Kundapura: ತೆಂಗಿನ ಮರಗಳಿಗೆ ಬೇರು ಬಾಧೆ; ಕಾಂಡ ಸೋರುವ ರೋಗ ಪತ್ತೆ
Team Udayavani, Oct 5, 2023, 6:13 PM IST
ಕುಂದಾಪುರ: ನಾಡ ಗ್ರಾಮದ ಜಡ್ಡಾಡಿಯಲ್ಲಿ 300 ಕ್ಕೂ ಅಧಿಕ ತೆಂಗಿನ ಮರಗಳಿಗೆ ವಿಚಿತ್ರ ಕಾಯಿಲೆ ಬಂದ ಬಗ್ಗೆ ಬುಧವಾರ ಕೃಷಿ ವಿಜ್ಞಾನಿಗಳು, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಬೇರು ಬಾಧೆ ಹಾಗೂ ಕಾಂಡ ಸೋರುವ ರೋಗದಿಂದ ತೆಂಗಿನ ಮರಗಳು ಈ ರೀತಿಯಾಗಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.
ವಿಜ್ಞಾನಿಗಳಾದ ಬ್ರಹ್ಮಾವರದ ವಲಯ ಕೃಷಿ ಹಾಗೂ ತೋಟಗಾರಿಕಾ ಸಂಶೋಧನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ| ಚೈತನ್ಯ ಎಚ್.ಎಸ್., ಕೀಟಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ| ರೇವಣ್ಣ ರೇವಣ್ಣನವರ್, ಕೃಷಿ ವಿಸ್ತರಣೆ ಸಹಾಯಕ ಪ್ರಾಧ್ಯಾಪಕ ಡಾ| ಮೋಹನ ಕುಮಾರ ವಿ. ಭೇಟಿ ನೀಡಿದರು. ಜಡ್ಡಾಡಿಯ ಚಿಕ್ಕು ಪೂಜಾರ್ತಿ, ಬಚ್ಚಿ ಪೂಜಾರ್ತಿ ಹಾಗೂ ನಾಗು ಪೂಜಾರ್ತಿ ಅವರ ಸುಮಾರು 310ಕ್ಕೂ ಅಧಿಕ ತೆಂಗಿನ ಮರಗಳಿಗೆ ಈ ರೋಗ ಬಾಧೆ ಉಂಟಾಗಿದ್ದು, ಅವರ ತೆಂಗಿನ ತೋಟಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿದರು.
ಪರಿಹಾರ ಕ್ರಮಕ್ಕೆ ಸಲಹೆ
ಈ ರೋಗ ಬಾಧೆಗೆ ವಿಜ್ಞಾನಿಗಳು ಪರಿಹಾರ ಸೂಚಿಸಿದ್ದಾರೆ. ರೆಡೊಮಿಲ್ ಎಂ-ಝಡ್ ದ್ರಾವಣ, ಶೇ. 1 ಬೋರ್ಡೊ ದ್ರಾವಣ ತೆಂಗಿನ ಮರಗಳ ಬುಡಕ್ಕೆ ಸುರಿಸ ಬೇಕು. 1 ಮರಕ್ಕೆ 5 ಕೆ.ಜಿ. ಬೇವಿನ ಹಿಂಡಿ, ಬೋರ್ಡೊ ಪೇಸ್ಟ್ ಮಾಡಿ, ಕಾಂಡದ ಮೇಲೆ ಬಳಿಯಬೇಕು.
ಮೇ ತಿಂಗಳಲ್ಲಿ 2 ಕೆ.ಜಿ. ಸುಣ್ಣ, ಆ ಬಳಿಕ 15 ದಿನಗಳ ನಂತರ ಜೂನ್ ತಿಂಗಳಲ್ಲಿ 500 ಗ್ರಾಂ. ಯೂರಿಯಾ, 750 ಗ್ರಾಂ. ರಾಕ್,
1 ಕೆ.ಜಿ. ಪೊಟ್ಯಾಷ್ ಹಾಕಬೇಕು. ಅಕ್ಟೋಬರ್ ನಲ್ಲೂ ಅದೇ ರೀತಿ ಹಾಕಬೇಕು. ಸೆಪ್ಟಂಬರ್ – ಅಕ್ಟೋಬರ್‌ನಲ್ಲಿ ಬುಡ ಬಿಡಿಸುವಾಗ ಗೊಬ್ಬರ ಹಾಕುವ ವೇಳೆ, ಟ್ರಕೊಡರ್ಮಾ ಮಿಶ್ರಣ ಮಾಡಬೇಕು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ವೇಳೆ ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಅವರು, ರೈತರಿಗೆ ಈ ಬಗ್ಗೆ ಮಾಹಿತಿ ನೀಡುವ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಸಹಕಾರಿ ಸಂಘಗಳ ಸಹಕಾರದೊಂದಿಗೆ ವಿಚಾರ ಸಂಕಿರಣ ನಡೆಸಲು ಸಂಬಂಧಪಟ್ಟ
ಕುಂದಾಪುರದ ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಕುಂದಾಪುರದ ಹಿರಿಯ ತೋಟಗಾರಿಕೆ ಯ ಸಹಾಯಕ ನಿರ್ದೇಶಕ ನಿಧೀಶ್ ಕೆ.ಜೆ.,ತೆಂಗು ಬೆಳೆಗಾರರು ಉಪಸ್ಥಿತರಿದ್ದರು.
ಸುದಿನ ವರದಿ
ಜಡ್ಡಾಡಿಯಲ್ಲಿ ತೆಂಗಿನ ಮರಗಳಿಗೆ ವಿಚಿತ್ರ ರೋಗ ಬಂದಿರುವ ಕುರಿತಂತೆ “ಉದಯವಾಣಿ ಸುದಿನ’ವು ಅ.1ರಂದು ವಿಶೇಷ ವರದಿ ಪ್ರಕಟಿಸಿ, ಗಮನಸೆಳೆದಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.