ಒಂದೇ ದಿನ 196 ಸೋಂಕು ದೃಢ!
Team Udayavani, Jun 22, 2020, 6:06 AM IST
ಬೆಂಗಳೂರು: ನಗರದಲ್ಲಿ ಭಾನುವಾರ ಒಂದೇ ದಿನ 196 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ ಒಟ್ಟಾರೆ 1,272 ಆಗಿದೆ. ಈ ಮೂಲಕ ಬೆಂಗಳೂರು ರಾಜ್ಯದಲ್ಲಿ ಸೋಂಕಿತರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾನುವಾರ ಕೇವಲ 17 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 796 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಮ ಶೀತ ಜ್ವರದಿಂದ ಬಳಲುತ್ತಿದ್ದ 103, ಸೋಂಕಿತರ ಸಂಪರ್ಕದಿಂದ 23, ಸಂರ್ಪಕ ಪತ್ತೆ ಹಚ್ಚಲಾಗುತ್ತಿದ್ದ 66 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.
ಜ್ಞಾನಜೋತಿನಗರ, ಮಾರತಹಳ್ಳಿ, ಮುನೇಶ್ವರ ಲೇಔಟ್, ಹೂಡಿ, ರಾಜಗೋಪಾಲನಗರದಲ್ಲಿ ಸೋಂಕಿತರು ದೃಢಪಟ್ಟಿದ್ದು, ಈ ನಗರಗಳನ್ನು ಸೀಲ್‌ಡೌನ್ ಮಾಡಲಾಗಿದೆ. ನಗರದಲ್ಲಿ ಕೋವಿಡ್ 19 ಸಂಖ್ಯೆ ದಿನದಿಂದ ಹೆಚ್ಚಾಗುತ್ತಿರುವ ಹಿನ್ನೆಲೆ ಹಜ್ ಭವನವನ್ನು ಕೋವಿಡ್ 19 ಸೋಂಕು ಚಿಕಿತ್ಸಾ ಕೇಂದ್ರವಾಗಿ ಬದಲಾಯಿಸಲಾಗಿದೆ. ಇಲ್ಲಿ 500 ಜನರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರಿಗೆ ಚಿಕಿತ್ಸೆ ನೀಡಲು ಪಾಲಿಕೆ ನಿರ್ಧರಿಸಿದೆ.
297 ಕಂಟೈನ್ಮೆಂಟ್ ವಲಯ!: ದಿನದಿಂದ ದಿನಕ್ಕೆ ಕಂಟೈನ್ಮೆಂಟ್ ವಲಯ ಹೆಚ್ಚಾಗುತ್ತಿದ್ದು, ಎರಡು ದಿನದ ಹಿಂದೆ 238 ಇದ್ದ ಕಂಟೈನ್ಮೆಂಟ್ ವಲಯ 297ಕ್ಕೆ ಏರಿಕೆಯಾಗಿದೆ. ಭಾನುವಾರ ಬೊಮ್ಮನಹಳ್ಳಿ ವಲಯ- 51, ದಾಸರಹಳ್ಳಿ ವಲಯ- 9, ಬೆಂಗಳೂರು ಪೂರ್ವ ವಲಯ- 45, ಮಹದೇವಪುರ ವಲಯ- 32, ರಾಜರಾಜೇಶ್ವರಿ ನಗರ- 17, ಬೆಂಗಳೂರು ದಕ್ಷಿಣ ವಲಯ- 81, ಬೆಂಗಳೂರು ಪಶ್ಚಿಮ ವಲಯ- 38 ಯಲಹಂಕ ವಲಯ- 17 ಕಂಟೈನ್ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ.
ಚಿಕ್ಕಪೇಟೆ ಒಂದು ವಾರ ಬಂದ್: ನಗರದ ಚಿಕ್ಕಪೇಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕೋವಿಡ್ 19 ಪ್ರಕರಣಗಳು ಏರಿಕೆಯಾಗುತ್ತಿದ್ದು, ಇಲ್ಲಿನ ವ್ಯಾಪಾರ ಸಂಘಟನೆಗಳು ಒಂದು ವಾರ ಮಳಿಗೆಗಳನ್ನು ಬಂದ್ ಮಾಡಲು ನಿರ್ಧರಿಸಿವೆ. ಎಲೆಕ್ಟ್ರಿಕಲ್ ಮರ್ಚೆಂಟ್ ಅಸೋಸಿಯೇಷನ್, ಜ್ಯುವೆಲರಿ ಅಸೋಸಿಯೇಷನ್, ಸಿಲ್ವರ್ ಅಂಡ್ ಗೋಲ್ಡ… ತಯಾರಕರು, ಸ್ವರ್ಣಕಾರ್ ಅಸೋಸಿಯೇಷನ್, ಸಿಲ್ಕ ಕ್ಲಾತ್ ಅಸೋಸಿಯೇಷನ್, ಸ್ವಿಚ್ ಗೈರ್ ಅಸೋಸಿಯೇಷನ್, ಹಾರ್ಡ್ ವೇರ್ ಅಸೋಸಿಯೇಷನ್ ಸೇರಿದಂತೆ 10ಕ್ಕೂ ಅಧಿಕ ವ್ಯಾಪಾರಿ ಸಂಘಟನೆಗಳು ಚಿಕ್ಕಪೇಟೆ ಮಾರುಕಟ್ಟೆಯನ್ನು ಜೂ. 22ರಿಂದ 28ರವರೆಗೆ ಬಂದ್ ಮಾಡಲು ತೀರ್ಮಾನಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.