ರೈತರ ಗದ್ದೆಗೆ ಇನ್ನೂ ಹರಿದಿಲ್ಲ ವಾರಾಹಿ ನೀರು
1979ರಲ್ಲಿ ವಾರಾಹಿ ಯೋಜನೆ ಆರಂಭ , 42 ವರ್ಷಗಳು ಕಳೆದರೂ ಸಮಯಕ್ಕೆ ದೊರಕದ ಎಡದಂಡೆ ನೀರು
Team Udayavani, Dec 17, 2021, 8:00 AM IST
ಕುಂದಾಪುರ: ಸಕಾಲದಲ್ಲಿ ಬಂದ ಮಳೆ ಅಕಾಲದಲ್ಲಿಲ್ಲೂ ಸುರಿದು ಚಂಡಮಾರುತದ ದೆಸೆಯಿಂದ ಇನ್ನಷ್ಟು ಹಾನಿ ಮಾಡಿದ್ದು ಈ ವರ್ಷ ಕೃಷಿಕರ ಪಾಲಿಗೆ ಹೊಡೆತ. ಭತ್ತದ ಕೃಷಿಗೆ ಅಪಾರ ಹಾನಿಯಾಗಿದ್ದು ಮೊದಲ ಬೆಳೆ ಬೆಳೆದ ರೈತನ ಭತ್ತ ಕಟಾವು ಮಾಡಲು ಸಾಧ್ಯವಾಗದೆ ಗದ್ದೆಯಲ್ಲೇ ಮತ್ತೆ ಮೊಳಕೆಯೊಡೆದ ಉದಾಹರಣೆಯೂ ಇದೆ. ಇಂತಹ ಸನ್ನಿವೇಶದಲ್ಲಿ ಎರಡನೇ ಬೆಳೆಯಾದರೂ ಸರಿಯಾಗಿ ಮಾಡಬಹುದೇ ಎಂಬ ನಿರೀಕ್ಷೆಯಲ್ಲಿ ಇರುವ ರೈತನ ಪಾಲಿಗೆ ವಾರಾಹಿ ನೀರಾವರಿ ನಿಗಮ ಇನ್ನೂ ಕಣ್ತೆರೆದಿಲ್ಲ.
ನೀರು ಹರಿಸಿಲ್ಲ:
ವಾರಾಹಿ ನೀರಾವರಿ ಯೋಜನೆಯ ಮೂಲಕ ಹಿಂಗಾರು ಕೃಷಿಗೆ ಮತ್ತು ತೋಟಗಾರಿಕೆ ಮತ್ತು ಇತರ ಕೃಷಿ ಉದ್ದೇಶಗಳಿಗೆ ಪ್ರತೀ ವರ್ಷ ಡಿಸೆಂಬರ್ 1ರಂದು ಕಾಲುವೆಗೆ ನೀರು ಹಾಯಿಸುವುದಾಗಿ ಇಲಾಖೆ ಈ ಹಿಂದೆ ಭರವಸೆ ನೀಡಿತ್ತು.ಆದರೆ ಈ ವರ್ಷ ಈ ತನಕ ಕಾಲುವೆಗೆ ನೀರು ಹಾಯಿಸಿಲ್ಲ. ಭತ್ತದ 2ನೇ ಬೆಳೆ ಬಿತ್ತನೆ ಸೇರಿದಂತೆ ಮುಂದುವರಿದ ಕೃಷಿ ಚಟುವಟಿಕೆಗೆ ವಾರಾಹಿ ಕಾಲುವೆ ನೀರು ಅಗತ್ಯವಾಗಿದೆ. ಮೊದಲ ನಾಲ್ಕು ವರ್ಷ ಪ್ರತೀ ಸಲ ಡಿ.1ರ ಅಂದಾಜಿಗೆ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿತ್ತು. 2019ರಲ್ಲಿ ಡಿ. 15ರ ಅಂದಾಜಿಗೆ ನೀರು ಬಿಡಲಾಗಿತ್ತು. ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ನೀರು ಹರಿದಿತ್ತು. ಈ ಬಾರಿ ಇನ್ನೂ ದಿನ ಘೋಷಿಸಿಲ್ಲ.
ರೈತರಲ್ಲಿ ಆತಂಕ:
ಮುಂಗಾರು ಭತ್ತದ ಬೆಳೆ ಬೆಳೆದು ಅಕಾಲಿಕ ಮಳೆಯಿಂದ ರೈತರು ನಷ್ಟ ಅನುಭವಿಸಿದ್ದು, ಹಿಂಗಾರು ಬೆಳೆಗೆ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಭತ್ತದ ಸಸಿ ಸಹ ತಯಾರಿ ಮಾಡಿಕೊಂಡಾಗಿದೆ. ಇತರ ಕೃಷಿಕರೂ ವಾರಾಹಿ ನೀರಿನ ದಾರಿ ನೋಡುತ್ತಿದ್ದಾರೆ. ಹಾಗಿದ್ದರೂ ವಾರಾಹಿ ಇಲಾಖೆಯು ಕಾಲುವೆಗೆ ನೀರು ಹಾಯಿಸಲು ವಿಳಂಬ ಮಾಡುತ್ತಿರುವುದರಿಂದ ರೈತರು ಆತಂಕಗೊಂಡಿರುತ್ತಾರೆ.
ವಿದ್ಯುದಾಗರ:
ಸಿದ್ದಾಪುರದ ಹೊರಿಯಬ್ಬೆ ಎಂಬಲ್ಲಿ ಭೂಗರ್ಭ ಜಲ ವಿದ್ಯುದಾಗಾರ ಇದ್ದು ವಿದ್ಯುತ್ ಉತ್ಪಾದನೆಗೆ ಉಪಯೋಗಿಸಿದ ಬಳಿಕ 1,100 ಕ್ಯುಸೆಕ್ಸ್ ನೀರು ಪ್ರತಿದಿನ ಎಡದಂಡೆ ಹಾಗೂ ಬಲದಂಡೆಗಳ ಮೂಲಕ ಹರಿಸಿ ಉಪಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರೊದಗಿಸಬೇಕೆನ್ನುವುದು ಯೋಜನೆಯ ಆಶಯ. 35 ವರ್ಷ ಕಳೆದರೂ ಎಡದಂಡೆ ಯೋಜನೆಯ ಮೂಲಕ ರೈತರಿಗೆ ನೀರು ಸಮ ಯಕ್ಕೆ ದೊರೆಯಲಿಲ್ಲ.
ರೈತ ಸಂಘ ಪತ್ರ:
ರೈತರು ಈ ಕುರಿತು ಇಲಾಖೆಗೆ ಅನೇಕ ಬಾರಿ ಮನವಿ ಮಾಡಿದರೂ ಇಲಾಖೆ ಸ್ಪಂದಿಸದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ರೈತ ಸಂಘಕ್ಕೆ ಮನವಿ ಸಲ್ಲಿಸಿದ್ದು, ಉಡುಪಿ ಜಿಲ್ಲಾ ರೈತ ಸಂಘದಿಂದ ಕೂಡಲೇ ಕಾಲುವೆಗೆ ನೀರು ಹಾಯಿಸುವಂತೆ ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆದಿದೆ.
ಅನುಮಾನ:
ಪ್ರತೀ ವರ್ಷ ಹೀಗೆ ಕಾಡಿ ಬೇಡಿ ನೀರು ಪಡೆಯುವ ಪರಿಸ್ಥಿತಿ ರೈತರದ್ದಾಗಿದ್ದು ಕಾಲುವೆಗೆ ನೀರು ಹರಿಸುವ ದಿನಾಂಕದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಕೂಡ ಇಲಾಖೆಯವರು ರೈತರಿಗೆ ನೀಡದೆ ಇರುವುದು ದುರದೃಷ್ಟಕರ. ಇದರ ಹಿಂದೆ ಗುತ್ತಿಗೆದಾರರ ಮತ್ತು ಸ್ಥಾಪಿತ ಹಿತಾಸಕ್ತಿಗಳ ಕೈವಾಡವಿರುವ ಬಗ್ಗೆ ಸಾರ್ವಜನಿಕರಿಗೆ ಅನುಮಾನ ವ್ಯಕ್ತವಾಗುತ್ತಿದೆ. ಯಾವುದೇ ಸುಳ್ಳು ಕಾರಣ ಕೊಡದೆ ಕೂಡಲೇ ಕಾಲುವೆಗೆ ನೀರು ಹಾಯಿಸಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಹೇಳುತ್ತಾರೆ.
42 ವರ್ಷ :
ವಾರಾಹಿ ಯೋಜನೆಗೆ ಭರ್ತಿ ನಲುವತ್ತೆರಡು ವರ್ಷ. 1979ರಲ್ಲಿ ಆರಂಭವಾದ ಯೋಜನೆ ಕುಂಟುತ್ತಾ ಸಾಗಿ ಎಡದಂಡೆಯಷ್ಟೇ ಉಪಯೋಗಕ್ಕೆ ದೊರೆತಿದೆ. ಅದೂ ರೈತ ಸಂಘದ ಹೋರಾಟದ ಫಲದಿಂದ. ಬಲದಂಡೆ ಕಾಮಗಾರಿ ಪ್ರಗತಿಯಲ್ಲಿದೆ. ಉಡುಪಿ ಜಿಲ್ಲೆಯ 38,800 ಎಕರೆ ಭೂ ಪ್ರದೇಶಕ್ಕೆ ನೀರುಣಿಸಲು ಕುಂದಾಪುರ ಹಾಗೂ ಉಡುಪಿ ತಾಲೂಕನ್ನು ಕೇಂದ್ರೀಕರಿಸಿ ವಾರಾಹಿ ಯೋಜನೆ ಆರಂಭಿಸಲಾಗಿದೆ. ಯೋಜನೆ ಆರಂಭಗೊಂಡು 25 ವರ್ಷಗಳ ಕಾಲ 37 ಕೋ. ರೂ. ವ್ಯಯಿಸಲಾಗಿತ್ತು. ರೈತರಿಗೆ ಪ್ರಯೋಜನ ಮಾತ್ರ ಶೂನ್ಯ. 2005ರಲ್ಲಿ ಮರುಹುಟ್ಟು ಪಡೆದ ಯೋಜನೆ 2011ರ ವೇಳೆಗೆ 375 ಕೋ.ರೂ. ಗಳ ಖರ್ಚು ಮಾಡುವಲ್ಲಿಗೆ ತಲುಪಿತು. 2019ರ ಅವಧಿಗೆ 650 ಕೋ.ರೂ. ವರೆಗೆ ಖರ್ಚಾಗಿದೆ. 9.43 ಕೋ.ರೂ.ಗಳಲ್ಲಿ ಆರಂಭವಾದ ಯೋಜನೆ 650 ಕೋ.ರೂ.ಗೆ ತಲುಪಿದೆ. ಎಡದಂಡೆ ಕಾಲುವೆ 44.35 ಕಿ.ಮೀ. ಆಗಬೇಕಿದ್ದು 38 ಕಿ.ಮೀ. ರಚನೆಯಾಗಿದೆ. 2003ರಲ್ಲಿ ಯೋಜನೆಯ ಶೀಘ್ರ ಅನುಷ್ಠಾನದ ಸಲುವಾಗಿ ಕರ್ನಾಟಕ ನೀರಾವರಿ ನಿಗಮಕ್ಕೆ ಹಸ್ತಾಂತರಿಸಲಾಗಿತ್ತು.
ಕಾಲುವೆಯ 3ನೇ ಕಿ.ಮೀ.ನಲ್ಲಿ ರಿಟರ್ನಿಂಗ್ ವಾಲ್‌ನಲ್ಲಿ ಕಾಮಗಾರಿ ನಡೆಯುತ್ತಿದೆ. ಮಳೆ, ಚಂಡಮಾರುತದ ಕಾರಣದಿಂದ ಕಾಮಗಾರಿ ನಡೆಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ತರಾತುರಿಯಲ್ಲಿ ಕಾಮಗಾರಿ ಮುಗಿಸಲಾಗುತ್ತಿದ್ದು 10 ದಿನಗಳಲ್ಲಿ ನೀರು ಹರಿಸಲಾಗುವುದು. -ಜಿ. ಭೀಮಾ ನಾಯ್ಕ, ಸುಪರಿಂಡೆಂಟ್ ಎಂಜಿನಿಯರ್ ವಾರಾಹಿ ನೀರಾವರಿ ನಿಗಮ
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.