ಕಟ್‌ಬೆಲ್ತೂರು ಗ್ರಾ.ಪಂ. ಕಟ್ಟಡ ಪೂರ್ಣಗೊಂಡರೂ ಉದ್ಘಾಟನೆಗೆ ಮೀನಮೇಷ
ವಿಳಂಬವಾಗಲು ಪಂಚಾಯತ್ ವ್ಯಾಪ್ತಿಯ ಸ್ಥಳೀಯ ರಾಜಕೀಯ ಕಾರಣ ಎನ್ನುವ ಆರೋಪಗಳಿವೆ.
Team Udayavani, Aug 10, 2023, 1:26 PM IST
ಕುಂದಾಪುರ: ಸುಮಾರು 6 ವರ್ಷಗಳ ಹಿಂದೆ ಆರಂಭಗೊಂಡ ಕಟ್‌ಬೆಲ್ತೂರು ಗ್ರಾ.ಪಂ.ನ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪೀಠೊಪಕರಣ ಜೋಡಣೆ ಸಹಿತ ಒಂದಷ್ಟು ಸಣ್ಣ- ಪುಟ್ಟ ಕಾಮಗಾರಿಗಳಷ್ಟೇ ಬಾಕಿಯಿದೆ. ಆದರೂ ಉದ್ಘಾಟನೆಗೆ ಮಾತ್ರ ಇನ್ನೂ ಕಾಲ ಕೂಡಿ ಬಂದಿಲ್ಲ. ಹೆಮ್ಮಾಡಿಯಿಂದ ಬೇರ್ಪಟ್ಟ ಕಟ್‌ಬೆಲೂ¤ರು ಹಾಗೂ ದೇವಲ್ಕುಂದ ಗ್ರಾಮವನ್ನೊಳಗೊಂಡ ಹೊಸ ಪಂಚಾಯತ್ ಆಗಿ 2014-15ನೇ ಸಾಲಿನಲ್ಲಿ ರಚನೆಗೊಂಡಿತು.
ಆಗ ದೇವಲ್ಕುಂದದಲ್ಲಿರುವ ಸಮುದಾಯ ಭವನದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಗ್ರಾ.ಪಂ. ಕಚೇರಿ ಆರಂಭಗೊಂಡಿತು. 2021ರಲ್ಲಿ ಕಟ್‌ಬೆಲ್ತೂರಿನಲ್ಲಿರುವ ಗ್ರಾಮ ವಿಕಾಸ ಯೋಜನೆಯಡಿ ನಿರ್ಮಾಣಗೊಂಡ ಸಮುದಾಯ ಭವನದಲ್ಲಿ ಗ್ರಾ.ಪಂ.ಕಚೇರಿ ಕಾರ್ಯಾಚರಿಸುತ್ತಿದೆ. ಇದೇ ಭವನದ ಪಕ್ಕದಲ್ಲಿಯೇ ಗ್ರಾ.ಪಂ. ಕಚೇರಿ ಕಟ್ಟಡ ನಿರ್ಮಾಣಕ್ಕೆ 2016 ರಲ್ಲಿ ಚಾಲನೆ ನೀಡಲಾಗಿತ್ತು.
ಸ್ಥಳೀಯ ರಾಜಕೀಯದಿಂದ ವಿಳಂಬ?
ಪಂಚಾಯತ್‌ನ ನೂತನ ಕಚೇರಿಯ ಕಟ್ಟಡ ಕಾಮಗಾರಿ ಆರಂಭಗೊಂಡು ಸರಿ ಸುಮಾರು 6 ವರ್ಷಗಳೇ ಕಳೆದಿದೆ. ಪಂಚಾಯತ್ ಹಾಗೂ ಉದ್ಯೋಗ ಖಾತರಿಯ ಅನುದಾನದಡಿ ಒಟ್ಟು ಅಂದಾಜು 25 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ 2016-17ನೇ ಸಾಲಿನಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆ ಬಳಿಕ ಕೆಲವು ವರ್ಷ ಸ್ಥಗಿತಗೊಂಡು, 2019ರಲ್ಲಿ ಮತ್ತೆ ಕಾಮಗಾರಿ ಆರಂಭಗೊಂಡಿತ್ತು.
ಈಗ ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಕಚೇರಿಯೊಳಗಿನ ಪೀಠೊಪಕರಣ ಜೋಡಣೆ ಕಾರ್ಯ ಬಾಕಿಯಿದೆ. ಕಟ್ಟಡ ಕಾಮಗಾರಿ ಇಷ್ಟು ವರ್ಷ ವಿಳಂಬವಾಗಲು ಪಂಚಾಯತ್ ವ್ಯಾಪ್ತಿಯ ಸ್ಥಳೀಯ ರಾಜಕೀಯ ಕಾರಣ ಎನ್ನುವ ಆರೋಪಗಳಿವೆ.
ಈ ಪಂಚಾಯತ್ ಕಚೇರಿಯ ಕಟ್ಟಡ ನಿರ್ಮಾಣ ಕಾಮಗಾರಿ ನಮ್ಮ ಆಡಳಿತಾವಧಿಯಲ್ಲಿ ಅಂದರೆ 6 ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ವಿಳಂಬ ಆಗಿದೆ. ಅಂತೂ ಇಂತೂ ಈಗ ಕೊನೆಯ ಹಂತಕ್ಕೆ ಬಂದಿದೆ. ಈ ತಿಂಗಳ ಕೊನೆಯ ವೇಳೆಗೆ ಉದ್ಘಾಟನೆಯಾಗಬಹುದು ಎನ್ನುವುದಾಗಿ ಕಟ್‌ಬೆಲ್ತೂರು ಮಾಜಿ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಸಂಪರ್ಕ ರಸ್ತೆ ಕೆಸರುಮಯ
ಹೊಸ ಕಟ್ಟಡ ಹಾಗೂ ಈಗಿರುವ ಪಂಚಾಯತ್ ಕಚೇರಿಯನ್ನು ಸಂಪರ್ಕಿಸುವ ಸುಮಾರು 500 ಮೀ. ದೂರದ ಮಣ್ಣಿನ ರಸ್ತೆಯು ಈಗ ಸಂಪೂರ್ಣ ಕೆಸರುಮಯ ಆಗಿದೆ. ಇದರಿಂದ ಇಲ್ಲಿಗೆ ಪಂಚಾಯತ್ ಕೆಲಸಕ್ಕೆ ಬರುವ ಗ್ರಾಮಸ್ಥರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಈ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ಮಾಡಬೇಕಾಗಿ ಗ್ರಾಮಸ್ಥರು ಪಂಚಾಯತ್ ಅನ್ನು ಒತ್ತಾಯಿಸಿದ್ದಾರೆ.
ಆದಷ್ಟು ಬೇಗ ಉದ್ಘಾಟನೆ
ಬಹುತೇಕ ಎಲ್ಲ ಕಾಮಗಾರಿ ಪೂರ್ಣಗೊಂಡಿದೆ. ನಮ್ಮ ಅವಧಿ ಮುಗಿಯುವುದರೊಳಗೆ ಪೂರ್ಣಗೊಳಿಸಿ, ಉದ್ಘಾಟನೆ ಮಾಡಬೇಕು ಅನ್ನುವ ಕನಸಿತ್ತು. ಆದರೆ ಪೀಠೊಪಕರಣ ಕಾಮಗಾರಿ ವಹಿಸಿದ್ದು, ಆದರೆ ವಿಳಂಬವಾಗಿದೆ. ಇದರಿಂದ ಸ್ವಲ್ಪ ತಡವಾಗಬಹುದು. ಆಗಸ್ಟ್ ಕೊನೆಯ ವಾರದೊಳಗೆ ಆಗುವ ನಿರೀಕ್ಷೆಯಿದೆ.
ನಾಗರಾಜ್ ಪುತ್ರನ್, ಅಧ್ಯಕ್ಷರು,
ಕಟ್‌ಬೆಲ್ತೂರು ಗ್ರಾ.ಪಂ. ಅಧ್ಯಕ್ಷ
*ಪ್ರಶಾಂತ್ ಪಾದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.