ತಲೆ ಎತ್ತುತ್ತಿವೆ ಅನಧಿಕೃತ ಪ್ರೊಟೀನ್ ಕೇಂದ್ರಗಳು: ತೂಕ ಇಳಿಸಲು ಹೋಗಿ ಹೃದಯಾಘಾತ!
Team Udayavani, Oct 8, 2023, 7:15 AM IST
ಕುಂದಾಪುರ: ತೂಕ ಹೆಚ್ಚಿಸಲು ಹಾಗೂ ಇಳಿಸಲು ಅನಧಿಕೃತವಾಗಿ ಪ್ರೊಟೀನ್ ಹಾಗೂ ಇತರ ಉತ್ಪನ್ನಗಳನ್ನು ಮಾರುವ ಕೇಂದ್ರಗಳು ಹಲವೆಡೆ ಹೆಚ್ಚಾಗುತ್ತಿದೆ.
ಕುಂದಾಪುರ ನಗರ ದಲ್ಲೂ ದಿಢೀರನೇ ಇಂಥ ಆರು ಕೇಂದ್ರಗಳು ಆರಂಭವಾಗಿವೆ. ಯಾವುದೇ ಪೂರ್ವ ಆರೋಗ್ಯ ಸಮಸ್ಯೆಗಳಿಲ್ಲದ ವ್ಯಕ್ತಿಗಳು ಇಂತಹ ಕೇಂದ್ರಗಳ ಜನರ ಮಾತಿನ ಮೋಡಿಗೆ ಬಲಿಯಾಗುತ್ತಿದ್ದಾರೆ. ಒಂದ್ಹತ್ತು ನಿಮಿಷ ಧ್ಯಾನ ಮಾಡಿ, ಕೈಕಾಲು ಆಡಿಸಿ, ವ್ಯಾಯಾಮ ಮಾಡಿ ಎಂದು ಹೇಳಿ ಅವರು ನೀಡುವ ಪ್ರೊಟೀನ್ ಪೌಡರ್ ಸೇವಿಸಲು ಹೇಳಿದಲ್ಲಿಗೆ ತೆರಳುತ್ತಾರೆ; ಬೆಳಗ್ಗೆ ಬೇಗ ಆರಂಭವಾಗುವ ಇಂತಹ ಕೇಂದ್ರಗಳು 10 ಗಂಟೆಯೊಳಗೆ ತಮ್ಮ ಮಾರಾಟದ ಗುರಿಯನ್ನು ಹೊಂದಿರುತ್ತವೆ. ಇಂತಹ ಮಾರಾಟದ ಸರಕುಗಳು, ಪ್ರವಚನಗಳು ಆನ್‌ಲೈನ್ ಮೂಲಕವೂ ನಡೆಯುತ್ತವೆ. ಇದಕ್ಕೆ ಗ್ರಾಹಕರನ್ನು ಕರೆತರುವವರಿಗೆ ಕಮೀಷನ್ ನೀಡುವುದರ ಜತೆಗೆ ಎಲ್ಲ ಬಗೆಯ ಮಾರಾಟ ತಂತ್ರಗಳನ್ನು ಬಳಸುವುದು ಬೆಳಕಿಗೆ ಬಂದಿದೆ. ಆತಂಕದ ಸಂಗತಿಯೆಂದರೆ ಕುಂದಾಪುರದಲ್ಲೂ ಇಂಥ ಹಲವು ಕೇಂದ್ರಗಳಿವೆ.
ಅನಧಿಕೃತ ಪೌಡರ್
ಆರೋಗ್ಯ ಸುಧಾರಣೆಯಿಂದ ಬೊಜ್ಜು ಕರಗಿಸುವವರೆಗೂ ವಿವಿಧ ಕಾರಣಗಳಿಗೆ ಪೌಷ್ಟಿಕ ಎನ್ನಲಾಗುವ ಅನಧಿಕೃತ ಪೌಡರ್ ನೀಡಲಾಗುತ್ತದೆ. ವಾಸ್ತವವಾಗಿ ಆಧುನಿಕ ಔಷಧಗಳು ಕೇಂದ್ರೀಯ ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ ಅನುಮೋದನೆ ಪಡೆದಿರುತ್ತವೆ. ಆದರೆ ಈ ಅನಧಿಕೃತ ಪೌಡರ್‌ಗಳನ್ನು ಆಹಾರ ಉತ್ಪನ್ನಗಳೆಂದು ನೀಡುತ್ತಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನಿಯಂತ್ರಿಸಲ್ಪಡುತ್ತದೆ. ಕಟ್ಟುನಿಟ್ಟಿನ ನಿಯಮಗಳಿಂದ ತಪ್ಪಿಸಿಕೊಳ್ಳುತ್ತಿದೆ.
ಇಂಥ ಆಹಾರದ ಪೌಡರ್ ಡಬ್ಬಗಳನ್ನು 300 ರೂ.ಗಳಿಂದ 7 ಸಾವಿರ ರೂ.ವರೆಗೆ ಮಾರಲಾಗುತ್ತಿದೆ. ಇವುಗಳ ಮಾರಾಟದ ಮೇಲೆ ಏಜೆಂಟರಿಗೆ ಕಮಿಷನ್ ಇರುತ್ತದೆ. ಉಚಿತ ತರಗತಿ ಎಂಬ ಹೆಸರಿನಲ್ಲೂ ಕೆಲವು ಪ್ರಮಾಣಪತ್ರವಿಲ್ಲದ, ಅಧಿಕೃತವಲ್ಲದ, ತಯಾರಕರು, ಮಾರಾಟಗಾರರ ವಿವರವೂ ಇಲ್ಲದಂಥ ಪೌಷ್ಟಿಕ ಪೌಡರ್‌ಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಜಾಗೃತಿ ಅವಶ್ಯ
ನಿಷೇಧಿತ ಔಷಧ, ಸ್ಟಿರಾಯಿಡ್‌ನಂತಹವುಗಳನ್ನು ಇಂತಹ ಪೌಡರ್‌ನಲ್ಲಿ ಮಿಶ್ರ ಮಾಡುತ್ತಾರೆ ಎಂಬ ಸಂಶಯವೂ ಇದೆ. ಇವು ಒಮ್ಮೆ ರೋಗವನ್ನು ಕಡಿಮೆ ಮಾಡಿದಂತೆ ಕಂಡರೂ ದೀರ್ಘಕಾಲಿಕವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಆಹಾರ ಸುರಕ್ಷತ ಅಧಿಕಾರಿ, ಔಷಧ ನಿಯಂತ್ರಕರು ಈ ಬಗ್ಗೆ ಪರಿಶೀಲನೆ ನಡೆಸಬೇಕು ಎನ್ನುತ್ತಾರೆ ನಿವೃತ್ತ ಸೇನಾಧಿಕಾರಿ ಕ್ಯಾ| ಗೋವರ್ಧನ್ ಕುಂದಾಪುರ.
ನಿಯಂತ್ರಣ
ಕೇಂದ್ರ ಸರಕಾರವು ಈ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೇಲೆ ಕಟ್ಟುನಿಟ್ಟಾದ ಜಾಗರೂಕತೆಗಾಗಿ ರಾಜ್ಯಗಳ ಬಳಿ ಮಾಹಿತಿ ಕೇಳಿತ್ತು. ಈ ವರ್ಷ ಮಾ. 31ರೊಳಗೆ ರಾಜ್ಯಗಳು ಈ ಬಗ್ಗೆ ನಡೆದ ಕಾರ್ಯತತ್ಪರತೆಯ ವರದಿ ಸಲ್ಲಿಸಬೇಕಿತ್ತು. ಆದರೆ ಕರ್ನಾಟಕ ಇದುವರೆಗೆ ಪೌಷ್ಟಿಕ ಆಹಾರದ ನಿಯಂತ್ರಣಕ್ಕೆ ಚಾಲನೆ ನೀಡಿಲ್ಲ. ಇದನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯದ ಆಹಾರ ಸುರಕ್ಷತೆ ಆಯುಕ್ತೆ ಶಾಮಲಾ ಇಕ್ಬಾಲ್ ಇತ್ತೀಚೆಗೆ ಹೇಳಿದ್ದರು.
ವಿಟಮಿನ್‌ಗಳು ಹಾಗೂ ಪ್ರೊಟೀನ್‌ಗಳು ಅಗತ್ಯಕ್ಕಿಂತ ಹೆಚ್ಚು ಸೇವಿಸಲ್ಪಟ್ಟರೆ ದೇಹದ ಮೇಲೆ ಪರಿಣಾಮ ಬೀರುತ್ತವೆ. ತೂಕ ಇಳಿಸಲು, ಹೆಚ್ಚಿಸಲು ಅವೈಜ್ಞಾನಿಕ ವಿಧಾನವನ್ನು ಬಳಸಬಾರದು. ಈಗ ಹೆಚ್ಚಾಗಿ ಚಾಲ್ತಿಯಲ್ಲಿರುವ ಪೌಷ್ಟಿಕ ಆಹಾರ ಸೇವನೆ ಹೃದಯಾಘಾತ, ಕಿಡ್ನಿ, ಲಿವರ್ ಮೊದಲಾದ ಅಂಗಾಂಗ ವೈಫಲ್ಯದಂತಹ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇವುಗಳ ನಿಯಂತ್ರಣ ಅಗತ್ಯ. ಜನರೂ ಇಂತಹವುಗಳ ಬಳಕೆಗೆ ಮುನ್ನ ಪರಿಣತರ ಸಲಹೆ ಪಡೆಯಬೇಕು.
-ಡಾ| ನಾಗೇಶ್, ಫಿಸಿಶಿಯನ್, ಉಪವಿಭಾಗ ಸರಕಾರಿ ಆಸ್ಪತ್ರೆ, ಕುಂದಾಪುರ
ಫಿಟ್‌ನೆಸ್ ಕೇಂದ್ರ, ಆಹಾರ ಪದಾರ್ಥ ಮಾರಾಟ ಎಂದು ಕೆಲವರು ವಾಣಿಜ್ಯ ಪರವಾನಗಿ ಪಡೆಯುತ್ತಾರೆ. ಜನರ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುವಂತಹ ಕೇಂದ್ರಗಳೆಂಬ ಮಾಹಿತಿ ಇದ್ದರೆ ನಾವು ಪರವಾನಗಿ ನೀಡುವುದಿಲ್ಲ. ಸಂಶಯ ಬಂದರೆ ಅಂತಹ ಕೇಂದ್ರಗಳನ್ನು ಪರಿಶೀಲಿಸುತ್ತೇವೆ.
-ರಾಘವೇಂದ್ರ ನಾಯ್ಕ , ಆರೋಗ್ಯ ನಿರೀಕ್ಷಕರು, ಪುರಸಭೆ ಕುಂದಾಪುರ
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.