ಕೊಡೇರಿ ಸರಕಾರಿ ಹಿ.ಪ್ರಾ. ಶಾಲೆ; ಕಡಲ ತಟದ ಶಾಲೆಗೆ ತಗಡು ಶೀಟಿನ ಮೇಲ್ಛಾವಣಿ ಕಂಟಕ
ಶೀಟಿನಡಿಯ ತರಗತಿಯಲ್ಲಿ ಕುಳಿತುಕೊಳ್ಳುವುದೇ ಮಕ್ಕಳಿಗೆ ಕಿರಿಕಿರಿ; ಅವೈಜ್ಞಾನಿಕ ಮಾದರಿಯ ಮೇಲ್ಛಾವಣಿ; ಹೊಸ ಕೊಠಡಿಗೆ ಬೇಡಿಕೆ
Team Udayavani, Aug 1, 2022, 12:42 PM IST
ಕಿರಿಮಂಜೇಶ್ವರ: ಕಡಲ ತಟದ ಕಿರು ಬಂದರಿಗೆ ತಾಗಿಕೊಂಡಿರುವ ಕೊಡೇರಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬೈಂದೂರು ವಲಯದ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಇದೂ ಒಂದಾಗಿದೆ. ಆದರೆ ಇಲ್ಲಿನ ತರಗತಿ ಕೊಠಡಿಗೆ ಹಾಕಿದ ತಗಡು ಶೀಟಿನ ಮೇಲ್ಛಾವಣಿಯಿಂದ ಮಕ್ಕಳು ವರ್ಷಪೂರ್ತಿ ಹೈರಾಣಾಗುತ್ತಿದ್ದಾರೆ.
ಕೊಡೇರಿ ಸರಕಾರಿ ಶಾಲೆಗೆ ಹಾಕಲಾದ ತಗಡು ಶೀಟಿನ ಮೇಲ್ಛಾವಣಿಯು ಮಕ್ಕಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಮಳೆಗೆ ವಿಪರೀತ ಶಬ್ದದಿಂದ ತರಗತಿಯಲ್ಲಿ ಶಿಕ್ಷಕರು ಏನು ಹೇಳುತ್ತಿದ್ದಾರೆ, ಯಾವ ಪಾಠ ಮಾಡುತ್ತಿದ್ದಾರೆ ಎಂಬುದೇ ಕೇಳಿಸದಷ್ಟು ಹೊರಗಿನ ಶಬ್ದ. ಬೇಸಗೆಯಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ತರಗತಿಯೊಳಗೆ ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಸಮುದ್ರ ತೀರದಲ್ಲೇ ಇರುವುದರಿಂದ ತಗಡು ಶೀಟು ಯಾವಾಗ ಮೈಮೇಲೆ ಬೀಳುವುದೋ ಎಂಬ ಆತಂಕ ಮಕ್ಕಳಿಗೆ ಎದುರಾಗಿದೆ.
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಉತ್ತಮವಾಗಿದೆ. ಆದರೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲದೆ, ತೊಂದರೆಯಾಗುತ್ತಿದೆ. ಅದಕ್ಕಾಗಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿಕೊಡಬೇಕು ಎನ್ನುವುದಾಗಿ ವಿದ್ಯಾರ್ಥಿಗಳ ಪೋಷಕರು, ಊರವರು, ಎಸ್‌ಡಿಎಂಸಿ, ಹಳೇವಿದ್ಯಾರ್ಥಿಗಳ ಸಂಘ ಒತ್ತಾಯಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಶಾಸಕರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
1928ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಈಗ 1ರಿಂದ 8ರ ವರೆಗೆ 143 ಮಂದಿ, ಎಲ್‌ಕೆಜಿ ಹಾಗೂ ಯುಕೆಜಿಯಲ್ಲಿ 41 ಮಂದಿ ಮಕ್ಕಳು, ಒಟ್ಟು 184 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 8 ಮಂದಿ ಕಾಯಂ ಶಿಕ್ಷಕರು ಹಾಗೂ 4 ಗೌರವ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು 10 ಕೊಠಡಿಗಳಿದ್ದು, ಅವುಗಳಲ್ಲಿ 7 ತರಗತಿಗಳು ತಗಡು ಶೀಟಿನ ಮೇಲ್ಛಾವಣಿಯ ಕೊಠಡಿಗಳಾಗಿವೆ. ಸ್ಲ್ಯಾಬ್ ಕಟ್ಟಡದಲ್ಲಿ 3 ಕೊಠಡಿ ಮಾತ್ರವಿದೆ. ತಗಡು ಶೀಟಿನ ಒಂದೇ ಒಂದು ಕೊಠಡಿಯಲ್ಲಿ ಫ್ಯಾನ್ ಇಲ್ಲ.
ಅವೈಜ್ಞಾನಿಕ ಮಾದರಿ
ಹೇಳಿ ಕೇಳಿ ಈ ಕೊಡೇರಿ ಶಾಲೆಯಿರುವುದು ಕರಾವಳಿ ತೀರ ಪ್ರದೇಶದಲ್ಲಿ. ಇಲ್ಲಿ ಸದಾ ಗಾಳಿಯಬ್ಬರ ಜೋರಾಗಿರುತ್ತದೆ. ಭಾರೀ ಗಾಳಿಗೆ ತಗಡು ಶೀಟು ಹಾರಿ ಹೋಗುವ ಭೀತಿ ಇದೆ. ಶೀಟು ಹಾಕಿ ಹಲವು ವರ್ಷ ಕಳೆದಿದೆ. ಅದು ಅಲ್ಲದೆ ಇಲ್ಲಿಗೆ ಉತ್ತಮ ಗುಣಮಟ್ಟದ ಶೀಟುಗಳನ್ನು ಅಳವಡಿಸಿಲ್ಲ ಎಂಬ ಆರೋಪವೂ ಇದೆ. ಗಾಳಿ – ಮಳೆಗೆ ಯಾವಾಗ ಹಾರಿ ಹೋಗುವುದೋ ಎನ್ನುವ ಆತಂಕವಿದೆ. ಮಕ್ಕಳು ಉರಿ ಬಿಸಿಲಿಗೆ ಬೆಂದು ಹೋಗುವ ಸ್ಥಿತಿಯಿದೆ.
ಶೀಘ್ರ ಪರಿಹಾರ ಆಗಬೇಕು: ಹಳೇ ವಿದ್ಯಾರ್ಥಿಗಳ ಸಂಘ, ದಾನಿಗಳು, ಸ್ಥಳೀಯರು, ಶಾಲಾ ಮಕ್ಕಳ ಪಾಲಕ, ಪೋಷಕರ ಸಹಕಾರೊಂದಿಗೆ ಇಲ್ಲಿನ ವಿದ್ಯಾರ್ಥಿಗಳಿಗೆ ಶಾಲಾ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೊಡೇರಿ, ಗಂಗೆಬೈಲು ಸಹಿತವಾಗಿ ಕಿರಿಮಂಜೇಶ್ವರ ಗ್ರಾಮ ವ್ಯಾಪ್ತಿಯ ಮಕ್ಕಳನ್ನು ಶಾಲೆಗೆ ಕರೆತರಲು ಬಸ್ ಸಹಕಾರಿಯಾಗಿದೆ. ವಿಶಾಲವಾದ ಮೈದಾನವೂ ಇದೆ. ಆದರೆ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲಾಗದ ಸ್ಥಿತಿಯಿದೆ. ನಲಿಕಲಿ ಮಕ್ಕಳಿಗೆ ಟೇಬಲ್ ಕುರ್ಚಿ, ತರಗತಿಗೆ ಒಂದು ಟೇಬಲ್, ಪ್ರಯೋಗಾಲಯ ಕೊಠಡಿ, ಗ್ರಂಥಾಲಯ ಕೊಠಡಿ ಸಹಿತ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕೂಡಲೇ ಒದಗಿಸುವ ಕಾರ್ಯ ಆಗಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.
ಹೆಚ್ಚುವರಿ ಕೊಠಡಿ ಬೇಕು: ತಗಡು ಶೀಟಿನ ಕೊಠಡಿಗಳಿಂದ ಮಕ್ಕಳಿಗೆ ಪಾಠ – ಪ್ರವಚನಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ಬೇಸಗೆಯಲ್ಲೂ ಸೆಕೆಯಿಂದ ಕುಳಿತುಕೊಳ್ಳುವುದು ಕಷ್ಟ. ಅದಕ್ಕಾಗಿ ಉತ್ತಮ ಮಕ್ಕಳಿರುವ ಈ ಶಾಲೆಗೆ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಇದು ಶಾಲೆಗೆ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಮಕ್ಕಳು ಬರುವಲ್ಲಿ ವರದಾನವಾಗಬಹುದು. – ಸುರೇಶ್ ಖಾರ್ವಿ, ಎಸ್‌ಡಿಎಂಸಿ ಅಧ್ಯಕ್ಷ, ಕೊಡೇರಿ ಸರಕಾರಿ ಹಿ.ಪ್ರಾ. ಶಾಲೆ
3 ಲಕ್ಷ ರೂ. ಅನುದಾನ ಕೊಡೇರಿ ಸರಕಾರಿ ಹಿ.ಪ್ರಾ. ಶಾಲೆಯ ಅಭಿವೃದ್ಧಿಗೆ ಈಗಾಗಲೇ 3 ಲಕ್ಷ ರೂ. ಅನುದಾನವನ್ನು ಮೀಸಲಿಡಲಾಗಿದೆ. ಮಳೆ ಕಡಿಮೆಯಾದ ಅನಂತರ ಅದನ್ನು ಬಳಸಿಕೊಂಡು, ಶಾಲಾಭಿವೃದ್ಧಿ ಕಾರ್ಯ ಆರಂಭವಾಗಲಿದೆ. ಇನ್ನಷ್ಟು ಹೆಚ್ಚಿನ ಅನುದಾನದ ಬಗ್ಗೆ ಪರಿಶೀಲಿಸಿ, ಗಮನಹರಿಸಲಾಗುವುದು. – ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.