ಬರುತಾವ ಕಾಲ!
Team Udayavani, Apr 6, 2020, 4:37 PM IST
ನಮ್ಮೆಲ್ಲರಲ್ಲೂ ಈ ಸಮಯದಲ್ಲಿ ಆತಂಕ ಮನೆ ಮಾಡಿದೆ. ಅದರಲ್ಲಿ ಅನುಮಾನವಿಲ್ಲ. ಆದರೆ ಗುಡುಗು, ಮಳೆಯ ಆರ್ಭಟದ ನಂತರ ಕಾರ್ಮೋಡಗಳು ಕರಗಿ, ಬೆಳಕು ಹರಿದು ತಂಗಾಳಿ ಬೀಸಿಯೇ ತೀರುವುದು. ಈ ಕೋವಿಡ್ 19 ಕಾಲ ಕಳೆದ ನಂತರ ಏನೇನು ಒಳ್ಳೆಯ ಬದಲಾವಣೆಗಳು ಬರಲಿವೆ ಎನ್ನುವುದರ ಕುರಿತು ಈ ಲೇಖನ…
ಕೋವಿಡ್ 19 ವೈರಸ್ ಇಂದು ಜಗತ್ತಿಗೆಲ್ಲ ಗೊತ್ತಿರುವ ಹೆಸರು. ಈ ಶತಮಾನದಲ್ಲಿ ದೇಶಗಳನ್ನ ಹೀಗೆ ಲಾಕ್‌ಡೌನ್ ಅಂದರೆ, ಪೂರ್ಣ ವ್ಯಾಪಾರ ವಹಿವಾಟು ನಿಲ್ಲಿಸಿ, ಮನುಷ್ಯರ ಓಡಾಟಕ್ಕೂ ನಿರ್ಬಂಧ ಹೇರಿದ ಉದಾಹರಣೆ ನಮ್ಮ ಮುಂದಿಲ್ಲ. ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ಪ್ರಜೆಗಳನ್ನ ಗೃಹ ಬಂಧನದಲ್ಲಿರಲು ಸೂಚಿಸಿವೆ.
ಜಗತ್ತಿನಾದ್ಯಂತ ಒಂದು ರೀತಿಯ ಸೂತಕದ ಛಾಯೆ ಆವರಿಸಿದೆ. ಇದೆಲ್ಲ ಗೊತ್ತಿರುವ ವಿಷಯ. ಹಾಗಾದರೆ, ಮನುಷ್ಯನ ಬದುಕಿಗೆ ಭರವಸೆ ಇಲ್ಲವೇ ? ಬದುಕಿಗೆ ನಂಬಿಕೆಗಳು ಇರಲಾರವೇ?
ಎನ್ನುವ ಪ್ರಶ್ನೆ ಕೂಡ ಉದ್ಭವವಾಗುತ್ತದೆ. ಗಮನಿಸಿ, ಈ ಹಿಂದೆ ಅಂದರೆ, 1918ರಲ್ಲಿ ಸ್ಪ್ಯಾನಷ್ ಫೂ ಎನ್ನುವ ಹೆಸರಿನ ರೋಗ, ಕೋಟ್ಯಂತರ ಜನರ ಸಾವಿಗೆ ಕಾರಣವಾಗಿತ್ತು . ಮನುಕುಲ ಅದನ್ನ ಮರೆತು ಬಹಳ ದೂರ ಬಂದಿದೆ. ಅಂದಿನ ದಿನಗಳಲ್ಲಿ ಊಹಿಸಿಕೊಳ್ಳಲು ಆಗದ ತಂತ್ರಜ್ಞಾನ, ಇಂದು ನಮ್ಮ ಮುಂದಿದೆ. ಇಷ್ಟೆಲ್ಲಾ ಆದದ್ದು, ನಾಳೆ ನಮ್ಮದು ಎನ್ನುವ ಅಶಾಭಾವದಿಂದ! ಅಂತಹುದೇ ಆಶಾಭಾವ ಚಿಗುರಿಸುವ ಹಲವಾರು ವಿಷಯಗಳು ನಮ್ಮ ಮುಂದಿವೆ. ಅವೇನು ಎಂದು ನೋಡೋಣ.
ವಿಜ್ಞಾನ ಕ್ಷೇತ್ರಕ್ಕೆ ಬೇಡಿಕೆ : ಎಲ್ಲಕ್ಕೂ ಮೊದಲಿಗೆ, ಈ ಭೂಮಿ ಕೇವಲ ಮನುಷ್ಯ ಒಬ್ಬನ ಸ್ವತ್ತಲ್ಲ. ಇಲ್ಲಿ ನಾವು ಸಾವಿರಾರು ಜೀವಜಂತುಗಳ ಜೊತೆ ಭೂಮಿಯನ್ನ ಹಂಚಿಕೊಂಡಿದ್ದೇವೆ. ಆದರೆ, ನಮ್ಮ ಬೆಳವಣಿಗೆಯ ವೇಗ , ಭೂಮಿಯ ಮೇಲಿನ ಎಲ್ಲಾ ಸಂಪತ್ತೂ ನನ್ನದು ಎನ್ನುವ ಭಾವನೆಯಲ್ಲಿ, ಪ್ರಕೃತಿಯ ಮೇಲೆ ಮಾಡಿದ ದಾಳಿಯಿಂದಾದ ಗಾಯ, ಈ ದಿನಗಳಲ್ಲಿ ಸ್ವಲ್ಪ ವಾಸಿಯಾಗುತ್ತಿದೆ. ಜಗತ್ತಿನಾದ್ಯಂತ ನೆಲ, ಜಲ ಮತ್ತು ವಾಯುವಿನಲ್ಲಿ ಜೀವ ಜಂತುಗಳು ಖುಷಿಯಿಂದ ವಿಹರಿಸುತ್ತಿರುವ ದ್ರಶ್ಯಗಳನ್ನು ನಾವೆಲ್ಲರೂ ನೋಡಿದ್ದೇವೆ. ಆ ಲೆಕ್ಕದಲ್ಲಿ, ಕೋವಿಡ್ 19 ನಮ್ಮ ಅತಿ ವೇಗಕ್ಕೆ ಬಿದ್ದ ಬ್ರೇಕ್ ಅಷ್ಟೇ. ಎರಡನೆಯದಾಗಿ, ವೈದ್ಯಕೀಯ ವಿಜ್ಞಾನದಲ್ಲಿ ಕೆಲಸದ ಬೇಡಿಕೆಗಳು ಹೆಚ್ಚಾಗುತ್ತವೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬಳಸಿ, ಇಂತಹ ಸಮಯ ಮುಂದೆ ಎದುರಾದರೆ ರೋಗಿಗಳ ಬಳಿ ವೈದ್ಯರು ಹೋಗದೆ ಗುಣಪಡಿಸುವ ಅಥವಾ ಚಿಕಿತ್ಸೆ ನೀಡುವ ಸೌಲಭ್ಯವನ್ನು ತಯಾರಿಸಬಹದು. ಕೋವಿಡ್ 19 ವೈರಸ್ಸಿನ ಕಾರಣದಿಂದಾಗಿ ಹಲವು ಉದ್ಯೋಗಗಳು ಕಳೆದುಹೋಗುವ ಸಾಧ್ಯತೆ ಇದೆಯಾದರೂ, ಹಲವಾರು ಹೊಸ ಕೆಲಸಗಳ ಸೃಷ್ಟಿಗೆ ಕಾರಣವೂ ಆಗುವುದು.
ಹಿಂದಿನವರು ಖುಷಿಯಾಗಿರಲಿಲ್ಲವೇ? : ವರ್ಕ್ ಫ್ರಮ್ ಹೋಂ ಎನ್ನುವುದು ಇನ್ನು ಸಾಮಾನ್ಯ ಎನ್ನುವಂತಾಗುತ್ತದೆ . ಇದರಿಂದ ಪ್ರತಿ ನಿತ್ಯ ವಾಹನಗಳ ಓಡಾಟ ಕಡಿಮೆಯಾಗುತ್ತದೆ . ಇದು ಕಾರ್ಬನ್ ಉಗುಳುವಿಕೆಯನ್ನು ಕಡಿಮೆ ಮಾಡುತ್ತದೆ. ಈ ನಗರೀಕರಣ, ಕೈಗಾರೀಕರಣಕ್ಕೆ ಮುಂಚೆ ಭಾರತದಲ್ಲಿ ಜನ ಬದುಕುತ್ತಿರಲಿಲ್ಲವೇ? ಆಗ ಗೂಗಲ್, ಮೈಕ್ರೊಸಾಫ್ಟ್, ರಿಲಯನ್ಸ್ ಅಥವಾ ಇನ್ನ್ಯಾವುದೇ ಪ್ರಸಿದ್ಧ ಸಂಸ್ಥೆಗಳು ಇರಲಿಲ್ಲ. ನಮ್ಮ ತಾತ , ಮುತ್ತಾತರು ಇಂತಹ ಸಂಸ್ಥೆಗಳ ನೌಕರರಾಗಿರಲಿಲ್ಲ, ಅವರಿಗೆಲ್ಲ, ನಮಗೆ ಬಂದ ಹಾಗೆ ತಿಂಗಳ ಕೊನೆಗೆ ವೇತನ ಸಿಗುತ್ತಿರಲಿಲ್ಲ.
ಇಷ್ಟಿದ್ದರೂ ಅವರೆಲ್ಲಾ ನಮಗಿಂತ ಖುಷಿಯಾಗಿ, ಆರೋಗ್ಯವಾಗಿ ಬದುಕಿ ಜೀವನ ಪಯಣ ಮುಗಿಸಿ ಹೋಗಲಿಲ್ಲವೇ? ಅಂದರೇನರ್ಥ? ನಾವು ನಗರಕ್ಕೆ ಬಂದೆವು, ನಮ್ಮಲ್ಲಿನ ಬದುಕುವ ಕಲೆಯನ್ನ ಮರೆತೆವು. ಕೆಲ್ಸವಿಲ್ಲದಿದ್ದರೆ ಮುಂದೇನು? ಎನ್ನುವ ಆತಂಕ ಬಿಟ್ಟು ನಮಗೆ ಬೇರೆ ಯೋಚನೆ ಬರುವುದೇ ಇಲ್ಲ! ಹೆಚ್ಚು ಕಷ್ಟ ಪಡದೆ ತಿಂಗಳಿಗೆ ಸಿಗುವ ವೇತನದ ಗುಲಾಮರಾದ ನಮಗೆ, ಪರ್ಯಾಯ ಚಿಂತಿಸುವ ಶಕ್ತಿ ಎಲ್ಲಿಂದ ಬಂದಿತು?
ಈಗೇನು ಪ್ರಪಂಚ ಮುಳುಗಿ ಹೋಗಿಲ್ಲ. ಈಗಲೂ ಬದುಕು ನಮ್ಮ ಕೈಲಿದೆ. ನಮ್ಮ ಚಿಂತನೆಯಲ್ಲಿ, ನಾವು ಬದುಕನ್ನು ನೋಡುವ ರೀತಿಯಲ್ಲಿ ಒಂದಷ್ಟು ಬದಲಾವಣೆ ಬೇಕಾಗಿದೆ. ಅಷ್ಟು ಮಾಡಿಕೊಂಡರೆ, ಬದುಕು ಕಷ್ಟವೇನಲ್ಲ. ಅಷ್ಟರ ಮಟ್ಟಿಗೆ ಕೋವಿಡ್ 19 ನಮ್ಮನ್ನು ಒಂದು ಅಲರಾಂ ರೀತಿ ಎಚ್ಚರಿಸಿದೆ.
ಇದು ರೀಸೆಟ್ ಬಟನ್ : ಮೊಬೈಲ್ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದರೆ, ಅದನ್ನು ಮತ್ತೆ ಫ್ಯಾಕ್ಟರಿ ಸೆಟ್ಟಿಂಗ್‌ಗೆ ಹೊಂದಿಸುತ್ತೇವೆ. ಅದೂ ಇಲ್ಲದಿದ್ದರೆ? ರೀಸೆಟ್ ಎನ್ನುವ ಒಂದು ಬಟನ್ ಒತ್ತುತ್ತೇವೆ. ನಂತರ ಅದು ಹೊಸ ಮೊಬೈಲ್ ಮಟ್ಟಕ್ಕೆ ಬದಲಾಗಿರುತ್ತದೆ . ಅಂದರೆ, ಹಳೆಯ ಯಾವ ವಿಷಯವೂ ಇರದೇ, ಹೊಸದಾಗಿ ಬೇಕಾದುದನ್ನು ತುಂಬಲು ಸಿದ್ಧವಾಗುತ್ತೆ ಅಲ್ಲವೇ? ಈಗ ಆಗಿರುವುದೂ ಅದೇ! ಕೋವಿಡ್ 19, ವಿಶ್ವ ವ್ಯವಸ್ಥೆಯ ರೀಸೆಟ್ ಬಟನ್!!
ಗಮನಿಸಿ: ಎಲ್ಲೆಲ್ಲಿ ಸಮಸ್ಯೆ ಇರುತ್ತದೆಯೋ, ಅಲ್ಲಿ ಅವಕಾಶಗಳೂ ಹೇರಳವಾಗಿ ತೆರೆದು ಕೊಳ್ಳುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.