![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 3, 2022, 10:42 AM IST
ಕುಂದಾಪುರ: ಜಿಲ್ಲಾ ಉಪವಿಭಾಗೀಯ ಮಟ್ಟದ ನಗರದಲ್ಲಿ ಅಭಿವೃದ್ಧಿ ಹೊಂದಿದ ನಗರವಾಗಿ ಕಾಣಬೇಕು. ಅದಕ್ಕಾಗಿ ಪಾರ್ಕಿಂಗ್‌ಗೆ ಸೂಕ್ತವಾದ ವ್ಯವಸ್ಥೆ ಮಾಡಬೇಕು. ಪಾರ್ಕಿಂಗ್‌ಗೆ ಜಾಗವನ್ನೇ ನೀಡದೇ ಎಲ್ಲೆಲ್ಲಿಂದಲೋ ಬಂದು ಅಂಗಡಿ ಎದುರು ವಾಹನ ನಿಲ್ಲಿಸಿದವರ ಮೇಲೆ ಕೇಸು ಜಡಿದರೆ ವಾಹನ ಮಾಲಕರು ಏನು ಮಾಡಬೇಕು? ಪೊಲೀಸರಾದರೂ ಏನು ಮಾಡಬೇಕು?
ಹೀಗೊಂದು ಘಟನೆ
ಶಾಸ್ತ್ರಿ ಸರ್ಕಲ್ ಬಳಿ ಮುಖ್ಯ ರಸ್ತೆಯಲ್ಲಿ ಹೋಟ್‌ಲ್ ಒಂದರ ಎದುರು ಬೇರೆ ಊರಿನಿಂದ ಆಗಮಿಸಿದ ವಿದ್ಯಾವಂತ ಯುವತಿಯೊಬ್ಬರು ಅಸಮರ್ಪಕ ರೀತಿಯಲ್ಲಿ ವಾಹನ ನಿಲ್ಲಿಸಿದ್ದರು. ಪೊಲೀಸರು ದಂಡ ವಿಧಿಸಲು ಮುಂದಾದಾಗ, ಮೂರು ಬಾರಿ ಎಲ್ಲ ರಸ್ತೆಗಳಲ್ಲೂ ಸುತ್ತು ಹಾಕಿದೆ. ವಾಹನ ನಿಲ್ಲಿಸಲು ಸ್ಥಳಾವಕಾಶವೇ ಇರಲಿಲ್ಲ. ಐದು ನಿಮಿಷದ ಮಟ್ಟಿಗೆ ನಿಲ್ಲಿಸಿದ್ದೆ ಎಂದು ವಿನಂತಿಸಿದರು. ಸುಗಮ ಸಂಚಾರಕ್ಕೆ ತೊಂದರೆ ಎಂದು ಪೊಲೀಸರು ಕೇಸು ಹಾಕಬೇಕಿತ್ತು, ಎಲ್ಲಾದರೊಂದು ಕಡೆ ವಾಹನ ನಿಲ್ಲಿಸಲೂಬೇಕಿತ್ತು. ಮಾತಿನ ಚಕಮಕಿ ನಡೆಯಿತು. ಠಾಣೆಗೆ ಕರೆದೊಯ್ಯಲಾಯಿತು. ನೋ ಪಾರ್ಕಿಂಗ್ ಮಾತ್ರವಲ್ಲ ಕರ್ತವ್ಯಕ್ಕೆ ಅಡ್ಡಿ ಕೇಸು ಕೂಡ ಹಾಕಬೇಕೆಂದು ಪೊಲೀಸರು ಪಟ್ಟು ಹಿಡಿದರು. ಕೊನೆಗೂ ಪ್ರಕರಣ ಮುಗಿಯಿತು. ಪೊಲೀಸರ ತಪ್ಪಾ, ಸಾರ್ವಜನಿಕರ ತಪ್ಪಾ, ಸ್ಥಳ ಬಿಡದ ಅಂಗಡಿ ಮಾಲಕರ ತಪ್ಪಾ, ಪ್ರತ್ಯೇಕ ಪಾರ್ಕಿಂಗ್ ಜಾಗ ಮಾಡದ ಪುರಸಭೆಯ ತಪ್ಪಾ ಎನ್ನುವುದು ಪ್ರಶ್ನೆ.
ನೂರಾರು ವಾಹನ
ಬೇರೆ ಬೇರೆ ಕಡೆಗಳಿಂದ ನಗರಕ್ಕೆ ಆಗಮಿಸಿ ಉಡುಪಿ, ಮಂಗಳೂರು ಮೊದಲಾದೆಡೆಗೆ ವಿವಿಧ ಖಾಸಗಿ, ಸರಕಾರಿ ಉದ್ಯೋಗಕ್ಕೆ ತೆರಳುವವರಿದ್ದಾರೆ. ಪ್ರತಿನಿತ್ಯ 300ಕ್ಕೂ ಅಧಿಕ ದ್ವಿಚಕ್ರ ವಾಹನದವರು ಶಾಸ್ತ್ರಿ ಸರ್ಕಲ್, ಫ್ಲೈಓವರ್, ಬಸ್ರೂರು, ಮೂರುಕೈ, ಸಂಗಮ್, ಕೋರ್ಟ್ ಬಳಿ, ಬಸ್ ನಿಲ್ದಾಣ ಬಳಿ, ಕೆಎಸ್‌ಆರ್‌ಟಿಸಿ ಬಳಿ, ತಾ.ಪಂ. ಬಳಿ ನಿಲ್ಲಿಸಿ ಬಸ್ ಮೂಲಕ ತೆರಳುತ್ತಾರೆ. ಸಂಜೆ ಬಂದು ತಮ್ಮ ವಾಹನದಲ್ಲಿ ಮನೆಗೆ ಮರಳುತ್ತಾರೆ.
ಸಾವಿರಾರು ಮಂದಿ
ನಗರದ ವಿವಿಧ ಸರಕಾರಿ ಕಚೇರಿಗಳಿಗೆ, ವಾಣಿಜ್ಯ ಮಳಿಗೆಗಳಿಗೆ ಜನ ಜಿಲ್ಲಾದ್ಯಂತದಿಂದ ಬರುತ್ತಾರೆ. ಅರಣ್ಯ ಉಪವಿಭಾಗ ಕಚೇರಿ ಉಡುಪಿ ಜಿಲ್ಲೆಯಷ್ಟೇ ಅಲ್ಲ, ದ.ಕ. ಜಿಲ್ಲೆಯ ವೇಣೂರು ಕಡೆಯ ಜನರಿಗೂ ಅನಿವಾರ್ಯ. ಸಹಾಯಕ ಕಮಿಷನರ್ ಹಾಗೂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಇಡೀ ಜಿಲ್ಲೆಯ ಜನರಿಗೆ ಇಲ್ಲೇ. ಬಹುತೇಕ ಸರಕಾರಿ ಕಚೇರಿಗಳು ಇನ್ನೂ ಬೈಂದೂರು ಹಾಗೂ ಕುಂದಾಪುರ ತಾಲೂಕಿಗೆ ಪ್ರತ್ಯೇಕವಾಗಿಲ್ಲ. ಎಲ್ಲ ಸರಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಎಂದು ಜನ ಬರುತ್ತಲೇ ಇರುತ್ತಾರೆ. ಇವರೆಲ್ಲರ ವಾಹನಗಳನ್ನು ಎಲ್ಲಿ ನಿಲ್ಲಿಸುವುದು?
ನಿಧಿ
ಪುರಸಭೆಯಲ್ಲಿ ಕಟ್ಟಡಗಳ ಬಾಡಿಗೆ ಸಂಗ್ರಹದಿಂದ ಉಳಿತಾಯವಾದ ಸುಮಾರು 2 ಕೋ.ರೂ.ಗಳಷ್ಟು ನಿಧಿಯಿದೆ. ಇದರಲ್ಲಿ ಪುರಸಭೆಗೆ ಆದಾಯ ಬರುವ ಕಟ್ಟಡವನ್ನೇ ಕಟ್ಟಬೇಕೆಂಬ ನಿಯಮವೂ ಇದೆ. ದತ್ತಾತ್ರೇಯ ದೇವಸ್ಥಾನ ಬಳಿ ಪುರಸಭೆಗೆ ಸೇರಿದ ಜಾಗವೂ ಇದೆ. ಇಲ್ಲಿರುವ ಗೂಡ್ಸ್ ವಾಹನಗಳ ಪಾರ್ಕಿಂಗ್‌ಗೆ ಒಂದು ವ್ಯವಸ್ಥೆ ಮಾಡಿಕೊಟ್ಟರೆ ಇಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸಬಹುದು ಎಂದು ಈ ಹಿಂದೆಯೇ ಚರ್ಚೆಯೂ ಆಗಿದೆ. ಆದರೆ ಯಾರೂ ಮುತುವರ್ಜಿ ವಹಿಸಿಲ್ಲ.
ಯೋಜನೆ ಆಗಿಲ್ಲ
ಪಾರ್ಕಿಂಗ್‌ಗೆ ಬಹುಮಹಡಿ ಕಟ್ಟಡ ನಿರ್ಮಿಸುವ ಕುರಿತು ಯಾವುದೇ ತೀರ್ಮಾನ ಆಗಿಲ್ಲ. ಪುರಸಭೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮೀಸಲಾದ ಅನುದಾನ ಇದೆ. ಆದರೆ ಸಾಮಾನ್ಯ ಅಥವಾ ವಿಶೇಷ ಸಭೆಯಲ್ಲಿ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡಂತೆ ವ್ಯವಸ್ಥೆ ಆಗಲಿದೆ. -ಗಿರೀಶ್ ಜಿ.ಕೆ. ಅಧ್ಯಕ್ಷರು, ಸ್ಥಾಯೀ ಸಮಿತಿ, ಪುರಸಭೆ
You seem to have an Ad Blocker on.
To continue reading, please turn it off or whitelist Udayavani.