ಮುಂದುವರಿದ ಸಾವಿನ ಸರಣಿ
Team Udayavani, Jul 11, 2020, 5:36 AM IST
ಬೆಂಗಳೂರು: ನಗರದಲ್ಲಿ ಬೆಡ್‌ಗಳ ಅಲಭ್ಯತೆ ಹಾಗೂ ಆ್ಯಂಬುಲೆನ್ಸ್‌ಗಳ ಕೊರತೆಯ ಪರಿಣಾಮ ಸಂಭವಿಸುತ್ತಿರುವ ಸಾವಿನ ಸರಣಿ ಮುಂದುವರಿದಿದ್ದು, ಶುಕ್ರವಾರ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸೋಂಕಿತರೊಬ್ಬರು ಚಿಕಿತ್ಸೆ ಸಿಗದೆ ನರಳಾಡಿ ಪ್ರಾಣಬಿಟ್ಟ ಘಟನೆ ನಡೆದಿದೆ. ಡಾ.ರಾಜ್‌ಕುಮಾರ್ ರಸ್ತೆ ಒರಾಯನ್ ಮಾಲ್ ಬಳಿ ಇರುವ ಬೆಂಗಳೂರಿನ ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ನಲ್ಲಿ ಪೆಟ್ರೋಲ್ ಬಂಕ್ ಮಾಲಿಕರಾಗಿದ್ದ ಕೋವಿಡ್ 19 ಸೋಂಕಿತ ವ್ಯಕ್ತಿ ಮೃತರಾಗಿದ್ದಾರೆ.
ರೋಗ ಲಕ್ಷಣಗಳಿಲ್ಲದ ಇವರು ಕೆಲ ದಿನಗಳಿಂದ ತಮ್ಮ ಫ್ಲ್ಯಾಟ್ ನಲ್ಲಿ ಕ್ವಾರಂಟೈನ್ ಆಗಿದ್ದರು. ಈ ಸಮಯದಲ್ಲಿ ಕುಟುಂಬಸ್ಥರನ್ನು ಸೋಂಕಿತ ಉದ್ಯಮಿ, ಬೇರೆಡೆಗೆ ಕಳುಹಿಸಿದ್ದರು. ಹೀಗಾಗಿ ವಾರದಿಂದ ಫ್ಲಾಟ್ ನಲ್ಲಿ ಒಬ್ಬರೇ ಇದ್ದರು. ಗುರುವಾರ ರಾತ್ರಿ ಉದ್ಯಮಿಯ ಸಹೋದರ ಊಟ ನೀಡಿ ಹೋಗಿದ್ದಾರೆ. ಆದರೆ, ತಡರಾತ್ರಿ ಉಸಿರಾಟದ ಸಮಸ್ಯೆಯಾಗಿದ್ದರಿಂದ ಆಸ್ಪತ್ರೆಗೆ ತೆರಳಿದ್ದರು. “ಬೆಡ್ ಖಾಲಿ ಇಲ್ಲ. ಅಷ್ಟಕ್ಕೂ ನಿಮಗೇನೂ ಆಗಲ್ಲ’ ಎಂದು ವೈದ್ಯರು ಸೋಂಕಿತ ವ್ಯಕ್ತಿಗೆ ಹೇಳಿ ಮನೆಗೆ ಕಳುಹಿಸಿದ್ದಾರೆ.
ಸೋಂಕಿತ ಮನೆಗೆ ಹಿಂದಿರುಗಿದ ನಂತರ ಮತ್ತಷ್ಟು ಸಮಸ್ಯೆಯಾಗಿದೆ. ನಂತರ ತೀವ್ರ ಉಸಿರಾಟದ ಸಮಸ್ಯೆಯಿಂದ ರಾತ್ರಿ ಸೋಂಕಿತ ಉದ್ಯಮಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತಲೆಗೆ ಏಟು ಬಿದ್ದಿದ್ದರಿಂದ ಮನೆ ಬಾಗಿಲವರೆಗೆ ರಕ್ತ ಹರಿದಿದೆ. ಪಕ್ಕದ ಮನೆಯವರು ಸುಬ್ರಹ್ಮಣ್ಯ ಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ವ್ಯಕ್ತಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಿದ್ದಾರೆ.
ಬೆಡ್ ಸಿಗದೆ ವ್ಯಕ್ತಿ ಸಾವು: ಅದೇ ರೀತಿ, ಬೆಡ್ ಸಿಗದೆ ನಗರದ ರಾಯಪುರ ವಾರ್ಡ್ ನ ನಜೀರ್ ಅಹಮದ್ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ನಜೀರ್, ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದಾರೆ. ಅಲ್ಲಿ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ಮಾತ್ರ ತೆಗೆದುಕೊಂಡಿದ್ದು, ನಜೀರ್ ಅಹಮದ್ ಅವರನ್ನು ವಾಪಸ್ ಕಳಿಸಿದ್ದಾರೆ. ಅಲ್ಲಿಂದ ಮತ್ತೂಂದು ಆಸ್ಪತ್ರೆಗೆ ಹೋದ ನಜೀರ್ ಅಹಮದ್ , ತೀವ್ರ ನಿಗಾ ಘಟಕ ಸಿಗುವಷ್ಟರಲ್ಲೇ ಕೊನೆಯುಸಿರೆಳೆದಿದ್ದಾರೆ. ನಜೀರ್ ಅವರ ಸ್ವಾಬ್ ರಿಪೋರ್ಟ್ ನೆಗೆಟಿವ್ ಬಂದಿದ್ದು, ಉಸಿರಾಟದ ಸಮಸ್ಯೆ ಬಿಟ್ಟು ಬೇರೆ ಯಾವುದೇ ಸಮಸ್ಯೆ ಇರಲಿಲ್ಲ.
200ರ ಗಡಿದಾಟಿದ ಮೃತರ ಸಂಖ್ಯೆ: ನಗರದಲ್ಲಿ ಶುಕ್ರವಾರ ಒಂದೇ ದಿನ 29 ಮಂದಿ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಈಗ 200ರ ಗಡಿ ದಾಟಿದೆ. ಮತ್ತೆ ಅತಿ ಹೆಚ್ಚು 1,447 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 15,329 ಏರಿಕೆ ಯಾಗಿದೆ. ಕೋವಿಡ್ ನಿಗದಿತ ಆಸ್ಪತ್ರೆ ಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ 11,687 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 301 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 206 ಜನರು ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದು, ಶುಕ್ರವಾರ 601 ಜನರು ಗುಣಮುಖ ರಾಗಿ ಬಿಡುಗಡೆಯಾಗಿದ್ದಾರೆ.
ಹಾಟ್‌ಸ್ಪಾಟ್ ಆದ ಚಿಕ್ಕಪೇಟೆ: ಮಹಾನಗರದಲ್ಲಿ ಕೋವಿಡ್ 19 ಕಾಲಿಟ್ಟ ಆರಂಭದ ದಿನಗಳಲ್ಲಿ ಪಾದರಾಯನಪುರ, ಶಿವಾಜಿನಗರ ಮತ್ತು ಹೊಂಗಸಂದ್ರ ಪ್ರದೇಶಗಳು ದೊಡ್ಡ ತಲೆನೋವಾಗಿತ್ತು. ಈಗ ಚಿಕ್ಕಪೇಟೆ ಸರದಿ. ಈವರೆಗೆ ಇಲ್ಲಿ 200ಕ್ಕೂ ಹೆಚ್ಚು ಜನರಿಗೆ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಜೂನ್ 21ರಂದು ಇಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು.
ಹಾಸಿಗೆಗಾಗಿ ಕಾದು ಕುಳಿತ: ಅವೆನ್ಯೂ ರಸ್ತೆಯ ನಿವಾಸಿಗೆ ಸೋಂಕು ದೃಢಪಟ್ಟಿದ್ದು, ಕರೆ ಮಾಡಿ ದರೂ ಆ್ಯಂಬುಲೆನ್ಸ್ ಬಂದಿಲ್ಲ. ತಮ್ಮ ವಾಹನದಲ್ಲಿಯೇ ಶುಕ್ರವಾರ ಕೆ.ಸಿ. ಜನರಲ್ ಆಸ್ಪತ್ರೆಗೆ ಬಂದಿದ್ದು, ಬೆಡ್ ನೀಡಲು ಸಿಬ್ಬಂದಿ ನಿರಾಕರಿಸಿದ್ದಾರೆ. 10ದಿನದ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಜ್ವರ ನಿಲ್ಲದ ಕಾರಣ 4 ದಿನ ಹಿಂದೆ ಪರೀಕ್ಷೆಗೆ ಒಳಪಟ್ಟಿದ್ದಾರೆ. ಗುರುವಾರ ತಡರಾತ್ರಿ ಪಾಲಿಕೆ ಸಿಬ್ಬಂದಿ ಕರೆ ಮಾಡಿ ಸೋಂಕು ದೃಢಪಡಿಸಿದ್ದು, ಶುಕ್ರವಾರ ಬೆಳಗ್ಗೆವರೆಗೂ ಆ್ಯಂಬುಲೆನ್ಸ್ ಬಂದಿಲ್ಲ. ತಾವಾಗಿಯೇ ಕೆ.ಸಿ. ಜನರಲ್ ಆಸ್ಪತ್ರೆಗೆ ಬಂದಿದ್ದು, ಬೆಡ್ ನೀಡಲು ಹಿಂದೇಟು ಹಾಕಿದ್ದಾರೆ.
ಹೀಗಾಗಿ, ಆಸ್ಪತ್ರೆ ಮುಂಭಾಗದಲ್ಲೇ ಕುಳಿತಿದ್ದಾರೆಂದು ತಿಳಿದುಬಂದಿದೆ. ನಗರದ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಿಪಿಇ ಕಿಟ್ ನೀಡದೆ ಚಿಕಿತ್ಸೆ ನೀಡಲು ಸೂಚಿಸುತ್ತಿದ್ದಾರೆ ಎಂಬ ಆರೋಪ ವಿದ್ಯಾರ್ಥಿಗಳಿಂದ ಕೇಳಿಬಂದಿದೆ. “ಸ್ವಂತ ಹಣದಲ್ಲಿಯೇ ಪಿಪಿಇ ಕಿಟ್ ಖರೀದಿ ಸುವಂತೆ ಆಸ್ಪತ್ರೆಗಳ ಆಡಳಿತ ಮಂಡಳಿ ಸೂಚಿಸುತ್ತಿದ್ದು, ವೈದ್ಯರಿಗೆ ಮಾಸಿಕ 4 ಸಾವಿರ ರೂ. ನೀಡುತ್ತಿದ್ದಾರೆ’ ಎಂದು ವಿದ್ಯಾರ್ಥಿ ನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.