![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
Team Udayavani, Jan 29, 2025, 3:07 PM IST
ಕುಂದಾಪುರ: ಕೆಎಸ್‌ಆರ್‌ಟಿಸಿಯ ಮಂಗಳೂರು ವಿಭಾಗಕ್ಕೆ ಸೇರಿದ ಉಡುಪಿ ಜಿಲ್ಲೆಯಲ್ಲಿ ಉಡುಪಿ ಹಾಗೂ ಕುಂದಾಪುರದಲ್ಲಿ ಮಾತ್ರ ಬಸ್ ಡಿಪೋಗಳಿವೆ. ಇದರಲ್ಲಿ ಕುಂದಾಪುರದ ಡಿಪೋ ಅಂತೂ ಬಸ್‌ಗಳಿಂದ ತುಂಬಿ ತುಳುಕುತ್ತಿದೆ. ಇಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ, ಹೆಚ್ಚುವರಿ ಬಸ್ ತರಿಸಿದರೆ ನಿಲ್ಲಿಸಲೂ ಜಾಗವಿಲ್ಲದಂತಾಗಿದೆ.
ಸಂಜೆ ವೇಳೆಗೆ ಗೋಧೂಳಿ ಲಗ್ನದಲ್ಲಿ “ಹಿಂದೆ ಬಂದರೆ ಹಾಯಬೇಡಿ, ಮುಂದೆ ಬಂದರೆ ಒದೆಯಬೇಡಿ’ ಎಂಬ ಸ್ಥಿತಿಯಲ್ಲಿ ಬಸ್ಸುಗಳು ಅಡ್ಡಾದಿಡ್ಡಿಯಾಗಿ ಗೋಗರೆಯಬೇಕಾದ ಸ್ಥಿತಿ ಇದೆ. ಹೀಗಾಗಿ ಅಡ್ಡಾದಿಡ್ಡಿಯಾಗಿ ನಿಲ್ಲುವುದು ಸಾಮಾನ್ಯ ಎನ್ನುವಂತಾಗಿದೆ. ಬೈಂದೂರಿನಲ್ಲಿ ಡಿಪೋ ಆದರೆ ಕುಂದಾಪುರದ ಒತ್ತಡ ಕಡಿಮೆಯಾಗಲಿದೆ.
ಕುಂದಾಪುರ ಡಿಪೋದಲ್ಲಿ ಒಟ್ಟು 117 ಬಸ್‌ಗಳು ರಾಜ್ಯದ ವಿವಿಧ ಭಾಗಗಳಿಗೆ ಓಡಾಟ ನಡೆಸುತ್ತವೆ. ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ 39 ಬಸ್‌ಗಳು ಸಾಮಾನ್ಯ ಸಾರಿಗೆಯಾಗಿಯೂ, 36 ಬಸ್‌ಗಳು ವೇಗದೂತ ಸಾರಿಗೆಯಾಗಿಯೂ ಸಂಚರಿಸುತ್ತವೆ. ಕುಂದಾಪುರ, ಬೈಂದೂರು ತಾಲೂಕಿನ ಗ್ರಾಮಾಂತರ ಪ್ರದೇಶಕ್ಕೆ ಕೆಎಸ್‌ಆರ್‌ಟಿಸಿಯ 38 ಬಸ್‌ಗಳು ನಿತ್ಯ ಓಡಾಟ ನಡೆಸುತ್ತವೆ. ಪ್ರತೀನಿತ್ಯ 15 ಸಾವಿರ ಪ್ರಯಾಣಿಕರು ಸಂಚರಿಸುತ್ತಾರೆ.
ಸ್ಥಳಾಭಾವ
ಈಚೆಗಷ್ಟೇ 3 ಕೋ.ರೂ. ವೆಚ್ಚದಲ್ಲಿ ಡಿಪೋದಲ್ಲಿ ಕಟ್ಟಡವೊಂದು ನಿರ್ಮಾಣವಾಗಿದೆ. ಹಿಂದಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಅವಧಿಯಲ್ಲಿ ಮಂಜೂರಾದ ಅನುದಾನ ಇದು. ಈಗ ಬಸ್‌ಗಳನ್ನು ನಿಲ್ಲಿಸಲು ಜಾಗ ಇಲ್ಲದ ಕಾರಣ ಹೊಸ ಬಸ್‌ಗಳನ್ನು ತರಿಸಲು ಕಷ್ಟವಾಗುತ್ತಿದೆ. ಹಾಗಿದ್ದರೂ ಬೆಂಗಳೂರಿನಂತಹ ದೂರದ ಪ್ರಯಾಣಕ್ಕೆ ಅಂಬಾರಿ ಉತ್ಸವ್
ನಂತಹ ಐಷಾರಾಮಿ ಬಸ್‌ಗಳನ್ನು ಕುಂದಾಪುರ ಡಿಪೋ ಪಡೆದಿದೆ.
ಗ್ಯಾರಂಟಿ ಯೋಜನೆ
ಒಬ್ಬ ಮಹಿಳಾ ಪ್ರಯಾಣಿಕೆಗೆ ಸರಾಸರಿ 39 ರೂ. ಉಚಿತ ಪ್ರಯಾಣ ದರ ದೊರೆತಿದೆ. ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ಯೋಜನೆಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿಗೆ ಸಂಬಂಧಪಟ್ಟಂತೆ ಕುಂದಾಪುರ ಡಿಪೊದಲ್ಲಿ ಶಕ್ತಿ ಯೋಜನೆಯಡಿ 1,10,99,961ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು 39,30,02,325 ರೂ. ರಿಯಾಯಿತಿ ಪಡೆದಿದ್ದಾರೆ. 103 ಮಾರ್ಗದಲ್ಲಿ 117 ಬಸ್‌ಗಳು ಓಡಾಟ ನಡೆಸುತ್ತಿದ್ದು 2023ರ ಜೂನ್‌ನಲ್ಲಿ ಯೋಜನೆ ಅನುಷ್ಠಾನದ ತಿಂಗಳಿನಲ್ಲಿ 1,06,78,970 ರೂ.ವಿನಿಯೋಗವಾಗಿತ್ತು. ಕಳೆದ ವರ್ಷದ ಡಿಸೆಂಬರ್ ವೇಳೆಗೆ ಈ ಮೊತ್ತ 2,05,88,527ರೂ.ಗೆ ತಲುಪಿತ್ತು. ಈ ವರ್ಷ ಮೇ ವೇಳೆಗೆ 2,45,41,630 ರೂ.ಗಳಾಗಿತ್ತು. ಅಕ್ಟೋಬರ್‌ನಲ್ಲಿ 2,42,58,666 ರೂ. ಗಳಷ್ಟಾಗಿದೆ. ಈ ವರ್ಷ ಜನವರಿಯಲ್ಲಿ 2,25,03,961 ರೂ. ರಿಯಾಯಿತಿ ದೊರೆತಿದೆ.
ಬೈಂದೂರು ನಿಲ್ದಾಣ ಉದ್ಘಾಟನೆಯಾಗಲಿ
ಉಡುಪಿ ಜಿಲ್ಲೆಯಲ್ಲಿ ಉಡುಪಿ ಹಾಗೂ ಕುಂದಾಪುರದಲ್ಲಿ ಮಾತ್ರ ಡಿಪೋಗಳಿವೆ. ಇವೆರಡೂ ಮಂಗಳೂರು ವಿಭಾಗಕ್ಕೆ ಸೇರಿವೆ. ಬೈಂದೂರಿನಲ್ಲಿ ಬಸ್ ನಿಲ್ದಾಣ ಆಗಿದ್ದು ಕಳೆದ ಆರೇಳು ವರ್ಷಗಳಿಂದ ಉದ್ಘಾಟನೆಯಾಗದೇ ನನೆಗುದಿಗೆ ಬಿದ್ದಿತ್ತು. ಫೆಬ್ರವರಿಯಲ್ಲಿ ಇದರ ಉದ್ಘಾಟನೆಯಾಗಲಿದೆ. ಈಗಾಗಲೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸ್ಟಾಲ್, ಹೊಟೇಲ್‌ಗಳಿಗೆ ಟೆಂಡರ್ ಕರೆದಿದೆ. ಬೈಂದೂರಿನಲ್ಲಿ ಡಿಪೋ ಆದರೆ ಗ್ರಾಮಾಂತರ ಪ್ರದೇಶಕ್ಕೆ ಇನ್ನಷ್ಟು ಸಾರಿಗೆ ಸೌಲಭ್ಯ ನೀಡಬಹುದು. ಕೊಲ್ಲೂರಿನಂತಹ ಧಾರ್ಮಿಕ ಕೇಂದ್ರವನ್ನು ಬೆಸೆಯಬಹುದು. ಈಗ ಕೊಲ್ಲೂರಿನಲ್ಲಿ ಸರಕಾರಿ ಬಸ್ ನಿಲ್ದಾಣ ಇಲ್ಲ. ಸರಕಾರಿ ಬಸ್ಸುಗಳ ಸಂಖ್ಯೆಯೂ ಕಡಿಮೆ ಇದೆ.
ಬಸ್‌ಗಳಿಗೆ ಬೇಡಿಕೆ ಇದೆ… ಸಿಬಂದಿ ಕೊರತೆ!
ಪ್ರಸ್ತುತ ಇರುವ ರೂಟ್‌ಗಳಲ್ಲದೇ ಹೊಸ ಮಾರ್ಗಕ್ಕೆ ಬಸ್ಸು ಓಡಿಸಲು ಸಾಕಷ್ಟು ಬೇಡಿಕೆ ಇದೆ. ಕೆಲವು ಪರ್ಮಿಟ್ ಇರುವ ಮಾರ್ಗಗಳಲ್ಲೂ ಬಸ್ ಸಂಚಾರ ಪುನಾರಂಭ ಮಾಡಲು ಸಿಬಂದಿ ಕೊರತೆಯಿದೆ. ಈಗಾಗಲೇ 45 ಸಿಬಂದಿ ಕೊರತೆಯಿದೆ. ಅದರೆಡೆಯಲ್ಲೂ ಕೆಲವರು ಊರಿಗೆ ಹೋದವರು ಮರಳಿ ಬರುವುದಿಲ್ಲ, ಮನಬಂದಂತೆ ವಾಪಸಾಗುತ್ತಾರೆ ಎಂಬ ದೂರುಗಳಿವೆ. ಈಗ ಖಾಯಂ ಸಿಬಂದಿಯ ಬದಲು ಏಜೆನ್ಸಿ ಮೂಲಕ ವಾರ್ಷಿಕ ಗುತ್ತಿಗೆ ಆಧಾರದ ಸಿಬಂದಿ ಪಡೆಯುವ ಕಾರಣ ಇಂತಹ ಅನಧಿಕೃತ ಗೈರಿಗೆ ಕಡಿವಾಣ ಇಲ್ಲದಂತಾಗಿದೆ. ಹೊಸದಾಗಿ 2 ಸಾವಿರ ಮಂದಿಯ ನೇಮಕಾತಿ ಆಗಲಿದ್ದು ಇದಕ್ಕಾಗಿ 25 ಸಾವಿರ ಮಂದಿಯ ಚಾಲನಾ ಪರೀಕ್ಷೆ ನಡೆಯುತ್ತಿದೆ. ಇದು ಪೂರ್ಣವಾದ ಬಳಿಕ ಚಾಲಕ, ನಿರ್ವಾಹಕರು ದೊರೆಯಬಹುದು. ಹಾಗಿದ್ದರೂ ಕರಾವಳಿಯ ನಿವಾಸಿಗಳಲ್ಲದೇ ಹೋದರೆ ರಜೆ, ಕೆಲಸದಿಂದ ಬಿಡುವುದು, ಊರಿಗೆ ವರ್ಗವಾಗುವ ಸಮಸ್ಯೆಗಳಿವೆ ಎನ್ನುತ್ತಾರೆ ಸಿಬಂದಿ.
ಓಡಾಟ
103: ಸಂಚರಿಸುವ ರೂಟ್‌ಗಳು
117: ಸಂಚರಿಸುವ ಒಟ್ಟು ಬಸ್
45: ಸಿಬಂದಿ ಕೊರತೆ
15,000: ನಿತ್ಯ ಪ್ರಯಾಣಿಕರು
ಜಾಗದ ಕೊರತೆ
ಬೈಂದೂರಿನಲ್ಲಿ ಡಿಪೋ ಕಾರ್ಯಾರಂಭ ಮಾಡಿದರೆ ಕುಂದಾಪುರದ ಭಾರ ಇಳಿಯಲಿದೆ. ಜನರಿಗೆ ಇನ್ನಷ್ಟು ಬಸ್ ಸೌಕರ್ಯ ದೊರೆಯಲಿದೆ. ಅದಕ್ಕಾಗಿ 5 ಎಕರೆ ಜಾಗದ ಆವಶ್ಯಕತೆಯಿದ್ದು ಮೀಸಲಿಟ್ಟರೆ ಪ್ರಸ್ತಾವನೆ ಸಲ್ಲಿಸಬಹುದು.
-ಉದಯ ಶೆಟ್ಟಿ ಡಿಪೋ ಮೆನೇಜರ್, ಕುಂದಾಪುರ
ಪ್ರಯತ್ನ ಆಗುತ್ತಿದೆ
ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ, ಕೊಲ್ಲೂರು ಧಾರ್ಮಿಕ ಕ್ಷೇತ್ರಕ್ಕೂ ಸಂಪರ್ಕಕ್ಕೆ ನೆರವಾಗುವಂತೆ ಡಿಪೋ ಮಾಡಲು ಜಾಗ ಮೀಸಲಿಡುವ ಯೋಚನೆಯಿದೆ. ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚಿಸಿ ಶೀಘ್ರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳ ಲಾಗುವುದು.
-ಗುರುರಾಜ್ ಗಂಟಿಹೊಳೆ, ಶಾಸಕ, ಬೈಂದೂರು
-ಲಕ್ಷ್ಮೀ ಮಚ್ಚಿನ
Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ
Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ
You seem to have an Ad Blocker on.
To continue reading, please turn it off or whitelist Udayavani.