![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 29, 2020, 5:20 AM IST
ಕೋಟ: ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡದ ನೂರಾರು ಕಿಂಡಿ ಅಣೆಕಟ್ಟುಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿದ್ದು, ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಇದರಿಂದಾಗಿ ರೈತರು ತಮ್ಮ ಬೆಳೆಗೆ ನೀರುಣಿಸಲು ಪರದಾಡುವಂತಾಗಿದೆ.
ಸಣ್ಣ ನೀರಾವರಿ ಇಲಾಖೆಯ ತನ್ನ ವ್ಯಾಪ್ತಿಯಲ್ಲಿರುವ ಕಿಂಡಿ ಅಣೆಕಟ್ಟುಗಳನ್ನು ಪ್ರತೀ ವರ್ಷವೂ ನಿರ್ವಹಣೆ ಮಾಡುತ್ತದೆ. ಅದಕ್ಕಾಗಿ ಅನುದಾನ ಕಾದಿರಿಸಿಕೊಂಡಿದೆ. ಆದರೆ ಇಲಾಖೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾ.ಪಂ. ಮಟ್ಟದಲ್ಲಿ ಕಿಂಡಿ ಅಣೆಕಟ್ಟುಗಳಿವೆ. ಅವುಗಳನ್ನು ಸ್ಥಳೀಯಾಡಳಿತ (ಪಂಚಾಯತ್)ಗಳು ಹಲಗೆ ಅಳವಡಿಕೆ ಸೇರಿದಂತೆ ಸೂಕ್ತವಾಗಿ ನಿರ್ವಹಿಸಿದರೆ ರೈತರ ಬೆಳೆಗಳಿಗೆ ಅನುಕೂಲವಾಗಲಿದೆ. ಆದರೆ ಆ ಕೆಲಸವಾಗುತ್ತಿಲ್ಲ ಎಂಬುದು ರೈತರ ದೂರು.
ಉದ್ಯೋಗ ಖಾತ್ರಿ ಯೋಜನೆ
ಪ್ರಸ್ತುತ ಕಾರ್ಮಿಕರನ್ನು ನಿಯೋಜಿಸಿ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಲು ಕನಿಷ್ಠ 5ರಿಂದ 8 ಸಾವಿರ ರೂ. ವೆಚ್ಚವಾಗುತ್ತದೆ. ಆದರೆ ಇದಕ್ಕಾಗಿ ಪಂಚಾಯತ್‌ಗಳು ಅನುದಾನವನ್ನು ಮೀಸಲು ಇಡುವುದಿಲ್ಲ. ಕಟ್ಟು ಅಳವಡಿಸಲು ಹಲಗೆ ಇತ್ಯಾದಿ ಪೂರಕ ಸಾಮಗ್ರಿಗಳ ಖರೀದಿಗೂ ಅನುದಾನವಿರುವುದಿಲ್ಲ. ಆದ ಕಾರಣ ನಿರ್ವಹಣೆ ಹೊಣೆ ವಹಿಸಿಕೊಳ್ಳುವುದಿಲ್ಲ ಎಂಬುದು ಹೆಚ್ಚಿನ ಬೆಳೆಗಾರರ ಅಭಿಪ್ರಾಯ.
ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣವಾದ ಕಿಂಡಿ ಅಣೆಕಟ್ಟುಗಳಿಗೆ ಮಾತ್ರ ಅದೇ ಯೋಜನೆಯಡಿ ನಿರ್ವಹಣೆಗೆ ಅವಕಾಶವಿದೆ. ಆದರೆ ಬೇರೆ ಯೋಜನೆಯಡಿ ನಿರ್ಮಾಣವಾದವುಗಳನ್ನು ಯಾರೂ ಕೇಳದಂತಾಗಿದೆ. ಕೆಲವು ಕಡೆಗಳಲ್ಲಿ ನೀರಿಗಾಗಿ ಕೃಷಿಕರು ತಾವೇ ವಂತಿಗೆ ಹಾಕಿ ಅಥವಾ ಸಂಘ-ಸಂಸ್ಥೆಗಳ ಸಹಾಯದಿಂದ ನಿರ್ವಹಣೆ ಮಾಡುತ್ತಾರೆ. ಕೆಲವೆಡೆ ಪಂಚಾಯತ್‌ಗಳು ಅಲ್ಪ ಸಹಕಾರ ನೀಡುತ್ತವೆ. ಅದನ್ನು ಹೊರತು ಪಡಿಸಿದಂತೆ ಯಾವ ಸಹಕಾರವೂ ಲಭ್ಯವಾ ಗುತ್ತಿಲ್ಲ ಎಂಬುದು ರೈತರ ಬೇಸರದ ನುಡಿ.
ಅಂತರ್ಜಲ ವೃದ್ಧಿ, ಕೃಷಿಗೆ ಪೂರಕ
ಚಿಕ್ಕ ತೋಡು, ಕಿರು ಹೊಳೆಗಳಿಗೆ ಕಟ್ಟ ಹಾಕಿ ನೀರು ಸಂಗ್ರಹಿಸಿದರೆ ಅಂತರ್ಜಲ ವೃದ್ಧಿಗೆ ಅನುಕೂಲವಾಗುತ್ತದೆ. ಹಿಂಗಾರಿನ ಕೃಷಿ, ತೋಟಗಾರಿಕೆಗೆ ಸಹಾಯವಾಗುತ್ತದೆ. ಬಾವಿ, ಕೆರೆಗಳಲ್ಲಿ ನೀರಿನ ಮಟ್ಟ ಏರಿಕೆ ಯಾಗಿ ಭೂಮಿಯ ತೇವಾಂಶ ಹೆಚ್ಚುತ್ತದೆ. ಹಾಗಾಗಿ ಎಲ್ಲ ಅಣೆಕಟ್ಟುಗಳ ನಿರ್ವಹಣೆಗೆ ಪಂಚಾಯತ್‌ಗಳು ಆಸಕ್ತಿಯನ್ನು ತೋರಬೇಕು. ಈ ಸಂಬಂಧ ಪಂಚಾಯತ್‌ಗಳಿಗೆ ಜಿಲ್ಲಾಡಳಿತ ಆದೇಶ ನೀಡಬೇಕು ಎನ್ನುವ ಅಭಿಪ್ರಾಯ ರೈತರದು.
ಇದು ಅತ್ಯಂತ ಸೂಕ್ತ ವಾದ ಸಲಹೆಯಾಗಿದ್ದು, ಎಲ್ಲ ಗ್ರಾ.ಪಂ.ಗಳು ತಮ್ಮ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೇತರ ಕಿಂಡಿ ಅಣೆಕಟ್ಟುಗಳನ್ನು ನಿರ್ವಹಣೆ ಮಾಡುವಂತೆ ಜಿ.ಪಂ. ಸಿಇಒ ಮೂಲಕ ನಿರ್ದೇಶನ ನೀಡಲಾಗುವುದು.
– ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ
ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಅತ್ಯಂತ ಅಗತ್ಯ. ದ.ಕ. ಜಿಲ್ಲೆಯ ಪ್ರತೀ ಗ್ರಾ.ಪಂ. ತನ್ನ ವ್ಯಾಪ್ತಿಯ ಕಿಂಡಿ ಅಣೆಕಟ್ಟುಗಳ ನಿರ್ವಹಣೆ ನಡೆಸಬೇಕು ಎನ್ನುವುದಾಗಿ ಜಿ.ಪಂ. ಸಿಇಒ ಮೂಲಕ ಪ್ರತೀ ಗ್ರಾಮ ಪಂಚಾಯತ್‌ಗೂ ನಿರ್ದೇಶನ ನೀಡುತ್ತೇನೆ.
– ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ
– ರಾಜೇಶ್ ಗಾಣಿಗ ಅಚ್ಲಾಡಿ
You seem to have an Ad Blocker on.
To continue reading, please turn it off or whitelist Udayavani.