ಕುಂದಾಪುರ ನಗರಕ್ಕೆ ಬರಲಿದೆಯೇ ಭೂಗತ ವಿದ್ಯುತ್ ಕೇಬಲ್?
24 ಕಿ.ಮೀ. ಭೂಗತ ಲೈನ್; 77 ಆರ್‌ಎಂ ಯುನಿಟ್; ಕಂಬಗಳ ಅಗತ್ಯ ಇಲ್ಲ
Team Udayavani, Oct 19, 2022, 3:50 PM IST
ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ನಗರದ ಮುಖ್ಯ ರಸ್ತೆ ಹಾಗೂ ಎಲ್ಲ ಅಡ್ಡ ರಸ್ತೆಗಳಲ್ಲಿ ವಿದ್ಯುತ್ ಕಂಬಗಳು ಮರೆಯಗಾಲಿದೆಯೇ? ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸಲಾದ ಕಂಬಗಳ ಬದಲು ಭೂಗತ ಕೇಬಲ್ ಅಳವಡಿಕೆ ನಡೆಯಲಿದೆಯೇ? ಹೀಗೊಂದು ಪ್ರಸ್ತಾವ ಮೆಸ್ಕಾಂನಿಂದ ಹೋಗಿ ಅದು ತಿರಸ್ಕೃತವಾಗಿದೆ. ಶಾಸಕರು ಹಾಗೂ ಪುರಸಭೆ ಆಡಳಿತ ಮನಸ್ಸು ಮಾಡಿದರೆ ಮಂಜೂರಾತಿ ಕಷ್ಟ ಅಲ್ಲ. ಈ ರೀತಿ ಅಳವಡಿಸಿದ ಪುರಸಭೆಗಳ ಉದಾಹರಣೆ ಇಲ್ಲ.
10 ಸಾವಿರ ಗ್ರಾಹಕರು
ಕುಂದಾಪುರದಲ್ಲಿ 110/33/11 ಕೆ.ವಿ. ವಿದ್ಯುತ್ ಉಪಕೇಂದ್ರ ಇದ್ದು, ಇದರಿಂದ ಹೊರಡುವ 11 ಕೆ.ವಿ. ಮಾರ್ಗ ಸುತ್ತಿ ಬಳಸಿ ಮುಖ್ಯ ಪಟ್ಟಣದ ಹೊರಭಾಗದಲ್ಲಿ ಹಾದು ಹೋಗಿ, ಸರಕಾರಿ ಕಚೇರಿಗಳು ಉದ್ದಿಮೆಗಳು ಸೇರಿದಂತೆ 10,370 ವಿದ್ಯುತ್ ಗ್ರಾಹಕರ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಗೃಹ ಬಳಕೆ 7,050, ವಾಣಿಜ್ಯ ಬಳಕೆ 2,474, ಕೃಷಿ ಪಂಪ್ 507, ಕೈಗಾರಿಕೆ 124, ದಾರಿದೀಪ ಸ್ಥಾವರ 110 ಇತ್ಯಾದಿಗಳಿವೆ.
ಕಂಬಗಳು
ಕಂಬಗಳ ಮೂಲಕ ನಗರದಲ್ಲಿ ಲೈನ್ ಹಾದು ಹೋಗುವ ಕಾರಣ ಮಳೆಗಾಲದಲ್ಲಿ ತೊಂದರೆ ಯಾದಾಗ, ಕಂಬ ಮುರಿದಾಗ, ಅಪಘಾತಗಳು ಸಂಭವಿಸಿದಾಗ ವಿದ್ಯುತ್ ಅಡಚಣೆ ಹಾಗೂ ಅಪಾಯ ಉಂಟಾಗುತ್ತದೆ. ವಯರ್‌ಗಳ ರಾಶಿಯಿಂದ ಪಟ್ಟಣದ ಅಂದ ಕೆಡುತ್ತದೆ. ಪುರಸಭೆ ಮುಖ್ಯ ರಸ್ತೆಯಲ್ಲಿ ರಸ್ತೆಯ ಎರಡೂ ಕಡೆ ಹಾಗೂ ಹೂವಿನ ಮಾರುಕಟ್ಟೆಯಿಂದ ಹೊಸ ಬಸ್ ನಿಲ್ದಾಣದವರೆಗೆ ರಸ್ತೆಯ ಒಂದುಕಡೆ ಎಚ್.ಟಿ. ಮಾರ್ಗ ಹಾದು ಹೋಗದೇ, ನೂತನ ವಿದ್ಯುತ್ ಸಂಪರ್ಕ ಪಡೆಯಲು ಜನರಿಗೆ ತೊಂದರೆ ಉಂಟಾಗಿದೆ. ಹೊಸ ಮಾರ್ಗ ವಿಸ್ತರಣೆ ಮಾಡಬೇಕಿದ್ದಲ್ಲಿ ರಸ್ತೆ ಅಗೆಯಬೇಕಾಗುತ್ತದೆ.
ಮನವಿ
ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಇರುವ ವಿದ್ಯುತ್ ಪರಿವರ್ತಕ ಕೇಂದ್ರಗಳನ್ನು ಒಂಟಿ ಕಂಬದ (ಸ್ಪನ್ ಪೋಲ್) ಮೇಲೆ ಅಳವಡಿಸುವ ಬಗ್ಗೆ, ಎಚ್.ಟಿ., ಎಲ್.ಟಿ. ಮಾರ್ಗವನ್ನು ಭೂಗತ ಕೇಬಲ್ ಆಗಿ ಪರಿವರ್ತಿಸುವ ಬಗ್ಗೆ ವಿಶೇಷ ಅನುದಾನ ಕೋರಿ ಇಂಧನ ಸಚಿವರಿಗೆ ಪತ್ರ ಬರೆಯಬೇಕೆಂದು ಅಧ್ಯಕ್ಷರಿಗೆ ಮನವಿ ನೀಡಿದ್ದೇನೆ ಎನ್ನುತ್ತಾರೆ ಹುಂಚಾರ್ ಬೆಟ್ಟು ವಾರ್ಡ್ ಪುರಸಭಾ ಸದಸ್ಯ ಶೇಖರ್ ಪೂಜಾರಿ. ಪುರಸಭೆ ಸರಕಾರದಿಂದ ವಿಶೇಷ ಅನುದಾನ ತರಿಸಿಕೊಂಡರೆ ನಗರದಲ್ಲಿ ಭೂಗತ ಕೇಬಲ್ ಅಳವಡಿಕೆ ಕಷ್ಟವಲ್ಲ. ಒಮ್ಮೆ ಕೇಬಲ್ ಅಳವಡಿಕೆಗೆ ಹಣ ವ್ಯಯಿಸಿದರೂ ಅನಂತರ ಕಂಬ ನಿರ್ವಹಣೆ, ಲೈನ್ ನಿರ್ವಹಣೆ ಇತ್ಯಾದಿ ಖರ್ಚುಗಳು ಬರುವುದಿಲ್ಲ.
ಭೂಗತ ಕೇಬಲ್
ಆರ್‌ಡಿಎಸ್‌ಎಸ್ (ರಿವ್ಯಾಂಪ್‌ಡ್ ಡಿಸ್ಟ್ರಿಬ್ಯೂಶನ್ ಸೆಕ್ಟರ್ ಸ್ಕೀಮ್) ಮೂಲಕ ಮೆಸ್ಕಾಂ ನಗರದಲ್ಲಿ ಭೂಗತ ಕೇಬಲ್ ಯೋಜನೆ ಪ್ರಸ್ತಾವ ಇಟ್ಟಿತ್ತು. 150 ಕೋ.ರೂ.ಗಳ ಈ ಯೋಜನೆ ಸಮಗ್ರವಾಗಿ ಮಂಜೂರಾಗಲಿಲ್ಲ. ಬದಲಿಗೆ ಇದರಲ್ಲಿನ ಕೆಲವು ವಿಚಾರಗಳಿಗೆ ಅನುದಾನ ಮಂಜೂರಾಯಿತು. ಇದರ ಪ್ರಕಾರ ನಗರ ವ್ಯಾಪ್ತಿಯಲ್ಲಿ 24.6 ಕಿ.ಮೀ. ಭೂಗತ ಕೇಬಲ್ ಅಳವಡಿಕೆ, 77 ಆರ್‌ಎಂ ಯುನಿಟ್ (ರಿಂಗ್ ಮೈನ್ ಯುನಿಟ್) ಅಂದರೆ ಭೂಗತ ಕೇಬಲ್‌ನಿಂದ ಸಂಪರ್ಕ ಪಡೆಯುವ ಘಟಕಗಳು ಈ ಯೋಜನೆಯಲ್ಲಿವೆ. ಆರ್ ಎಂಯುಗೆ 2 ಸ್ವಿಚ್ ಇರಲಿದ್ದು ತೊಂದರೆ ಆದ ಪ್ರದೇಶಕ್ಕಷ್ಟೇ ವಿದ್ಯುತ್ ಕಡಿತವಾಗಿ ಇತರೆಡೆಗೆ ಸರಬರಾಜು ಅನಿಯತವಾಗಿರುತ್ತದೆ. ನಗರದಲ್ಲಿ ಬೀದಿದೀಪಗಳ ಹೊರತಾಗಿ ಯಾವುದೇ ವಿದ್ಯುತ್ ಕಂಬ ಇಲ್ಲದೇ ಸುಂದರ ನಗರವಷ್ಟೇ ಅಲ್ಲ ಕಡಿಮೆ ಅಪಾಯ ತರುವ ಯೋಜನೆಯೂ ಇದು ಹೌದು. ಈ ಯೋಜನೆಗೆ ಕಳೆದ ವರ್ಷ 48 ಕೋ.ರೂ.ಗಳ ಯೋಜನೆ ತಯಾರಿಸಲಾಗಿತ್ತು. ಹೊಸದಾಗಿ ರೂಪಿಸಿದರೆ ಸುಮಾರು 80 ಕೋ. ರೂ. ಬೇಕಾಗಬಹುದು ಎಂದು ಮೆಸ್ಕಾಂ ಎಂಜಿನಿಯರ್‌ಗಳು ತಿಳಿಸುತ್ತಾರೆ. ಅಳವಡಿಕೆಗೆ ಪ್ರತ್ಯೇಕ ಕಾರಿಡಾರ್‌ನ ಅಗತ್ಯವಿದೆ.
ಹೊಸ ಫೀಡರ್
ಈಗ 3 ಫೀಡರ್‌ಗಳು ಕಾರ್ಯನಿರ್ವಹಿಸುತ್ತಿವೆ. ಬಸ್ರೂರು ಕ್ರಾಸ್‌ನಲ್ಲಿ ಒಂದು ಹೊಸ ಫೀಡರ್ ಆಗಲಿದ್ದು ಆಗ ಕುಂದಾಪುರ ಫೀಡರ್‌ನ ಹೊರೆ ತಗ್ಗಲಿದೆ. ಖಾರ್ವಿಕೇರಿಗೆ ಪ್ರತ್ಯೇಕ ಫೀಡರ್ ದೊರೆಯಲಿದ್ದು, ಆನಗಳ್ಳಿ ಹಾಗೂ ಕೋಡಿಗೆ ಕುಂದಾಪುರದಿಂದ ಲಿಂಕ್ ಲೈನ್, ಚಿನ್ಮಯಿ ಆಸ್ಪತ್ರೆ ಬಳಿಗೆ ಫೀಡರ್, ಜಪ್ತಿ ಭಾಗಕ್ಕೆ ಹೊಸ ಫೀಡರ್ ದೊರೆಯಬೇಕಿದೆ. ಆಗ ಬಹುತೇಕ ಪ್ರದೇಶದ ಲೈನ್ ಹೊರೆ, ಲೋವೋಲ್ಟೇಜ್ ಸಮಸ್ಯೆ ನಿವಾರಣೆಯಾಗಲಿದೆ. ಅಷ್ಟಲ್ಲದೆ ಎಲ್ಲಾದರೂ ಲೈನ್ ತೊಂದರೆಯಾದಾಗ ಇತರೆಡೆಯೂ ವಿದ್ಯುತ್ ಕಡಿತ ಆಗುವ ಸಂಭವ ಕಡಿಮೆಯಾಗಲಿದೆ.
ಮನವಿ: ಮುಂದಿನ ದಿನಗಳಲ್ಲಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸದಸ್ಯರ ಅಭಿಪ್ರಾಯದಂತೆ, ಶಾಸಕರ ಮೂಲಕ ಸರಕಾರಕ್ಕೆ ವಿಶೇಷ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗುವುದು. –ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷರು, ಪುರಸಭೆ
ಬೇಡಿಕೆ: ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳು ಇಕ್ಕಟ್ಟಾಗಿದ್ದು ಸಾರ್ವಜನಿಕರ ಹಾಗೂ ವಾಹನಗಳ ಓಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕಡಿಮೆ ಸ್ಥಳ ಬಳಕೆ ಮಾಡಿ ಪರಿವರ್ತಕಗಳನ್ನು ಅಳವಡಿಸಲು ಮೆಸ್ಕಾಂಗೆ ಜೋಡಿ ಕಂಬಗಳ ಬದಲು ಒಂಟಿ ಕಂಬದಲ್ಲಿ (ಸ್ಟನ್‌ಪೋಲ್) ಟ್ರಾನ್ಸಫಾರ್ಮರ್ ಅಳವಡಿಸಲು ಮನವಿ ಮಾಡಲಾಗಿದೆ. –ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.