ವಾರಾಹಿ ನೀರು ಬಿಡದೆ ಹಿಂಗಾರಿಗೆ ಹಿನ್ನಡೆ
ಬಿತ್ತನೆ ಬೀಜ ತಯಾರಿ, ಯಂತ್ರ ನಾಟಿಗೂ ಸಿದ್ಧತೆ
Team Udayavani, Nov 20, 2020, 5:20 AM IST
ವಾರಾಹಿ ಕಾಲುವೆ. (ಸಾಂದರ್ಭಿಕ ಚಿತ್ರ)
ಕುಂದಾಪುರ: ಹಿಂಗಾರು ಬೆಳೆಯ ಬಿತ್ತನೆಗೆ ವಾರಾಹಿ ಕಾಲುವೆಯಲ್ಲಿ ನೀರು ಯಾವಾಗ ಬಿಡುತ್ತಾರೆ ಎಂದು ರೈತರು ಕಾಯುತ್ತಿದ್ದಾರೆ. ನೀರು ಬಿಡದೇ 2ನೇ ಬೆಳೆ ಆರಂಭಕ್ಕೆ ಹಿನ್ನಡೆಯಾಗಿದೆ.
ನೀರಿಲ್ಲ
ಭತ್ತದ 2ನೇ ಬೆಳೆ ಬಿತ್ತನೆ ಸೇರಿದಂತೆ ಮುಂದುವರಿದ ಕೃಷಿ ಚಟುವಟಿಕೆಗೆ ವಾರಾಹಿ ನೀರು ಅಗತ್ಯವಾಗಿದೆ. ಮೊದಲ ನಾಲ್ಕು ವರ್ಷ ಪ್ರತಿವರ್ಷ ಡಿ.1ರ ಅಂದಾಜಿಗೆ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿತ್ತು. ಕಳೆದ ವರ್ಷ ಡಿ. 15ರ ಅಂದಾಜಿಗೆ ನೀರು ಬಿಡಲಾಗಿದೆ. ಆದರೆ ಈ ಬಾರಿ ಅನಿಶ್ಚಿತ ಮಳೆಯಿಂದಾಗಿ ಹಿಂಗಾರು ಹವಾಮಾನ ಕೂಡಾ ಅಕಾಲಿಕವಾದ ಹಿನ್ನೆಲೆಯಲ್ಲಿ ರೈತರು ನಾಲೆ ನೀರಿಗೆ ಕಾಯುತ್ತಿದ್ದಾರೆ. ಈ ವರೆಗೆ ನೀರು ಹರಿಸುವ ಕುರಿತು ಯಾವುದೇ ಮಾಹಿತಿ ಬಂದಿಲ್ಲ ಎಂದು ರೈತರು ಚಿಂತಿತರಾಗಿದ್ದಾರೆ. ವಾರಾಹಿ ನಾಲೆ ನೀರು ನಂಬಿದವರಿಗೆ ಎರಡನೆ ಬೆಳೆಗೆ ಇತರ ನೀರಿನಾಶ್ರಯವಿಲ್ಲ.
ವಾರಾಹಿ ಯೋಜನೆ
ವಾರಾಹಿ ಯೋಜನೆಗೆ ಭರ್ತಿ ನಲುವತ್ತೂಂದು ವರ್ಷ. 1979ರಲ್ಲಿ ಆರಂಭವಾದ ಯೋಜನೆ ಕುಂಟುತ್ತಾ ಸಾಗಿ ಎಡದಂಡೆಯಷ್ಟೇ ಉಪಯೋಗಕ್ಕೆ ದೊರೆತು ಬಲದಂಡೆ ಕಾಮಗಾರಿ ಪ್ರಗತಿಯಲ್ಲಿದೆ. 9.43 ಕೋ.ರೂ.ಗಳಲ್ಲಿ ಆರಂಭವಾದ ಯೋಜನೆ 650 ಕೋ.ರೂ.ಗೆ ತಲುಪಿದೆ. ಎಡದಂಡೆ ಕಾಲುವೆ 44.35 ಕಿ.ಮೀ. ಆಗಬೇಕಿದ್ದು 38 ಕಿ.ಮೀ. ರಚನೆಯಾಗಿದೆ. 2003ರಲ್ಲಿ ಯೋಜನೆಯ ಶೀಘ್ರ ಅನುಷ್ಠಾನದ ಸಲುವಾಗಿ ಕರ್ನಾಟಕ ನೀರಾವರಿ ನಿಗಮಕ್ಕೆ ಹಸ್ತಾಂತರಿಸಲಾಗಿತ್ತು.
ಸಿದ್ದಾಪುರದ ಹೊರಿಯಬ್ಬೆ ಎಂಬಲ್ಲಿ ಭೂಗರ್ಭ ಜಲ ವಿದ್ಯುದಾಗಾರ ಇದ್ದು ವಿದ್ಯುತ್ ಉತ್ಪಾದನೆಗೆ ಉಪಯೋಗಿಸಿದ ಬಳಿಕ 1,100 ಕ್ಯುಸೆಕ್ ನೀರು ಪ್ರತಿದಿನ ಎಡದಂಡೆ ಹಾಗೂ ಬಲದಂಡೆಗಳ ಮೂಲಕ ಹರಿಸಿ ಉಪಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರೊದಗಿಸಬೇಕೆನ್ನುವುದು ಯೋಜನೆಯ ಆಶಯ. 35 ವರ್ಷ ಕಳೆದರೂ ಎಡದಂಡೆ ಯೋಜನೆಯ ಮೂಲಕ ರೈತರಿಗೆ ನೀರು ದೊರೆಯಲಿಲ್ಲ.
ಕಾಲುವೆ ಮೂಲಕ ಹರಿದು ಬರುವ ನೀರು ಕೃಷಿಭೂಮಿ, ನದಿ, ಹಳ್ಳಗಳನ್ನು ಸೇರುವುದರಿಂದ ಭೂಮಿಯಲ್ಲಿ ನೀರಿನ ಒರತೆ ಹೆಚ್ಚಲಿದೆ. ನದಿ, ಹಳ್ಳಗಳಿಗೆ ಒಡ್ಡುಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಿದಲ್ಲಿ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದೆ.
ಎಡದಂಡೆ
276.66 ಕೋ. ರೂ. ವೆಚ್ಚದಲ್ಲಿ ಎಡದಂಡೆ ಕಾಮಗಾರಿ ನಡೆಯುತ್ತಿದ್ದು 26 ಕಿ.ಮೀ. ನಾಲೆ 1,921 ಹೆಕ್ಟೇರ್ (4,744 ಎಕರೆ ) ಪ್ರದೇಶಕ್ಕೆ ಹಾಗೂ 9 ಕಿ.ಮೀ. ನಾಲೆ 802 ಹೆಕ್ಟೇರ್ (1,980 ಎಕರೆಗೆ) ಒಟ್ಟು 6,724 ಎಕರೆ ಕೃಷಿಭೂಮಿಗೆ ನೀರುಣಿಸುವ ಯೋಜನೆ ಇದಾಗಿದೆ.
ಖರ್ಚೇ ಅಧಿಕ
ಉಡುಪಿ ಜಿಲ್ಲೆಯ 38,800 ಎಕರೆ ಭೂ ಪ್ರದೇಶಕ್ಕೆ ನೀರುಣಿಸಲು ಕುಂದಾಪುರ ಹಾಗೂ ಉಡುಪಿ ತಾಲೂಕನ್ನು ಕೇಂದ್ರೀಕರಿಸಿ ವಾರಾಹಿ ಯೋಜನೆ ಆರಂಭಿಸಲಾಗಿದೆ. ಯೋಜನೆ ಆರಂಭಗೊಂಡು 25 ವರ್ಷಗಳ ಕಾಲ 37 ಕೋ. ರೂ. ವ್ಯಯಿಸಲಾಗಿತ್ತು. ರೈತರಿಗೆ ಪ್ರಯೋಜನ ಮಾತ್ರ ಶೂನ್ಯ. 2005ರಲ್ಲಿ ಮರುಹುಟ್ಟು ಪಡೆದ ಯೋಜನೆ 2011ರ ವೇಳೆಗೆ 375 ಕೋ.ರೂ.ಗಳ ಖರ್ಚು ಮಾಡುವಲ್ಲಿಗೆ ತಲುಪಿತು. 2019ರ ಅವಧಿಗೆ 650 ಕೋ.ರೂ. ವರೆಗೆ ಖರ್ಚಾಗಿದ್ದು ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ.
ಅನಿಶ್ಚಿತ
ಮಳೆ-ಬಿಸಿಲು-ಚಳಿ ರೀತಿಯ ವಾತಾವರಣದಿಂದಾಗಿ ರೈತರು ಮುಂದಿನ ಬೆಳೆ ತೆಗೆಯುವ ಕುರಿತು ಅನಿಶ್ಚಿತ ಪರಿಸ್ಥಿತಿಯಲ್ಲಿದ್ದಾರೆ. ಈ ವರ್ಷ ಬೇಗನೆ ಹಿಂಗಾರು ಬೆಳೆಗೆ ಸಿದ್ಧತೆ ಆರಂಭಿಸಿದ್ದು ಈಗಾಗಲೇ ಕೃಷಿ ಇಲಾಖೆಯಿಂದ ಭತ್ತದ ಬಿತ್ತನೆ ಬೀಜಗಳನ್ನು ಪಡೆದುಕೊಂಡಿದ್ದಾರೆ. ಪ್ರತಿವರ್ಷ ನ.15ರಿಂದ ಬಿತ್ತನೆ ಬೀಜ ಪಡೆಯುವವರು ಈ ವರ್ಷ ನ.1ರಿಂದಲೇ ಪಡೆದಿದ್ದಾರೆ. ಯಂತ್ರನಾಟಿ ಮಾಡಲು ಕೂಡ ಬಿತ್ತನೆ ಮಾಡಲಾಗಿದೆ.
ನೀರು ಬೇಗ ಬಿಡಲಿ
ವಾರಾಹಿ ಕಾಲುವೆಯಲ್ಲಿ ನೀರು ಯಾವಾಗ ಬಿಡುತ್ತಾರೆ ಎಂದು ತಿಳಿಯದೇ ರೈತರು 2ನೇ ಭತ್ತದ ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಬಿತ್ತನೆಗೆ ಎಲ್ಲ ಸಿದ್ಧತೆ ನಡೆದರೂ ನೀರಿಗಾಗಿ ಕಾಯುವಂತಾಗಿದೆ.
-ರಾಘವೇಂದ್ರ ಹಾಲಾಡಿ, ಕೃಷಿಕರು
ಡಿಸೆಂಬರ್‌ನಲ್ಲಿ ನೀರು
ಕಳೆದ ವರ್ಷ ಡಿಸೆಂಬರ್ ಮಾಸಾಂತ್ಯದಲ್ಲಿ ನೀರು ಹರಿಸಲಾಗಿದ್ದು ಈ ವರ್ಷ ಇನ್ನೂ ತೀರ್ಮಾನವಾಗಿಲ್ಲ. ಡಿಸೆಂಬರ್ 2ನೇ ವಾರದ ವೇಳೆಗೆ ಅಥವಾ ಮೊದಲ ವಾರ ನೀರು ಬಿಡುವ ಸಾಧ್ಯತೆಯಿದೆ. ಈ ಬಗ್ಗೆ ಇನ್ನೂ ಸಭೆ ನಡೆದಿಲ್ಲ. ನಡೆದ ಬಳಿಕ ರೈತರಿಗೆ ಮಾಹಿತಿ ನೀಡಲಾಗುವುದು.
-ಪ್ರಸನ್ನ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್, ವಾರಾಹಿ ನೀರಾವರಿ ನಿಗಮ
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.