Kundapura: ತಲ್ಲೂರು ಪೇಟೆಗೆ ಶೌಚಾಲಯ ಬೇಕು
ಮಳಿಗೆಗಳಲ್ಲಿ ಕೆಲಸ ಮಾಡುವವರಿಗೆ, ರಿಕ್ಷಾ, ಅನ್ಯ ವಾಹನ ಚಾಲಕರಿಗೆ ತೊಂದರೆ; ಹತ್ತಿರದ ಮನೆ, ಹೊಟೇಲ್ ಆಶ್ರಯಿಸಬೇಕು; ಹೆಣ್ಮಕ್ಕಳಿಗೆ ಹೇಳಲಾಗದ ಸಂಕಟ
Team Udayavani, Oct 27, 2024, 4:34 PM IST
ಕುಂದಾಪುರ: ಬೈಂದೂರು – ಕುಂದಾಪುರ ಹೆದ್ದಾರಿ ಹಾದುಹೋಗುವ, ಹತ್ತಾರು ಊರುಗಳನ್ನು ಸಂಪರ್ಕಿಸುವ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾದ ತಲ್ಲೂರು ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲ. ಹೌದು, ನೂರಕ್ಕೂ ಮಿಕ್ಕಿ ಮಳಿಗೆಗಳು, ನೂರಾರು ವಾಹನಗಳಿರುವ ಪ್ರಮುಖ ಪೇಟೆಯಾಗಿದ್ದರೂ, ಇಲ್ಲಿ ಜನರ ಬಳಕೆಗೆ ಒಂದು ಸಾರ್ವಜನಿಕ ಶೌಚಾಲಯ ಇಲ್ಲದೆ ಅಲ್ಲಿ ಉದ್ಯೋಗ ಮಾಡುವ ಮಹಿಳೆಯರು ಸೇರಿ ನೂರಾರು ಮಂದಿ ಸಮಸ್ಯೆ ಅನುಭವಿಸುತ್ತಿದ್ದಾರೆ.
ಪೇಟೆ ಅಂದ ಮೇಲೆ ಅಲ್ಲಿ ಸಾರ್ವಜನಿಕ ಶೌಚಾಲಯಗಳು ಇರಬೇಕಾದುದು ಇಂದಿನ ಅತೀ ಅಗತ್ಯಗಳಲ್ಲಿ ಒಂದು. ಅಂತದ್ದರಲ್ಲಿ ಕುಂದಾಪುರ – ಬೈಂದೂರು ಭಾಗದ ಪ್ರಮುಖ ಜಂಕ್ಷನ್ ಎಂದು ಕರೆಸಿಕೊಳ್ಳುವ ತಲ್ಲೂರು ಪೇಟೆಯಲ್ಲಿ ಇನ್ನೂ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ಸಾರ್ವಜನಿಕ ಶೌಚಾಲಯವಿಲ್ಲದೆ, ಆ ಕಷ್ಟ ಅನುಭವಿಸಿದವರಿಗೇ ಗೊತ್ತು.
ನೂರಾರು ಮಂದಿಯ ನಿತ್ಯದ ಗೋಳು
ತಲ್ಲೂರು ಪೇಟೆಯನ್ನು ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿಯು ಇಬ್ಭಾಗಿಸುತ್ತದೆ. ಇಲ್ಲಿ ಎರಡೂ ಬದಿಯಲ್ಲಿ ಬದಿಯಲ್ಲಿ ಸುಮಾರು ನೂರಕ್ಕೂ ಮಿಕ್ಕಿ ವಾಣಿಜ್ಯ ಮಳಿಗೆಗಳು, ದಿನಸಿ ಅಂಗಡಿಗಳು, ಹೊಟೇಲ್, ಜ್ಯೂಸ್ ಪಾರ್ಲರ್, ಬಟ್ಟೆ, ಫ್ಯಾನ್ಸಿ, ಜೆರಾಕ್ಸ್, ಮೆಡಿಕಲ್, ತರಕಾರಿ ಅಂಗಡಿ, ಮೀನು ಮಾರುಕಟ್ಟೆ ಎಲ್ಲವೂ ಇದೆ. ಇಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಯುವತಿಯರು, ಮಹಿಳೆಯರೇ ಹೆಚ್ಚಿನವರು ಕೆಲಸ ಮಾಡುತ್ತಿದ್ದಾರೆ. ಇನ್ನು ರಿಕ್ಷಾ ಚಾಲಕರು, ಟೆಂಪೋ, ಕಾರು ಚಾಲಕರು ಸೇರಿದಂತೆ ಅನೇಕ ಮಂದಿ ಬೆಳಗ್ಗೆಯಿಂದ ಸಂಜೆಯವರೆಗೆ ಈ ತಲ್ಲೂರು ಪೇಟೆಯನ್ನೇ ಆಶ್ರಯಿಸಿದ್ದಾರೆ.
ಹತ್ತಿರದ ಮನೆಗಳೇ ಆಶ್ರಯ
ತಲ್ಲೂರು ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದ ಕಾರಣ ಇಲ್ಲಿ ಮಳಿಗೆಗಳಲ್ಲಿ ಕೆಲಸ ಮಾಡುವ ಕೆಲವು ಯುವತಿಯರು, ಮಹಿಳೆಯರು ಹತ್ತಿರದ ಮನೆಗಳು ಅಥವಾ ಹೊಟೇಲ್‌ಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಕೆಲವರಿಗೆ ಒಂದು ರೀತಿಯ ಮುಜುಗರದ ಸಂಗತಿಯೂ ಹೌದು. ಆದಷ್ಟು ಬೇಗ ತಲ್ಲೂರು ಪೇಟೆಯಲ್ಲೊಂದು ಸುಸಜ್ಜಿತವಾದ ಸಾರ್ವಜನಿಕ ಶೌಚಾಲಯ ಆಗಲಿ ಅನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.
ಅತೀ ಅಗತ್ಯವಾಗಿ ಬೇಕು
ತಲ್ಲೂರು ಪೇಟೆ ಬೆಳೆಯುತ್ತಿದ್ದು, ಪೇಟೆ ಬೆಳೆದಂತೆ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಅಂಗಡಿಗಳು ಹೆಚ್ಚಾಗುತ್ತಿದೆ. ಹಾಗಾಗಿ ಈ ಬೆಳೆಯುತ್ತಿರುವ ಪೇಟೆಗೆ ಸಾರ್ವಜನಿಕ ಶೌಚಾಲಯವೊಂದು ಅತೀ ಅಗತ್ಯವಾಗಿ ಬೇಕಾಗಿದೆ. ಸ್ಥಳೀಯ ಗ್ರಾ.ಪಂ. ಈ ನಿಟ್ಟಿನಲ್ಲಿ ಇಲ್ಲಿನ ಜನರ ಮುಖ್ಯವಾಗಿ ಮಹಿಳೆಯರ ಅನುಕೂಲಕ್ಕಾಗಿ ಮುತುವರ್ಜಿ ವಹಿಸಬೇಕಾಗಿದೆ.
– ಸಂದೀಪ್, ರಿಕ್ಷಾ ಚಾಲಕರು, ತಲ್ಲೂರು
ನಿರ್ಮಾಣಕ್ಕೆ ಪ್ರಯತ್ನ
ತಲ್ಲೂರಲ್ಲಿ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯ ಬೇಡಿಕೆ ಬಗ್ಗೆ ಗಮನದಲ್ಲಿದ್ದು, ಸದ್ಯ ನೀರಿನ ಸಮಸ್ಯೆ ಇದ್ದುದರಿಂದ ವಿಳಂಬ ಆಗಿದೆ. ಜೆಜೆಎಂನಡಿ ನೀರಿನ ಟ್ಯಾಂಕ್ ಆಗಲಿದ್ದು, ಆ ಬಳಿಕ ಶೌಚಾಲಯ ನಿರ್ಮಿಸಲಾಗುವುದು. ಮೀನಿನ ಮಾರುಕಟ್ಟೆಯಲ್ಲಿಯೂ ಶೌಚಾಲಯ ಅಗತ್ಯವಿರುವುದು ಗಮನದಲ್ಲಿದೆ.
– ಗಿರೀಶ್ ನಾಯ್ಕ, ಅಧ್ಯಕ್ಷ, ತಲ್ಲೂರು ಗ್ರಾ.ಪಂ..
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.