Karkala ಪೊಲೀಸರಿಗೆ ಅತ್ತಿಂದಿತ್ತ ಅಲೆದಾಟದ ಶಿಕ್ಷೆ!
ಹೊಸ್ಮಾರು ಹೊರ ಠಾಣೆ ನನೆಗುದಿಗೆ, ಬೆಳ್ಮಣ್‌ಗೆ ಠಾಣೆ ಸ್ಥಳಾಂತರ ಪ್ರಸ್ತಾವಕ್ಕಿಲ್ಲ ಮನ್ನಣೆ; ನಗರದಲ್ಲೇ ಎರಡೂ ಠಾಣೆ
Team Udayavani, Sep 12, 2024, 1:03 PM IST
ಕಾರ್ಕಳ: ನಾಗರಿಕರಿಗೆ ರಕ್ಷಣೆ ಒದಗಿಸಿ ದೂರುದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕಾದವರೇ ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನುವುದಕ್ಕೆ ಕಾರ್ಕಳ ನಗರ ಹಾಗೂ ಗ್ರಾಮೀಣ ಠಾಣೆ ಪೊಲೀಸರು ನಿದರ್ಶನ. ಹೊಸ್ಮಾರು ಹೊರಠಾಣೆ ಪ್ರಸ್ತಾವನೆ ನನೆಗುದಿದೆ ಬಿದ್ದಿದ್ದರೆ, ಗ್ರಾಮಾಂತರ ಠಾಣೆ ಬೆಳ್ಮಣ್‌ಗೆ
ಸ್ಥಳಾಂತರಿಸುವ ಪ್ರಕ್ರಿಯೆಗೆ ಮನ್ನಣೆ ಸಿಕ್ಕಿಲ್ಲ. ಇದರಿಂದ ಪೊಲೀಸರು ಅಲೆದೂ ಅಲೆದೂ ಸುಸ್ತಾಗುವಂತಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಗಡಿಪ್ರದೇಶಗಳ ಗ್ರಾಮೀಣ ಭಾಗದಲ್ಲಿ ಯಾವುದೇ ಅಪರಾಧ, ಅವಘಡ ಘಟನೆಗಳು ಸಂಭವಿಸಿದರೂ ಅಲ್ಲಿಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಿಂದಲೇ ಪೊಲೀಸರು ತೆರಳಬೇಕು. ಠಾಣೆಯಿಂದ ದೂರದಲ್ಲಿರುವ ಈ ಪ್ರದೇಶಗಳಿಗೆ ತೆರಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಕಾರ್ಕಳ ನಗರದಿಂದ ದೂರವಿರುವ ಮಾಳ, ಬಜಗೋಳಿ, ಹೊಸ್ಮಾರು ಮುಂತಾದ ಪ್ರದೇಶಗಳು ಕಾಡಿನಿಂದ ಆವೃತ ಪ್ರದೇಶಗಳಾಗಿವೆ. ಈ ಭಾಗಗಳಲ್ಲಿ ರಾತ್ರಿ ಹೊತ್ತಲ್ಲಿ ಅನಾಹುತಗಳು ನಡೆದಲ್ಲಿ ತತ್‌ಕ್ಷಣಕ್ಕೆ ತುರ್ತಾಗಿ ಅಲ್ಲಿಗೆ ತಲುಪಲು ಪೊಲೀಸರಿಗೆ ಸಾಧ್ಯವಾಗುತಿಲ್ಲ. ಸರಿಸುಮಾರು 20ರಿಂದ 30 ಕಿ.ಮೀ. ದೂರದವರೆಗೆ ಕ್ರಮಿಸಿ ನಾಗರಿಕರಿಗೆ ಸ್ಪಂದಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಗುತ್ತದೆ. ಹತ್ತಾರು ಗ್ರಾಮಗಳ ಜನತೆ ನಗರದಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯನ್ನೇ ಅವಲಂಬಿಸಬೇಕಿದೆ.
ಹೊಸ್ಮಾರು ಹೊರ ಠಾಣೆ ನನೆಗುದಿಗೆ
ಹೊಸ್ಮಾರಿನಲ್ಲಿ ಈಗಾಗಲೇ ಚೆಕ್‌ಪೋಸ್ಟ್ ಇದೆ. ಕಟ್ಟಡವೂ ಇದೆ. ಅಲ್ಲಿ ಹೊರಠಾಣೆ ತೆರೆಯುವ ಪ್ರಸ್ತಾವ ಈ ಹಿಂದೆ ಇತ್ತು. ಹೊರಠಾಣೆ ತೆರೆದಲ್ಲಿ ಅಲ್ಲಿಗೆ ಓರ್ವ ಎಎಸ್‌ಐ, 3ರಿಂದ 4 ಹೆಡ್‌ಕಾನ್‌ಸ್ಟೆಬಲ್, 5ರಿಂದ 6 ಕಾನ್‌ಸ್ಟೆಬಲ್ ನೇಮಕವಾಗುತ್ತದೆ. ಇದು ಅಪರಾಧ ತಡೆಯಲು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಚೆಕ್‌ಪೋಸ್ಟ್ ಇರುವಲ್ಲಿಯೇ ಕಟ್ಟಡ ಮೇಲ್ದರ್ಜೆಗೇರಿಸಿ ಹೊರಠಾಣೆ ತೆರೆಯುವುದಕ್ಕೆ ಅವಕಾಶವಿದೆ. ಆದರೆ ಪ್ರಸ್ತಾವ ನನೆಗುದಿಗೆ ಬಿದ್ದಿದೆ.ಇದರಿಂದಾಗಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಪೊಲೀಸರೇ ಗ್ರಾಮಾಂತರ ಭಾಗಕ್ಕೂ ತೆರಳಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ.
ಬೆಳ್ಮಣ್‌ಗೆ ಸ್ಥಳಾಂತರ: ಕಡತಕ್ಕೆ ಸೀಮಿತ
ಕಾರ್ಕಳ ತಾಲೂಕಿನ ಮಾಳ ಪರಿಸರದಲ್ಲಿ ಕೆಲವು ವರ್ಷಗಳ ಹಿಂದೆ ನಕ್ಸಲ್ ಚಟುವಟಕೆಗಳು ಹೆಚ್ಚಿತ್ತು. ಅಂದು ಬಜಗೋಳಿಯಲ್ಲಿ ಹೊಸ ಪೊಲೀಸ್ ಠಾಣೆ ತೆರೆಯುವುದು. ಕಾರ್ಕಳದ ಪೊಲೀಸ್ ಠಾಣೆಯನ್ನು ಬೆಳ್ಮಣ್‌ಗೆ ಸ್ಥಳಾಂತರಿಸುವುದು ಎಂದು ಪ್ರಸ್ತಾವದಲ್ಲಿತ್ತು. ಬಳಿಕದ ದಿನಗಳಲ್ಲಿ ಎರಡೂ ಪ್ರಸ್ತಾವಗಳು ಕಡತದಲ್ಲೇ ಉಳಿದು ಕೊಳೆಯುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಹಲವು ಮಾರ್ಪಾಡು ಗಳಾಗುತ್ತಿವೆ.
ಇದೇ ಹೊತ್ತಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಗ್ರಾಮಾಂತರಕ್ಕೆ ಅನುಕೂಲ ವಾಗುವಂತೆ ಬೆಳ್ಮಣ್, ನಿಟ್ಟೆ ಇಂತಹ ಕಡೆಗಳಿಗೆ ಸ್ಥಳಾಂತರಿಸಿದರೆ ಪೊಲೀಸರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸೂಕ್ತವಾಗಲಿದೆ.
ಯಾವ್ಯಾವ ಠಾಣೆಗೆ ಎಷ್ಟೆಷ್ಟು ಗ್ರಾಮ?
ರ್ಕಾಳ ನಗರ ಠಾಣೆಗೆ 11 ಗ್ರಾಮಗಳು ಒಳಪಡುತ್ತವೆ. ಗ್ರಾಮಾಂತರ ಠಾಣೆಗೆ 18 ಗ್ರಾಮಗಳು ಸೇರುತ್ತವೆ. ಕಲ್ಯಾ, ನಂದಳಿಕೆ, ಕೆದಿಂಜೆ, ಬೋಳ, ನಿಟ್ಟೆ, ಕಾಂತಾವರ, ದುರ್ಗ, ಮುಡಾರು, ನಲ್ಲೂರು, ರೆಂಜಾಳ, ನೆಲ್ಲಿಕಾರು, ಇರ್ವತ್ತೂರು, ಸೂಡ, ಬೆಳ್ಮಣ್, ಮುಲ್ಲಡ್ಕ, ಮುಂಡ್ಕೂರು, ಇನ್ನಾ, ಬೆಳುವಾಯಿ ಈ ಗ್ರಾಮಗಳು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿದ್ದು, ಗ್ರಾಮಾಂತರ ಠಾಣೆಯನ್ನು ನಗರದಿಂದ ಬೇರ್ಪಡಿಸಿ ಈ ಮೇಲಿನ ಗ್ರಾಮಾಂತರ ಪ್ರದೇಶಕ್ಕೆ ಸ್ಥಳಾಂತರಿಸಿದಲ್ಲಿ ಗ್ರಾಮೀಣ ಜನತಗೆ ಅನುಕೂಲವಾಗುವುದರ ಜತೆಗೆ ಅಪರಾಧ ತಡೆಗೂ ಬಲ ಸಿಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪೊಲೀಸರಿಗೂ, ನಾಗರಿಕರಿಗೂ ದೂರ ದೂರ
ನಗರ ಮತ್ತು ಗ್ರಾಮೀಣ ಎರಡೂ ಠಾಣೆಗಳು ನಗರದಲ್ಲಿಯೇ ಕಾರ್ಯಾಚರಿಸುವುದರಿಂದ ಗ್ರಾಮೀಣ ನಾಗರಿಕರಿಗೂ ಪೊಲೀಸ್ ಠಾಣೆ ದೂರ, ಪೊಲೀಸರ ಓಡಾಟಕ್ಕೂ ದೂರವಾಗಿದೆ.
ಸರಕಾರಕ್ಕೆ ಪ್ರಸ್ತಾವನೆ
ಬಜಗೋಳಿಯಲ್ಲಿ ಖಂಡಿತವಾಗಿಯೂ ಹೊರಠಾಣೆಯ ಆವಶ್ಯಕತೆಯಿದೆ. ಅಲ್ಲಿಗೆ ಮೂಲಸೌಕರ್ಯ ಎಲ್ಲವೂ ಆಗಬೇಕಿದೆ. ಬಜಗೋಳಿ ಹೊರಠಾಣೆ, ಬೆಳ್ಮಣ್ ಠಾಣೆ ತೆರೆಯುವ ವಿಚಾರವಾಗಿ ಸರಕಾರಕ್ಕೆ ಪ್ರಸ್ತಾವನೆ ಹೋಗಿ ಹಲವು ವರ್ಷಗಳಾಗಿವೆ. ಸರಕಾರ ಮಟ್ಟದಲ್ಲಿ ತೀರ್ಮಾಣ ಆಗಬೇಕಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು
-ಅರವಿಂದ ಕಲ್ಲಗುಜ್ಜಿ, ಡಿವೈಎಸ್ಪಿ ಕಾರ್ಕಳ
ಕಾಡು ಗುಡ್ಡ ಹತ್ತಿ ಇಳಿಯುವಾಗ ಹಳೇ ಜೀಪು ಗುಟುರು ಹಾಕುತ್ತವೆ
ಪೊಲೀಸ್ ಠಾಣೆಯ ವಾಹನ ಕೂಡ ಹಳೆಯದಾಗಿವೆ. ಈ ವಾಹನದಲ್ಲಿ ಗುಡ್ಡಗಾಡುಗಳ ರಸ್ತೆಗಳಲ್ಲಿ ವಿಳಾಸ ಹುಡುಕಿಕೊಂಡು ಘಟನೆ ಸ್ಥಳಕ್ಕೆ ತಲುಪುವುದೆಂದರೆ ಅದೊಂದು ಹರಸಾಹಸವೇ ಆಗುತ್ತದೆ. ಕಡಿದಾದ ಗುಡ್ಡ ಬೆಟ್ಟ ಕಾಡುಗಳನ್ನು ಹತ್ತಿಳಿದು ತೆರಳುವಾಗ ಕೆಲವೊಮ್ಮೆ ಅರ್ಧದಲ್ಲೇ ವಾಹನ ಕೆಟ್ಟು ಬಾಕಿಯಾಗುವುದು ಇದೆ. ಇದೆಲ್ಲದರಿಂದ ಪೊಲೀಸರು ಬಹುದೊಡ್ಡ ಸವಾಲು ಎದುರಿಸಬೇಕಾಗುತ್ತದೆ. ಮೊಬೈಲ್ ಸಂಪರ್ಕ ಇತ್ಯಾದಿ ಸಮಸ್ಯೆಯೂ ಕೂಡ ಪೊಲೀಸರು, ನಾಗರಿಕರನ್ನು ಬಾಧಿಸುತ್ತದೆ.
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.