉದಯವಾಣಿ’ಯು ಮಾ. 25 ರಂದು ಈ ಸಂಬಂಧ ವಿಶೇಷ ವರದಿ ಪ್ರಕಟಿಸಿ, ಗಮನಸೆಳೆದಿತ್ತು.
ಬ್ರಹ್ಮಾವರದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರ ವಿಜ್ಞಾನಿಗಳಾದ ಡಾ| ರೇವಣ್ಣ ರೇವಣ್ಣನವರ್, ಡಾ| ಮೋಹನ್ ಕುಮಾರ್ ವಿ. ಹಾಗೂ ತೋಟಗಾರಿಕಾ ಇಲಾಖೆಯ ಕುಂದಾಪುರದ ಹಿರಿಯ ಸಹಾಯಕ ನಿರ್ದೇಶಕ ನಿಧೀಶ್ ಕೆ.ಜಿ. ಅವರ ತಂಡವು ಪರಿಶೀಲಿಸಿ, ಗರಿಗಳನ್ನು ತಿನ್ನುವ ಕಪ್ಪು ತಲೆ ಹುಳ ಹಾಗೂ ಕೆಲ ಮರಗಳಿಗೆ ಬಿಳಿ ನೊಣಗಳ ಬಾಧೆಯಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೀರು, ಗೊಬ್ಬರ ಕೊರತೆ ಕಾರಣ
ಕನ್ನಡಕುದ್ರು ಸುತ್ತಮುತ್ತ ಎರಡು ವರ್ಷಗಳಿಂದ ಬೇಸಗೆಯಲ್ಲಿ ಶೇ. 80-95 ರಷ್ಟು ತೆಂಗಿನ ಗರಿಗಳಿಗೆ ಈ ಹುಳುಗಳು ಹಾನಿ ಮಾಡಿವೆ. ಇವುಗಳು ತಮಗೆ ಪೂರಕವಾದ ವಾತಾವರಣವಿದ್ದರೆ ವರ್ಷದಲ್ಲಿ 5-6 ಸಂತತಿ ಪೂರ್ಣಗೊಳಿಸುವ ಸಾಮರ್ಥ್ಯವಿದೆ. ಹೆಚ್ಚು ಬಿಸಿಲು, ಸೆಕೆ, ನೀರು ಹಾಗೂ ಪೋಷಕಾಂಶದ (ಪ್ರಮುಖವಾಗಿ ಪೊಟ್ಯಾಷ್)ಕೊರತೆಯಿಂದ ಬಳಲುತ್ತಿರುವ ತೆಂಗಿನ ಮರಗಳಿಗೆ ಈ ಹುಳದ ಬಾಧೆ ಹೆಚ್ಚು. ಈ ಹುಳಗಳು ಎಲೆಗಳ ಪತ್ರಹರಿತ್ತನ್ನು ಕೆದರಿ ತಿನ್ನುತ್ತವೆ. ಇದರಿಂದ ಗರಿಗಳು ಸುಟ್ಟಂತಾಗಿ ಒಣಗುತ್ತವೆ. ಇಲ್ಲಿ ಈ ಹುಳು ಗೂಡು ಹಾಗೂ ಚಿಟ್ಟೆಯ ಹಂತದಲ್ಲಿದೆ. ಈಗಾಗಲೇ ಬಾಧೆಗೊಳಪಟ್ಟ ಗರಿಗಳಲ್ಲಿ ಮರಿ-ಹುಳುಗಳಿಗೆ ಆಹಾರದ ಕೊರತೆಯಿದೆ. ಆದ್ದರಿಂದ ಪೋಷಕಾಂಶಗಳಿಲ್ಲದೇ ಸೊರಗಿದ ತೆಂಗಿನ ತೋಟಗಳಿಗೆ ಈ ಹುಳಗಳು ರಾತ್ರಿ ಹಾರಿ ಹೋಗಿ ಮೊಟ್ಟೆಯಿಟ್ಟು ದಾಳಿ ಮಾಡುತ್ತವೆ ಎಂದಿದ್ದಾರೆ.
ರೈತರಿಗೆ ಪ್ರಾತ್ಯಕ್ಷಿಕೆ
ಕನ್ನಡಕುದ್ರು ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಿಹಿ ನೀರು ಇರುವುದರಿಂದ ಅಷ್ಟೊಂದು ಪ್ರಮಾಣದಲ್ಲಿ ತೆಂಗಿನ ಮರಗಳಿಗೆ ಹಬ್ಬಿಲ್ಲ. ಆದರೆ ಮೂವತ್ತು ಮುಡಿ ಪರಿಸರದಲ್ಲಿ ಉಪ್ಪು ನೀರಿನಾಂಶವೇ ಹೆಚ್ಚಿರುವ ಕಾರಣ ಬಾಧೆ ಹೆಚ್ಚಿದೆ. ಇದರ ನಿಯಂತ್ರಣದ ಬಗ್ಗೆ ರೈತರಿಗೆ ಶೀಘ್ರವೇ ತೋಟಗಾರಿಕಾ ಇಲಾಖೆ ನೇತೃತ್ವದಲ್ಲಿ ಕೃಷಿ ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆ ನಡೆಸಲಾಗುವುದು ಎಂದು ನಿಧೀಶ್ ಕೆ.ಜಿ. ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.