ಅಡುಗೆ ಅನಿಲ ಕೊರತೆಯಿಂದ ಮಕ್ಕಳಿಗೆ “ಹಸಿಯೂಟ’!
ಏರದ ದರಪಟ್ಟಿ, ಏರಿದ ತರಕಾರಿ, ಅನಿಲ ದರ ಕಡಿಮೆ ಮಕ್ಕಳ ಶಾಲೆಗಳಲ್ಲಿ ಸಮಸ್ಯೆ
Team Udayavani, Oct 28, 2021, 5:40 AM IST
ಸಾಂದರ್ಭಿಕ ಚಿತ್ರ.
ಕುಂದಾಪುರ: ಗ್ಯಾಸ್ ಮತ್ತು ತರಕಾರಿ ದರ ಏರಿಕೆಯಿಂದ ಕಡಿಮೆ ಸಂಖ್ಯೆಯ ಮಕ್ಕಳಿರುವ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಹಸಿಯೂಟವಾಗುವ ಭೀತಿ ಎದುರಾಗಿದೆ.
ಪ್ರಸ್ತುತ ಸರಕಾರ ನಿಗದಿಪಡಿಸಿರುವ ವೆಚ್ಚದ ಪ್ರಕಾರ ನಿತ್ಯವೂ ಬಿಸಿಯೂಟ ನಿರ್ವಹಣೆಯೇ ತಲೆನೋವಾಗಿ ಪರಿಣಮಿಸಿದೆ.
1ರಿಂದ 5ನೇ ತರಗತಿ ವರೆಗೆ ಬೇಳೆಗೆ 2 ರೂ., ತರಕಾರಿ ಮತ್ತು ಸಾಂಬಾರ್ ಹುಡಿ ತಯಾರಿಗೆ (1.36 ರೂ.+ 37 ಪೈಸೆ) 1.73 ರೂ., ಎಣ್ಣೆ 42 ಪೈಸೆ, ಉಪ್ಪು 3 ಪೈಸೆ, ಇಂಧನ 79 ಪೈಸೆ ಸೇರಿ ಒಬ್ಬರಿಗೆ ಒಟ್ಟು 4.97 ರೂ.
ವ್ಯಯಿಸಬಹುದು.
6ರಿಂದ 10ನೆಯ ತರಗತಿ ವರೆಗೆ ಬೇಳೆಗೆ 2.95 ರೂ., ತರಕಾರಿ ಮತ್ತು ಸಾಂಬಾರ್ ಹುಡಿ ತಯಾರಿಗೆ (2.04 ರೂ.+ 54 ಪೈಸೆ) 2.58 ರೂ., ಎಣ್ಣೆ 67 ಪೈಸೆ, ಉಪ್ಪು 6 ಪೈಸೆ, ಇಂಧನ 1.19 ರೂ. ಸೇರಿ ಒಬ್ಬರಿಗೆ ಒಟ್ಟು 7.45 ರೂ. ಗಳನ್ನು ವೆಚ್ಚ ಮಾಡಬಹುದು. ಅಕ್ಕಿ ಪ್ರತ್ಯೇಕ. ಪ್ರತೀ ದಿನ ಹಾಜರಾದ ವಿದ್ಯಾರ್ಥಿಗಳಿಗೆ ಅನುಗುಣವಾಗಿ ವೆಚ್ಚ ಮಾಡಬೇಕು. ಇದಕ್ಕಿಂತ ಹೆಚ್ಚಿನ ಹಣವನ್ನು ಬಿಸಿಯೂಟ ಖಾತೆಯಿಂದ ವೆಚ್ಚ ಮಾಡುವಂತಿಲ್ಲ. 1ರಿಂದ 8ರ ವರೆಗೆ ಬಿಸಿಯೂಟ ತಯಾರಿಕೆಗೆ ಕೇಂದ್ರ ಸರಕಾರದ ಅನುದಾನವೂ ಇದ್ದು 9, 10ಕ್ಕೆ ಪೂರ್ಣಪ್ರಮಾಣದಲ್ಲಿ ರಾಜ್ಯವೇ ಭರಿಸುತ್ತಿದೆ.
ಪ್ರತೀ ವರ್ಷ ಈ ದರವನ್ನು ಪರಿಷ್ಕರಿಸಲಾಗುತ್ತದೆ. 2020ರ ಜೂನ್‌ನಲ್ಲಿ ಶೇ. 10.99ರಷ್ಟು ಹೆಚ್ಚಿಸಿದ್ದು ಈ ವರ್ಷ ಪರಿಷ್ಕರಿಸಿಲ್ಲ. ಹಿಂದಿನ ವರ್ಷ 5ನೇ ವರೆಗಿನ ಮಕ್ಕಳಿಗೆ 4.48 ರೂ., 10ನೇ ವರೆಗಿನ ಮಕ್ಕಳಿಗೆ 6.71 ರೂ. ಇತ್ತು.
ಸವಾಲು
ಈವರೆಗೆ ಮಾಸಿಕ 2 ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿದ್ದು, ಈಗ ವೆಚ್ಚವಷ್ಟೇ ನೀಡಲಾಗುತ್ತಿದೆ. 50 ಮಕ್ಕಳ ಶಾಲೆಗೆ ಒಂದು ಸಿಲಿಂಡರ್ ನೀಡುತ್ತಿದ್ದು, 17 ದಿನಗಳಲ್ಲಿ ಖಾಲಿಯಾಗುತ್ತಿದೆ. 20ರಿಂದ 30 ಮಕ್ಕಳಿರುವ ಶಾಲೆಗಳೇ ಹೆಚ್ಚಿವೆ. ಹಾಗಾಗಿ ಉಳಿದ ದಿನಗಳಿಗೆ ಶಿಕ್ಷಕರೇ ಉಪಾಯ ಹುಡುಕಬೇಕಾದ ಪರಿಸ್ಥಿತಿ ಇದೆ. 100ಕ್ಕಿಂತ ಅಧಿಕ ಮಕ್ಕಳಿದ್ದರೆ ತಿಂಗಳಿಗೆ 2 ಸಿಲಿಂಡರ್ ನೀಡುವ ಕಾರಣ ಈ ಸಮಸ್ಯೆಯಿಲ್ಲ.
ಇದರೊಂದಿಗೆ ಒಬ್ಬ ವಿದ್ಯಾರ್ಥಿಗೆ 4.97 ರೂ. ನಿಗದಿಪಡಿಸಿದ ಹಣದಲ್ಲಿ 910 ರೂ.ಗಳ ಅಡುಗೆ ಅನಿಲ, 60 ರೂ.ಗಳ ಟೊಮೆಟೊ, 45 ರೂ.ಗಳ ಈರುಳ್ಳಿ, 40-50 ರೂ.ಗಳ ಇತರ 2-3 ತರಕಾರಿ, ಕೆಜಿಗೆ 105 ರೂ.ಗಳಿರುವ ಬೇಳೆ, 180 ರೂ.ಗಳ ಎಣ್ಣೆಯಲ್ಲಿ ಪಾಲು ವಿಂಗಡಿಸಿ ಬಳಸಲು ಅನುದಾನ ಸಾಲದು. 10 ದಿನಕ್ಕೆ ಬೇಕಾಗುವಷ್ಟು ಗೋಧಿ ವಿತರಿಸುತ್ತಿದ್ದು ವಾರಕ್ಕೊಮ್ಮೆ ಪಾಯಸ, ಹುಗ್ಗಿ ಇತ್ಯಾದಿ ಮಾಡಬೇಕು. ಇದರ ವೆಚ್ಚಕ್ಕೂ ಪ್ರತ್ಯೇಕ ಅನುದಾನವಿಲ್ಲ. ಕೆಲವೆಡೆ ಸ್ಥಳೀಯವಾಗಿ ತರಕಾರಿ ಬೆಳೆಸಿ, ಕೆಲವೆಡೆ ಪೋಷಕರೇ ತರಕಾರಿ ನೀಡಿ ವೆಚ್ಚ ಸರಿದೂಗಿಸಲು ನೆರವಾಗುತ್ತಿದ್ದಾರೆ. ಉಳಿದೆಡೆ ಸಮಸ್ಯೆ ಮುಂದುವರಿದಿದೆ.
ಇದನ್ನೂ ಓದಿ:5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಪ್ರಮಾಣ ನಿಗದಿ
1ರಿಂದ 5ನೇ ತರಗತಿ ವರೆಗೆ 20 ಗ್ರಾಂ ಬೇಳೆ, 50 ಗ್ರಾಂ ತರಕಾರಿ, 5 ಗ್ರಾಂ ಎಣ್ಣೆ, 2 ಗ್ರಾಂ ಉಪ್ಪು, 6ರಿಂದ 10ನೇ ತರಗತಿವರೆಗೆ 30 ಗ್ರಾಂ ಬೇಳೆ, 75 ಗ್ರಾಂ ತರಕಾರಿ, 7.5 ಗ್ರಾಂ ಎಣ್ಣೆ, 4 ಗ್ರಾಂ ಉಪ್ಪು ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ 62,229 ಶಾಲೆಗಳಿದ್ದು 22,066 ಕಿರಿಯ ಪ್ರಾಥಮಿಕ, 25,220 ಉನ್ನತೀಕರಿಸಿದ, 8,653 ಮಾಧ್ಯಮಿಕ, 66 ಮದ್ರಸಾಗಳು ಸೇರಿ 56,037 ಅನುದಾನಿತ ಹಾಗೂ ಸರಕಾರಿ ಶಾಲೆಗಳಲ್ಲಿ ಬಿಸಿಯೂಟ ನೀಡಲಾಗುತ್ತದೆ.
ಹೀಗೆ ಮಾಡಬಹುದು
ಹಿ.ಪ್ರಾ. ಶಾಲೆಯಲ್ಲಿ ಅಡುಗೆ ತಯಾರಿಸಿ ಸುತ್ತಲಿನ ಕಿ.ಪ್ರಾ. ಶಾಲೆಗಳಿಗೆ ವಿತರಿಸಬಹುದು. ತಾಲೂಕು/ಕ್ಲಸ್ಟರ್ ಮಟ್ಟದಲ್ಲಿ ಸಂಸ್ಥೆಗಳಿಗೆ ಅಡುಗೆ ತಯಾರಿ ಗುತ್ತಿಗೆ ನೀಡಬಹುದು. ಹಾಪ್‌ಕಾಮ್ಸ್/ತೋಟಗಾರಿಕೆ ಇಲಾಖೆಗೆ ತರಕಾರಿ ಪೂರೈಕೆ ಹೊಣೆ ನೀಡಬಹುದು. ಆಗ ಕೆಎಂಎಫ್ ಹಾಲಿನ ಗುಣಮಟ್ಟಕ್ಕೆ ಖಾತ್ರಿ ನೀಡಿದಂತೆ ತರಕಾರಿಗಳ ಗುಣಮಟ್ಟ ಕಾಪಾಡಬಹುದು. ಕ್ಲಸ್ಟರ್ ಮಟ್ಟದಲ್ಲಿಯೂ ತರಕಾರಿ ಖರೀದಿಸಬಹುದು. ಪ್ರಸ್ತುತ ಸ್ಥಳೀಯ ಖರೀದಿಗೆ ಅನುದಾನ ನೀಡಿದಂತೆ ಕಡಿಮೆಯಾಗುವ ಮೊತ್ತ ಬಳಸಲು ಅನುಮತಿ ನೀಡಬಹುದು.
ಮುಂದಿನ ಸಭೆಯಲ್ಲೇ ತೀರ್ಮಾನ
ಬಿಸಿಯೂಟ ತಯಾರಿ ವೆಚ್ಚದಲ್ಲಿ ಅನನುಕೂಲ ಆಗುತ್ತಿರುವ ಕುರಿತು ಮುಂದಿನ ಶೈಕ್ಷಣಿಕ ಸಭೆಯಲ್ಲಿ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು.
– ಬಿ.ಸಿ. ನಾಗೇಶ್, ಶಿಕ್ಷಣ ಸಚಿವ
ವಿವಿಧ ಶಾಲೆಗಳಲ್ಲಿ ಇಂತಹ ಸಮಸ್ಯೆ ಗಮನಕ್ಕೆ ಬರುತ್ತಿದ್ದು ಪರಿಹಾರಕ್ಕೆ ಮುಂದಿನ ದಿನಗಳಲ್ಲಿ ಸಚಿವರ ಸೂಚನೆ ಯಂತೆ ಕ್ರಮ ಕೈಗೊಳ್ಳಲಾಗುವುದು.
– ಜಿ. ನಾರಾಯಣ ಗೌಡ,
ರಾಜ್ಯ ಜಂಟಿ ನಿರ್ದೇಶಕ, ಅಕ್ಷರದಾಸೋಹ ಕಾರ್ಯಕ್ರಮ
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.