![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 25, 2022, 10:50 AM IST
ಕುಂದಾಪುರ: ದಕ್ಷಿಣ ಕನ್ನಡದ ಬೀಚ್‌ಗಳಲ್ಲಿ ಅಲೆಗಳ ಮೇಲೆ ತೇಲುತ್ತಿರುವ ಕಪ್ಪು ದ್ರವದ ಮಾದರಿಯಲ್ಲಿ ಕುಂದಾಪುರದಲ್ಲೂ ಸಮುದ್ರದ ಅಲೆಗಳಲ್ಲಿ ಕಪ್ಪುದ್ರವ ತೇಲುವುದು ಕಂಡುಬಂದಿದೆ. ಸಮುದ್ರದ ನೀರು ಕಲುಷಿತಗೊಂಡಿದ್ದು ಮೀನುಗಾರರಲ್ಲಿ ಆತಂಕ ಮೂಡಿಸಿದೆ.
ಮೀನುಗಳ ಸಾವು
ಪ್ರತೀ ವರ್ಷವೂ ಈ ಕಪ್ಪು ದ್ರವ ಕುಂದಾಪುರದ ಕಡಲ ತೀರವಿಡೀ ಕಾಣಲು ಸಿಗುತ್ತದೆ. ಆದರೆ ಸ್ಥಳೀಯರ ಅಭಿಪ್ರಾಯದ ಪ್ರಕಾರ ತೇಲುವ ಈ ಕಪ್ಪು ದ್ರವ ಬಂದಂತೆ ಪಂಜರದಲ್ಲಿ ಸಾಕಿದ ಮೀನುಗಳೂ ಏಕಾಏಕಿ ಸಾವಿಗೀಡಾಗುತ್ತವೆ. ಮೀನುಗಾರಿಕೆ ಮೇಲೆ ಇದು ಗಾಢ ಪರಿಣಾಮ ಬೀರುತ್ತಿದೆ.
ಪೆಟ್ರೋಲಿಯಂ ತ್ಯಾಜ್ಯ
ಸಮುದ್ರದ ಅಲೆಗಳಲ್ಲಿ ಕಂಡು ಬರುತ್ತಿರುವ ಕಪ್ಪುದ್ರವ ಹಡಗುಗಳಿಂದ ಸುರಿದ ಪೆಟ್ರೋಲಿಯಂ ತ್ಯಾಜ್ಯ – ಟಾರ್ ಬಾಲ್‌ಗಳು ಎನ್ನುವ ಆರೋಪ ಊರವರದು. ಏಕೆಂದರೆ ಸಮುದ್ರಕ್ಕೆ ಇಳಿದು ನಡೆದುಕೊಂಡು ಹೋದರೆ, ಕೈಗೆ ನೀರನ್ನು ಹಾಕಿಕೊಂಡರೆ ಕೈ ಕಾಲುಗಳು ಕಪ್ಪಾಗುತ್ತವೆ. ಸಣ್ಣ ಸಣ್ಣ ಗಡ್ಡೆಯಂತಹ ಆಕಾರಗಳು ಪತ್ತೆಯಾಗುತ್ತಿವೆ.
ಕ್ಲೀನ್ ಕುಂದಾಪುರ ತಂಡ
134 ನೇ ವಾರ ಕಡಲತಡಿಯ ಸ್ವತ್ಛತೆಗೆ ಬೀಜಾಡಿಯ ಸಮುದ್ರ ದಡಕ್ಕಿಳಿದ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡಕ್ಕೆ ಈ ತೇಲುವ ಕಪ್ಪು ದ್ರವ ತೀರದುದ್ದಕ್ಕೂ ಹರಡಿರುವುದು ಗಮನಕ್ಕೆ ಬಂತು. ತಂಡದಲ್ಲಿದ್ದ ಒಂದಿಬ್ಬರು ಪರೀಕ್ಷಿಸಲು ಹೋಗಿ, ಎಣ್ಣೆ ಅಂಶದ ಟಾರ್‌ನ್ನು ಚಪ್ಪಲಿಗೆ ಮೆತ್ತಿಕೊಂಡು ಅದು ಏನಿರಬಹುದು? ಅನ್ನುವುದರ ಪ್ರತ್ಯಕ್ಷ ಅನುಭವ ಹೊತ್ತು ತಂದರು! ದೂರದೂರದಿಂದ ಸಮುದ್ರ ನೋಡಲು ಬಂದ ಕೆಲವು ಜೋಡಿಗಳು ಸಮುದ್ರ ಅಂದರೆ ಕಪ್ಪು ನೀರು ಅಂತ ತಿಳಿದು ಆ ನೀರಲ್ಲೇ ಹೊರಳಾಡೋದು, ತುರಿಕೆ ಶುರುವಿಟ್ಟುಕೊಳ್ಳುವುದು ಬೇಡ ಎಂದು ತಂಡದವರು ಸಮುದ್ರದ ನೀರಲ್ಲಿ ಆಟವಾಡದಂತೆ ಎಚ್ಚರಿಸಿದ್ದಾರೆ.
ಅಪಾಯ
ಸಮುದ್ರವನ್ನೇ ನಂಬಿದ ಜೀವ ಸಂಕುಲಗಳ ಬದುಕಿಗೆ ಮಾರಕವಾದ ಇದರ ಕುರಿತು ಸಮುದ್ರ ಜೀವಿಗಳಿಗೆ ಇದರ ಅಪಾಯದಿಂದ ತಪ್ಪಿಸಿಕೊಳ್ಳಲು ಎಚ್ಚರಿಸುವ ಅಗತ್ಯ ಇದೆ.
ಅಲ್ಲೇನು
ಮಾನ್ಸೂನ್ ಪೂರ್ವದಲ್ಲಿ ಬಯೋ ಲ್ಯೂಮಿನೆಸೆನ್ಸ್ ಆಲ್ಗೆಗಳ ಬ್ಲೂಮ್‌ನಿಂದ ಹೀಗಾಗುತ್ತದೆ. ಇದು ಸಹಜ ಎಂದು ಅಧಿಕಾರಿಗಳು ಹೇಳಿಕೆ ಕೊಟ್ಟು ದಕ್ಷಿಣಕನ್ನಡದಲ್ಲಿ ಪತ್ತೆಯಾದ ದ್ರವದ ಮಾದರಿಯನ್ನು ಹೆಚ್ಚಿನ ಮಾಹಿತಿಗೆ ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದರು. ಅಷ್ಟಕ್ಕೂ ಸಮುದ್ರ ತೀರದಲ್ಲಿ ಮಾನ್ಸೂನ್ ಪೂರ್ವದಲ್ಲಿ ಆಗುತ್ತಿರುವುದೇನು? ಸಮುದ್ರ ಜೈವಿಕ ವ್ಯವಸ್ಥೆಗೆ ಮಾರಕವಾದ ಈ ಪೆಟ್ರೋಲಿಯಂ ತ್ಯಾಜ್ಯ ಸಮುದ್ರ ತೀರದಲ್ಲಿ ನೂರಾರು ಕಿಲೋಮೀಟರ್ ಗಟ್ಟಲೆ ಹರಡೋದು ಹೇಗೆ? ಗೊತ್ತಿಲ್ಲದೆ ನಡೆಯುವ ಪ್ರಮಾದವೇ? ಪರೋಕ್ಷವಾಗಿ ಸಮುದ್ರದ ಆಹಾರ ತಿನ್ನುವವನ ಆರೋಗ್ಯಕ್ಕೂ ಇದು ಮಾರಕವಲ್ಲವೇ? ಎನ್ನುವ ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ.
ಜಾಗೃತರಾಗಬೇಕಿದೆ
ಭೂಮಿಯ, ಅಷ್ಟೂ ಜೈವಿಕ ಪ್ರಕ್ರಿಯೆಯ ಮೂಲವಾದ ಸಾಗರವನ್ನು ಇನ್ನಿಲ್ಲದಂತೆ ಕಲುಷಿತ ಮಾಡುವುದನ್ನು ಮೂಕರಾಗಿ ನೋಡಬೇಕೆನ್ನುವ ಅಪರಾಧ ಪ್ರಜ್ಞೆ ಕಾಡುತ್ತ ಇದೆ. ಈ ಕುರಿತು ಇನ್ನಷ್ಟು ಮಂದಿ ಜಾಗೃತರಾಗುವ ಅಗತ್ಯವಿದೆ. ಸಮುದ್ರವನ್ನೇ ವಿಷ ಮಾಡುತ್ತಿರುವ ಈ ಗಂಭೀರ ವಿಚಾರ ಕಡಲನ್ನೇ ನಂಬಿ ಬದುಕುವವರ ಗಮನಕ್ಕೂ ಬಾರದಿರುವುದು ಆಶ್ಚರ್ಯ. -ಗಣೇಶ್ ಪುತ್ರನ್ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡ
You seem to have an Ad Blocker on.
To continue reading, please turn it off or whitelist Udayavani.