ವಿಶೇಷ ವರದಿ: 20 ಲಕ್ಷ ರೂ. ಸಾಲದಲ್ಲಿ ಕೋವಿಡ್ ಆಸ್ಪತ್ರೆ !
ಆಕ್ಸಿಜನ್, ಸಲಕರಣೆ ಬಿಲ್ ಬಾಕಿ; 2 ಸಾವಿರ ಜನರಿಗೆ ಚಿಕಿತ್ಸೆ ಆಕ್ಸಿಜನ್, ಡೀಸೆಲ್ ಪೂರೈಕೆ ಸ್ಥಗಿತ ಭೀತಿ
Team Udayavani, Sep 16, 2020, 7:23 AM IST
ಕುಂದಾಪುರದಲ್ಲಿರುವ ಕೋವಿಡ್ ಆಸ್ಪತ್ರೆ.
ಕುಂದಾಪುರ: ರಾಜ್ಯದಲ್ಲೇ ಮೊದಲು ಆರಂಭಗೊಂಡ ತಾಲೂಕು ಮಟ್ಟದ ಕೋವಿಡ್ ಆಸ್ಪತ್ರೆ 20 ಲಕ್ಷ ರೂ. ಸಾಲದಲ್ಲಿದೆ. ಒಂದೆಡೆ ಸರಕಾರಿ ವೈದ್ಯಾಧಿಕಾರಿಗಳ ಮುಷ್ಕರ, ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳ ದುಬಾರಿ ಬಿಲ್, ಮಗದೊಂದೆಡೆ ಬಾರದ ಸರಕಾರಿ ಅನುದಾನದ ಮಧ್ಯೆ ಖಾಸಗಿಯವರಿಂದ ಸಾಲ ಮಾಡಿ ಇಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡೀಸೆಲ್, ಆಕ್ಸಿಜನ್, ಔಷಧ, ಉಪಕರಣ ಖರೀದಿ ಹೀಗೆ ಸುಮಾರು 20 ಲಕ್ಷ ರೂ.ಗಳ ಪಾವತಿಗೆ ಸರಕಾರದ ಮುಖ ನೋಡುತ್ತಿದೆ ಆಸ್ಪತ್ರೆ. ಅನುದಾನ ಬಾರದೇ ಇದ್ದರೆ ಆಕ್ಸಿಜನ್ ಪೂರೈಕೆ, ಡೀಸೆಲ್ ಪೂರೈಕೆ ಸ್ಥಗಿತಗೊಂಡರೆ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾಧ್ಯತೆಯಿದೆ.
ಮೊದಲ ಆಸ್ಪತ್ರೆ
ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲೇ ಕೋವಿಡ್ ಆಸ್ಪತ್ರೆಯಾಗಿ ಮಾಡಲು ಸರಕಾರ ಸೂಚನೆ ನೀಡಿತ್ತು. ರೋಗಲಕ್ಷಣ ರಹಿತ (ಎಸಿಂಪ್ಟಮೆಟಿಕ್) ರೋಗಿಗಳಿಗೆ ಚಿಕಿತ್ಸೆ ನೀಡಲು ತಾಲೂಕು ಮಟ್ಟ ದಲ್ಲೇ ಆಸ್ಪತ್ರೆ ತೆರೆಯಲು ಉಡುಪಿ ಜಿಲ್ಲಾಡಳಿತ ಪ್ರಶಂಸನೀಯ ನಿರ್ಧಾರ ಮಾಡಿತು.
ಕುಂದಾಪುರದಲ್ಲಿ ಉಪಯೋಗ ರಹಿತವಾಗಿದ್ದ ಹಳೆ ಆಸ್ಪತ್ರೆಯನ್ನು ಆದರ್ಶ ಆಸ್ಪತ್ರೆಯವರು ಬಿಟ್ಟುಕೊಟ್ಟರು. ಇದನ್ನು ಪುರಸಭೆ 3 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಗೊಳಿಸಿ ಆ ಐಸೋಲೇಶನ್ ಸೆಂಟರ್‌ನಲ್ಲಿ ರೋಗಿಗಳ ಮೇಲೆ ನಿಗಾ ಇಡಲಾಯಿತು. ಜಿ. ಶಂಕರ್ ಟ್ರಸ್ಟ್‌ನಿಂದ ಕಟ್ಟಿಸಿಕೊಟ್ಟ ಸರಕಾರಿ ಆಸ್ಪತ್ರೆಯ ಕಟ್ಟಡವನ್ನೇ ಮೇ 21ರಿಂದ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆಗೆ ಬಳಸಲಾಯಿತು. ಅದು ಸಾಲದಾದಾಗ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ, ಡಿಸಿ ಉಪಸ್ಥಿತಿಯಲ್ಲಿ ಇಡೀ ಸರಕಾರಿ ಆಸ್ಪತ್ರೆಯನ್ನೇ ಕೋವಿಡ್-19 ರೋಗಿಗಳಿಗೆ ಮೀಸಲಿಡಲಾಯಿತು. ಡಾ| ನಾಗೇಶ್ ನೇತೃತ್ವದ ತಂಡದ ಚಿಕಿತ್ಸೆಗೆ ಎಲ್ಲರೂ ಪ್ರಶಂಸಿಸುತ್ತಿದ್ದಾರೆ.
ಬಿಲ್ ಬಾಕಿ
ಜನರೇಟರ್ ಬಿಲ್, ಆಕ್ಸಿಜನ್ ಬಿಲ್, ಔಷಧ ಬಿಲ್, ಉಪಕರಣ ಖರೀದಿ ಬಿಲ್ ಹೀಗೆ ಸುಮಾರು 20 ಲಕ್ಷ ರೂ.ಗಳ ಬಿಲ್ ಪಾವತಿಗೆ ಬಾಕಿ ಇದೆ. ಸರಕಾರದಿಂದ ಈ ವರೆಗೆ ಬಂದ ಅನುದಾನ 50 ಸಾವಿರ ರೂ. ಮಾತ್ರ. 7 ಸಾವಿರ ಲೀ. ಸಾಮರ್ಥ್ಯದ ಆಕ್ಸಿಜನ್ ಸಿಲಿಂಡರ್ ಉಸಿರಾಟದ ತೊಂದರೆ ಇರುವ 50 ಮಂದಿಗೆ 30 ನಿಮಿಷಗಳ ಅವಧಿಗೆ ಬರುತ್ತದೆ. ಆಕ್ಸಿಜನ್ ಪೂರೈಸಿದ ಸಂಸ್ಥೆಗೆ 87 ಸಾವಿರ ರೂ. ಪಾವತಿಸಲಾಗಿದ್ದು ಇನ್ನು 2 ಲಕ್ಷ ರೂ. ಬಾಕಿ ಇದೆ. ವಿದ್ಯುತ್ ವ್ಯತ್ಯಯವಾದಾಗ ಜನರೇಟರ್ ಅವಶ್ಯವಿದ್ದು 3.87 ಲಕ್ಷ ರೂ. ಬಾಕಿಯಿದ್ದು ಜಿಲ್ಲಾಧಿಕಾರಿ ಖುದ್ದು ಸೂಚಿಸಿದ್ದರೂ ಇನ್ನೂ ಪಾವತಿಯಾಗಿಲ್ಲ. ಔಷಧಗಳು ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಯಿಂದ ಹಾಗೂ ಮಂಗಳೂರಿನ ಔಷಧ ಸರಬರಾಜು ಸಂಸ್ಥೆಯಿಂದ ಸರಬರಾಜು ಆಗುತ್ತಿದ್ದರೂ ಕೆಲವೊಂದು ಅನಿವಾರ್ಯ, ತುರ್ತು ಔಷಧಗಳನ್ನು ಖರೀದಿಸಬೇಕಾಗುತ್ತದೆ. ಈ ಬಾಬ್ತು 3.72 ಲಕ್ಷ ರೂ. ಪಾವತಿಯೇ ಆಗಿಲ್ಲ. ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿದ್ದಕ್ಕಾಗಿ ಸುಮಾರು 4 ಲಕ್ಷ ರೂ. ಪಾವತಿಸಬೇಕಿದೆ.
ವೈದ್ಯರ ರಾಜೀನಾಮೆ
ಆರೋಗ್ಯ ಇಲಾಖೆ ಹೆಚ್ಚುವರಿಯಾಗಿ 10 ನರ್ಸ್, 9 ಮಂದಿ ಡಿ ದರ್ಜೆ ಸಹಾಯಕರನ್ನು ನೀಡಿದ್ದು ಇಬ್ಬರು ವೈದ್ಯರನ್ನು ಸೇವೆಗೆ ನಿಯೋಜಿಸಿತ್ತು. ಆ ಇಬ್ಬರು ವೈದ್ಯರೂ ರಾಜೀನಾಮೆ ನೀಡಿದ್ದಾರೆ. ಈಗ ಇಲ್ಲಿನ ಸರಕಾರಿ ಆಸ್ಪತ್ರೆಯ ವೈದ್ಯರ ತಂಡವೇ ಕಾರ್ಯನಿರ್ವಹಿಸುತ್ತಿದೆ. ನ್ಯಾಶನಲ್ ಫ್ರೀ ಡ್ರಗ್ ಸಪ್ಲೆ„ (ಎನ್‌ಎಫ್ಡಿಎಸ್) ಹಣದಿಂದ ಔಷಧ ಖರೀದಿ, ಸ್ಟೇಟ್ ಡಿಸಾಸ್ಟರ್ ರೆಸ್ಪಾನ್ಸ್ ಫಂಡ್‌ನಿಂದ (ಎಸ್‌ಡಿಆರ್‌ಎಫ್) ಹಣ ನೀಡಲು ಅವಕಾಶ ಇದೆ.
2 ಸಾವಿರ ರೋಗಿಗಳು
ಮೇ 21ರಿಂದ ಸೆ.15ರ ವರೆಗೆ ಇಲ್ಲಿ 2,033 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 8 ಮಂದಿ ತೀವ್ರತೆರನಾದ ಲಕ್ಷಣಗಳಿಂದ, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದು 112 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. 120 ಮಂದಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ 50 ಮಂದಿಗೆ ಆಕ್ಸಿಜನ್ ಬೆಡ್‌ನಲ್ಲಿ, 7 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆಯಿದೆ. ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಇಳಿತವೇ ಆಗದೇ ಒಂದೇ ದರದಲ್ಲಿದೆ. ಒಂದು ವಾರದ ಈ ಅಂಕಿಅಂಶ ಗಮನಿಸಿ; ಸೆ.8ರಂದು 15 ಮಂದಿ ದಾಖಲಾಗಿ 17 ಮಂದಿ ಆಸ್ಪತ್ರೆಯಿಂದ ಮರಳಿದ್ದು, ಸೆ.9ರಂದು 5 (5), ಸೆ.10ರಂದು 10 (18), ಸೆ. 11ರಂದು 2 (0) , ಸೆ.12ರಂದು 9 (6), ಸೆ. 13ರಂದು 6 (13), ಸೆ.14ರಂದು 12 ಮಂದಿ ದಾಖಲಾಗಿ 6 ಮಂದಿ ಡಿಸಾcರ್ಜ್ ಆಗಿದ್ದಾರೆ. ರೋಗದ ಪ್ರಮಾಣ ಇಳಿದಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
ಸೂಚಿಸಲಾಗಿದೆ
ಡೀಸೆಲ್ ಬಿಲ್ ಪಾವತಿಗೆ ಸೂಚಿಸಲಾಗಿದ್ದು ಖಜಾನೆಗೆ ಹೋಗಿದೆ. ಆಕ್ಸಿಜನ್ ಬಿಲ್ ಪಾವತಿಸಲಾಗುವುದು. ಕೋವಿಡ್ ಸಂಬಂಧಿತ ಚಿಕಿತ್ಸೆಗೆ ಹಣಕಾಸಿನ ತೊಂದರೆ ಇಲ್ಲ. ಭೀತಿ ಅನಗತ್ಯ. ಯಾಕೆ ಬಾಕಿ ಆಗಿದೆ ಎಂದು ತಿಳಿದಿಲ್ಲ, ಪರಿಶೀಲಿಸಲಾಗುವುದು.
– ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ
ವ್ಯವಸ್ಥೆಯಿದೆ
ವೈದ್ಯರು, ನರ್ಸ್, “ಡಿ’ ದರ್ಜೆ ಸಿಬಂದಿ ಎಲ್ಲವೂ ಸಮರ್ಪಕವಾಗಿದೆ. ಚಿಕಿತ್ಸೆಗೆ ಯಾವುದೇ ತೊಂದರೆ ಇಲ್ಲ. ಔಷಧ ಸರಬರಾಜು ಕೂಡಾ ನಿಯಮಿತವಾಗಿ ಆಗುತ್ತಿದ್ದು ಕೊರತೆಯಾದರೆ ಎನ್‌ಎಫ್ಡಿಎಸ್ ಮೂಲಕ ಭರಿಸಲಾಗುತ್ತಿದೆ.
– ಡಾ| ರಾಬರ್ಟ್ ರೆಬೆಲ್ಲೋ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ, ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.