ಉಪ್ಪುಂದ: ಅಭಿವೃದ್ಧಿಯ ಬೂಸ್ಟರ್ ಡೋಸ್ ಬೇಕಾಗಿದೆ!
ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗುತ್ತಿರುವ ಗ್ರಾಮ
Team Udayavani, Jul 18, 2022, 12:20 PM IST
ಉಪ್ಪುಂದ: ಉಪ್ಪುಂದ ಗ್ರಾಮ ಪ್ರಧಾನವಾಗಿ ಬೆಳೆಯುತ್ತಿರುವ ಪ್ರದೇಶ. ಇದಕ್ಕೆ ಪೂರಕವಾಗಿರುವ ಉಪ್ಪುಂದ ಪೇಟೆ ದಿನೇ ದಿನೇ ಆರ್ಥಿಕ ಚಟುವಟಿಕೆಯ ತಾಣವಾಗಿ ಮಾರ್ಪಡುತ್ತಿದೆ. ಇಂಥ ಪ್ರದೇಶಕ್ಕೀಗ ದೂರದೃಷ್ಟಿಯುಳ್ಳ ಯೋಜನೆಗಳ ಆರೈಕೆ ಬೇಕಾಗಿದೆ.
ಹಿಂದೆ ಉಪ್ಪನ್ನು ಉತ್ಪಾದಿಸುವ ಈ ಪ್ರದೇಶ ಉಪ್ಪುಗುಂದವಾಗಿತ್ತು. ಕ್ರಮೇಣ ಉಪ್ಪುಗುಂದ ಜನ ಬಳಕೆಯಲ್ಲಿ ಉಪ್ಪುಂದವಾಯಿತು. ಉಪ್ಪಿನಕೋಟೆ ಎಂಬ ಹೆಸರಿನ ಪ್ರದೇಶ ಈಗಲೂ ಉಳಿದಿದೆ. ಈ ಪ್ರದೇಶ ನೂತನ ಬೈಂದೂರು ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡಿದೆ.
ಉಪ್ಪುಂದ ಪೇಟೆಯಲ್ಲಿ ಮೂಡುಗಣಪತಿ ದೇವಸ್ಥಾನ, ಆನೆಗಣಪತಿ ದೇವಸ್ಥಾನ ಇದ್ದರೆ ಸುಮಾನವತಿಯ ನದಿ ತಟದಲ್ಲಿ ಪುರಾಣ ಪ್ರಸಿದ್ಧ ಶೀÅ ದುರ್ಗಾಪರಮೇಶ್ವರಿ ದೇವಸ್ಥಾನದವಿದೆ. ತೆಂಗು, ಬಾಳೆ, ಅಡಿಕೆ ತೋಟ,ಭತ್ತ, ಶೇಂಗಾ ಪ್ರಮುಖವಾಗಿ ಬೆಳೆಯುತ್ತಾರೆ. ಸರ್ಜಿಕಲ್ ಫ್ಯಾಕ್ಟರಿ, ನೆಲಗಡಲೆ ಸಂಸ್ಕರಣ ಘಟಕವೂ ಇದೆ.
ಎರಡು ಅಂಗನವಾಡಿ ಕೇಂದ್ರ, 1 ಸರಕಾರಿ ಹಿ.ಪ್ರಾ. ಶಾಲೆ, 1 ಸರಕಾರಿ ಪ್ರೌಢ ಶಾಲೆ, 1 ಖಾಸಗಿ ಆಂಗ್ಲ. ಮಾಧ್ಯಮ ಶಾಲೆ, 1ಸರಕಾರಿ ಪಿಯು ಕಾಲೇಜು, 2 ಬ್ಯಾಂಕ್, 10 ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು, 1 ಹಾಲು ಉತ್ಪಾದಕರ ಸಹಕಾರಿ ಸಂಘ ಕಾರ್ಯ ನಿರ್ವ ಹಿಸುತ್ತಿದೆ. ಜನಸಂಖ್ಯೆ; 4500, ಮನೆಗಳು 450. ಗ್ರಾಮವು ಕೆಲವೇ ವರ್ಷದಲ್ಲಿ ಸಾಕಷ್ಟು ಬದಲಾಗಿದೆ. ವಾಣಿಜ್ಯ ಕಟ್ಟಡಗಳ ಸಂಖ್ಯೆಯೂ ಹೆಚ್ಚಾಗಿದ್ದು, ವಾಹನ ದಟ್ಟಣೆಯೂ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಬೇಡಿಕೆಗಳ ಪಟ್ಟಿಯೂ ಬೆಳೆಯುತ್ತಿದೆ.
ಮೊದಲ ಸಮಸ್ಯೆ
ಎಂಬ್ಯಾಕ್‌ವೆುಂಟ್ ನಿರ್ಮಾಣದಿಂದ ಪೇಟೆ ಯನ್ನು ಎರಡು ಇಬ್ಭಾಗ ಮಾಡಿದಂತಾಗಿದೆ. ಪೇಟೆಯೇ ಪ್ರಮುಖ ಜಂಕ್ಷನ್. ಅಲ್ಲಿ ಬಸ್ ನಿಲ್ದಾಣ ಅಗತ್ಯವಿತ್ತು. ದೂರದೃಷ್ಟಿತ್ವದ ಕೊರತೆಯಿಂದಾಗಿ ಜಾಗದ ಅಭಾವದಿಂದ ಅದು ಸಾಧ್ಯವಿಲ್ಲದಂತಾಗಿದೆ. ಈ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ.
ಉಪ್ಪುಂದ ಪೇಟೆ ಹತ್ತಾರು ಪ್ರದೇಶಗಳಿಗೆ ಮುಖ್ಯ ವಾದ ಸಂಪರ್ಕ ಕೊಂಡಿ. ಬಿಜೂರು, ಸಾಲಿಮಕ್ಕಿ, ಕಂಚಿಕಾನ್, ಮಡಿಕಲ್, ಕರ್ಕಿಕಳಿ,ತಾರಾಪತಿ, ಅಳ್ವೆಕೋಡಿ, ನಂದನವನ, ಬೊಳ್ಳಂಬಳ್ಳಿ, ಕೆರ್ಗಾಲು, ನಾಯ್ಕನಕಟ್ಟೆ ಪ್ರದೇಶಗಳ ಜನರಿಗೆ ಅಗತ್ಯ ವಸ್ತು ಗಳ ಪೂರೈಕೆಯ ಕೇಂದ್ರ ಬಿಂದುವಾಗಿದೆ. ಆದ ಕಾರಣ ಹೆಚ್ಚು ಮೂಲ ಸೌಕರ್ಯ ಅಗತ್ಯ.
ವಾಹನ ದಟ್ಟಣೆ ಮತ್ತು ನಿಲುಗಡೆ
ಮಿನಿ ನಗರವಾಗಿ ಬೆಳೆಯುತ್ತಿರುವ ಈ ಗ್ರಾಮದಲ್ಲಿ ರಾ.ಹೆದ್ದಾರಿ ಹಾದು ಹೋಗುತ್ತದೆ. ಸರ್ವೀಸ್ ರಸ್ತೆಗೆ ಹೊಂದಿಕೊಂಡು ಮೀನು ಮಾರುಕಟ್ಟೆ ಹಾಗೂ ಸಂತೆ ಮಾರ್ಕೆಟ್ ನಿರ್ಮಿಸಲಾಗಿದೆ. ಹೀಗಾಗಿ ವಾಹನಗಳ ಸಂಖ್ಯೆ ಹೆಚ್ಚು. ಈ ಹಿನ್ನೆಲೆಯಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆಯಾಗಬೇಕು. ಚತುಷ್ಪಥ ರಸ್ತೆ ಕಾಮಗಾರಿಯಿಂದಾಗಿ ರಿಕ್ಷಾ ನಿಲ್ದಾಣವೂ ತೆರವಾದ ಪರಿಣಾಮ ಪ್ರಸ್ತುತ ಪೇಟೆಯ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗುತ್ತಿದೆ. ಜಾಗದ ಕೊರತೆಯಿಂದ ಅಟೋ ನಿಲ್ದಾಣವೂ ಸಾಧ್ಯವಾಗುತ್ತಿಲ್ಲ, ಜನಪ್ರತಿನಿಧಿಗಳು ಈ ಎರಡೂ ಸಮಸ್ಯೆಗಳತ್ತ ಗಮನಹರಿಸಬೇಕಿದೆ.
ತಪ್ಪದ ಗೋಳು
ಪೇಟೆಯಲ್ಲಿ 5 ವರ್ಷಗಳ ಹಿಂದೆ ಆರಂಭವಾದ ಚರಂಡಿ ಕಾಮಗಾರಿ ಈ ವರ್ಷದ ಮಳೆಗಾಲಕ್ಕೆ ಮುನ್ನ ಮುಗಿಯುವುದೆಂದು ನಿರೀಕ್ಷಿಸಲಾಗಿತ್ತು. ಅದೂ ಹುಸಿಯಾಗಿದೆ. ಅರೆಬರೆ ಕೆಲಸ ಮಾಡಿದ್ದು ಅಲ್ಲಲ್ಲಿ ಸಿಮೆಂಟ್ ಸ್ಲ್ಯಾಬ್ ಮುಚ್ಚಿಲ್ಲ. ಕೆಲವೆಡೆ ಸಿಮೆಂಟ್ ಸ್ಲ್ಯಾಬ್‌ನ ಬದಿಗೆ ಮಣ್ಣು ಹಾಕಿರುವುದು ಕುಸಿದು ಹೋಗಿದೆ. ವ್ಯವಸ್ಥಿತವಾಗಿ ಮುಗಿಸಬೇಕಿದ್ದ ಚರಂಡಿ ಕಾಮಗಾರಿ ಇನ್ನೂ ಅಪೂರ್ಣವಾಗಿದೆ.
ಇನ್ನಷ್ಟು ಬೇಡಿಕೆಗಳು
ಉಪ್ಪುಂದ ವಾರದ ಸಂತೆಗೆ ಸುಮಾರು ಐದು ಸಾವಿರ ಮಂದಿ ಪಾಲ್ಗೊಳ್ಳುತ್ತಾರೆ. ದಿನವಿಡೀ ಜನಜಂಗುಳಿ. ರಸ್ತೆಯೂ ಹೆಚ್ಚು ಅಗಲವಿಲ್ಲದ್ದರಿಂದ ವಾಹನಗಳು ರಸ್ತೆಯಲ್ಲಿ ನಿಂತಾಗ ಟ್ರಾಫಿಕ್ ಜಾಮ್ ಆಗುತ್ತಿದೆ. ದೂರದ ಊರುಗಳಿಂದ ವ್ಯಾಪಾರಸ್ಥರು ಬರುವುದಲ್ಲದೇ, ಹತ್ತಿರದ ಗ್ರಾಮಗಳ ಗ್ರಾಹಕರೂ ಬರುತ್ತಾರೆ. ಜನಜಂಗುಳಿ ಮತ್ತು ಅವ್ಯವಸ್ಥೆಯಿಂದ ತಪ್ಪಿಸಿ ಕುಡಿಯುವ ನೀರೂ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಿ ಸುಸಜ್ಜಿತ ಸಂತೆಯನ್ನಾಗಿ ಮಾರ್ಪಡಿಸಬೇಕಿದೆ. ಪೇಟೆಯಿಂದ ಮಡಿಕಲ್ ಸಂಪರ್ಕಿಸುವ ರಸ್ತೆಯು ಆರಂಭದಲ್ಲೇ ಹಾಳಾಗಿದೆ. ಅದು ಕೂಡಲೇ ದುರಸ್ತಿಯಾಗಬೇಕಿದೆ. ಅಂಬಾಗಿಲು ಪೇಟೆಯ ರಸ್ತೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಸ್ತೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆ ಮೇಲೆ ಹರಿಯುತ್ತದೆ. ರಥಬೀದಿಯಲ್ಲಿ ಇರುವ ಅಂಗನವಾಡಿ ಕೇಂದ್ರದಲ್ಲಿ ಮಳೆ ನೀರು ಸೋರುತ್ತಿದೆ. ಇವುಗಳಿಗೂ ಪರಿಹಾರ ಹುಡುಕಬೇಕು.
ಬೀಡಾಡಿ ಜಾನುವಾರುಗಳ ಹಾವಳಿ: ಗ್ರಾಮದಲ್ಲಿ ಬೀಡಾಡಿ ಜಾನುವಾರುಗಳ ಹಾವಳಿಂದ ಕೃಷಿಕರು ಬೇಸತ್ತು ಹೋಗಿದ್ದಾರೆ. ಬೀಡಾಡಿ ಜಾನುವಾರುಗಳ ಸಮಸ್ಯೆಗೆ ಜಿಲ್ಲಾಡಳಿತ ಗೋ ಶಾಲೆ ನಿರ್ಮಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಾವಿರಾರು ಎಕ್ರೆ ಕೃಷಿ ಭೂಮಿಗಳು ಹಡಿಲು ಬೀಳಲಿದೆ. –ಸಂದೇಶ್ ಭಟ್, ಉಪ್ಪುಂದ
ಕಸ ಮುಕ್ತ ಗಾಮ ಸಂಕಲ್ಪ: ಗ್ರಾಮದ ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡಲಾಗಿದೆ.ಅಂಗಡಿ, ಮನೆಗಳಿಗೆ ತೆರಳಿ ಕಸ ಸಂಗ್ರಹಿಸುವ ಮೂಲಕ ಕಸ ಮುಕ್ತ ಗಾಮಕ್ಕೆ ಸಂಕಲ್ಪ ಮಾಡಲಾಗಿದೆ. ಸುಬ್ಬರಡಿಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಡ್ಯಾಂನಿಂದಾಗಿ ಗ್ರಾಮದ ಕೃಷಿ, ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆ.ಉದ್ಯೋಗ ಖಾತರಿ ಯೋಜನೆ ಗ್ರಾಮದ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. –ದಿವಾಕರ ಶೆಟ್ಟಿ, ಉಪಾಧ್ಯಕ್ಷರು, ಗ್ರಾ.ಪಂ.
-ಕೃಷ್ಣ ಬಿಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಜಾಗದ ತಕರಾರು; ತಂಡವೊಂದರಿಂದ ವ್ಯಕ್ತಿಗೆ ಗಾಯ, ಪರಸ್ಪರ ದೂರು ದಾಖಲು
Trasi: ಮನೆಯಿಂದ ಚಿನ್ನಾಭರಣ ಕಳವು ಪ್ರಕರಣ; ಕೃತ್ಯ ನಡೆದ ಏಳೇ ಗಂಟೆಯಲ್ಲೇ ಖದೀಮರ ಬಂಧನ
Kundapura: ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಆಟೋ ರಿಕ್ಷಾ ಢಿಕ್ಕಿ: ಸಾವು
Lokayukta Raid: ಗಂಗೊಳ್ಳಿ ಪಿಡಿಒ, ಕ್ಲರ್ಕ್ ಲೋಕಾಯುಕ್ತ ಬಲೆಗೆ
Kundapura: ತಗ್ಗುಂಜೆಯಲ್ಲಿ ಅಪೂರ್ವ ಉಮಾಮಹೇಶ್ವರ ಶಿಲ್ಪ ಪತ್ತೆ