ಯೋಜನೆ ಬಾಕಿ ಒಳ್ಳೆಯ ಬೆಳವಣಿಗೆಯಲ್ಲ
Team Udayavani, Mar 22, 2021, 3:40 AM IST
ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಣ ಪೋಲಾಗುವುದು ತಪ್ಪಿಸಬೇಕಾದ ಅಗತ್ಯವಿದೆ. ದುಬಾರಿ ವೆಚ್ಚದ ಕಾಮಗಾರಿಗಳು ಅರ್ಧದಲ್ಲೇ ಬಾಕಿಯಾಗುವುದು ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಒಳಚರಂಡಿ ಕಾಮಗಾರಿಯ ಬಳಿಕ ಜಲಸಿರಿ ಇದಕ್ಕೊಂದು ತಾಜಾ ಉದಾಹರಣೆ.
ವಾರಾಹಿ ನದಿಯಿಂದ ಜಪ್ತಿಯಲ್ಲಿ ನೀರೆತ್ತಿ ಪುರಸಭೆ ವ್ಯಾಪ್ತಿಗೆ ನೀರು ಸರಬರಾಜು ಮಾಡುವುದರಿಂದ ಪುರಸಭೆಗೆ ಕುಡಿಯುವ ನೀರಿನ ಆತಂಕ ಈ ವರೆಗೆ ಬಂದಿಲ್ಲ. ಇನ್ನೂ ಕೆಲವು ದಶಕಗಳ ಮಟ್ಟಿಗೆ ಈ ಆತಂಕ ಬರದು.
ಪೈಪ್‌ಲೈನ್ ಹಾದುಹೋಗುವ ಆರು ಪಂಚಾಯತ್‌ಗಳ ಜನರಿಗೂ ಪುರಸಭೆ ತನ್ನದೇ ಪೈಪ್‌ಲೈನ್‌ನಿಂದ ನೀರು ಕೊಟ್ಟು ಶುಲ್ಕ ಪಡೆಯುತ್ತದೆ. ಅಷ್ಟಿದ್ದರೂ ಕೋಡಿ ಪರಿಸರದ ಜನತೆಗೆ ಕುಡಿಯಲು ಶುದ್ಧ ನೀರಿಲ್ಲ. 600ಕ್ಕೂ ಅಧಿಕ ಮನೆಗಳಿರುವ ಈ ಪ್ರದೇಶದಲ್ಲಿ ಉಪ್ಪುನೀರು, ಹಿನ್ನೀರು ಎಂದು ಶುದ್ಧ ನೀರಿಲ್ಲ. ಕೃಷಿ ಭೂಮಿಯಂತೂ ಬಟಾಬಯಲಾಗಿದೆ. ಕುಡಿಯುವ ನೀರಿಗೂ ಪರಿತಪಿಸುವ ಸ್ಥಿತಿ ಇದೆ.
ಈ ಬವಣೆ ನೀಗುವ ಸಲುವಾಗಿ ಬಂದುದೇ ಜಲಸಿರಿ ಯೋಜನೆ. 23 ಕೋ.ರೂ.ಗಳ ಯೋಜನೆ, 12 ಕೋ.ರೂ.ಗಳ ನಿರ್ವಹಣೆ ಎಂದು ಒಟ್ಟು 35 ಕೋ.ರೂ.ಗಳ ಕಾಮಗಾರಿಗೆ ಟೆಂಡರ್ ಆಗಿ ಮೂರು ವರ್ಷಗಳಾದವು. 2020ರ ಜನವರಿಗೆ ಜಲಸಿರಿ ಕಾಮಗಾರಿ ಮುಗಿಯಬೇಕಿತ್ತು. ಆದರೆ ಕುಂಟುತ್ತಾ ಸಾಗಿದ ಕಾಮಗಾರಿ ನಡುವೆ ಎದುರಾದ ಕೊರೊನಾ ನೆಪದಲ್ಲಿ ಬಾಕಿಯಾಯಿತು. ಈಗ ಮಾರ್ಚ್‌ಗೆ ಮುಕ್ತಾಯ ಎಂದು ಕಾಮಗಾರಿ ಮುಗಿದರೂ ಉದ್ದೇಶ ಈಡೇರಿಲ್ಲ ಎನ್ನುವಂತಾಗಿದೆ. 3,150 ನಳ್ಳಿ ಸಂಪರ್ಕ ನೀಡಬೇಕಾದಲ್ಲಿ ಕೇವಲ 118 ಮನೆಗಳಿಗೆ ಸಂಪರ್ಕ ನೀಡುವ ಮೂಲಕ ಸಂಬಂಧಿತ ಅಧಿಕಾರಿಗಳು ಕ್ರಿಯಾಶಕ್ತಿ ಮತ್ತು ಇಚ್ಛಾಶಕ್ತಿಯ ಲೋಪ ಪ್ರದರ್ಶಿಸಿದ್ದಾರೆ.
ಎಡಿಬಿ ಯೋಜನೆಯಲ್ಲಿ ಸಾಲ ಮಾಡಿ ಹಣ ತಂದು ಅದಕ್ಕೆ ವರ್ಷಕ್ಕಿಷ್ಟು ಎಂದು ಬಡ್ಡಿಕಟ್ಟಿ ಸಾಲ ಮರುಪಾವತಿಸುವ ಇಷ್ಟು ಬೃಹತ್ ಮೊತ್ತದ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡನೀಯ. ಜನರಿಗೆ ಉತ್ತರದಾಯಿ ಆಗಬೇಕಾದ ಆಡಳಿತ ಮಂಡಳಿ ಈ ಕುರಿತು ಎಚ್ಚರ ವಹಿಸಬೇಕು. ಅರ್ಜಿ ನೀಡಿದರೂ ಸಂಪರ್ಕ ನೀಡುವುದಿಲ್ಲ, ಅರೆಬರೆ ಕಾಮಗಾರಿ ಮಾಡುವುದು, ಪೈಪ್‌ಲೈನ್‌ಗಾಗಿ ಅಗೆದರೆ ಅದನ್ನು ಮರುನಿರ್ಮಾಣ ಮಾಡುವುದಿಲ್ಲ -ಇಂತಹ ದೂರುಗಳ ಜತೆಗೆ ಯೋಜನೆಯೇ ಸಾಫಲ್ಯ ಕಾಣದಿದ್ದರೆ ಅನುದಾನ ಬಂದಾದರೂ ಏನು ಫಲ? ಜನರ ತೆರಿಗೆ ಹಣವನ್ನು ಹೀಗೆ ಪೋಲು ಮಾಡುವುದು ಎಷ್ಟು ಸರಿ?
ಇನ್ನಾದರೂ ಜನರಿಗೆ ಉಪಯೋಗಿಯಾಗಬೇಕಾದ ಈ ಕಾಮಗಾರಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಬೇಕು. ಇದಕ್ಕಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮಾನ ಜವಾಬ್ದಾರಿ ಪ್ರದರ್ಶಿಸಬೇಕು. ಎಲ್ಲೆಲ್ಲಿ ಲೋಪಗಳು ಆಗಿವೆಯೋ ಅಲ್ಲೆಲ್ಲ ಸರಿಪಡಿಸುತ್ತ ಹೋದರೆ ಮಾತ್ರ ಹಣ ಖರ್ಚು ಮಾಡಿ ಯೋಜನೆ ಅನುಷ್ಠಾನ ಮಾಡಿದ್ದಕ್ಕೆ ಸಾರ್ಥಕ್ಯ ಸಿಗುತ್ತದೆ. ಇಲ್ಲವಾದರೆ ಯಾರದೋ ದುಡ್ಡು… ಎಂಬ ಗಾದೆಯ ಹಾಗಾಗುತ್ತದೆ.
-ಸಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.