ಕುಂದಾಪುರ; ಸೇವೆಗೆ ದೊರೆಯದ ವಾಕ್ ಶ್ರವಣ ಕೇಂದ್ರ ಕಟ್ಟಡ
ಆಸ್ಪತ್ರೆಯ ಮೊದಲನೇ ಮಾಳಿಗೆಯಲ್ಲಿ ಕಟ್ಟಡ ಕಾಮಗಾರಿ ನಡೆದಿದೆ.
Team Udayavani, Jan 11, 2023, 11:35 AM IST
ಕುಂದಾಪುರ: ಇಲ್ಲಿನ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಔಟ್‌ರೀಚ್ ಸೆಂಟರ್‌ಗೆ ದಾನಿಗಳ ಮೂಲಕ ನಿರ್ಮಾಣವಾದ ಕಟ್ಟಡ ಕಾಮಗಾರಿ ಪೂರ್ಣಗೊಂಡು ತಿಂಗಳೆಂಟಾದರೂ ಸೇವೆಗೆ ದೊರಕಿಲ್ಲ.
ವಿಭಾಗ ಆರಂಭ
ಮೈಸೂರಿನಿಂದ ಮಾತಿನ ತಜ್ಞರು, ಕಿವುಡುತನ ಪರೀಕ್ಷಕರು, ಒಬ್ಬರು ತರಬೇತಿ ಅವಧಿಯ ವೈದ್ಯರು ಸೇರದಂತೆ ಮೂವರು ನೂತನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷ ವಿಭಾಗಕ್ಕೆ ಬೇಕಾದ ಎಲ್ಲ ಉಪಕರಣಗಳೂ ಬಂದಿವೆ. ಪ್ರಸ್ತುತ ಈ ವಿಭಾಗ ಒಂದು ಪುಟ್ಟ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದಕ್ಕಾಗಿಯೇ ವಿಶಾಲವಾಗಿ ನಿರ್ಮಾಣವಾದ ನೂತನ ಕಟ್ಟಡ ಪಾಳುಬೀಳುತ್ತಿದೆ.
ಮಂಜೂರು
ಸ್ಪೀಚ್ ಆ್ಯಂಡ್ ಹಿಯರಿಂಗ್ ಸೆಂಟರ್ ಕೇಂದ್ರ ಆರೋಗ್ಯ ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್‌ಗೆ ಔಟ್ರೀಚ್ ಸೇವಾ ಕೇಂದ್ರವನ್ನು ಕುಂದಾಪುರದಲ್ಲಿ ತೆರೆಯಬೇಕು ಎಂದು ಮನವಿ ಮಾಡಲಾಗಿತ್ತು. ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಹಾಗೂ ಕಾರ್ಯಕಾರಿ ಸಮಿತಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಸೆಂಟರ್ ಆರಂಭಕ್ಕೆ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಸಲ್ಲಿಸಿತ್ತು.
ಕಟ್ಟಡ
ಪ್ರಸ್ತುತ ಸರಕಾರಿ ಆಸ್ಪತ್ರೆಯು 200 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು ಹೆರಿಗೆ ವಿಭಾಗ ಪ್ರತ್ಯೇಕ ಇದೆ. ನಾಡೋಜ ಡಾ| ಜಿ. ಶಂಕರ್ ಅವರು ನೂತನ ಕಟ್ಟಡ ನಿರ್ಮಿಸಿ ನೀಡಿದ್ದಾರೆ. ಈಗ ಮಂಜೂರಾದ ಸೆಂಟರ್‌ಗೆ ಅಗತ್ಯವಿರುವ ಕಟ್ಟಡಕ್ಕೂ ದಾನಿಗಳನ್ನು ಹುಡುಕಲಾಗಿತ್ತು. ಆಸ್ಪತ್ರೆಯಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ ನಿವೃತ್ತರಾಗಿ, ಅಗಲಿರುವ ದಿ| ವಿಜಯಾ ಬಾಯಿ ಅವರ ಹೆಸರಿನಲ್ಲಿ ಅವರ ಪತಿ, ಪುರಸಭೆ ಮಾಜಿ ಸದಸ್ಯ ಶಿವರಾಮ ಪುತ್ರನ್, ಮಕ್ಕಳು ಮತ್ತು ಕುಟುಂಬಿಕರು ಮಹತ್ವದ ಯೋಜನೆಗೆ ಕಟ್ಟಡ ಕೊಡುಗೆಯಾಗಿ ನೀಡಿದ್ದಾರೆ.
ಬಾಕಿ
ಕಟ್ಟಡ ಪೂರ್ಣವಾಗಿದ್ದರೂ ಅದರೊಳಗೆ ಚಿಕಿತ್ಸಾ ವಿಭಾಗಗಳು, ಡಯಾಗ್ನಸ್ಟಿಕ್ ಕೊಠಡಿ, ಹೊರರೋಗಿ ವಿಭಾಗ, ಸೌಂಡ್‌ಟ್ರೀಟೆಡ್ ಕೊಠಡಿ ಮೊದಲಾದವುಗಳ ನಿರ್ಮಾಣವಾಗಬೇಕಿದೆ. ವಿಭಾಗೀಕರಣ ಮಾಡಬೇಕಿದೆ. ಪೀಠೊಪಕರಣಗಳ ಅವಶ್ಯವಿದೆ. ಇದನ್ನು ಭರಿಸಲು ರೋಟರಿ ಸಂಸ್ಥೆ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಮುಂದೆ ಬಂದಿವೆ. ಎಸಿ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆದಿದ್ದು ದಾನಿಗಳಿಗೆ ಮನವಿ ಮಾಡಲಾಗಿದೆ. ನೂತನ ಕಟ್ಟಡದಲ್ಲಿ ಸೇವೆ ವಿಳಂಬವಾದಷ್ಟೂ ಮತ್ತೆ ಅದನ್ನು ಸೇವೆಗೆ ಸರಿಯಾಗಿ ದೊರೆಯುವಂತೆ ಮಾಡಲು ಪೇಂಟಿಂಗ್ ಮೊದಲಾದವುಗಳಿಗೆ ಮತ್ತೆ ಒಂದಷ್ಟು ಖರ್ಚುಗಳು ಬಂದರೂ ಬರಬಹುದು. ಇಂತಹ ನಿರ್ಲಕ್ಷ್ಯ ಆಡಳಿತದಿಂದ ಸರ್ವಥಾ ಸರಿಯಲ್ಲ. ದಾನಿಗಳು ಕೊಟ್ಟರೂ ಅದನ್ನು ಉಪಯೋಗಿಸಲು ಮೀನಮೇಷ ನೋಡುವುದು ಇನ್ನು ಯಾರಾದರೂ ದಾನ ನೀಡಲು ಮುಂದೆ ಬರುವವರಿಗೆ ನಿರಾಸೆ ಮೂಡಿಸಬಹುದು.
ವ್ಯವಸ್ಥಿತ ಕಟ್ಟಡ
ಆಸ್ಪತ್ರೆಯ ಮೊದಲನೇ ಮಾಳಿಗೆಯಲ್ಲಿ ಕಟ್ಟಡ ಕಾಮಗಾರಿ ನಡೆದಿದೆ. ಸುಮಾರು 20 ಲಕ್ಷ ರೂ. ಗಳ ವೆಚ್ಚದಲ್ಲಿ ಉತ್ತಮ ಗುಣಮಟ್ಟದಲ್ಲಿ ವ್ಯವಸ್ಥಿತ ಕಟ್ಟಡ ನಿರ್ಮಿಸಲಾಗಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್, ಅತ್ಯಾಧುನಿಕ ಡಯಾಲಿಸಿಸ್ ಘಟಕ, ಅತ್ಯಾಧುನಿಕ ಹೆರಿಗೆ ಆಸ್ಪತ್ರೆ ಇದ್ದು ಇನ್ನೊಂದು ಸೇರ್ಪಡೆಯಾಗಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಸೆಂಟರ್ ಒದಗಿ ಬಂದಿದೆ. ನೂತನ ಕಟ್ಟಡ ರಚನೆಯಾಗುವುದರಿಂದ ಆಸ್ಪತ್ರೆಯ ಕಟ್ಟಡ ಸೋರುವ ಸಮಸ್ಯೆಯೂ
ನಿವಾರಣೆಯಾಗಲಿದೆ. ಲೋಕೋಪಯೋಗಿ ಇಲಾಖೆ ಕಟ್ಟಡದ ಧಾರಣಾ ಸಾಮರ್ಥ್ಯವನ್ನು ಇಲಾಖೇತರ ಎಂಜಿನಿಯರ್‌ಗಳಿಂದ ಮಾಡಿಸಿ ಪ್ರಮಾಣಪತ್ರ ನೀಡಿದೆ.
ನಮ್ಮ ಕೆಲಸ ಮುಗಿದಿದೆ
ಕಟ್ಟಡದಲ್ಲಿ ಯಾವಾಗ ಕೇಂದ್ರ ಕಾರ್ಯಾ ರಂಭಿಸಲಿದೆ ಎಂಬ ಮಾಹಿತಿ ನಮಗಿಲ್ಲ. ಪೂರ್ಣಗೊಂಡ ಬಳಿಕವೂ ಬಾಗಿಲು ಹಾಕಿದ ಸ್ಥಿತಿಯಲ್ಲಿದೆ. ಕುಂದಾಪುರ ಸರಕಾರಿ ಆಸ್ಪತ್ರೆಯ ಸಿಬಂದಿಯಾಗಿ ಪತ್ನಿ ವಿಜಯಾ ಬಾಯಿ ಸುದೀರ್ಘ ಸೇವೆ ನೀಡಿದ್ದರು. ಆಸ್ಪತ್ರೆಗೆ ಸ್ಪೀಚ್ ಆ್ಯಂಡ್ ಹಿಯರಿಂಗ್ ಸೆಂಟರ್ ಮಂಜೂರಾಗಿದ್ದನ್ನು ತಿಳಿದು, ವೈದ್ಯರು, ಪ್ರತಾಪಚಂದ್ರ ಶೆಟ್ಟಿ, ಶ್ರೀನಿವಾಸ ಶೆಟ್ಟರ ಮನವಿ ಮೇರೆಗೆ ಕಟ್ಟಡ ನಿರ್ಮಿಸಿದ್ದೇವೆ.
-ಶಿವರಾಮ ಪುತ್ರನ್
ಹಿರಿಯ ಸಮಾಜ ಸೇವಕರು, ಕಟ್ಟಡದ ದಾನಿ
ಆರಂಭವಾಗಿದೆ
ಮಾರ್ಚ್‌ನಿಂದಲೇ ಚಿಕಿತ್ಸೆ ಆರಂಭವಾಗಿದ್ದು ಸುಸಜ್ಜಿತವಾದ ಕಟ್ಟಡದಲ್ಲಿ ಒಂದಷ್ಟು ಕೆಲಸಗಳು ಬಾಕಿ ಇವೆ. ದಾನಿಗಳ ಮೂಲಕ ಪೂರ್ಣವಾದ ಬಳಿಕ ಅಲ್ಲೇ ಚಿಕಿತ್ಸೆ ಆರಂಭಿಸಲಾಗುವುದು.
-ಡಾ| ರಾಬರ್ಟ್ ರೆಬೆಲ್ಲೊ ,
ಆಡಳಿತ ಶಸ್ತ್ರ ಚಿಕಿತ್ಸಕ ವೈದ್ಯಾಧಿಕಾರಿ, ಸರಕಾರಿ
ಉಪವಿಭಾಗ ಆಸ್ಪತ್ರೆ, ಕುಂದಾಪುರ
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.