ಕಾಳಿಂಗ ನಾವಡರು ಇಂದಿಗೂ ಯಕ್ಷ ಮಾಣಿಕ್ಯ
Team Udayavani, May 27, 2020, 7:46 AM IST
ಬಡಗುತಿಟ್ಟಿನ ಯಕ್ಷಗಾನ ರಂಗದಲ್ಲಿ ಅಚ್ಚಳಿಯದ ಹೆಸರು ದಿ| ಕಾಳಿಂಗ ನಾವಡರದ್ದು. ಅಂದಿಗೂ – ಇಂದಿಗೂ ಅವರ ಕಂಚಿನ ಕಂಠಸಿರಿಗೆ ಮಾರು ಹೋಗದವರಿಲ್ಲ. ಅತ್ಯಂತ ಕಿರಿಯ ವಯಸ್ಸಿಗೆ ಯಕ್ಷರಂಗಕ್ಕೆ ಬಂದು ಕೆಲವೇ ವರ್ಷಗಳಲ್ಲಿ ಪ್ರಸಿದ್ಧಿಯ ಉತ್ತುಂಗಕ್ಕೇರಿದವರು. ಕಾಳಿಂಗ ನಾವಡರೆಂದರೆ ತಂಗಾಳಿಯಲ್ಲಿ ತೇಲಿ ಬರುವ ಸುಗಂಧದ ಪರಿಮಳದ ಹಾಗೆ. ಇಂದು ಅವರು ಇದ್ದಿದ್ದರೆ 63 ವರ್ಷವಾಗಿರುತ್ತಿತ್ತು. ಬದುಕಿನ ಸಂಜೆಯಲ್ಲಿ ಒಂದಿಷ್ಟು ಹಾಡುಗಳಿಂದ ಯಕ್ಷಗಾನ ಕಲಾ ಪ್ರೇಮಿಗಳನ್ನು ಕುಣಿಸುತ್ತಿದ್ದರು. ಆದರೆ ಅವರು ನಮ್ಮನ್ನಗಲಿ ಇಂದಿಗೆ 30 ವರ್ಷಗಳಾಗುತ್ತಿವೆ. ಹಾಗೆಂದು ಸುಗಂಧದ ಪರಿಮಳ ಗಾಳಿಯಲ್ಲಿ ಕರಗಿ ಹೋಗಿಲ್ಲ! ಅವರ ಅಣ್ಣ ಗಣಪಯ್ಯ ಇಲ್ಲಿ ನೆನಪಿಸಿಕೊಂಡಿದ್ದಾರೆ, ಜತೆಗೆ ಒಡನಾಡಿಗಳ ಮಾತುಗಳೂ ಇವೆ…
ಗುಂಡ್ಮಿ: ಒಮ್ಮೊಮ್ಮೆ ಬೀದಿಯಲ್ಲಿ ಎಜ್ಡಿ ಬೈಕ್‌ನ ಶಬ್ಧ ಕೇಳಿದಾಗ, ಮನೆಯ ಜಗಲಿಯಲ್ಲಿ ಯಾರೋ ಕುಳಿತು ವೀಳ್ಯ ಮೆಲ್ಲುವಾಗ, ಯಾವುದೋ ಪ್ರಸಂಗವೊಂದರ ಪದ್ಯದ ಆಲಾಪ ಕಿವಿಗೆ ಬಿದ್ದಾಗ ಕಾಳಿಂಗ ನಮ್ಮೆದುರು ಬಂದಂತೆ ಭಾಸವಾಗುತ್ತದೆ.
ಇಲ್ಲೇ ಎಲ್ಲೋ ಇದ್ದಾನೆ ಎನಿಸುತ್ತದೆ. ಇಂದಿಗೂ ಅವನು ನಮ್ಮೊಂದಿಗಿಲ್ಲ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಲಕ್ಷಾಂತರ ಅಭಿಮಾನಿಗಳ ಮನದಲ್ಲಿ ಜೀವಂತನಾಗಿದ್ದಾನೆ.
ತಂದೆಯೂ (ಗುಂಡ್ಮಿಯ ರಾಮಚಂದ್ರ ನಾವಡರು, ತಾಯಿ ಪದ್ಮಾವತಿ. ಐದನೇ ಮಗ. ) ಆ ಕಾಲದ ಹೆಸರಾಂತ ಭಾಗವತರು. ಯಕ್ಷಗಾನದ ಮೇಲೆ ಅತೀವ ಆಸಕ್ತಿ. ತಂದೆಯೊಂದಿಗೆ ಆಟಕ್ಕೆ ಹೋಗುತ್ತಿದ್ದ. ಭಾಗವತರು ಕುಳಿತುಕೊಳ್ಳುವ ಮಂಚದ ಹಿಂದೆ ಅವರ ಮಕ್ಕಳಿಗೆ ಕುಳಿತುಕೊಳ್ಳಲು ಅವಕಾಶವಿತ್ತು. ಹಾಗಾಗಿ ಈತ ಹೋಗಿ ಕುಳಿತು ಆಟವನ್ನು ವೀಕ್ಷಿಸುತ್ತಿದ್ದ. ವಾಸ್ತವವಾಗಿ ಅಮ್ಮನ ಕೊಡುಗೆ ಸಾಕಷ್ಟಿತ್ತು. ಅಮ್ಮನ ಪ್ರೋತ್ಸಾಹವನ್ನು ಮರೆಯುವಂತಿಲ್ಲ. ತಂದೆ ಆಟಕ್ಕೆ ಹೊರಡುವಾಗ ಮೆಲ್ಲಗೆ ಚಡ್ಡಿ, ಅಂಗಿ ತೊಡಿಸಿ ಹೋಗು ಎನ್ನುತ್ತಿದ್ದರು.
ಜತೆಗೆ ತಂದೆಯೊಂದಿಗೆ ಹೂವಿನ ಕೋಲುಗಳಲ್ಲಿ ಭಾಗವಹಿಸಿ ಪ್ರಾಥಮಿಕ ಅಭ್ಯಾಸವನ್ನೂ ಪಡೆದಿದ್ದ. ಬಳಿಕ ದೊಡ್ಡಣ್ಣನಲ್ಲಿಗೆ ಹೋಗಿದ್ದ. ಹಂಗಾರಕಟ್ಟೆಯ ಯಕ್ಷ ಕಲಾ ಕೇಂದ್ರ ಆರಂಭವಾಗುವ ಹೊತ್ತು. ಸದಾನಂದ ಹೆಬ್ಟಾರರು ನಮ್ಮ ತಂದೆಗೆ, ಅವನನ್ನು (ಕಾಳಿಂಗ) ಕರೆಸಿ ನಿಮ್ಮ ಪರಂಪರೆ ಮುಂದುವರಿಯಲಿ, ಪ್ರಯತ್ನ ಮಾಡುವ ಎಂದರು. ಅದರಂತೆ ಕೇಂದ್ರಕ್ಕೆ ಸೇರಿದ. ಆ ಕಾಲದ ಸುಪ್ರಸಿದ್ಧ ಭಾಗವತರಾದ ನಾರಾಯಣ ಉಪ್ಪೂರರ ಗರಡಿಯಲ್ಲಿ ಕಲಿಕೆ ಮುಂದುವರಿಸಿದ. ಕಲಾವಿದರಾದ ಕೋಟ ಮಹಾಬಲ ಕಾರಂತ, ಹಿರಿಯಡಕ ಗೋಪಾಲ ರಾವ್ ಅವರೂ ತಿದ್ದಿ ತೀಡಿದ್ದಾರೆ.
ಅನಂತರ ತಂದೆಯವರೊಂದಿಗೆ ಹೋವಿನ ಕೋಲು ಪ್ರದರ್ಶನಕ್ಕೆ ನಾನು-ಆತ ಒಟ್ಟಾಗಿ ಹೋಗುತ್ತಿದ್ದೆವು. ಐದನೇ ತರಗತಿ ಸಾಕೆನಿಸಿತ್ತು, ಬರೀ ಜನರಲ್ ನಾಲೆಡ್ಜ್ ನಲ್ಲಿ ಮುಂದೆ ಬಂದವ. ಕಲಿತದ್ದು ಕಡಿಮೆಯಾದರೂ, ಯಕ್ಷಗಾನ ಕುರಿತಾದದ್ದು ಹಾಗೂ ಯಕ್ಷಗಾನದ ಅಧ್ಯಯನಕ್ಕೆ ಸಂಬಂಧಿಸಿದ್ದನ್ನು ಕಲಿಯುವುದರಲ್ಲಿ ಬಹಳ ಆಸಕ್ತಿ ಹಾಗೂ ಚುರುಕು ಸ್ವಭಾದವ.
ಅಕ್ಕಪಕ್ಕದ ಹುಡುಗರನ್ನು ಕೂಡು ಹಾಕಿಕೊಂಡು, ವೇಷ ಕಟ್ಟಿಕೊಂಡು ಯಕ್ಷಗಾನ ಅಭ್ಯಾಸ ಮಾಡುತ್ತಿದ್ದ. ಕ್ರಮೇಣ ಪ್ರಸಂಗ ರಚಿಸುವ ಸಂದರ್ಭದಲ್ಲೂ (ಅಂಬಾತನಯ ಮುದ್ರಾಡಿ, ವಾಸುದೇವ ಸಾಮಗರಂಥ ಹಲವರು ಸಹಕರಿಸಿದ್ದರು) ತಂದೆಯಲ್ಲಿ, ನಮ್ಮಲ್ಲಿ ಕೆಲವು ವಿಷಯಗಳನ್ನು ಕೇಳುತ್ತಿದ್ದ. ಕೂಡಲೇ ಹೇಳಬೇಕಿತ್ತು. ಇಲ್ಲವಾದರೆ, ಏನಯ್ಯಾ ಗ್ರಾಜುಯೇಟ್ ಅನ್ತೀಯಾ, ಇದಕ್ಕೆ ಅರ್ಥ ಹೇಳ್ಳೋಕೆ ಎಷ್ಟು ಹೊತ್ತು ಎಂದು ದಬಾಯಿಸುತ್ತಿದ್ದ ನನಗೆ. ಶೇಕ್ಸ್‌ಪಿಯರ್ ಇತ್ಯಾದಿಯವರನ್ನೂ ಅಭ್ಯಾಸ ಮಾಡುವ ಆಸಕ್ತಿ ಇತ್ತು ಅವನಿಗೆ.
ವಿದ್ಯಾರ್ಥಿಯಾಗಿ ಒಂದು ವರ್ಷಕ್ಕೇ (ತಾಳ ಜ್ಞಾನ ಚೆನ್ನಾಗಿದ್ದ ಕಾರಣ) ಅಮೃತೇಶ್ವರೀ ಮೇಳದಲ್ಲಿ ಸಂಗೀತಗಾರನಾಗಿ ಸೇರ್ಪಡೆಯಾದ. ಅದು ಒಳ್ಳೆಯ ಅನುಭವ ಕೊಟ್ಟಿತು. ಆ ಬಳಿಕ ನಮಗೆ ಹಣಕಾಸಿನ ಅಗತ್ಯವಿತ್ತು. ಹಾಗಾಗಿ ಪೆರ್ಡೂರಿನ ವಿಜಯ ಶ್ರೀ ಮೇಳಕ್ಕೆ ಭಾಗವತನಾದ. ಆ ಬಳಿಕ ಸಾಲಿಗ್ರಾಮ ಮೇಳಕ್ಕೆ ಸೇರಿಕೊಂಡ.
ಸುದೀರ್ಘ ತಿರುಗಾಟ ನಡೆಸಿದ. ಆ ಕಾಲದಲ್ಲಿ ಅವನ ಸ್ವರ ಸಿರಿಗೆ ಮಾರು ಹೋಗದವರಿಲ್ಲ. ಹೊಸ ತಲೆಮಾರು ಇಡೀ ಯಕ್ಷಗಾನದ ಕಡೆ ವಾಲಿತು. ದೂರದ ಮುಂಬಯಿ ಮುಂತಾದ ಕಡೆಗಳ ಕ್ಯಾಂಪ್‌ಪ್ ಗಳಿಗೆ ಆಗಲೇ ವಿಮಾನದ ವೆಚ್ಚ ಭರಿಸಿ ಕರೆಸಿಕೊಳ್ಳುತ್ತಿದ್ದರು.
ರೂಪಶ್ರೀ, ಭಾಗ್ಯಶ್ರೀ, ಕಾಂಚನಶ್ರೀ, ವಿಜಯಶ್ರೀ, ನಾಗಶ್ರೀ, ಅಮೃತಮತಿ ಮುಂತಾದ ಯಶಸ್ವಿ ಪ್ರಸಂಗಗಳನ್ನು ಯಕ್ಷರಂಗಕ್ಕೆ ಕೊಟ್ಟ. ಇಂದಿಗೂ ನಾಗಶ್ರೀ ಯಕ್ಷರಂಗದ ಮಾಣಿಕ್ಯ. ಅದರಲ್ಲಿನ ಶ್ರೇಷ್ಠತೆಯೇ ಇಂದಿಗೂ ಅದನ್ನು ಕಲಾರಸಿಕರ ಹೃದಯದಲ್ಲಿ ಉಳಿಸಿದೆ.
ಹೀಗೆ ಯಕ್ಷರಂಗದಲ್ಲಿ ಕೀರ್ತಿಯ ಉನ್ನತ ಶಿಖರದಲ್ಲಿದ್ದಾಗಲೇ ಆತ ಇದ್ದಕ್ಕಿದ್ದಂತೆ 32ರ ವಯಸ್ಸಿನಲ್ಲಿ ಮಾಯವಾಗಿಬಿಟ್ಟ (1990ರ ಮೇ 27). ಉಡುಪಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇನ್ನಿಲ್ಲವಾದ. ಆದರೆ ಕಾಳಿಂಗನ ಬದುಕಿನ ಆಸಕ್ತಿ, ಕಲಿಕೆಯ ಮೇಲಿನ ಪ್ರೀತಿ, ನಮ್ಮ ನಡುವಿನ ಗೆಳೆಯನ (ನಮ್ಮಿಬ್ಬರ ಸಂಬಂಧ ಗೆಳೆಯರಂತಿತ್ತು) ರೀತಿಯ ಸಂಬಂಧ-ಎಲ್ಲವೂ ನೆನಪಿಗೆ ಬರುತ್ತವೆ. ಕಣ್ಣಾಲಿಗಳು ತುಂಬಿಕೊಳ್ಳುತ್ತವೆ.
ಅವನೇ ಕಿಂಗ್ !
ಯಕ್ಷಗಾನದಲ್ಲಿ ಸ್ಟಾರ್ ಪಟ್ಟ ಪಡೆದ ಭಾಗವತ ಅವನು. ಎಲ್ಲೇ ಹೋದರೂ ಅವನೇ ಕಿಂಗ್. ಸೂಜಿಗಲ್ಲಿನ ವ್ಯಕ್ತಿತ್ವ. ನೂರು ಜನ ಕುಳಿತರೂ ಅವನೇ ಆಕರ್ಷಣೆ. ಕಾಳಿಂಗನೇ ಕೇಂದ್ರಬಿಂದು. ನಾನೇ ನೋಡಿದ್ದೇನೆ ಅದನ್ನು. ಅದಕ್ಕೆ ಅವನ ಸರಳತೆಯೇ ಕಾರಣ. ಇಂದಿಗೂ ಅವನ ಪದ್ಯಗಳಿಗೆ ಹಾತೊರೆಯುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವನು ಮಸುಕಾಗಿಲ್ಲ; ಇಂದಿಗೂ ಹೊಳೆಯುವ ಮಾಣಿಕ್ಯ. ಎಷ್ಟೇ ದೊಡ್ಡ ಕಲಾವಿದನಾದರೂ ಕಲೆ ಹಾಗೂ ಭಾಗವತನ ಸ್ಥಾನಕ್ಕೆ ಗೌರವ ಕೊಡಬೇಕು ಎನ್ನುವುದಕ್ಕೆ ಬದ್ಧನಾಗಿದ್ದ. ಅದೇ ಅವನ ಶ್ರೇಷ್ಠತೆ.
– ಗಣಪಯ್ಯ ನಾವಡ, ಕಾಳಿಂಗ ನಾವಡರ ಅಣ್ಣ
ಗುರುಗಳ ಮೆಚ್ಚಿನ ಶಿಷ್ಯ
ನಾನು ನಾವಡರು ಒಟ್ಟಿಗೆ ಕಲಾ ಕೇಂದ್ರದಲ್ಲಿ ಕಲಿತವರು. ಆಗಲೇ ಅವರಿಗೆ ಯಕ್ಷಗಾನದ ಬಗ್ಗೆ ಸಾಕಷ್ಟು ತಿಳಿವಳಿಕೆ ಇತ್ತು. ಹೀಗಾಗಿ ಹೇಳಿದ ಪಾಠ ಹಾಗೂ ಕೆಲಸವನ್ನು ತತ್‌ಕ್ಷಣ ಮಂಡಿಸಿ ಗುರುಗಳಾದ ಉಪ್ಪೂರರು ಮತ್ತು ಬೆಳಂಜೆ ತಿಮ್ಮಪ್ಪ ನಾಯ್ಕ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಿತ್ಯವೂ ಒಂದೇ ಸೈಕಲ್‌ನಲ್ಲಿ ಕಲಿಕೆಗೆ ಹೋಗುವಾಗ ಯಕ್ಷಗಾನದ ಕುರಿತು ಪ್ರಸ್ತಾವಿಸದ ದಿನವಿಲ್ಲ. ಸದಾ ಕಲಿಕೆಯ ವ್ಯಕ್ತಿ.
– ಸದಾನಂದ ಐತಾಳ ಗುಂಡ್ಮಿ, ನಾವಡರ ಸಹಪಾಠಿ
ಯಕ್ಷರಂಗಕ್ಕೆ ನಾವಡರು
ಕನ್ನಡ ಚಿತ್ರರಂಗದಲ್ಲಿ ಡಾ| ರಾಜ್ ಕುಮಾರ್‌ಗೆ ಯಾವ ರೀತಿ ಅಭಿಮಾನಿಗಳು ಇದ್ದರೋ ಹಾಗೆಯೇ ಕಾಳಿಂಗ ನಾವಡರಿಗೆ ಯಕ್ಷರಂಗದಲ್ಲಿ ಅಭಿಮಾನಿಗಳಿದ್ದರು. ಅದಕ್ಕೆ ಅವರ ಸರಳತೆ ಕಾರಣ. ಬೆಂಗಳೂರು, ಮುಂಬಯಿಯಲ್ಲಿ ಪ್ರದರ್ಶನ ಮುಗಿಸಿ ಹೊರಬಂದಾಗ ಸಿನೆಮಾ ನಟರ ರೀತಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದರು. ತನ್ನ ಮೆಚ್ಚಿಕೊಳ್ಳುವವರ ಕಷ್ಟಕ್ಕೆ ಸಹಕಾರ ನೀಡಿದ ಹಲವು ಪ್ರಸಂಗಗಳಿವೆ. ಕನ್ನಡ ಚಿತ್ರರಂಗಕ್ಕೇ ಒಬ್ಬರೇ ರಾಜ್‌ಕುಮಾರ್, ಯಕ್ಷರಂಗಕ್ಕೆ ಒಬ್ಬರೇ ನಾವಡರು.
– ಗಂಪು ಪೈ ಸಾಲಿಗ್ರಾಮ, ಕಾಳಿಂಗ ನಾವಡರ ಅಭಿಮಾನಿ
ನಿರೂಪಣೆ : ರಾಜೇಶ್ ಗಾಣಿಗ, ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.