ಹೋರಾಟಕ್ಕೆ ಅಣಿಯಾದ ಕುಂದಗನ್ನಡಿಗರು
Team Udayavani, Jan 21, 2021, 2:40 AM IST
ಕುಂದಾಪುರ: ಕನ್ನಡ ಭಾಷೆಯಲ್ಲಿಯೇ ಅತ್ಯಂತ ವಿಶಿಷ್ಟವಾದ ಗ್ರಾಮೀಣ ಸೊಗಡನ್ನು ಹೊಂದಿರುವ ಭಾಷೆ ಕುಂದಗನ್ನಡವಾಗಿದ್ದು, ಈ ಕುಂದಗನ್ನಡ ಭಾಷೆಯು ನಾಲ್ಕು (ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಬೈಂದೂರು) ತಾಲೂಕಿನ ಕೆಲವು ಭಾಗಗಳಿದ್ದು, ಪಶ್ಚಿಮಕ್ಕೆ ಕಲ್ಯಾಣಾಪುರದವರೆಗೂ ದಕ್ಷಿಣಕ್ಕೆ ಸೀತಾನದಿ ಹೊಳೆ ಗಡಿಭಾಗ ಹೆಬ್ರಿ-ಚಾರದವರೆಗೂ ಉತ್ತರಕ್ಕೆ ಶಿರೂರು ಗಡಿಯ ಭಟ್ಕಳದವರೆಗೂ ಹಬ್ಬಿಕೊಂಡಿದೆ. ಈ ಕುಂದಗನ್ನಡ ಭಾಷೆಯ ಜನರ ಆಚಾರ-ವಿಚಾರ ಪ್ರತ್ಯೇಕವಾಗಿದ್ದು, ಇಲ್ಲಿಯ ಜನರ ಹಲವು ವರುಷಗಳ ಬೇಡಿಕೆ ಕುಂದ ಗನ್ನಡಕ್ಕೆ ಪ್ರತ್ಯಕ ಜಿಲ್ಲೆಯಾಗಬೇಕೆಂಬ ಕನಸು. ಇಂತಹ ಕುಂದಗನ್ನಡ ಪ್ರಾಂತ್ಯವನ್ನು ಅವಗಣನೆ ಮಾಡಿದ ಕುರಿತು ವಿವಿಧ ಮುಖಂಡರಿಗೆ ಪತ್ರ ಬರೆದು ಆಕ್ರೋಶ ತೋಡಿಕೊಳ್ಳಲಾಗಿದೆ.
ಕೈ ತಪ್ಪಿದ ಕುಂದಾಪುರ ಜಿಲ್ಲೆ :
ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲರು 1997ರಲ್ಲಿ ನೂತನ 7 ಜಿಲ್ಲೆಗಳನ್ನು ಘೋಷಿಸುವ ಮುನ್ನ ಎಲ್ಲಿ ಕಂದಾಯ ಉಪ (ಸಹಾಯಕ ಕಮಿಷನರ್ ಕಚೇರಿ) ವಿಭಾಗ ಇದೆಯೋ ಅಲ್ಲೇ ನೂತನ ಜಿಲ್ಲಾ ಕೇಂದ್ರ ಮಾಡುವುದಾಗಿ ಘೋಷಿಸಿದರು. ಆದರೆ ಎಲ್ಲ ಮೂಲ ಸೌಕರ್ಯಗಳೂ, ಪ್ರವಾಸಿ ತಾಣಗಳೂ, ಜಿಲ್ಲಾ ಮಟ್ಟದ (ಎ.ಸಿ. ಕಚೇರಿ ಸಹಿತ) ಎಲ್ಲ ಸರಕಾರಿ ಕಚೇರಿಗಳು ಕುಂದಾಪುರದಲ್ಲಿ ಇದ್ದು ಕುಂದಾಪುರ ಜಿಲ್ಲೆ ಕೈ ತಪ್ಪಿ ಗದಗ, ಹಾವೇರಿ, ಬಾಗಲಕೋಟೆ, ಕೊಪ್ಪಳ, ದಾವಣಗೆರೆ ಜತೆಗೆ ಉಡುಪಿ ಜಿಲ್ಲಾ ಕೇಂದ್ರವಾಯಿತು. ಇಂದೂ ಸಹ ಕುಂದಾಪುರದ ಸಹಾಯಕ ಕಮಿಷನರ್ ಕಚೇರಿ ಉಡುಪಿ ಜಿಲ್ಲಾ ಏಳು ತಾಲೂಕುಗಳ ವ್ಯಾಪ್ತಿಯನ್ನು ಹೊಂದಿದೆ.
ದೂರ :
ಜಿಲ್ಲಾ ಕೇಂದ್ರವಾದ ಉಡುಪಿ-ಮಣಿಪಾಲಕ್ಕೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹೊಸಂಗಡಿ, ಯಾಡಮೊಗೆ, ಜಡ್ಕಲ್, ಕೊಲ್ಲೂರು, ಶಿರೂರು ಭಾಗದ ಜನರು ತಮ್ಮ ಕೆಲಸ ಕಾರ್ಯಗಳಿಗೆ 100 ಕಿ.ಮೀ. ಹೆಚ್ಚು ದೂರ ಕ್ರಮಿಸಿ ಸರಕಾರಿ ಕೆಲಸವನ್ನು ಮಾಡಿ ಕೊಂಡು ಬರಬೇಕು.ಒಂದು ದಿನದಲ್ಲಿ ಆಗದೆ ಇದ್ದರೆ ಇನ್ನೊಂದು ದಿನ ಮೀಸಲಿಡ ಬೇಕು.
ರಾಜಕೀಯ ಪಕ್ಷಗಳ ಅವಗಣನೆ :
ಇದುವರೆಗೂ ಯಾವುದೇ ರಾಜಕೀಯ ಪಕ್ಷದವರು ಅವಿಭಜಿತ (ಕುಂದಾಪುರ ಮತ್ತು ಬೈಂದೂರು)ಕುಂದಾಪುರ ತಾಲೂಕಿನಿಂದ ಗೆದ್ದವರನ್ನು ನಿರ್ಲಕ್ಷಿಸಿ ಸಚಿವ ಸ್ಥಾನ ನೀಡದೆ ಕುಂದಾಪುರ ತಾಲೂಕನ್ನು ಹಿಂದುಳಿಯಲು ಕಾರಣವಾಗಿದ್ದು, ಇಲ್ಲಿನ ಜನರ ಭಾವನೆಗೆ ದಕ್ಕೆಯಾಗಿದೆ. ಇದಕ್ಕೆ ಸಡ್ಡು ಹೊಡೆಯಲು ಕುಂದಾಪುರ ಜಿಲ್ಲಾ ಬೇಡಿಕೆ ಹುಟ್ಟಿಕೊಂಡಿದೆ.
ಯಾರಿಗೆಲ್ಲ ಮನವಿ ಪತ್ರ :
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕಂದಾಯ ಸಚಿವ ಆರ್. ಅಶೋಕ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ, ಉಡುಪಿ ಜಿಲ್ಲಾ ಐದು ಮಂದಿ ಶಾಸಕರು, ಇಬ್ಬರು ಸಂಸದರು, ಭಟ್ಕಳ ಶಾಸಕ ಸುನಿಲ್ ನಾಯ್ಕ, ಉಡುಪಿ ಹಾಗೂ ಕಾರವಾರ ಜಿಲ್ಲಾಧಿಕಾರಿಗಳು, ಮೇಲ್ಮನೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ಮನವಿ ಪತ್ರ ಬರೆಯಲಾಗಿದೆ.
ಹೋರಾಟಕ್ಕೆ ಅಣಿ :
ಕುಂದಾಪುರ ಜಿಲ್ಲಾ ರಚನಾ ಹೋರಾಟ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಸಂಚಾಲಕ ದಿನಕರ ಶೆಟ್ಟಿ, ವಿಶೇಷ ಸಲಹೆಗಾರ ಚಿಟ್ಟೆ ರಾಜಗೋಪಾಲ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಗಣಪತಿ ಶ್ರೀಯಾನ್, ಉಪಾಧ್ಯಕ್ಷರಾದ ದಸ್ತಗಿರಿ ಸಾಹೇಬ್ ಕಂಡಳೂರು, ನಾಡ ಸತೀಶ್ ನಾಯಕ್, ಡಾ|ಅನಿಲ್ ಕುಮಾರ್ ಶೆಟ್ಟಿ, ಕಾಡೂರು ನವೀನ್ ಶೆಟ್ಟಿ ಮೊದಲಾದವರು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
ಕುಂದಾಪುರ ಜಿಲ್ಲೆ ಆಗುವ ಅಗತ್ಯ ಏನು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸ್ವಾತಂತ್ರÂ ಪೂರ್ವದಲ್ಲೇ ಜನರಿಗೆ ಬೇಕಾಗುವ ಎಲ್ಲ ಸರಕಾರಿ ಕಚೇರಿಗಳು ಜಿಲ್ಲಾ ಕೇಂದ್ರದಲ್ಲಿ ಇರಬೇಕಾದ ಸೌಲಭ್ಯಗಳು ಅಂದೇ ಕುಂದಾಪುರದಲ್ಲಿ ಸ್ಥಾಪನೆ ಆಗಿತ್ತು. ಆದರೆ ಇತ್ತೀಚೆಗೆ ಕೆಲವು ಕಚೇರಿಗಳು ಉಡುಪಿಗೆ ಸ್ಥಳಾಂತರವಾಗಿವೆ. ಇಲ್ಲಿನವರಿಗೆ ಸಚಿವ ಸ್ಥಾನ ನೀಡದೇ ಆಳುವ ಎಲ್ಲಾ ಸರಕಾರಗಳು ನಿರ್ಲಕ್ಷಿಸುತ್ತಿವೆ. -ಮುಂಬಾರು ದಿನಕರ ಶೆಟ್ಟಿ ಸಂಚಾಲಕ, ಕುಂದಾಪುರ ಜಿಲ್ಲಾ ಹೋರಾಟ ಸಮಿತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.