ಶರಾವತಿಯನ್ನು ಬಲಿಕೊಡುವ ಮುನ್ನ..
ಅಲ್ಲಿನ್ನೂ ಕಂಡುಹಿಡಿಯದ ಅನೇಕ ಜೀವ ಪ್ರಬೇಧಗಳಿವೆ ಎಂಬುದನ್ನು ಮರೆಮಾಚಲಾಗುತ್ತಿದೆ
Team Udayavani, Jul 12, 2019, 9:30 AM IST
ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ನೀರು ವ್ಯರ್ಥವಾಗಿ ಅರಬ್ಬೀ ಸಮುದ್ರ ಸೇರುತ್ತಿದೆ, ಅದನ್ನೆಲ್ಲ ಬಳಸಿಕೊಳ್ಳಬೇಕು ಎಂಬ ಅಸಂಬದ್ಧ, ಅವೈಜ್ಞಾನಿಕ ಹೇಳಿಕೆಗಳನ್ನು ದಿನನಿತ್ಯ ಕೇಳುತ್ತಿದ್ದೇವೆ. ನದಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಒಟ್ಟಾರೆ ಪರಿಸರ ವ್ಯವಸ್ಥೆಯ ಬಗೆಗಿನ ಸಂಪೂರ್ಣ ಅಜ್ಞಾನವನ್ನು ತೋರ್ಪಡಿಸುವ ಇಂಥ ಹೇಳಿಕೆಗಳು ಮತ್ತು ಅದಕ್ಕನುಗುಣವಾಗಿ ಆಡಳಿತಗಳು ತೆಗೆದುಕೊಳ್ಳುವ ನಿರ್ಧಾರಗಳು ಅತ್ಯಂತ ಅಪಾಯಕಾರಿ. ನಮ್ಮ ನೆಲದ ಸಮಸ್ತ ಅಭಿವೃದ್ಧಿ ಆಗಬೇಕು ಎಂದು ಬಯಸುವ ಯಾರೂ ನದಿಗಳ ಪಥ ಬದಲಿಸುವ ದುಸ್ಸಾಹಸಕ್ಕೆ ಕೈ ಹಾಕಲಾರರು.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಉತ್ತರ-ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನದಿಗಳು ನಿರ್ವಹಿಸುತ್ತಿರುವ ಪರಿಸರದ ಪಾತ್ರ ಅತಿ ಪ್ರಮುಖವಾದದ್ದು. ಅಂಥ ಸೂಕ್ಷಗಳನ್ನು, ಆ ನದಿಗಳ ಜೀವ ವೈವಿಧ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮೊದಲೇ ಅದನ್ನು ಬಲಿಕೊಡಲು ಹೊರಟಿದ್ದೇವೆ. ಜಗತ್ತಿನಲ್ಲೆ ಅಪೂರ್ವವಾದ ಶರಾವತಿ ಕೊಳ್ಳದಲ್ಲಿ ಇನ್ನೂ ಕಂಡುಹಿಡಿಯದ ಅನೇಕ ತೆರನ ಸಸ್ಯ-ಪ್ರಾಣಿ ಪ್ರಬೇಧಗಳಿವೆ ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿದೆ. ಲಕ್ಷಾಂತರ ವರುಷಗಳಿಂದ ವಿಕಸನ ಹೊಂದಿದ ಅಪೂರ್ವ ಮಳೆಕಾಡಿನ ಪ್ರದೇಶದ ನದಿ ಪ್ರವಹಿಸುವ, ಜೀವವೈವಿಧ್ಯವನ್ನು ಪೋಷಿಸುವ ನೈಸರ್ಗಿಕ ಹಕ್ಕನ್ನೇ ಕಸಿದುಕೊಳ್ಳಲು ನಮಗಾವ ಹಕ್ಕಿದೆ? ಇದನ್ನು ಆಲೋಚಿಸಲೂ ವ್ಯವಧಾನವಿಲ್ಲದಂತೆ ವರ್ತಿಸುತ್ತ, “ಅಭಿವೃದ್ಧಿ’ ಎಂಬ ಭ್ರಮೆಯ ಹಿಂದೆ ಧಾವಿಸುತ್ತಿದ್ದೇವೆ. ನದಿ ಪಥ ಬದಲಿಸುವ, ಪ್ರವಹಿಸುವ ನೀರನ್ನು ಕಸಿದುಕೊಳ್ಳುವ ಪ್ರವೃತ್ತಿಯಿಂದ ನೈಜ, ಸಮಷ್ಠಿ ಅಭಿವೃದ್ಧಿ ಸಾಧ್ಯವಾಗದು ಎಂದು ಗೊತ್ತಿದ್ದೂ ತಪ್ಪೆಸಗುತ್ತಿದ್ದೇವೆ.
ನಗರಗಳ ತಡೆರಹಿತ ಅವೈಜ್ಞಾನಿಕ ಬೆಳವಣಿಗೆಯ ಅಗತ್ಯಗಳನ್ನು ಪೂರೈಸಲು ಮಳೆಕಾಡನ್ನು ಪೋಷಿಸುವ ಶರಾವತಿಯನ್ನು ಬಲಿಕೊಡಲು ಹೊರಟಿರುವುದು ಎಂದೆಂದಿಗೂ ಖಂಡನೀಯವೇ. ಶರಾವತಿಗೆ ಇಷ್ಟೊಂದು ಅಣೆಕಟ್ಟೆ ಕಟ್ಟಿದ ನಂತರ ಇರುವ ಅತ್ಯಲ್ಪ ನೀರನ್ನೂ ಕಬಳಿಸಲು ನಮಗಾವ ಹಕ್ಕೂ ಇಲ್ಲ. ಶರಾವತಿ ತನ್ನ ಉಗಮ ಸ್ಥಾನದಿಂದ ಅರಬ್ಬೀ ಸಮುದ್ರ ಸೇರುವವರೆಗೆ ದಂಡೆಗಳುದ್ದಕ್ಕೂ ಪೋಷಿಸುವ ಜೀವಜಾಲ, ನಿರ್ವಹಿಸುವ ಅತಿಸೂಕ್ಷ¾ ಪರಿಸರ ಕಾರ್ಯಗಳು ನದಿಯ ನೀರಿನ ಹರಿವಿನ ಪ್ರಮಾಣ ಮತ್ತು ವೇಗವನ್ನು ಅವಲಂಬಿಸಿದೆ. ಈ ಎರಡೂ ಅಂಶಗಳಲ್ಲಿನ ಯಾವುದೇ ತೆರನ ವ್ಯತ್ಯಯ ನದಿಯ ನೈಸರ್ಗಿಕ ಕಾರ್ಯ ನಿರ್ವಹಣೆಗೆ ಖಂಡಿತವಾಗಿಯೂ ಅಡ್ಡಿ ಉಂಟುಮಾಡುತ್ತದೆ.
ಪ್ರತಿಯೊಂದು ನದಿಗೂ ಅದರದ್ದೇ ಆದ ಆಮ್ಲಿಯತೆ, ಲವಣ-ಖನಿಜಾಂಶಗಳ ಪ್ರಮಾಣ ಇದೆ. ನದಿ ತಳದ ಮಣ್ಣಿನ ವೈವಿಧ್ಯವಿದೆ. ನದಿಯ ನೀರಿನಲ್ಲಿರುವ ಸೂಕ್ಷ್ಮಾಣು ಜೀವಿಗಳದ್ದು ಅತಿ ಅದ್ಭುತ ಪ್ರಪಂಚ. ಅವು ಸಸ್ಯ ಮತ್ತು ಪ್ರಾಣಿ ಪ್ರಭೇದವೆರಡಕ್ಕೂ ಸೇರಿದವುಗಳು ಮತ್ತು ನದಿಯ ಆಹಾರ ಸರಪಳಿಯಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತವೆ.
ಇಂಥ ಸೂಕ್ಷ್ಮಾಣು ಜೀವಿಗಳನ್ನೇ ಅವಲಂಬಿಸಿ ಬದುಕುವ ಅಸಂಖ್ಯ ಆಕಶೇರುಕಗಳು, ಜಲ ಜೀವಪರಿಸರ ವ್ಯವಸ್ಥೆಯಲ್ಲಿ ಕೊಂಡಿಗಳಾಗಿ ಕಶೇರುಕಗಳನ್ನು ಪೋಷಿಸುತ್ತವೆ. ಮೇಲ್ನೋಟಕ್ಕೆ ಇಂಥ ಆಹಾರ ಸರಪಳಿ ಸರಳ ಎಂದೆನಿಸಿದರೂ ಅದು ತೀರ ಸಂಕೀರ್ಣವಾದದ್ದು. ನದಿ ದಡದುದ್ದಕ್ಕೂ ಅಸ್ತಿತ್ವ ಪಡೆದ ಸಸ್ಯ ಪ್ರಬೇಧ, ಆರಣ್ಯವನ್ನೇ ಅವಲಂಬಿಸಿ ಬದುಕುವ ಪ್ರಾಣಿ ಪ್ರಪಂಚ ವಿಶಿಷ್ಟ ಜೀವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ನಿರ್ಜೀವ-ಸಜೀವ ಅಂಶಗಳೆಲ್ಲ ಸೇರಿ ನದಿಗೆ ಅದರದ್ದೇ ಆದ ಜೀವ, ಆರೋಗ್ಯ ನೀಡುತ್ತವೆ. ಅಂಥ ನದಿಯ ಜೀವ ಅಲ್ಲಿನ ಜೀವವೈವಿಧ್ಯ ಎಂಥದಿರಬೇಕು ಎಂಬುದನ್ನು ನಿರ್ಧರಿಸುತ್ತದೆ.
ಕರ್ನಾಟಕದ ನದಿಗಳು ತಮ್ಮ ರಭಸದ ಹರಿವಿನೊಟ್ಟಿಗೆ ಅಗಾಧ ಪ್ರಮಾಣದ ಪೋಷಕಾಂಶಗಳನ್ನು ಅರಬ್ಬೀ ಸಮುದ್ರಕ್ಕೆ ಕ್ಷಣಕ್ಷಣಕ್ಕೂ ಸೇರಿಸುವ ಪರಿಸರ ಸೂಕ್ಷ ಕಾರ್ಯವೆಸಗುತ್ತಿವೆ. ಇಂಥ ಪೋಷಕಾಂಶಗಳನ್ನೇ ಅವಲಂಬಿಸಿ ಸಮುದ್ರದ ಇತರ ಜೀವಿಗಳು ಬದುಕುವ ಆಹಾರ ಸರಪಣಿ ತೀರ ಕ್ಲಿಷ್ಟವೂ, ಸೂಕ್ಷವೂ ಆದದ್ದು. ಲಕ್ಷಾಂತರ ವರುಷಗಳಿಂದ ವಿಕಸನ ಹೊಂದಿದ ಇಂಥ ಸೂಕ್ಷ ವ್ಯವಸ್ಥೆಯನ್ನು ನಾವು ಬಲಿಕೊಡುತ್ತಿರುವುದು ದುರ್ದೈವ. ನಮ್ಮ ನದಿಗಳು ಪಾರಂಪರಿಕ ಬೇಸಾಯ, ಮೀನುಗಾರಿಕೆಯನ್ನು ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರವಹಿಸಿವೆ. ಒಟ್ಟಾರೆ ನದಿಯ, ನದಿ ಪಾತ್ರದ ಈ ಎಲ್ಲ ಜೀವ ಪರಿಸರ ವ್ಯವಸ್ಥೆಯು ನದಿಯ ನೀರಿನ ಹರಿವಿನ ಪ್ರಮಾಣ ಮತ್ತು ವೇಗವನ್ನು ಅವಲಂಬಿಸಿಯೇ ವಿಕಸನ ಹೊಂದಿದೆ.
ನದಿ ಸಮುದ್ರವನ್ನು ಸೇರುವ ಪ್ರದೇಶ/ಅಳಿವೆ ಅಸಂಖ್ಯ ಅಕಶೇರುಕ, ಕಶೇರುಕಗಳ ಸಂತಾನೋತ್ಪತ್ತಿಯ ತಾಣ. ಅಳಿವೆಯಲ್ಲಿ ನಿರ್ದಿಷ್ಟ ಪ್ರಮಾಣದ ನದಿಯ ನೀರಿನ ಹರಿವು ಇದ್ದಲ್ಲಿ ಮಾತ್ರವೇ ಅನೇಕ ತೆರನ ಜಲಚರಗಳು ಸಂತಾನೋತ್ಪತ್ತಿ ನಡೆಸಲು ಸಾಧ್ಯ. ನದಿ ಅಳಿವೆಯ ಸ್ವಾಸ್ಥ್ಯ ಕೆಟ್ಟರೆ, ಅದರ ಪರಿಣಾಮ ಜಲಚರಗಳ, ಸಾಗರ ಜೀವಿಗಳ ಸಂತಾನೋತ್ಪತ್ತಿ ಮತ್ತು ಸಂಕುಲದ ಮೇಲೆ ಆಗುತ್ತದೆ. ನದಿಯ ಪಾತ್ರದಲ್ಲಿ ಅಸ್ತಿತ್ವ ಉಳಿಸಿಕೊಂಡಿರುವ ಮಳೆಕಾಡು, ಇತರ ಸಸ್ಯ ಪ್ರಬೇಧಗಳ ಸಾಂದ್ರತೆಯನ್ನು ನಿರ್ಧರಿಸುವಲ್ಲಿ ನದಿಯ ಅಗಲ, ನೀರಿನ ಹರಿವಿನ ಪ್ರಮಾಣ ಮತ್ತು ನೀರಿನ ವೇಗ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಗಮನಾರ್ಹ.
ಶರಾವತಿಯ ಮೇಲಣ ನಮ್ಮ ದೌರ್ಜನ್ಯ ಒಂದೆರಡಲ್ಲ. ಈಗಾಗಲೇ ಸಾಕಷ್ಟು ಅಣೆಕಟ್ಟು ಕಟ್ಟಿದ್ದೇವೆ. ಶರಾವತಿ ನದಿ ಪಾತ್ರದ ಅಪೂರ್ವ ಜೀವರಾಶಿಯನ್ನು ಬಲಿಕೊಟ್ಟಿದ್ದೇವೆ. ಅನೇಕ ಕಡೆ ಅನಧಿಕೃತ ಮರಳು ಗಣಿಗಾರಿಕೆ, ನದಿ ತೀರದ ಗುಡ್ಡಗಳ ಧ್ವಂಸ , ಅನೇಕ ತೆರನ ತ್ಯಾಜ್ಯಗಳ ಅವೈಜ್ಞಾನಿಕ ವಿಲೇವಾರಿ, ಇವೇ ಮುಂತಾದವು ಇಲ್ಲಿ ಉಲ್ಲೇಖಾರ್ಹ. ಒಂದು ನದಿಯನ್ನು ಹೇಗೆಲ್ಲ ಹಿಂಸಿಸಬಹುದೋ ಅದೆಲ್ಲವನ್ನೂ ಮಾಡುತ್ತಿದ್ದೇವೆ.
ಟೇಲರೇಸ್ ಅಣೆಕಟ್ಟು ಕಟ್ಟಿದ ನಂತರ ಗೇರುಸೊಪ್ಪೆಯಿಂದ ಹೊನ್ನಾವರ ದವರೆಗಿನ ನದಿಯ ಹರಿವಿನ ಪ್ರಮಾಣ ತೀರ ಕ್ಷೀಣಿಸಿದೆ. ಇದು ಸಮುದ್ರದ ಉಪ್ಪು ನೀರು ನದಿಗಭಿಮುಖವಾಗಿ ಪ್ರವಹಿಸಲು ಎಡೆಮಾಡಿ ಕೊಟ್ಟಿದೆ. ನದಿಯ ಜೀವಸಂಕುಲಗಳ ಬದುಕನ್ನೇ ದುಸ್ತರಗೊಳಿಸುವ ಕಾರ್ಯವದು. ನದಿ ದಂಡೆಯುದ್ದಕ್ಕೂ ಉಪ್ಪು ಮಿಶ್ರಿತ ನೀರನ್ನು ಕೃಷಿಗೆ ಬಳಸಬೇಕಾದ ಅನಿವಾರ್ಯತೆ ತಂದೊಡಿªದ್ದೇವೆ. ನಮ್ಮಿಂದ ಶರಾವತಿಗೆ ಒದಗಿದ ಗತಿಯಿಂದಾಗಿ ಅಪರೂಪದ ಕಪ್ಪೆ ಸಂತತಿಯೂ ಸೇರಿದಂತೆ ಅನೇಕ ಜಲಚರಗಳ ಬದುಕು ಹೇಗೆ ಸಾಗಬೇಕು ಎಂಬುದಕ್ಕೆ ಉತ್ತರಿಸಬೇಕಾದವರು ಯಾರು?
ಶರಾವತಿ ನದಿಯ ಮೇಲಿನ ನಮ್ಮ ದೌರ್ಜನ್ಯಕ್ಕೆ ಕೊನೆಯಿಲ್ಲ ಎಂಬಂತೆ ಇರುವ ಅಲ್ಪ ನೀರನ್ನೂ ನಗರ ಪ್ರದೇಶಗಳಿಗೆ ತಿರುಗಿಸುವ ಅವೈಜ್ಞಾನಿಕ ಯೋಜನೆಗಳನ್ನು ಹಮ್ಮಿಕೊಳ್ಳಲು ಉತ್ಸುಕರಾಗಿದ್ದೇವೆ. ಕ್ಷೀಣಿಸಿದ ನೀರಿನ ಪರಿಣಾಮವಾಗಿ ಶರಾವತಿ ನದಿ ಪಾತ್ರದುದ್ದಕ್ಕೂ ಅನೇಕ ಹೊಸ ನಡುಗಡ್ಡೆಗಳ ರಚನೆ ಆಗುತ್ತಿದೆ. ನದಿಯು ಸಾಗರ ಸೇರುವಲ್ಲಿನ ಭೂಪ್ರದೇಶದಲ್ಲಿ ಯಾವೆಲ್ಲ ತೆರನ ಅಪಾಯಕಾರಿ ಬೆಳವಣಿಗೆಗಳು ಉಂಟಾಗುತ್ತಿವೆ ಎಂಬುದನ್ನು ಕಣ್ಣೆತ್ತಿ
ನೋಡುವ ಮೊದಲೇ ನೀರ ಹರಿವಿನ ನಿಯಂತ್ರಣಕ್ಕೆ ಕೈಹಾಕಿದ್ದೇವೆ. ಇಂಥ ಭೂ ರಚನೆಯಲ್ಲಿನ ಬದಲಾವಣೆಗಳನ್ನು ಪುನಃ ಸುಸ್ಥಿತಿಗೆ ತರುವುದು ಅಸಾಧ್ಯದ ಕೆಲಸ ಎಂಬುದು ನಮ್ಮ ಅರಿವಿಗೆ ಬರಬೇಕಿದೆ.
ಶರಾವತಿ ನದಿಯ ಜೀವಜಾಲದ ಕುರಿತು ಅಧಿಕೃತವೆನಿಸುವ ದೀರ್ಘ ಅಧ್ಯಯನ ಕೈಗೊಂಡು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕವಾಗಿ ಅನುಮೋದಿಸಲ್ಪಟ್ಟ ಸಂಶೋಧನೆಯ ವಿವರಗಳನ್ನು ಪ್ರಕಟಿಸಿರುವ ವಿಜ್ಞಾನಿಗಳ ಅಭಿಪ್ರಾಯವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿರುವುದು ಏಕೆ ಎಂಬುದಕ್ಕೆ ನಮ್ಮ ಸರಕಾರ ಮತ್ತು ಆಡಳಿತಗಾರರು ಉತ್ತರಿಸಿಯಾರೇ?
ಅನೇಕ ಸಂದರ್ಭಗಳಲ್ಲಿ ತಜ್ಞ ವರದಿ ಆಧರಿಸಿ ಯೋಜನೆ ಕೈಗೊಳ್ಳುತ್ತೇವೆ ಎಂದು ಆಡಳಿತಗಳು ಹೇಳುತ್ತಿರುವವಾದರೂ, ಆ ತಜ್ಞರು ಎನಿಸಿಕೊಂಡವರ ತಜ್ಞ ಅಭಿಪ್ರಾಯಗಳು ಜಾಗತಿಕ ಮಟ್ಟದ ವೈಜ್ಞಾನಿಕ ವಲಯ ಒಪ್ಪಿದ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿಗ ಅಂಥ ತಜ್ಞರ ವರದಿಯ ಉದ್ದೇಶಗಳನ್ನೇ ಪ್ರಶ್ನಿಸಬೇಕಾದ ಅಗತ್ಯ ಇದೆ.
ಕೆಲ ವರ್ಷಗಳ ಹಿಂದೆ ರಾಜ್ಯದ ಎಲ್ಲ ಗ್ರಾಮೀಣ ಜನವಸತಿಗಳಿಗೆ ರಾಜ್ಯದಲ್ಲಿ ಹರಿಯುವ ನದಿ ಮೂಲಗಳಿಂದ ಕುಡಿಯುವ ನೀರನ್ನು ಪೂರೈಸಲು 52,000 ಕೋಟಿ ರೂಪಾಯಿ ಅಗತ್ಯವಿದೆ ಎಂದು ಸ್ಟೂಪ್ ಕನ್ಸಲ್ಟೆನ್ಸಿ ಎಂಬ ಸಂಸ್ಥೆ ಅಂದಾಜು ಮಾಡಿದ ವರದಿ ಬಂದಿತ್ತು. ಪಶ್ಚಿಮ ದಿಕ್ಕಿಗೆ ಹರಿದು ಸಮುದ್ರ ಸೇರುವ ನದಿಗಳ ನೀರನ್ನು ಬಳಸಿಕೊಳ್ಳುವುದರಿಂದ ಮಾತ್ರ ಈ ಬೇಡಿಕೆ ಈಡೇರಿಸಲು ಸಾಧ್ಯ ಮತ್ತು ಅದಕ್ಕಾಗಿ ಕಾರ್ಯಕ್ರಮ ರೂಪಿಸಬೇಕು ಎಂಬ ಆಗ್ರಹವೂ ಕೇಳಿಬಂದಿತ್ತು. ಈಗ ಪುನಃ ಶರಾವತಿ ನದಿ ನೀರು ತಿರುಗಿಸುವ ಮಾತು ದಿನೇ ದಿನೇ ಕೇಳಿಬರುತ್ತಿದೆ.
ಶರಾವತಿ, ಅಘನಾಶಿನಿ, ಕಾಳಿ ನದಿಗಳಿಂದ ನಮಗೆಷ್ಟು ನೀರು ಸಿಕ್ಕೀತು ಎಂಬ ಲೆಕ್ಕಾಚಾರ ಹಾಕುವುದರಲ್ಲಿಯೇ ನಮ್ಮ ಆಡಳಿತಗಾರರಿಗೆ ಆಸಕ್ತಿ. ನದಿಯ ಮೇಲಣ ಎಲ್ಲ ಹಕ್ಕುಗಳನ್ನೂ ಹೊಂದಿರುವ ಅಸಂಖ್ಯ ಜಲಚರಗಳ, ಜೀವಜಾಲದ ನೈಸರ್ಗಿಕ ಹಿತಾಸಕ್ತಿ ಕಾಯಬೇಕಾದವರು ಯಾರು? ಅಂಥ ಫಲಾನುಭವಿ ಜೀವಿಗಳ ಅಹವಾಲು ನಮ್ಮ ಆಡಳಿತಗಳಿಗೆ ನಗಣ್ಯವೇಕೆ? ಅಸಂಖ್ಯ ಜೀವಿಗಳ ಬದುಕುವ ಹಕ್ಕನ್ನು ಕಸಿಯುವ, ಶರಾವತಿಯನ್ನು ಬಲಿಕೊಡುವ ಮುನ್ನ ಈ ಎಲ್ಲ ಅತಿ ಸಂಕೀರ್ಣ ವಿಚಾರಗಳನ್ನು ಪ್ರಾಮಾಣಿಕವಾಗಿ ಪರಿಗಣಿಸದೆ ಮುಂದಡಿಯಿಟ್ಟರೆ ಅದರ ಪರಿಣಾಮವನ್ನು ಮುಂದಣ ಜಗತ್ತು ಅನುಭವಿಸಲೇ ಬೇಕಾದ ಅನಿವಾರ್ಯತೆ ಇರುತ್ತದೆ. ಈ ಭೂಮಿ ನಮಗಷ್ಟೆ ಅಲ್ಲ, ಇತರೆಲ್ಲ ಜೀವಿಗಳಿಗೂ ಸೇರಿದ್ದು ಎಂಬ ವಿವೇಚನೆ ಮತ್ತು ಅದಕ್ಕನುಗುಣವಾದ ವರ್ತನೆ ಇಂದಿನ ಅಗತ್ಯ.
ನದಿ ಎಂದರೆ ಅದು ಕೇವಲ ನೀರಲ್ಲ, ಅದೊಂದು ಸಂಕೀರ್ಣ ಜೀವ ಪರಿಸರ ವ್ಯವಸ್ಥೆಯ ಭಾಗ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಅಂಥ ನಡೆ ಮಾತ್ರವೇ ಮುಂದಣ ಯುಗದ ಎಲ್ಲಾ ಜೀವಿಗಳ ಜೀವನವನ್ನು ಸಹ್ಯಗೊಳಿಸೀತು.
ರವಿ ಹೆಗಡೆ, ಜೀವಶಾಸ್ತ್ರ ಸಂಶೋಧಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.