ಮತ್ತೆ ಬೈಕ್ ಏರಿ ರಾಜ್ಯ ಸುತ್ತಲು ಹೊರಟ ಸಾಕ್ಷಿ!
ಕ್ಲೀನ್ ಕರ್ನಾಟಕ, ಗ್ರೀನ್ ಕರ್ನಾಟಕ ಧ್ಯೇಯ; ಪ್ರಕೃತಿಯ ಉಳಿವಿಗಾಗಿ ಒಂಟಿ ಯಾತ್ರೆ
Team Udayavani, Oct 13, 2022, 1:00 PM IST
ಕುಂದಾಪುರ: ಭಂಡಾರ್‌ಕಾರ್ಸ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿನಿ ಸಾಕ್ಷಿ ಹೆಗಡೆ ಕೆಲವೇ ತಿಂಗಳ ಹಿಂದೆ ಕುಂಭಾಶಿಯಿಂದ ಕಾಶ್ಮೀರದವರೆಗೆ ಬೈಕ್ ರೈಡ್ ಮಾಡಿ ಸುದ್ದಿಯಾದವರು ಈಗ ಮತ್ತೆ ಬೈಕೇರಿ ರಾಜ್ಯ ಸುತ್ತಲು ಹೊರಟಿದ್ದಾರೆ. ಸಾಕ್ಷಿ ಹೆಗಡೆ ಮೂಲತಃ ಶಿರಸಿಯ ಇಡಗುಂಜಿಯವರು. ಈಗ ಕುಂದಾಪುರದ ಕುಂಭಾಶಿಯಲ್ಲಿ ವಾಸ.
ಯಾವಾಗ, ಎಲ್ಲಿಗೆಲ್ಲ
ಅ.16ರಿಂದ ಹೊರಟು ನ. 17ರ ವರೆಗೆ ರಾಜ್ಯದ 31 ಜಿಲ್ಲೆಗಳನ್ನು ಸುತ್ತಲಿದ್ದಾರೆ. ಅ. 16 ರಂದು ಉಡುಪಿ ಜಿಲ್ಲೆಯಿಂದ ಉತ್ತರಕನ್ನಡ, ಮರುದಿನ ಹಾವೇರಿ, ಅನಂತರ ದಿನಗಳಲ್ಲಿ ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು, ದ.ಕ.ಕ್ಕೆ ನ.16ರಂದು ತಲುಪಿ ನ. 17ರಂದು ಉಡುಪಿಗೆ. ಸುಮಾರು 4 ಸಾವಿರ ಕಿ.ಮೀ.ಗಳ ಪಯಣ.
ಉದ್ದೇಶ
ಕುಂಭಾಶಿಯಿಂದ ಕಾಶ್ಮೀರಕ್ಕೆ 12 ದಿನಗಳಲ್ಲಿ 6 ಸಾವಿರ ಕಿ.ಮೀ. ಒಂಟಿ ಪ್ರಯಾಣದ ಸಾಹಸ ಮಾಡಿದ್ದು ಮೇ 25ರಿಂದ, ತಲುಪಿದ್ದು ಜೂ. 6. ಪ್ರತಿದಿನ 500-600 ಕಿ.ಮೀ. ಸಾಗಿ ಒಟ್ಟು 6 ಸಾವಿರ ಕಿಮೀ. ಪ್ರಯಾಣಿಸಿದ್ದರು. ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ಸುದೀರ್ಘ ಪ್ರಯಾಣ. ಮಹಿಳಾ ಸಶಕ್ತೀಕರಣ ಪ್ರಮುಖ ಉದ್ದೇಶ. ಉದ್ಯೋಗ, ಉನ್ನತ ವ್ಯಾಸಂಗ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಗೆ ಅಡ್ಡಿ ಆತಂಕ ಇರುತ್ತದೆ. ಆಗ ನಾನು ಹೋಗಿ ಬಂದ ಉದಾಹರಣೆ ಮೂಲಕ ಒಂಟಿ ಯುವತಿಯ ಪ್ರಯಾಣದ ಕಥನ ಹೇಳುವ ಮೂಲಕ ಧೈರ್ಯ ತುಂಬಿಸಲಿ ಎನ್ನುವುದು ಉದ್ದೇಶ. ಈ ಬಾರಿ ಕ್ಲೀನ್ ಕರ್ನಾಟಕ, ಗ್ರೀನ್ ಕರ್ನಾಟಕ ಎಂಬ ಧ್ಯೇಯದೊಂದಿಗೆ ಹೊರಟಿದ್ದಾರೆ. ಪ್ರಕೃತಿಯ ಉಳಿವಿಗಾಗಿ ಒಂಟಿ ಯಾತ್ರೆ.
ಸ್ವಂತ ಬೈಕ್
ಕಲಿಕೆಯ ಜತೆ ಸಂಪಾದನೆ ಎಂಬಂತೆ ಮನೆ ಸಮೀಪದ ವೈದ್ಯಕೀಯ ಕ್ಲಿನಿಕ್‌ನಲ್ಲಿ ಅರೆಕಾಲಿಕ ಕೆಲಸ. ಕಾಲೇಜು ಖರ್ಚಿಗೆ ಮನೆಯಿಂದ ಹಣ ದೊರೆಯುತ್ತಿದ್ದ ಕಾರಣ ಕ್ಲಿನಿಕ್‌ನಲ್ಲಿ ದೊರೆತ ಸಂಬಳದಲ್ಲಿ ಬೈಕ್ ಕೊಳ್ಳುವ ಕನಸು ಕಂಡರು. ಸ್ವಲ್ಪ ಹಣ ಒಟ್ಟು ಮಾಡಿ ಸಾಲ ಮಾಡಿ ಬೈಕ್ ತಂದರು. 125 ಸಿಸಿ ಪಲ್ಸರ್ ಬೈಕ್‌ನಲ್ಲಿ ಕುಂದಾಪುರ ಪೇಟೆಗೆ ಹೊರಟರು. ಬೈಕ್‌ನಲ್ಲಿ ಕೂತರೆ ಸರಿಯಾಗಿ ಏಕಕಾಲದಲ್ಲಿ ಎರಡೂ ಕಾಲು ನೆಲಕ್ಕೆ ತಾಗುತ್ತಿರಲಿಲ್ಲ. ಹಂಪ್‌ನಲ್ಲಿ ಎಂಜಿನ್ ಬಂದ್ ಬೀಳುತ್ತಿತ್ತು. ಇತರ ವಾಹನ ಸವಾರರು ತಮಾಷೆ ಮಾಡಿದರು. ಇಷ್ಟೇ ಅವಮಾನ ಸಾಕಾಯಿತು. ಸಾಕ್ಷಿಗೆ ಹಠ ಹುಟ್ಟಿತು. ಬೈಕ್‌ನಲ್ಲೇ ಸಾವಿರಾರು ಕಿ.ಮೀ. ಹೋಗಬೇಕೆಂದು ವಾಂಛೆಯಾಯಿತು. ಹಾಗೆ ಹೋಗಲು ನೆನಪಾಗಿದ್ದು ಕಾಶ್ಮೀರ. ಕಾರಣ ಕಾಶ್ಮೀರ ಫೈಲ್ಸ್ ಸಿನೆಮಾ. ಬೈಕ್ ತಗೊಂಡು 1 ತಿಂಗಳಾಗುತ್ತಲೇ 12 ದಿನಗಳಲ್ಲಿ 6 ಸಾವಿರ ಕಿಮೀ. ದೂರ ಒಂಟಿಯಾಗಿ ಬೈಕ್ ಓಡಿಸಿದ ಸಾಕ್ಷಿ ಈಗ ಮತ್ತೆ ಬೈಕೇರಿ ಕರ್ನಾಟಕ ತಿರುಗಲು ಬೈಕ್‌ಗೆ ಇಂಧನ ತುಂಬಿಸುತ್ತಿದ್ದಾರೆ. ದಾರಿ ಖರ್ಚಿಗೆ ಧನ ತುಂಬಿಸುವ ಕೆಲಸ ಆಗಬೇಕಿದೆ.
ಧೈರ್ಯಂ ಸರ್ವತ್ರ ಸಾಧನಂ
ಹೆಣ್ಣು ಮಕ್ಕಳಿಗೆ ಧೈರ್ಯ ಬೇಕು. ಪ್ರೋತ್ಸಾಹಿಸುವ ಮನೆ ಮಂದಿ ಬೇಕು. ಹಾಗಿದ್ದರೆ ಬೈಕ್ ಪ್ರಯಾಣ ಕಷ್ಟವಲ್ಲ. ನನ್ನ ಹಿಂದಿನ ಬೈಕ್ ಯಾತ್ರೆಯ ಉದ್ದೇಶವೇ ಅದಾಗಿತ್ತು. ಮನೆಯಲ್ಲಿ ನಂಬಿಕೆಯೇ ಬಂದಿರಲಿಲ್ಲ. ಹೊಸ ಬೈಕ್ ತಗೊಂಡು 1 ತಿಂಗಳಲ್ಲಿ ಕಾಶ್ಮೀರ ಪ್ರಯಾಣದ ನಿರ್ಧಾರ. ದಿನವೊಂದಕ್ಕೆ ನೂರಿನ್ನೂರು ಕಿ.ಮೀ. ಬೈಕ್ ಓಡಿಸಬಲ್ಲೆ ಎಂಬುದೇ ಮನೆಯವರಿಗೆ ತಿಳಿದಿರಲಿಲ್ಲ. ಹಾಗಿರುವಾಗ ಕಾಶ್ಮೀರ ಎಂದು ಹೇಳುತ್ತಿದ್ದಂತೆಯೇ ಮನೆಯಲ್ಲೇ ಹಿಮಪಾತ! ಅಪ್ಪ ಅಮ್ಮನಿಗೆ ಆ ಗಂಭೀರತೆ ತಿಳಿದಿರಲಿಲ್ಲ. ಆದರೆ ಅಕ್ಕ, ಅಪ್ಪ, ಅಮ್ಮನನ್ನು ಒಪ್ಪಿಸಿದಳು. ನನ್ನ ಉದ್ದೇಶ ತಿಳಿಸಿದಳು. ಮೊದಮೊದಲು 35 ಕಿ.ಮೀ. ಉಡುಪಿಗೆ ಹೋಗಿ ಬರುವುದೇ ಅಯ್ಯೋ ಅಷ್ಟು ದೂರ ಎಂದಾಗುತ್ತಿತ್ತು. ಹಾಗಾಗಿ ದೂರ ಪ್ರಯಾಣದ ಕನಸೂ ಇರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಕಾಡತೊಡಗಿದ್ದು ಕಾಶ್ಮೀರ. ಒಂದಷ್ಟು ಮಾಹಿತಿ ಕಲೆ ಹಾಕಿ ಹೊರಟೇಬಿಟ್ಟಿದ್ದೆ. ಮೇ 25ಕ್ಕೆ ಪ್ರಯಾಣ ಆರಂಭ. 15 ದಿನಗಳ ಅವಧಿ ನಿಗದಿಪಡಿಸಿದ್ದು 12 ದಿನಗಳಲ್ಲಿ ಹೋಗಿ ಬಂದೆ. 6 ದಿನ ಹೋಗೋಕೆ 6 ದಿನ ಬರೋಕೆ. ಬಂದ ಕೂಡಲೇ ಕರ್ನಾಟಕ ತಿರುಗುವ ಯೋಚನೆ, ನಿರ್ಧಾರ ಮಾಡಿಬಿಟ್ಟಿದ್ದೆ. ಈಗ ಕಾಲ ಕೂಡಿ ಬಂದಿದೆ.
ಉದ್ದೇಶ ಇಟ್ಟು ಸುತ್ತಾಟ: ಕ್ಲೀನ್ ಕರ್ನಾಟಕ, ಗ್ರೀನ್ ಕರ್ನಾಟಕ ಧ್ಯೇಯ ಇಟ್ಟುಕೊಂಡು ರಾಜ್ಯದ 31 ಜಿಲ್ಲೆಗಳಿಗೂ ಒಂಟಿಯಾಗಿ ಬೈಕ್‌ನಲ್ಲಿ ತಿರುಗಾಟ ಮಾಡಲಿದ್ದೇನೆ. ಬರಿಯ ಯಾತ್ರೆಯ ಬದಲು ಸಂದೇಶ ಕೊಡುವುದು ಉದ್ದೇಶ. -ಸಾಕ್ಷಿ ಹೆಗಡೆ ಕುಂಭಾಶಿ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.