ತೆಲುಗಿನ ಗ್ಯಾಂಗ್ ಸಿನಿಮಾ ರೀತಿ ಅಧಿಕಾರಿಗಳ ಸುಲಿಗೆಗೈದ ವಂಚಕ
ಲೋಕಾಯುಕ್ತ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಬೆದರಿಸಿ ಹಣ ವಸೂಲಿ
Team Udayavani, Jan 3, 2024, 8:07 AM IST
ಬೆಂಗಳೂರು: ಟಾಲಿವುಡ್ ನಟ ಸೂರ್ಯ ನಟನೆಯ “ಗ್ಯಾಂಗ್’ ಸಿನಿಮಾದಿಂದ ಪ್ರೇರಣೆಗೊಂಡು ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಸಿ ಲಕ್ಷಾಂತರ ರೂ. ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗ್ಗೆಪಲ್ಲಿ ತಾಲೂಕಿನ ಶ್ರೀಧರ್ ರೆಡ್ಡಿ (31) ಬಂಧಿತ.
ಆರೋಪಿ 2019ರಿಂದ ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಸುಮಾರು 60ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಹಣ ವಸೂಲಿ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈತನ ವಿರುದ್ಧ ಬೆಂಗಳೂರಿನ ಸಿದ್ದಾಪುರ, ಹೈಗ್ರೌಂಡ್ಸ್, ವಿಧಾನಸೌಧ ಮತ್ತು ಆಂಧ್ರಪ್ರದೇಶದ ಟೂ ಟೌನ್ ಹಾಗೂ ರಾಜಮಂಡ್ರಿಯ ತ್ರಿಟೌನ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಬೇಗೂರು, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೆಬ್ಬಗೋಡಿ, ಜಿಗಣಿ, ಸೂರ್ಯಸಿಟಿ, ಕೋಲಾರ ಟೌನ್ ಠಾಣೆಗಳಲ್ಲಿ ಮನೆಕಳವು ಪ್ರಕರಣಗಳು ದಾಖಲಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗ್ಯಾಂಗ್ ಸಿನಿಮಾ ಪ್ರೇರಣೆ: ಎಸ್‌ಎಸ್‌ಎಲ್‌ಸಿ ಓದಿರುವ ಶ್ರೀಧರ್ ರೆಡ್ಡಿ, ವಿವಾಹಿತನಾಗಿದ್ದು, ಮಕ್ಕಳಿದ್ದಾರೆ. ಬಾಗೇಪಲ್ಲಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಊರಿನಲ್ಲೇ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಜತೆಗೆ ಬೆಂಗಳೂರು ಹಾಗೂ ಗ್ರಾಮಾಂತರ ಭಾಗದಲ್ಲಿ ಮನೆ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ.
ಈ ಮಧ್ಯೆ 2018ರಲ್ಲಿ ಸೂರ್ಯ ನಟನೆಯ ತೆಲುಗಿನ “ಗ್ಯಾಂಗ್’ ಸಿನಿಮಾ ಬಿಡುಗಡೆಯಾಗಿದ್ದು, ಈ ಸಿನಿಮಾದಲ್ಲಿ ನಾಯಕ ನಟ ಭ್ರಷ್ಟ ಅಧಿಕಾರಿಗಳ ಪಟ್ಟಿ ಮಾಡಿ, ಅಂತಹ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಅಥವಾ ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ ಕೋಟ್ಯಂತರ ರೂ. ಲೂಟಿ ಮಾಡುತ್ತಾನೆ. ಕೆಲ ಅಧಿಕಾರಿಗಳಿಂದ ಪ್ರಕರಣ ಮುಚ್ಚಿ ಹಾಕುವುದಾಗಿ ಹಣ ಪಡೆಯುತ್ತೇನೆ.’
ಇನ್ನು ಆರೋಪಿ ಶ್ರೀಧರ್ ರೆಡ್ಡಿ, 2019ರಲ್ಲಿ ಈ ಸಿನಿಮಾವನ್ನು ನೋಡಿ, ಅದೇ ಮಾದರಿಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಕರೆ ಮಾಡಿ ಹಣ ವಸೂಲಿಗೆ ಸಂಚು ರೂಪಿಸಿದ್ದ. ಮೊದಲಿಗೆ ಚಿಕ್ಕಬಳ್ಳಾಪುರದಿಂದಲೇ ಆರಂಭಿಸಿ ಯಶಸ್ವಿಯಾಗಿದ್ದ. ಬಳಿಕ ರಾಜ್ಯ ಸರ್ಕಾರದ ವಿವಿಧ ಇಲಾಖೆಯ ವೆಬ್‌ಸೈಟ್ ಹಾಗೂ ಬೇರೆ ಬೇರೆ ಮಾರ್ಗದಲ್ಲಿ ಸರ್ಕಾರಿ ಅಧಿಕಾರಿಗಳ ಮೊಬೈಲ್ ನಂಬರ್ ಪಡೆದು, ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಲಕ್ಷಾಂತರ ರೂ. ವಸೂಲಿ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಇತ್ತೀಚೆಗೆ ರಾಜ್ಯ ಸರ್ಕಾರದ ಇಲಾಖೆಯೊಂದರಲ್ಲಿ ಎಇಇ ಆಗಿರುವ ರಾಮದಾಸ್ ಎಂಬುವರಿಗೆ ಕರೆ ಮಾಡಿದ್ದ ಆರೋಪಿ, ಲೋಕಾಯುಕ್ತ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಾನೆ. ಬಳಿಕ ಎಡಿಜಿಪಿ ಕೇಶವರಾವ್ ಸಾಹೇಬರು ಮಾತನಾಡುತ್ತಾರೆ ಎಂದು ಈತನೇ, ಬೇರೆ ಧ್ವನಿಯಲ್ಲಿ ಮಾತನಾಡಿದ್ದಾನೆ. “ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಅರ್ಜಿಯೊಂದು ಬಂದಿದೆ. ಅದನ್ನು ವಿಚಾರಣೆ ಮಾಡದೇ ಇತ್ಯರ್ಥ ಪಡಿಸಲು ಹಣ ನೀಡಬೇಕು. ನೀವು ಹಣ ಕೊಟ್ಟರೆ ಅರ್ಜಿಯನ್ನು ನಮ್ಮ ಟೆಕ್ನಿಕಲ್ ಟೀಂನಿಂದ ವಿಚಾರಣೆ ನಡೆಸಿ ಬಿ-ರಿಪೋರ್ಟ್ ಸಲ್ಲಿಸ ಲಾಗುವುದು’ ಎಂದು ಹೇಳಿದ್ದಾನೆ. ಹೀಗೆ ಹಣಕ್ಕಾಗಿ ಬೇಡಿಕೆ ಇಟ್ಟು ಸರ್ಕಾರಿ ಅಧಿಕಾರಿಗಳಿಗೆ ಕೆಲಸ ಮಾಡದಂತೆ ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾನೆ ಎಂದು ರಾಮದಾಸ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿಕೊಂಡು ಹೆಚ್ಚಿನ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯಕ್ತ ಸತೀಶ್ ಕುಮಾರ್, ಪೂರ್ವವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ರಮನ್ ಗುಪ್ತಾ, ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತಾ, ಡಿಸಿಪಿ ಶ್ರೀನಿವಾಸಗೌಡ, ತನಿಖಾಧಿಕಾರಿ ಬಾಲಾಜಿ ಹಾಗೂ ಇತರರು ಇದ್ದರು.
ವಂಚನೆಗೊಳಗಾದವರು ದೂರು ನೀಡಿ: ಕಮಿಷನರ್ ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ವಂಚಿಸುತ್ತಿದ್ದ ಚಿಕ್ಕಬಳ್ಳಾಪುರ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ ವಂಚನೆಗೊಳಗಾದ ಸರ್ಕಾರಿ ಅಧಿಕಾರಿಗಳು ಸಿಸಿಬಿ ಕಚೇರಿಗೆ ಬಂದು ದೂರು ನೀಡಬಹುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ವಿಮಾನದಲ್ಲೇ ಹಾರಾಟ, ಗೋವಾದಲ್ಲಿ ಮೋಜು ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡುತ್ತಿದ್ದ ಶ್ರೀಧರ್ ರೆಡ್ಡಿ ಇದುವರೆಗೂ 4 ಕೋಟಿ ರೂ.ಗೂ ಅಧಿಕ ಹಣ ವಸೂಲಿ ಮಾಡಿದ್ದಾನೆ. ಈ ಹಣದಲ್ಲಿ ಮೋಜು- ಮಸ್ತಿ ಮಾಡುತ್ತಿದ್ದ. ವಿಮಾನದಲ್ಲಿ ಗೋವಾಕ್ಕೆ ಹೋಗಿ, ಕ್ಯಾಸಿನೋದಲ್ಲಿ ಜೂಜಾಟದಲ್ಲಿ ಹಣ ಹೂಡಿಕೆ ಮಾಡಿದ್ದಾನೆ. ಜತೆಗೆ ಕೆಲ ಪ್ರವಾಸಿ ಸ್ಥಳಗಳಿಗೆ ವಿಮಾನದಲ್ಲೇ ಸಂಚರಿಸಿ ಹಣ ವ್ಯಯಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.