Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್ ನಿಲ್ದಾಣವೇ ಇಲ್ಲ !
ಆಕರ್ಷಕ ಬೀಚ್, ಪುರಾತನ ಮಾರಸ್ವಾಮಿ ದೇಗುಲಕ್ಕೆ ಸಾವಿರಾರು ಜನ ಬರ್ತಾರೆ.. ಆದರೆ ತಂಗುದಾಣ ಮಾತ್ರ ಇಲ್ಲ!; ಹತ್ತಾರು ಗ್ರಾಮೀಣ ಊರು ಹೆದ್ದಾರಿಗೆ ಸೇರುವ ಜಾಗ ಇದು; ಉದ್ಯೋಗ, ಕಾಲೇಜಿಗೆ ಹೋಗುವವರಿಗೆ ನೆಲೆ ಇಲ್ಲ
Team Udayavani, Nov 29, 2024, 8:01 PM IST
ಕುಂದಾಪುರ: ವಿಶ್ವ ಪ್ರಸಿದ್ಧ ಮರವಂತೆ ಬೀಚ್, ಶ್ರೀ ವರಾಹ ಮಹಾರಾಜ ಸ್ವಾಮಿ ದೇವಸ್ಥಾನ ಹಾಗೂ ಸೌಪರ್ಣಿಕ ನದಿ, ಹತ್ತಾರು ಗ್ರಾಮೀಣ ಊರುಗಳು ಹೆದ್ದಾರಿ ಸೇರುವ ಹೀಗೆ ಎಲ್ಲವೂ ಒಂದೇ ಕಡೆ ಇರುವಂತಹ ಸುಂದರ ತಾಣವಾದ ಮರವಂತೆಯ ಮಾರಸ್ವಾಮಿ ಬಳಿಯೊಂದು ಚೆಂದದ ಬಸ್ ನಿಲ್ದಾಣವಿಲ್ಲ. ಬಸ್‌ಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರು, ಗ್ರಾಮಾಂತರ ಜನರು ರಸ್ತೆ ಬದಿಯೇ ನಿಲ್ಲುವಂತಾಗಿದೆ.
ಮರವಂತೆಯ ಮಾರಸ್ವಾಮಿ ಬಳಿ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭಗೊಳ್ಳುವ ಮೊದಲು ದೊಡ್ಡದಾದ, ತಕ್ಕಮಟ್ಟಿಗೆ ಉತ್ತಮವಾದ ಬಸ್ ನಿಲ್ದಾಣವಿತ್ತು. ಆದರೆ ಕಾಮಗಾರಿಯ ಹಿನ್ನೆಲೆಯಲ್ಲಿ ನಿಲ್ದಾಣವನ್ನು ತೆಗೆದಿದ್ದು, ಆ ಬಳಿಕ ಕೆಲ ವರ್ಷದ ಹಿಂದೆ ಇಲ್ಲಿ ಒಂದು ಸಣ್ಣ ನಿಲ್ದಾಣವನ್ನು ಮಾಡಲಾಯಿತು. ಅದರಲ್ಲಿ ಬಸ್ಸಿಗೆ ನಿಂತರೂ ಗಾಳಿ- ಮಳೆಗೆ, ಬಿಸಿಲಿಗೆ ಪ್ರಯೋಜನವಿಲ್ಲದ ಸ್ಥಿತಿ ಇತ್ತು. ಕೆಲ ತಿಂಗಳ ಹಿಂದೆ ಗಾಳಿಗೆ ಅದು ಕೂಡ ಹಾರಿ ಹೋಗಿದೆ. ಈಗ ಇಲ್ಲಿ ಒಂದು ಬದಿಯಲ್ಲಿ ಬಸ್ ನಿಲ್ದಾಣವೇ ಇಲ್ಲ. ಬೀಚ್ ಬದಿ ಬೈಂದೂರು ಕಡೆಗೆ ಹೋಗುವಲ್ಲಿ ಒಂದು ತಕ್ಕಮಟ್ಟಿನ ಬಸ್ ನಿಲ್ದಾಣವಿದೆ. ಆದರೆ ಕುಂದಾಪುರ ಕಡೆಗೆ ಹೋಗುವಲ್ಲಿ ಯಾವುದೇ ಬಸ್ ನಿಲ್ದಾಣವಿಲ್ಲ.
ಗ್ರಾಮೀಣ ಊರು ಕೂಡುವ ಸ್ಥಳ
ಮಾರಸ್ವಾಮಿ ಬಳಿಯ ನಿಲ್ದಾಣವು ಕೇವಲ ಮರವಂತೆ ಮಾತ್ರವಲ್ಲ ಪಡುಕೋಣೆ, ನಾಡ, ಆಲೂರು, ಹಡವು, ಹೀಗೆ ಅನೇಕ ಗ್ರಾಮೀಣ ಪ್ರದೇಶದ ಊರುಗಳು ಹೆದ್ದಾರಿಗೆ ಕೂಡುವ ಸ್ಥಳ. ಇಲ್ಲಿನ ಜನ ಬೈಂದೂರು ಅಥವಾ ಕುಂದಾಪುರಕ್ಕೆ ಹೋಗಬೇಕಾದರೆ ಇಲ್ಲಿಯೇ ಬಂದು ಬಸ್ ಹತ್ತಬೇಕು. ಶಾಲಾ – ಕಾಲೇಜು ಮಕ್ಕಳು, ಕೆಲಸಕ್ಕೆ ಹೋಗುವವರು, ಅಗತ್ಯ ಕಾರ್ಯ ನಿಮಿತ್ತ ಹೀಗೆ ನಿತ್ಯ ನೂರಾರು ಮಂದಿ ಇಲ್ಲಿ ಬಸ್ಸಿಗೆ ಕಾಯುವವರಿದ್ದಾರೆ. ಕಡಲ ಬದಿ ಆಗಿರುವುದರಿಂದ ಬೆಳಗ್ಗೆಯಿಂದ ಸಂಜೆಯವರೆಗೂ ಇಲ್ಲಿ ಉರಿ ಬಿಸಿಲಿನ ತಾಪ ಹೆಚ್ಚಾಗಿರುತ್ತದೆ. ನಿಲ್ಲಲು ಸರಿಯಾದ ಬಸ್ ನಿಲ್ದಾಣವಿಲ್ಲದೆ ಬಳಲುವ ಪರಿಸ್ಥಿತಿ ಜನರದ್ದಾಗಿದೆ.
ಪ್ರೇಕ್ಷಣೀಯ ಸ್ಥಳ ಮರವಂತೆ, ಏನಿದ್ದರೇನಂತೆ!
ದೇಶದ ಅತ್ಯಂತ ಸುಂದರ ಬೀಚ್‌ಗಳಲ್ಲಿ ಮರವಂತೆಯೂ ಒಂದು. ಒಂದೆಡೆ ಸೌಪರ್ಣಿಕ ನದಿ, ಇನ್ನೊಂದೆಡೆ ಅರಬ್ಬಿ ಸಮುದ್ರ, ಇವೆರಡನ್ನು ಸೀಳಿಕೊಂಡಂತೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ. ಇಂತಹ ನದಿ-ಕಡಲು-ಹೆದ್ದಾರಿಯ ಈ ಅಪೂರ್ವವಾದ ದೃಶ್ಯ ಬೇರೆಲ್ಲೂ ಕಾಣಸಿಗದು. ಬೀಚ್ ಮಾತ್ರವಲ್ಲದೆ ಇಲ್ಲಿರುವ ಶ್ರೀ ವರಾಹ ಮಹಾರಾಜ ಸ್ವಾಮಿ ದೇವಸ್ಥಾನವು ಪುರಾತನ ಹಿನ್ನೆಲೆಯನ್ನು ಹೊಂದಿದೆ. ದೇಶದಲ್ಲಿರುವ ಸಪ್ತ ವರಾಹ ದೇವಸ್ಥಾನಗಳಲ್ಲಿ ಮರವಂತೆಯ ಮಾರಸ್ವಾಮಿಯು ಒಂದು. ಶ್ರೀ ಮಹಾವಿಷ್ಣುವು ಇಲ್ಲಿ ತನ್ನ 3 ರೂಪಗಳಲ್ಲಿ ನೆಲೆಸಿರುವುದು ವಿಶೇಷ. 3 ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಅಭಾರಿ ಸೇವೆ (ಮೊಸಳೆಗೆ ನೈವೇದ್ಯ) ಇಲ್ಲಿನ ವಿಶೇಷತೆಗಳಲ್ಲಿ ಪ್ರಮುಖವಾದುದು. ಪಕ್ಕದಲ್ಲಿಯೇ ಶ್ರೀ ಗಂಗಾಧರೇಶ್ವರ ದೇಗುಲವಿದೆ. ತುಸು ದೂರದಲ್ಲಿಯೇ ಪ್ರಾಕೃತಿಕ ಸೌಂದರ್ಯದ ಕುದ್ರುಗಳಿವೆ. ಇವುಗಳೆಲ್ಲವನ್ನು ನೋಡಬೇಕಾದರೆ ಕಾರು, ಇನ್ನಿತರ ವಾಹನಗಳಲ್ಲಿ ಬಂದವರಿಗೆ ಮಾತ್ರ ಅವಕಾಶ. ಆದರೆ ಬಸ್‌ಗಳಲ್ಲಿ ಬರುವಂತಹ ಪ್ರವಾಸಿಗರಿಗೆ ಇಲ್ಲಿ ಇಂತಹ ಪ್ರೇಕ್ಷಣಿಯ ಸ್ಥಳಗಳಿವೆ ಅನ್ನುವ ಪರಿಚಯವೇ ಇಲ್ಲ. ಅದಕ್ಕಾಗಿ ಮಾರಸ್ವಾಮಿ ಬಳಿ ಒಂದು ಸುಂದರ ಬಸ್ ನಿಲ್ದಾಣ ನಿರ್ಮಿಸಿ, ಅಲ್ಲಿ ಈ ಪ್ರವಾಸಿ ಸ್ಥಳಗಳ ಮಹತ್ವದ ಕುರಿತಂತೆ ಮಾಹಿತಿ ಫಲಕಗಳನ್ನು ಹಾಕಿದರೆ ಹೊಸ ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಇದ್ದ ನಿಲ್ದಾಣವೂ ಹಾರಿ ಹೋಗಿದೆ!
ಹಿಂದೆ ಇದ್ದ ನಿಲ್ದಾಣ ತೆಗೆದ ಬಳಿಕ ಇಲ್ಲೊಂದು ಸುಸಜ್ಜಿತ ನಿಲ್ದಾಣವೇ ಆಗಿಲ್ಲ. ಇಲ್ಲಿ ಒಂದು ಗಟ್ಟಿಯಾದ ಒಳ್ಳೆಯ ಬಸ್ ನಿಲ್ದಾಣ ಬೇಕಿದೆ. ಕೆಲ ತಿಂಗಳಿನಿಂದ ಇದ್ದ ಸಣ್ಣ ನಿಲ್ದಾಣವೂ ಹಾರಿ ಹೋಗಿದೆ. ಈಗ ಹೆಚ್ಚಿನವರಿಗೆ ಬಸ್ ನಿಲ್ದಾಣ ಬಂತು ಅನ್ನುವುದೇ ಗೊತ್ತಾಗುತ್ತಿಲ್ಲ. ನಿತ್ಯ ಬೇರೆ ಗ್ರಾಮೀಣ ಭಾಗಗಳಿಂದ ನೂರಾರು ಜನ, ಮಕ್ಕಳು ಬಸ್ಸಿಗಾಗಿ ಬಿಸಲಲ್ಲಿ ಕಾಯುತ್ತಿದ್ದಾರೆ. ಆದಷ್ಟು ಬೇಗ ಬಸ್ ನಿಲ್ದಾಣ ಆಗಲಿ.
– ಸುಬ್ರಹ್ಮಣ್ಯ ಆಚಾರ್ ಪಡುಕೋಣೆ, ಸ್ಥಳೀಯರು
ಪ್ರಸ್ತಾವನೆ ಸಲ್ಲಿಸಿದ್ದೇವೆ
ಮರವಂತೆಯ ಮಾರಸ್ವಾಮಿ ಬಳಿ ಸುಸಜ್ಜಿತ ಬಸ್ ನಿಲ್ದಾಣಕ್ಕಾಗಿ ಪಂಚಾಯತ್‌ನಿಂದ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಗುರುರಾಜ್ ಗಂಟಿಹೊಳೆಯವರು ಈ ಬಗ್ಗೆ ಸ್ಪಂದಿಸಿದ್ದು, ಬಸ್ ನಿಲ್ದಾಣ ಮಂಜೂರಾಗಿದೆ ಅನ್ನುವ ಮಾಹಿತಿಯಿದೆ. ಆದಷ್ಟು ಬೇಗ ಇಲ್ಲಿ ಒಳ್ಳೆಯ ಬಸ್ ನಿಲ್ದಾಣ ಆಗಬೇಕಾಗಿದೆ.
– ಲೋಕೇಶ್ ಖಾರ್ವಿ, ಮರವಂತೆ ಗ್ರಾ.ಪಂ. ಅಧ್ಯಕ್ಷ
ರಾ.ಹೆದ್ದಾರಿಯಲ್ಲೇ ಸ್ಟಾಪ್ ಕೆಲವರು ನಿಲ್ಲಿಸುವುದೇ ಇಲ್ಲ!
ಇಲ್ಲಿ ಬಸ್ ನಿಲ್ದಾಣ, ಬಸ್ ಬೇ ಸಹ ಇಲ್ಲದಿರುವುದರಿಂದ ಬಸ್‌ಗಳು ಹೆದ್ದಾರಿಯಲ್ಲಿಯೇ ನಿಲ್ಲಿಸಬೇಕಾಗಿದೆ. ಅದಕ್ಕಾಗಿಯೇ ಕೆಲ ಬಸ್‌ಗಳು ಇಲ್ಲಿ ನಿಲ್ಲಿಸದೇ, ತೆರಳುತ್ತಿದ್ದಾರೆ. ಇನ್ನು ಬಸ್‌ಗಾಗಿ ಕಾಯುವವರಿಗೆ ಹೆದ್ದಾರಿಯುದ್ದಕ್ಕೂ ಘನ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಬಸ್‌ಗಳು ಬರುವುದು ಕಾಣಿಸುತ್ತಿಲ್ಲ. ಅದಕ್ಕಾಗಿ ಇಲ್ಲಿನ ನಿಲ್ದಾಣದ ಸುಮಾರು 200 ಮೀ. ದೂರದವರೆಗೆ ವಾಹನಗಳ ನಿಲುಗಡೆ ನಿರ್ಬಂಧಿಸಬೇಕು ಎನ್ನುವುದಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.