ಕುಂದಾಪುರ: ಅಕ್ರಮ ಮರಳು ಅಡ್ಡೆಗೆ ದಾಳಿ : 3 ಟಿಪ್ಪರ್ ವಶ
Team Udayavani, Sep 22, 2022, 12:31 AM IST
ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧೆಡೆ ಅಕ್ರಮ ಮರಳು ಅಡ್ಡೆಗೆ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಗಣಿ ಮತ್ತ ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸಂಧ್ಯಾ ಅವರು 3 ಟಿಪ್ಪರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಂದಾಪುರ ತಾಲೂಕಿನ ತ್ರಾಸಿ, ಮೊವಾಡಿ ಗ್ರಾಮ ಹಾಗೂ ಬೈಂದೂರು ತಾಲೂಕಿನ ಮರವಂತೆ, ಬಡಾಕೆರೆ ಗ್ರಾಮ ವ್ಯಾಪ್ತಿಯಲ್ಲಿ ಸೌಪರ್ಣಿಕಾ ನದಿಯಿಂದ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ ಸಾಗಾಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಇಲಾಖೆಗೆ ದೂರುಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ. ಯು. ಅವರ ಮಾರ್ಗದರ್ಶನದಲ್ಲಿ ಭೂ ವಿಜ್ಞಾನಿ ಸಂಧ್ಯಾ ಅವರು ಬುಧವಾರ ಬೆಳಗ್ಗೆ 4.20 ರ ಸುಮಾರಿಗೆ ತ್ರಾಸಿ ಗ್ರಾಮದ ಆನಗೋಡಿನಲ್ಲಿ ದಾಳಿ ನಡೆಸಿದ್ದು, ಧಕ್ಕೆಯಲ್ಲಿ ಮರಳು ತುಂಬಿಸಲು ನಿಲ್ಲಿಸಿದ್ದ 1 ಟಿಪ್ಪರ್, ತ್ರಾಸಿಯ ಅರಮ ದೇಗುಲದ ಬಳಿ 4.45ಕ್ಕೆ ದಾಳಿ ನಡೆಸಿ, ಅಲ್ಲಿದ್ದ 2 ಟಿಪ್ಪರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳದಿಂದ ಪರಾರಿ
ತ್ರಾಸಿ ವ್ಯಾಪ್ತಿಯ ಅಕ್ರಮ ಮರಳು ಧಕ್ಕೆಗಳಿಗೆ ದಾಳಿಯಾಗುತ್ತಿದ್ದಂತೆ, ಕುಂದಾಪುರ ವ್ಯಾಪ್ತಿಯ ಹಕ್ಲಾಡಿ, ಕಾವ್ರಾಡಿ, ಹಳ್ನಾಡು, ಅಂಪಾರು ಹಾಗೂ ಬೈಂದೂರು ತಾಲೂಕಿನ ಬಡಾಕೆರೆ ವ್ಯಾಪ್ತಿಯಲ್ಲಿ ಅನಧಿಕೃತ ಮರಳುಗಾರಿಕೆಯನ್ನು ನಡೆಸುತ್ತಿದ್ದವರು ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಸ್ಥಗಿತಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಅನಧಿಕೃತ ಮರಳು ಗಣಿಗಾರಿಕೆಗೆ ಧಕ್ಕೆ ಹಾಗೂ ಸಾಗಾಣಿಕೆಗೆ ರಸ್ತೆಯನ್ನು ಕೆಲವು ಖಾಸಗಿ (ಪಟ್ಟಾ) ಜಾಗಗಳಲ್ಲಿ ನೀಡಿರುವುದು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದಿದ್ದು, ಅಂತಹ ಜಾಗದ ಪಟ್ಟಾದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭೂವಿಜ್ಞಾನಿಯವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಜರಗಿಸುವವರೆಗೆ ವಶಕ್ಕೆ ಪಡೆದ ಟಿಪ್ಪರ್‌ಗಳನ್ನು ಗಂಗೊಳ್ಳಿ ಠಾಣಾ ಸುಪರ್ದಿಗೆ ವಹಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.