ಕುಂದಾಪುರ: ಒಳಚರಂಡಿಗೆ ಬಿದ್ದ 27 ಕೋಟಿ ರೂ.!
Team Udayavani, Dec 31, 2022, 12:22 PM IST
ಕುಂದಾಪುರ: ಎಂಟು ವರ್ಷಗಳಿಂದ ವಿಳಂಬವಾಗಿರುವ ಒಳಚರಂಡಿ ಕಾಮಗಾರಿಗಾಗಿ ಪುರಸಭೆ ಹಾಕಿದ 27 ಕೋ.ರೂ. ಅನುದಾನ ಚರಂಡಿ ಪಾಲಾಗುವ ಎಲ್ಲ ಲಕ್ಷಣ ಕಾಣಿಸುತ್ತಿದೆ. ಈ ಮೂಲಕ ಅನುದಾನವೊಂದು ಪುರಸಭೆ ಆಡಳಿತ ದಿವ್ಯನಿರ್ಲಕ್ಷ್ಯದ ಪರಿಣಾಮ ಯಾವುದಕ್ಕೂ ದೊರೆಯದಂತಾಗಿರುವುದು ವಿಪರ್ಯಾಸ.
ಒಳಚರಂಡಿ
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ 48 ಕೋ.ರೂ. ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಾಣಕ್ಕೆ ಅನುದಾನ ಮಂಜೂರಾಗಿತ್ತು. 8 ವರ್ಷಗಳಲ್ಲಿ 39 ಕಿ.ಮೀ. ಪೈಪ್‌ಲೈನ್ ಪೈಕಿ ಆದದ್ದು ಬರೀ 29 ಕಿ.ಮೀ. ಮಾತ್ರ. 4 ವರ್ಷಗಳಿಂದ ಕಾಮಗಾರಿಯೇ ನಡೆದಿಲ್ಲ. ದ್ರವ ತ್ಯಾಜ್ಯ ಸೇರುವಲ್ಲಿ ನಿರ್ಮಿಸಬೇಕಾದ ಸಂಗ್ರಹಾಗಾರ (ಬಾವಿ) ರಚನೆಗೆ ನಿಗದಿಪಡಿಸಲಾದ ಜಾಗ ಸಿಆರ್‌ಝಡ್ ಪ್ರದೇಶದಲ್ಲಿ ಇದೆ ಎಂಬ ಕಲ್ಪನೆ ಪುರಸಭೆ ಅಥವಾ ಮಂಡಳಿಗೆ ತಿಳಿದದ್ದೇ ಕಾಮಗಾರಿ ಆರಂಭವಾಗಿ ಐದು ವರ್ಷಗಳ ಬಳಿಕ! ಮಂಡಳಿ ಪ್ರತೀ ಹಂತದಲ್ಲೂ ಎಡವಿದೆ. ಪುರಸಭೆ ಕೂಡ ಸಕಾಲದಲ್ಲಿ ಜಾಗ ಒದಗಿಸಿ ಕೊಡಲಿಲ್ಲ. ಲಿಖೀತವಾಗಿ ಭರವಸೆ ನೀಡಿದ್ದರೂ ಈಗಿನ ಹಾಗೂ ಹಿಂದಿನ ಆಡಳಿತ ಮಾತಿಗೆ ತಪ್ಪಿತ್ತು.
ದುಡ್ಡು ಖರ್ಚು
ಒಳಚರಂಡಿ ಭೂಸ್ವಾಧೀನಕ್ಕೆ 9 ಕೋ.ರೂ. ಅಗತ್ಯವಿತ್ತು. ಸರಕಾರ 2 ಕೋ.ರೂ. ಗಳನ್ನು ತತ್‌ಕ್ಷಣ ಬಿಡುಗಡೆ ಮಾಡಿತು. 6 ಕೋ.ರೂ. ವಿಶೇಷ ಅನುದಾನವೆಂದು ಪುರಸಭೆ ತರಿಸಿಕೊಂಡು ಭೂ ಸ್ವಾಧೀನಕ್ಕೆ ಬಳಸದೇ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿತು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ 4 ಕೋ.ರೂ. ಭೂಸ್ವಾಧೀನಕ್ಕಾಗಿ ಎಸ್‌ಎಫ್ ಸಿಯಿಂದ ಕೊಡಿಸಿದರು. 48 ಕೋ.ರೂ.ಗಳಲ್ಲಿ ಆದ ಕಾಮಗಾರಿಗೆ 27 ಕೋ.ರೂ. ಪಾವತಿಸಲಾಗಿದೆ. ರಸ್ತೆಗಳೆಲ್ಲ ಹಾಳಾದುದು ಬಿಟ್ಟರೆ ಬೇರೆ ಫಲ ಇಲ್ಲ.
ವೆಟ್‌ವೆಲ್
ಆರಂಭದಲ್ಲಿ 7.25 ಎಕರೆ ಅವಶ್ಯವಿದೆ ಎಂದಿದ್ದರೂ ಬದಲಾದ ನಕ್ಷೆ, ಯೋಜನೆ, ಆಕ್ಷೇಪಗಳಿಂದಾಗಿ ವಿಸ್ತಾರ ಕಡಿಮೆಯಾಯಿತು. ಟಿ.ಟಿ. ರಸ್ತೆ ಹಾಗೂ ರಾಯಪ್ಪನಮಠದಲ್ಲಿ ನಿರ್ಮಾಣವಾಗಬೇಕಿದ್ದ ವೆಟ್ ವೆಲ್ ಕೈ ಬಿಡಲಾಯಿತು. ಐದು ವೆಟ್‌ವೆಲ್‌ಗಳಿಗೆ ಜಾಗ ಗುರುತಿಸಲಾಯಿತು. ಮದ್ದುಗುಡ್ಡೆಯಲ್ಲಿ ಸರಕಾರಿ ಪರಂಬೋಕು ಜಾಗದಲ್ಲಿ 10 ಸೆಂಟ್ಸ್, ವಿಠಲವಾಡಿಯಲ್ಲಿ ಶ್ರೀಪಾದ ಉಪಾಧ್ಯರಿಂದ ಪಡೆದ 10 ಸೆಂಟ್ಸ್, ಸಂಗಮ್ ಬಳಿ ಹೊಳೆಬದಿಯಲ್ಲಿ 25 ಸೆಂಟ್ಸ್ ಸರಕಾರಿ ಪರಂಬೋಕು ಜಾಗದಲ್ಲಿ, ಕಡ್ಗಿಮನೆಯಲ್ಲಿ ಕಲ್ಪನಾ ನಾಗರಾಜ್ ಅವರಿಂದ ಖರೀದಿಸುವ 31 ಸೆಂಟ್ಸ್ ಜಾಗವನ್ನು ವೆಟ್‌ವೆಲ್ ಕಾಮಗಾರಿ ನಿಶ್ಚಯಿಸಲಾಗಿತ್ತು.
ವಿವಾದ
ಕಲ್ಪನಾ ನಾಗರಾಜ್ ಅವರ ಜಾಗದ ದರಪಟ್ಟಿಯಲ್ಲಿ ಲೋಪವಾಗಿದೆ, ಸರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ನಮೂದಿಸಲಾಗಿದೆ ಎಂದು ಸದಸ್ಯರಿಂದಲೇ ಲೋಕಾಯುಕ್ತ ಪ್ರಕರಣ ದಾಖಲಾಯಿತು. ಪ್ರಕರಣ ಮುಗಿದಿದೆ. ಇನ್ನೊಬ್ಬ ಸದಸ್ಯರು ಈಗ ಹೈಕೋರ್ಟಿಗೆ ಹೋಗುವ ಸಿದ್ಧತೆಯಲ್ಲಿದ್ದಾರೆ. ಹುಂಚಾರಬೆಟ್ಟಿನಲ್ಲಿ ಎಸ್‌ಟಿಪಿ ಹಾಗೂ ವೆಟ್‌ವೆಲ್‌ಗಾಗಿ ಖರೀದಿಸಿದ, ಖರೀದಿ ಮಾಡಲುದ್ದೇಶಿಸಿದ ಜಾಗದ ವಿವಾದ ಆರಂಭವಾಗಿದೆ. ಎಸ್‌ಟಿಪಿಗೆ 1.33 ಎಕರೆ ಜಾಗ ಖರೀದಿಸಿದ್ದು ಕಡತ ಜಿಲ್ಲಾಧಿಕಾರಿ ಬಳಿ ಇದೆ. ಪಾವತಿ ಆಗಿಲ್ಲ. ಇಲ್ಲಿ ಈಸ್ಟ್‌ವೆಸ್ಟ್ ಕ್ಲಬ್ ಹಿಂದೆ ಸರಕಾರಿ ಜಾಗದ ಹೊರತಾಗಿ 65 ಸೆಂಟ್ಸ್ ಜಾಗದ ಅವಶ್ಯವಿದ್ದು ಅದನ್ನು ತಲುಪಲು ದಾರಿಗಾಗಿಯೂ ಜಾಗ ಬೇಕು. ಕಡತ ಸಿದ್ಧವಾಗಿದ್ದರೂ ಸದಸ್ಯರ ಆಕ್ಷೇಪದಿಂದ ಬಾಕಿಯಾಗಿದೆ.
ಪ್ರಯತ್ನ
ಹಾಗಂತ ಆಡಳಿತದಿಂದ ಏನೂ ಪ್ರಯತ್ನ ನಡೆದಿಲ್ಲ ಎಂದಲ್ಲ. 2013ರ ಅ.10ರಂದು ಪುರಸಭೆ ಅಧ್ಯಕ್ಷೆ ಕಲಾವತಿ ಹಾಗೂ ಮುಖ್ಯಾಧಿಕಾರಿ ಸದಾನಂದ ಒಳಚರಂಡಿ ಕಾಮಗಾರಿ, ವೆಟ್‌ವೆಲ್ ರಚನೆ, ಎಸ್ ಟಿಪಿ ರಚನೆಗೆ ಬೇಕಾದ ಜಾಗವನ್ನು ನೀಡುವುದಾಗಿ ಲಿಖೀತವಾಗಿ ನೀಡಿದ್ದರು. 2016ರ ಜೂ.14ರಂದು ಅಧ್ಯಕ್ಷೆ ವಸಂತಿ ಸಾರಂಗ ಅವರು ಉಸ್ತುವಾರಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆ ಅವರಿಗೆ ಭೂಸ್ವಾಧೀನಕ್ಕೆ ಅವಶ್ಯವಾದ 7.84 ಕೋ. ರೂ. ಗಳನ್ನು ಮಂಜೂರು ಮಾಡಿಕೊಡಲು ಮನವಿ ಬರೆದಿದ್ದರು. 2016ರ ಆ.24ರಂದು ನಡೆದ ಸಾಮಾನ್ಯ ಸಭೆಯಲ್ಲಿ 7.25 ಎಕರೆ ಭೂಸ್ವಾಧೀನಕ್ಕೆ 17 ಕೋ.ರೂ. ಅಂದಾಜುಪಟ್ಟಿಗೆ ಒಪ್ಪಿಗೆ ಕೂಡ ನೀಡಲಾಗಿತ್ತು. 2016ರಲ್ಲಿ ಸರಕಾರಿ ಭೂಮಿಯಲ್ಲಿ ಹೊಳೆ ಪರಂಬೋಕನ್ನು ವಿರಹಿತಗೊಳಿಸುವಂತೆ ಕಡತ ಕಳುಹಿಸಲಾಗಿತ್ತು. 3 ವೆಟ್‌ವೆಲ್‌ಗಳು ಸರಕಾರಿ ಪರಂಬೋಕು ಜಾಗದಲ್ಲಿ ರಚನೆಯಾಗುತ್ತವೆ.
ಈಗಿನ ಆಡಳಿತ ಮಂಡಳಿ ಪ್ರಯತ್ನದ ಮೂಲಕ ಇದಕ್ಕೆ ಸಂಬಂಧ ಪಟ್ಟಂತೆ ಸಿಆರ್‌ಝಡ್‌ನಿಂದ ನಿರಾಕ್ಷೇಪಣಾ ಪತ್ರ, ನಕ್ಷೆ, ಕಡತ ಇತ್ಯಾದಿಗಳನ್ನು ತಯಾರಿಸಿ ಕಂದಾಯ ಇಲಾಖೆಗೆ ನೀಡಿದೆ. ಆರ್ ಟಿಸಿ ತಿದ್ದುಪಡಿ ಮಾಡಿ, ಜಾಗವನ್ನು ಪುರಸಭೆಗೆ ಕಾಮಗಾರಿಗಾಗಿ ಬಿಟ್ಟುಕೊಡಬೇಕು. 2020 ಮಾರ್ಚ್‌ನಲ್ಲಿ ಸಿಆರ್‌ಝಡ್ ನಿರಾಕ್ಷೇಪಣೆ ಸಿಕ್ಕಿದೆ. 2021ರ ಜ.25ರಂದು ಕಡತದ ಕುರಿತು ಸ್ಪಷ್ಟನೆಗೆ ಉತ್ತರಿಸಿ ತಹಶೀಲ್ದಾರ್ ಕಚೇರಿಯಿಂದ ಎಸಿ ಕಚೇರಿಗೆ ಪತ್ರ ಬರೆಯಲಾಗಿದೆ.
ಜಾಗ ಬಾಕಿ
4 ವೆಟ್‌ವೆಲ್‌ಗಳ ಜಾಗ ಒಳಚರಂಡಿ ಮಂಡಳಿಗೆ ಹಸ್ತಾಂತರವಾಗಿದೆ. ಕಲ್ಪನಾ ನಾಗರಾಜ್ ಮಾಲಕತ್ವದ 5 ಸೆಂಟ್ಸ್ ಜಾಗದ ನೋಂದಣಿ ವಿವಾದದ ಕಾರಣದಿಂದ ಆಗಿಲ್ಲ. ಹುಂಚಾರಬೆಟ್ಟಿನ ಜಾಗದ ಖರೀದಿ ತೀರ್ಮಾನ ಆಗಿಲ್ಲ. ಇದೆಲ್ಲ ಕಾರಣದಿಂದ ಸದ್ಯದ ಮಟ್ಟಿಗೆ ಒಳಚರಂಡಿ ಕಾಮಗಾರಿ ನಡೆಯುವುದು, ಮುಂದುವರಿಯುವುದು ಅನುಮಾನ ಎಂದಾಗಿದೆ.
ಆಡಳಿತ
ದೂರದೃಷ್ಟಿ ಇಲ್ಲದ, ಅಧಿಕಾರಿಗಳ ಮೇಲೆ ಹಿಡಿತ ಇಲ್ಲದ, ಅಧಿಕಾರಿಗಳ ಕೈಗೊಂಬೆಯಂತೆ ಕುಣಿಯುವ ಆಡಳಿತದಿಂದಾಗಿ ಇಂತಹ ದುರವಸ್ಥೆ ಬಂದಿದೆ. ಸಾರ್ವಜನಿಕ ಬಳಕೆಗೆ ದೊರೆಯಬೇಕಿದ್ದ ಬೃಹತ್ ಮೊತ್ತ ಚರಂಡಿ ಪಾಲಾಗಿದೆ. ಸದಸ್ಯರ ನಡುವಿನ ತಿಕ್ಕಾಟದಿಂದ, ಸರಿಯಾದ ಮಾರ್ಗದರ್ಶನ ಇಲ್ಲದೇ, ಕಾಮಗಾರಿ ನಡೆಯದೇ ಮುಂದಿನ ದಿನಗಳಲ್ಲಿ ಅನುದಾನ ಬರುವುದೇ ಅನುಮಾನ ಎಂಬಂತಾಗಿದೆ.
ಚರ್ಚಿಸಲಾಗುವುದು
ಒಳಚರಂಡಿ ಕಾಮಗಾರಿ ವಿಳಂಬ ಕುರಿತಂತೆ ಮೀಟಿಂಗ್‌ನಲ್ಲಿ ಚರ್ಚಿಸಲಾಗುವುದು. ಪರಿಹಾರ ಕಂಡು ಹಿಡಿಯಲಾಗುವುದು. ಹಣ ಪೋಲಾಗಲು ಬಿಡುವುದಿಲ್ಲ.
-ವೀಣಾ ಭಾಸ್ಕರ ಮೆಂಡನ್
ಅಧ್ಯಕ್ಷೆ, ಪುರಸಭೆ
*48ಕೋ.ರೂ. ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಾಣಕ್ಕೆ ಮಂಜೂರಾದ ಅನುದಾನ
*29 ಕಿ.ಮೀ. 8 ವರ್ಷಗಳಲ್ಲಿ ಆದ ಪೈಪ್ ಲೈನ್
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.