ಶೀಘ್ರ ನೂತನ ಕಟ್ಟಡಕ್ಕೆ ಗ್ರಾಮಕರಣಿಕರ ಕಚೇರಿ ಸ್ಥಳಾಂತರ
Team Udayavani, Aug 22, 2021, 3:20 AM IST
ಹೆಮ್ಮಾಡಿ: ಕಳೆದ 3 ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ, ಶಾಲೆಯ ಕೋಣೆಯೊಂದರಲ್ಲಿ ಕಾರ್ಯಾಚರಿಸುತ್ತಿರುವ ಹೆಮ್ಮಾಡಿಯ ಗ್ರಾಮಕರಣಿಕರ ಕಚೇರಿಯು ಸ್ವಂತ, ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರವಾಗುವ ಕಾಲ ಸನ್ನಿಹಿತವಾಗಿದೆ.
ಈಗಾಗಲೇ ಹೊಸ ಕಟ್ಟಡದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಂಡು, ತಿಂಗಳೊಳಗೆ ಹೊಸ ಕಟ್ಟಡದಲ್ಲಿ ಗ್ರಾಮಕರಣಿಕರ ಕಚೇರಿ ಕಾರ್ಯಾರಂಭವಾಗುವ ನಿರೀಕ್ಷೆಯಿದೆ.
ಕಂದಾಯ ಇಲಾಖೆಯ ಅಧೀನದಲ್ಲಿ ಬರುವ ಹೆಮ್ಮಾಡಿಯ ಗ್ರಾಮಕರಣಿಕರ ಕಚೇರಿಯು ಹೆಮ್ಮಾಡಿಯ ಸರಕಾರಿ ಹಿರಿಯ ಪ್ರಾಥಮಿ ಕ ಶಾಲೆಯ ಅಕ್ಷರ ದಾಸೋಹದ ಕೊಠಡಿಯಲ್ಲಿ ಕಳೆದ 3 ವರ್ಷಗಳಿಂದ ಕಾರ್ಯ ನಿರ್ವಹಣೆ ಮಾಡುತ್ತಿದೆ.
ಗ್ರಾ.ಪಂ. ಪಕ್ಕದಲ್ಲೇ ಕಚೇರಿ :
ಪಂಚಾಯತ್ ಕಟ್ಟಡದಲ್ಲೇ ಗ್ರಾಮಕರಣಿಕರ ಕಚೇರಿಯಿದ್ದರೆ ಅಲ್ಲಿಗೆ ಕೆಲಸ- ಕಾರ್ಯಕ್ಕೆ ಬರುವ ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಈವರೆಗೆ ರಸ್ತೆಯ ಆಚೆ, ಎದುರಿನ ಶಾಲಾ ಕಟ್ಟಡದಲ್ಲಿ ಗ್ರಾಮ ಕರಣಿಕರ ಕಚೇರಿ ಇದ್ದುದರಿಂದ ಶಾಲಾ ಮೈದಾನದಲ್ಲಿ ನೀರು ನಿಂತು ಇಲ್ಲಿಗೆ ಬರುವ ವೃದ್ಧರು, ಮಹಿಳೆಯರು, ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ಆದರೆ ಈಗ ಪಂಚಾಯತ್ ಪಕ್ಕದಲ್ಲೇ ಈ ಕಟ್ಟಡವಿದ್ದು, ಇದರಿಂದಾಗಿ ಗ್ರಾಮಸ್ಥರಿಗೆ ಅನುಕೂಲವಾಗಲಿದೆ.
ಸ್ಥಳಾಂತರಿಸುವಂತೆ ಮನವಿ :
ಹಿಂದೆ ಹೆಮ್ಮಾಡಿ ಶಾಲೆಯ ಅಕ್ಷರ ದಾಸೋಹದ ಕೊಠಡಿಯಲ್ಲಿ ಈ ಕಚೇರಿಯಿರುವುದರಿಂದ ಶಾಲೆಯ ಕಾರ್ಯ ಚಟುವಟಿಕೆಗಳಿಗೆ ತೊಡಕಾಗುತ್ತಿದ್ದು, ಈ ಕಾರಣದಿಂದ ಇಲ್ಲಿಂದ ಗ್ರಾಮಕರಣಿಕರ ಕಚೇರಿ ಯನ್ನು ಸ್ಥಳಾಂತರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನೂ ಮಾಡಿ ದ್ದರು. ಮಾತ್ರವಲ್ಲದೆ ಬಿಲ್ ವಿಚಾರದ ಗೊಂದಲದಿಂದಾಗಿ ಈ ಕಟ್ಟಡಕ್ಕೆ ಸರಿಯಾದ ವಿದ್ಯುತ್ ಸೌಲಭ್ಯವೂ ಇರಲಿಲ್ಲ.
ಸುದಿನ ವರದಿ :
ಹೆಮ್ಮಾಡಿಯ ಗ್ರಾಮ ಕರಣಿಕರ ಕಚೇರಿಗೆ ಸ್ವಂತ ಕಟ್ಟಡವಿಲ್ಲದ ಬಗ್ಗೆ, ಕಳೆದ 3 ವರ್ಷಗಳಿಂದ ಶಾಲೆಯ ಕೋಣೆಯೊಂದರಲ್ಲಿ ಈ ಕಚೇರಿ ಕಾರ್ಯಾಚರಿಸುವ ಕುರಿತಂತೆ “ಉದಯವಾಣಿ ಸುದಿನ’ವು ಕಳೆದ ಎ.10 ರಂದು “ಹೆಮ್ಮಾಡಿ: ಗ್ರಾಮ ಕರಣಿಕರಿಗೇ ಸೂಕ್ತ ನೆಲೆಯಿಲ್ಲ’ ಎಂಬ ವಿಶೇಷ ವರದಿ ಪ್ರಕಟಿಸಿ, ಗಮನ ಸೆಳೆದಿತ್ತು.
ವಿಎ – ಅಂಚೆ ಕಚೇರಿ :
ಹೆಮ್ಮಾಡಿ ಪಂಚಾಯತ್ ಮುತುವರ್ಜಿಯಲ್ಲಿ ಹಳೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೀಸಲಿರಿಸಿದ್ದ ಕಟ್ಟಡವನ್ನೇ ಇನ್ನಷ್ಟು ನವೀಕರಣಗೊಳಿಸಿ, ಅದರಲ್ಲಿ ಗ್ರಾಮಕರಣಿಕರ ಕಚೇರಿ ಹಾಗೂ ಗ್ರಾಮೀಣ ಅಂಚೆ ಕಚೇರಿಯನ್ನು ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕವು ಕರ್ಕುಂಜೆ ಗ್ರಾ.ಪಂ.ನೊಂದಿಗೆ ನಡೆಯಲಿರುವುದರಿಂದ ಈ ಕಟ್ಟಡವನ್ನು ಬೇರೆ ಉಪಯೋಗಕ್ಕಾಗಿ ಬಳಸಿಕೊಳ್ಳಲು ಪಂಚಾಯತ್ ಮುಂದಾಗಿದೆ.
ತ್ಯಾಜ್ಯ ವಿಲೇವಾರಿ ಘಟಕವನ್ನು ನಾವು ಕರ್ಕುಂಜೆ ಪಂಚಾಯತ್‌ನೊಂದಿಗೆ ನಿರ್ವಹಿಸುವ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಈ ಕಟ್ಟಡವನ್ನು ಅಂಚೆ ಕಚೇರಿ ಹಾಗೂ ವಿಎ ಕಚೇರಿಗೆ ಬಳಸಿಕೊಳ್ಳಲಾಗುವುದು. ಇದಕ್ಕಾಗಿ ಹಿಂದೆ 90 ಸಾವಿರ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು, ಅದರೊಂದಿಗೆ ಇದನ್ನು ಇನ್ನಷ್ಟು ವಿಸ್ತರಿಸಿ, ಅದಕ್ಕೆ ಬೇಕಾದ ಎಲ್ಲ ಸೌಕರ್ಯವನ್ನು ಒದಗಿಸಲು ಪಂ. ನಿಂದ 2 ಲಕ್ಷ ರೂ. ಅನುದಾನವನ್ನು ವಿನಿಯೋಗಿಸಲಾಗುತ್ತಿದೆ. ಆದಷ್ಟು ಬೇಗ ಆರಂಭವಾಗಲಿದೆ. – ಯು. ಸತ್ಯನಾರಾಯಣ, ಅಧ್ಯಕ್ಷರು, ಹೆಮ್ಮಾಡಿ ಗ್ರಾ.ಪಂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.