Kundapur: ಹೇರಿಕೆರೆ ಅಭಿವೃದ್ಧಿಗೊಂಡರೆ ಹತ್ತಾರು ಹಳ್ಳಿಗಳಿಗೆ ನೀರು
Team Udayavani, May 17, 2024, 11:08 AM IST
ಕುಂದಾಪುರ: ಸುತ್ತಲಿನ ಐದಾರು ಗ್ರಾಮಗಳಿಗೆ ಈ ಹೇರಿಕೆರೆಯ ನೀರು ಆಧಾರವಾಗಬಲ್ಲದು. ದಾಖಲೆಗಳ ಪ್ರಕಾರ 36 ಎಕ್ರೆ ವಿಶಾಲ ಪ್ರದೇಶ ಕೆರೆಗೆ ಇದೆ. ಆದರೆ ಒತ್ತುವರಿ, ಹೂಳು ತುಂಬಿ ಭಾಗಶಃ ಕೆರೆ ಈಗ ವಾಲಿಬಾಲ್‌ಆಟಕ್ಕೆ ಬಳಕೆಯಾಗುತ್ತಿದೆ. ಈ ಕೆರೆಯ ಆರೋಗ್ಯ ಕುಸಿಯುತ್ತಿರುವ ಕಾರಣ ಸುತ್ತಲಿನ ಗ್ರಾಮಗಳಲ್ಲಿನ ಜಲಮೂಲವೂ ಬತ್ತತೊಡಗಿದೆ. ದೊಡ್ಡ ಕೆರೆಗೆ ಅಗತ್ಯದಷ್ಟು ಅನುದಾನ ಹೊಂದಿಸಿ ಅಭಿವೃದ್ಧಿಪಡಿಸಬೇಕಿದೆ.
ತಾಲೂಕಿನ ಅತಿ ದೊಡ್ಡ “ಜಲದ ಬಟ್ಟಲು’ ಹೇರಿಕೆರೆಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಅವಧಿಗೆ ಮೊದಲೇ ಕೆರೆ ಬತ್ತುತ್ತಿರುವುದು ಈ ಭಾಗದ ಜನರಲ್ಲಿ ಕಳವಳ ಮೂಡಿಸಿದೆ. ಎರಡು ಸರ್ವೆ ನಂಬರ್‌ಗಳನ್ನು ಹೊಂದಿ 36 ಎಕ್ರೆ ಜಾಗದಲ್ಲಿ ವಿಶಾಲವಾಗಿ ಈ ಕೆರೆ ಹಬ್ಬಿಕೊಳ್ಳಬೇಕಿತ್ತು. ಆದರೆ ವಾಸ್ತವದಲ್ಲಿ ಹಾಗಿಲ್ಲ.
ನೀರಿಲ್ಲ :
ಮಳೆ ಕೊರತೆ ಕಾರಣಕ್ಕೆ ಹಲವು ಮದಗ, ಕೆರೆಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಇಲ್ಲಿಯೂ ಅದೇ ಅವಸ್ಥೆ ಸೃಷ್ಟಿಯಾಗಿದೆ. ಪ್ರಸ್ತುತ ನೀರು ತಳಮಟ್ಟಕ್ಕೆ ಇಳಿದಿದೆ. ಜತೆಗೆ ಪರಿಸರದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದ ಈ ಭಾಗ ದಲ್ಲಿ ಬಾವಿಗಳ ಅಂತರ್ಜಲ ಮಟ್ಟ ದಿನೇ ದಿನೇ ಕುಸಿ ಯುತ್ತಿದೆ. ಕಳೆದ 5 ವರ್ಷಗಳಿಂದೀಚೆಗೆ ಫೆಬ್ರವರಿ ತಿಂಗಳಲ್ಲಿ ನೀರು ಕ್ಷೀಣಿಸ ಲಾರಂಭಿಸಿದೆ. ಕೆರೆಯ ನಾಲ್ಕು ದಿಕ್ಕುಗಳಲ್ಲಿರುವ ನೀರು ಹರಿಯುವ ತೂಬು ದುರ್ಬಲ ಗೊಂಡಿದೆ. ಈ ತೂಬಿನ ಮೂಲಕ ಮೂಡ್ಲಕಟ್ಟೆ, ಹೆರಿಬೈಲು ಸಹಿತ ಹತ್ತಾರು ಹಳ್ಳಿಗಳಿಗೆ ಕೆರೆಯ ನೀರು ಸೇರುತ್ತಿದೆ. ಕನಿಷ್ಟ ಪಕ್ಷ ತೂಬನ್ನು ಸ್ವತ್ಛಗೊಳಿಸಿದರೂ ತತ್ಕಾಲಕ್ಕೆ ಸಾಕಾಗುತ್ತದೆ.
ಏನಾಗಬೇಕು:
ಈ ಕೆರೆಯಲ್ಲಿ ನೀರು ತುಂಬಿರಲು ಸಮಗ್ರ ಅಭಿವೃದ್ಧಿ ಅವಶ್ಯವಿದೆ. ಹೂಳೆತ್ತಬೇಕಿದೆ. ಒತ್ತುವರಿ ತೆರವುಗೊಳಿಸಬೇಕಿದೆ. ಒತ್ತುವರಿ ತೆರವಿಗೆ ಕಂದಾಯ ಇಲಾಖೆ ಸರ್ವೆ ನಡೆಸಿದ್ದರೂ ಮುಂದಿನ ಕ್ರಮ ನಡೆದೇ ಇಲ್ಲ ಎಂಬ ಟೀಕೆ ಇದೆ. ನರೇಗಾ ಯೋಜನೆಯಡಿ ಹೇರಿಕೆರೆ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಕೆರೆ ಪುನಶ್ಚೇತನ, ದಂಡೆ ರಚನೆ, ಬದಿ ನಿರ್ವಹಣೆ ಇನ್ನಿತರ ಕೆಲಸಗಳಿಗೆ ಸಣ್ಣನೀರಾವರಿ ಇಲಾಖೆಯಿಂದ ಕಳೆದ ಸಾಲಿನಲ್ಲಿ 1.95 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು ಅಭಿವೃದ್ಧಿ ಕಾಮಗಾರಿ ನಡೆದಿದೆ. ಕೆರೆದಂಡೆ ರಚಿಸಲಾಗಿದೆ. ಆದರೆ ಕೆರೆಯ ಹೂಳು ಸಂಪೂರ್ಣವಾಗಿ ತೆಗೆಯದ ಕಾರಣ ಅಭಿವೃದ್ಧಿ ನಡೆದ ಮರುವರ್ಷವೇ ನೀರಿಲ್ಲದಂತಾಗಿದೆ. ಕಳೆದ ಸಾಲಿನಲ್ಲಿ ಮಳೆ ಕೊರತೆ ಆಗಿದ್ದರಿಂದ ಈ ಬಾರಿ ಅವಧಿಗೆ ಮೊದಲೇ ಕೆರೆ ಬತ್ತಿದೆ. ಹೂಳೆತ್ತಿದ ಜಾಗದಲ್ಲಿ ಅಷ್ಟಿಷ್ಟು ಎಂಬಂತೆ ನೀರು ಕಾಣುತ್ತಿದೆ. ಉಳಿದ ಜಾಗ ಆಟದ ಮೈದಾನವಾಗಿದೆ.
ಪ್ರಯೋಜನ:
ಕೋಣಿ, ಕಂದಾವರ, ಬಸ್ರೂರು, ಜಪ್ತಿ, ಉಳ್ಳೂರು, ಮೂಡ್ಲಕಟ್ಟೆ ಮೊದಲಾದ ಗ್ರಾಮಗಳ ಕುಡಿಯುವ ನೀರಿಗೆ, ಕೃಷಿಗೆ ಆಧಾರವಾಗಿದ್ದ ಕೆರೆಯಿದು. 5 ಗ್ರಾಮಗಳ 10ಕ್ಕೂ ಮಿಕ್ಕಿ ಹಳ್ಳಿಗಳ ಸಾವಿರಾರು ಎಕ್ರೆ ಕೃಷಿ ಭೂಮಿಗೆ ಆಸರೆಯಾಗಿದೆ. ಮೂಡ್ಲಕಟ್ಟೆ ರೈಲ್ವೆ ನಿಲ್ದಾಣ ಹೊಳೆವರೆಗೆ ಹರಿದು ಈ ಕೆರೆಯ ನೀರು ಸೇರುತ್ತದೆ. ಉಳ್ಳೂರು, ಮೂಡ್ಲಕಟ್ಟೆ ಬೈಲಿಗೆ ಇದರ ನೀರು ಉತ್ತಮ ಜಲಾಶ್ರಯ.
ಬೃಹತ್ ವಿಸ್ತೀರ್ಣದ ತಾಲೂಕಿನ ವಿಶಾಲ ಕೆರೆಯಿದು. ಹೂಳು ತುಂಬಿ ಬೇಸಗೆ ಆರಂಭದಲ್ಲೇ ನೀರು ಕಡಿಮೆ ಯಾಗುತ್ತದೆ. ವಾರಾಹಿ ಎಡದಂಡೆ ಕಾಲುವೆ ಯಿಂದ ಹರಿದು ಬರುವ ಬೇಸಿಗೆ ಹಂಗಾಮಿನ ನೀರನ್ನು ಕೆರೆ ಹರಿಸುವ ಕೆಲಸ ನಡೆದರೆ ಉತ್ತಮ. ಒತ್ತುವರಿ ತೆರವು ಕೆಲಸ ನಡೆಯಲಿ.–ಉದಯ ಕುಮಾರ್, ಹೇರಿಕೆರೆ
ಲಭ್ಯ ಅನುದಾನದಲ್ಲಿ ಹೂಳೆತ್ತಿ,ಕೆರೆದಂಡೆ ಕಟ್ಟಿ ಅಭಿವೃದ್ಧಿ ಮಾಡಲಾಗಿದೆ. ಆದರೆ ದೊಡ್ಡ ಕೆರೆಯಾದ ಕಾರಣ ದೊಡ್ಡ ಮೊತ್ತದ ಅನುದಾನ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಅನುದಾನ ಲಭ್ಯತೆ ಮೇರೆಗೆ ಕಾಮಗಾರಿ ನಡೆಸಲಾಗುವುದು. –ಶಾಂತಾರಾಮ್, ಎ.ಇ., ಸಣ್ಣ ನೀರಾವರಿ ಇಲಾಖೆ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
MP: ಕೊಲೆ ಆರೋಪಿ ಬಂಧನಕ್ಕೆ ಪೊಲೀಸರಿಗೆ ನೆರವಾದ ನೊಣಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.