ಕೊಡೇರಿ ದೋಣಿ ದುರಂತ; 4 ಶವಗಳೂ ಪತ್ತೆ
ಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನ ಅಡ್ಡಿ ತಾವಾಗಿಯೇ ತೀರ ಸೇರಿದ ಶವಗಳು
Team Udayavani, Aug 18, 2020, 6:22 AM IST
ಮೀನುಗಾರರ ಶೋಧ ಕಾರ್ಯಾಚರಣೆ ಸಂದರ್ಭ ಸೇರಿದ್ದ ಸ್ಥಳೀಯ ಕುತೂಹಲಿಗರು.
ಕುಂದಾಪುರ/ಉಪ್ಪುಂದ: ಕೊಡೇರಿಯಲ್ಲಿ ರವಿವಾರ ಸಂಭವಿಸಿದ ದೋಣಿ ದುರಂತದಲ್ಲಿ ಸಮುದ್ರಪಾಲಾಗಿದ್ದ ನಾಲ್ವರು ಮೀನುಗಾರರ ಮೃತದೇಹಗಳೂ ಸೋಮವಾರ ಪತ್ತೆಯಾಗಿವೆ.
ಉಪ್ಪಿನಕೋಟೆ ನಿವಾಸಿ ನಾಗ ಖಾರ್ವಿ (55) ಅವರ ಶವ ಬೆಳಗ್ಗೆ ಕಿರಿಮಂಜೇಶ್ವರದ ಹೊಸಹಿತ್ಲು ಬಳಿ, ಶೇಖರ ಖಾರ್ವಿ (39) ಅವರ ದೇಹ ಸಂಜೆ ಅದೇ ಸ್ಥಳದಲ್ಲಿ ಮತ್ತು ಲಕ್ಷ್ಮಣ ಖಾರ್ವಿ (34) ಮೃತದೇಹ ಆದ್ರಾ ಗೋಳಿ ಬಳಿ, ಮಂಜುನಾಥ ಖಾರ್ವಿ (40) ಅವರ ಶವ ರಾತ್ರಿ ವೇಳೆಗೆ ಗಂಗಿಬೈಲಿನಲ್ಲಿ ಪತ್ತೆಯಾಯಿತು. ಮೀನುಗಾರಿಕೆ ಮುಗಿಸಿ ಮರಳುವಾಗ ದೈತ್ಯ ಗಾತ್ರದ ಅಲೆಗಳು ಹಾಗೂ ಗಾಳಿಯ ರಭಸಕ್ಕೆ ನಾಡದೋಣಿ ಬ್ರೇಕ್‌ವಾಟರ್‌ಗೆ ಬಡಿದು ಮುಳುಗಡೆಯಾಗಿತ್ತು. 8 ಮಂದಿ ಪಾರಾದರೆ ನಾಲ್ವರು ಕಾಣೆಯಾಗಿದ್ದರು.
ದಿನವಿಡೀ ಪ್ರಯತ್ನ
ನಾಗ ಖಾರ್ವಿಯ ಅವರ ಶವ ಬೆಳಗ್ಗೆಯೇ ಪತ್ತೆಯಾಗಿತ್ತು. ಉಪ್ಪುಂದ ಗ್ರಾಮದ ಲಕ್ಷ್ಮಣ ಖಾರ್ವಿ, ಮಂಜುನಾಥ ಖಾರ್ವಿ ಹಾಗೂ ಶೇಖರ ಖಾರ್ವಿ ಅವರಿಗಾಗಿ ಕರಾವಳಿ ಕಾವಲು ಪಡೆ ಪೊಲೀಸರು, ಮುಳುಗು ತಜ್ಞರು, ಸ್ಥಳೀಯ ಮೀನುಗಾರರು, ಸೇರಿದಂತೆ ಅನೇಕ ಮಂದಿ ದಿನವಿಡೀ ಹುಡುಕಾಟ ನಡೆಸಿದರು. ದೇಹಗಳು ಆಗೊಮ್ಮೆ ಈಗೊಮ್ಮೆ ಗೋಚರಿಸುತ್ತಿದ್ದವಾದರೂ ಆಗಾಗ ಬರುತ್ತಿದ್ದ ಮಳೆ ಮತ್ತು ಕಡಲು ಪ್ರಕ್ಷುಬ್ಧವಾಗಿದ್ದ ಕಾರಣ ಬೋಟು ಅಥವಾ ದೋಣಿಗಳೂ ಮೂಲಕ ಸ್ಥಳಕ್ಕೆ ಧಾವಿಸಲು ಸಾಧ್ಯವಾಗಿರಲಿಲ್ಲ. ಸಂಜೆ 6 ಗಂಟೆಗೆ ಕಾರ್ಯಾಚರಣೆ ಸ್ಥಗಿತಗೊಳಿಸ ಲಾಯಿತು. ಬಳಿಕ ಮೂವರ ಶವಗಳೂ ಕಡಲ ತೀರಕ್ಕೆ ಬಂದಿವೆ.
ಕೋಸ್ಟ್‌ಗಾರ್ಡ್ ಹಡಗು ಭಾಗಿ
ಮಂಗಳೂರಿನಿಂದ ಮಧ್ಯಾಹ್ನ ಆಗಮಿ ಸಿದ ಕೋಸ್ಟ್‌ಗಾರ್ಡ್ ಶೋಧ ಕಾರ್ಯದಲ್ಲಿ ಭಾಗಿಯಾಯಿತು. ಅದಕ್ಕೆ ಬ್ರೇಕ್‌ವಾಟರ್ ಒಳಗೆ ಬರಲು ಸಾಧ್ಯವಾಗದ್ದರಿಂದ 10ರಿಂದ 13 ನಾಟಿಕಲ್ ಮೈಲು ದೂರದಲ್ಲಿಯೇ ಹುಡುಕಾಟ ನಡೆಸಿ ಸಂಜೆ ಮರಳಿತು.
ಕಾವಲು ಪಡೆ ಎಸ್ಪಿ ಭೇಟಿ
ಸ್ಥಳಕ್ಕೆ ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್ ಆರ್. ಭೇಟಿ ನೀಡಿ, ಮಾರ್ಗ ದರ್ಶನ ನೀಡಿದರು. “ಉದಯ ವಾಣಿ’ ಜತೆ ಮಾತನಾಡಿದ ಅವರು, ಬೆಳಗ್ಗಿನಿಂದ ಸಂಜೆಯವರೆಗೂ ಕಾವಲು ಪಡೆ ತಂಡವು ಸನ್ನದ್ಧವಾಗಿಯೇ ಇತ್ತು. ನಿರ್ದಿಷ್ಟ ಸ್ಥಳಗಳಲ್ಲಿ ಸಿಎಸ್‌ಪಿ ಸಿಬಂದಿ ನಿಯೋಜಿಸಲಾಗಿತ್ತು. ಮುಳುಗು ತಜ್ಞರೂ ಸಜ್ಜಾಗಿದ್ದರು. ಸಮುದ್ರ ಉಗ್ರವಾಗಿದ್ದುದರಿಂದ ಕಡಲಿ ಗಿಳಿಯಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಸಾವಿರಾರು ಮಂದಿ ಭೇಟಿ
ಮಾಜಿ ಶಾಸಕ ಗೋಪಾಲ ಪೂಜಾರಿ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಲತಾ, ತಹಶೀಲ್ದಾರ್ ಬಿ.ಪಿ. ಪೂಜಾರ್, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ, ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಮೊದಲಾ ದವರು ಉಪಸ್ಥಿತರಿದ್ದರು. ಕಾರ್ಯಾಚರಣೆಯನ್ನು ವೀಕ್ಷಿಸಲು ಕುಂದಾಪುರ, ಬೈಂದೂರು, ಉಪ್ಪುಂದ ಸೇರಿದಂತೆ ಅನೇಕ ಕಡೆಗಳಿಂದ ಸಾವಿರಾರು ಮಂದಿ ಭೇಟಿ ನೀಡಿದ್ದರು.
ಚೌತಿ ವರೆಗೆ ಮೀನುಗಾರಿಕೆ ಸಂಶಯ?
ಆಳಸಮುದ್ರ ಮೀನುಗಾರಿಕೆಯ ರಜಾ ಅವಧಿ ಜು. 31ಕ್ಕೆ ಮುಗಿದಿದ್ದರೂ ಕಾರ್ಮಿಕರ ಕೊರತೆ, ಪ್ರತಿಕೂಲ ಹವಾಮಾನ, ಕೊರೊನಾ ಕಾರಣಕ್ಕಾಗಿ ಮೀನುಗಾರರೇ ಸ್ವತಃ ಕಡಲಿಗಿಳಿಯಲು ಹಿಂದೇಟು ಹಾಕಿದ್ದರು. ನಾಡದೋಣಿ ಮೀನುಗಾರಿಕೆ ನಡೆಯುತ್ತಿದ್ದು, ಕಡಲು ಆಗಾಗ ಪ್ರಕ್ಷುಬ್ಧಗೊಳ್ಳುತ್ತಿರುವುದರಿಂದ ಕೆಲವರು ಮಾತ್ರ ಹೋಗುತ್ತಿದ್ದರು. ಪ್ರಸ್ತುತ ಸಮುದ್ರ ಉಗ್ರವಾಗಿರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅಬ್ಬರ ಕಡಿಮೆ ಆಗುವವರೆಗೆ ನಾಡದೋಣಿಗಳು ಕೂಡ ಕಡಲಿಗಿಳಿಯುತ್ತಿಲ್ಲ. ಮೂಲಗಳ ಪ್ರಕಾರ ಮುಂದಿನ ಚೌತಿ ಮುಗಿಯುವವರೆಗೆ ಇನ್ನೂ ದೋಣಿಗಳು ಕಡಲಿಗಿಳಿಯುವುದು ಅನುಮಾನವೆನಿಸಿದೆ.
ಡ್ರೋನ್ ಕೆಮರಾ ಬಳಕೆ
ಎರಡು ಬ್ರೇಕ್ ವಾಟರ್‌ಗಳ ಮಧ್ಯೆ ಡ್ರೋನ್ ಕೆಮರಾವನ್ನು ಹಾರಿಸಿ ಪರಿಶೀಲಿಸಲಾಯಿತು. ಆಗ ಒಬ್ಬರ ದೇಹ ಕಂಡರೂ ಅಲೆಗಳ ಅಬ್ಬರ ಇದ್ದ ಕಾರಣ ಮೇಲೆ ತರಲು ಸಾಧ್ಯವಾಗಲಿಲ್ಲ.
ಆಧಾರ ಕಳಚಿಕೊಂಡ 4 ಕುಟುಂಬಗಳು
ಕುಂದಾಪುರ: ದೋಣಿ ದುರಂತಕ್ಕೆ ಸಿಲುಕಿದ ನಾಲ್ವರು ಮೀನುಗಾರರು ಕೂಡ ತಮ್ಮ ಕುಟುಂಬದ ಆಧಾರಸ್ತಂಭವಾಗಿದ್ದರು. ಯಜಮಾನರನ್ನು ಕಳೆದು ಕೊಂಡ ಆ ಕುಟುಂಬಗಳು ಈಗ ದಿಕ್ಕು ತೋಚದೆ ಅತಂತ್ರವಾಗಿವೆ.
ನಾಗ ಖಾರ್ವಿ ಕರ್ಕಿಕಳಿ
ಉಪ್ಪುಂದ ಗ್ರಾಮದ ಕರ್ಕಿಕಳಿ ಮೂಲದ ಪ್ರಸ್ತುತ ಉಪ್ಪಿನಕೋಟೆಯಲ್ಲಿ ನೆಲೆಸಿರುವ ಬಿ. ನಾಗ ಖಾರ್ವಿ (55) ಕುಟುಂಬದ ಯಜಮಾನ. 20ನೇ ವರ್ಷದಿಂದ ಮೀನುಗಾರಿಕೆಯಲ್ಲಿಯೇ ಬದುಕು ಕಟ್ಟಿಕೊಂಡವರು. ಮನೆಯಲ್ಲಿ ಪತ್ನಿ, ಮೂವರು ಪುತ್ರರು ಹಾಗೂ ಸೊಸೆಯಂದಿರ ಸಹಿತ 6 ಮಂದಿ ಇದ್ದಾರೆ. ಮೂವರು ಪುತ್ರರೂ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. 4 ವರ್ಷಗಳ ಹಿಂದೆ ಸಾಲ ಮಾಡಿ ನಾಗ ಖಾರ್ವಿ ಪುಟ್ಟ ಮನೆಯೊಂದನ್ನು ಕಟ್ಟಿಸಿದ್ದರು. ಯಜಮಾನನನ್ನು ಕಳೆದುಕೊಂಡ ಬಡ ಕುಟುಂಬವೀಗ ದಾರಿಕಾಣದೆ ಕಂಗಲಾಗಿದೆ. ದೋಣಿಯಲ್ಲಿದ್ದ ಮೀನುಗಾರರ ಪೈಕಿ ಇವರೇ ಹಿರಿಯರಾಗಿದ್ದರು.
ಇದ್ದ ಒಬ್ಬನೇ ಮಗ ಲಕ್ಷ್ಮಣ ಖಾರ್ವಿ
ಕರ್ಕಿಕಳಿಯ ದಿ| ರಾಮ ಖಾರ್ವಿ ಅವರ ಪುತ್ರರಾದ ಲಕ್ಷ್ಮಣ ಖಾರ್ವಿ (34) 15-16 ವರ್ಷಗಳಿಂದ ಮೀನು ಗಾರಿಕೆಯನ್ನೇ ಆಶ್ರಯಿಸಿದ್ದವರು. 5 ವರ್ಷದ ಹಿಂದೆ ವಿವಾಹವಾಗಿದ್ದು, 3 ವರ್ಷ ಹಾಗೂ 10 ತಿಂಗಳ ಇಬ್ಬರು ಪುತ್ರರಿದ್ದಾರೆ. ತಾಯಿಯೂ ಅನಾರೋಗ್ಯದಿಂದ ಬಳಲು
ತ್ತಿದ್ದಾರೆ. ಅವರ ಅಣ್ಣ ಕೂಡ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಸಾವನ್ನಪ್ಪಿದ್ದರು. ಮತ್ತೋರ್ವ ಸಹೋದರ ಮುಂಬಯಿಯಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಮಂಜುನಾಥ ಖಾರ್ವಿ
ಕರ್ಕಿಕಳಿಯ ನಿವಾಸಿ ದಿ| ಸುಬ್ಬ ಖಾರ್ವಿ ಅವರ ಪುತ್ರ ಮಂಜುನಾಥ ಖಾರ್ವಿ (40) ಪತ್ನಿ, ಮಕ್ಕಳು, ಸಹೋದರನೊಂದಿಗೆ ವಾಸಿಸುತ್ತಿದ್ದರು. 7-8 ವರ್ಷದ ಹಿಂದೆ ಮದುವೆಯಾಗಿದ್ದು, 5 ಹಾಗೂ 2 ವರ್ಷದ ಪುತ್ರಿಯರಿದ್ದಾರೆ. 15 ವರ್ಷಗಳಿಂದ ಅಂಧತ್ವದಿಂದ ಬಳಲುತ್ತಿದ್ದ ತಾಯಿಯ ಚಿಕಿತ್ಸೆಗಾಗಿ ಲಕ್ಷಾಂತರ ರೂ. ವ್ಯಯಿಸಿದ್ದರು. ಆದರೆ 2 ವರ್ಷದ ಹಿಂದೆ ಸಾವನ್ನಪ್ಪಿದ್ದರು. ತಂದೆ 15 ವರ್ಷಗಳ ಹಿಂದೆಯೇ ಮೃತ ಪಟ್ಟಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಮಂಜುನಾಥ ಖಾರ್ವಿ ಅವರನ್ನು ಕಳೆದುಕೊಂಡ ಈ ಕುಟುಂಬವೀಗ ಸಂಕಷ್ಟದಲ್ಲಿದೆ.
ಶೇಖರ ಖಾರ್ವಿ
ಮೂಲತಃ ಕರ್ಕಿಕಳಿ ನಿವಾಸಿ, ಪ್ರಸ್ತುತ ಉಪ್ಪುಂದದ ಸಾಲೆಬಾಗಿಲು ಹತ್ತಿರ ಬಾಡಿಗೆ ಮನೆಯಲ್ಲಿ ವಾಸವಿರುವ ದಾರ ಖಾರ್ವಿ ಅವರ ಪುತ್ರ ಶೇಖರ ಖಾರ್ವಿ (39). 20 ವರ್ಷಗಳಿಂದ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. 4-5 ವರ್ಷಗಳ ಹಿಂದೆ ವಿವಾಹ ವಾಗಿದ್ದು, 3 ವರ್ಷದ ಪುತ್ರಿ ಹಾಗೂ 5 ತಿಂಗಳ ಪುತ್ರನಿದ್ದಾನೆ. ಹೆತ್ತವರು, ಸಹೋದರರು ಬೇರೆ ಮನೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.