Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ತಪಾಸಣೆ ; ದಾಳಿ ವೇಳೆ ಹಲವು ಲೋಪಗಳು ಬೆಳಕಿಗೆ
Team Udayavani, Jan 11, 2025, 1:11 PM IST
ಎಂಜಿನಿಯರ್ ಬಳಿ ದಾಖಲೆ ಇಲ್ಲದ 50 ಸಾವಿರ ರೂ. ಪತ್ತೆ ; ಸಾರ್ವಜನಿಕರ ದೂರಿನ ಹಿನ್ನೆಲೆ: ದಿಢೀರ್ ಕಾರ್ಯಾಚರಣೆ
ಬೆಂಗಳೂರು: ಬಿಬಿಎಂಪಿಯ ಬಹುತೇಕ ಕಂದಾಯ ಅಧಿಕಾರಿ(ಆರ್‌ಓ) ಹಾಗೂ ಸಹಾಯಕ ಕಂದಾಯ ಅಧಿಕಾರಿ(ಎಆರ್‌ಓ) ಕಚೇರಿಗಳಲ್ಲಿ ಲೋಪಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ಯಲ್ಲಿ ನಗರದಲ್ಲಿರುವ 54 ಬಿಬಿಎಂಪಿ ಕಚೇರಿಗಳ ಮೇಲೆ ಶುಕ್ರವಾರ ಲೋಕಾಯುಕ್ತ ಪೊಲೀಸರು ಏಕ ಕಾಲದಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ. ಖುದ್ದು ಲೋಕಾಯುಕ್ತ ಬಿ.ಎಸ್.ಪಾಟೀಲ್ ಹಾಗೂ ಇಬ್ಬರು ಉಪಲೋಕಾಯುಕ್ತರು ದಾಳಿಯಲ್ಲಿ ಭಾಗಿಯಾಗಿ ಅಧಿಕಾರಿಗಳ ಬೆವಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನದಿಂದ ತಪಾಸಣೆ ನಡೆಯು ತ್ತಿದ್ದು, ಹಲವು ಕಚೇರಿಗಳಲ್ಲಿ ತಡರಾತ್ರಿವರೆಗೆ ಪರಿಶೀಲನೆ ನಡೆಯಿತು. ಈ ವೇಳೆ ಬಿಬಿಎಂಪಿ ಕಚೇರಿಗಳಲ್ಲಿ ಹಲವು ಲೋಪಗಳು ಪತ್ತೆಯಾಗಿದೆ.
ದಾಖಲೆ ಇಲ್ಲದ 50 ಸಾವಿರ ರೂ. ಪತ್ತೆ: ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿಯೂ ಸಹ ಬಹುತೇಕ ಅಧಿಕಾರಿ ಮತ್ತು ಸಿಬ್ಬಂದಿ ಗೈರುಹಾಜರಿ ರುವುದು ಕಂಡುಬಂದಿದೆ. ಕಾರ್ಯ ಪಾಲಕ ಅಭಿಯಂತರರು, ಬಿಬಿಎಂಪಿ ಕೆಆರ್ ಪುರಂ ವಿಭಾಗದಲ್ಲಿ ತಪಾಸಣೆ ಸಮಯದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರ ಬಳಿ ಸುಮಾರು 50 ಸಾವಿರ ರೂ. ನಗದು ಹಾಗೂ ಸಹಾಯಕ ಅಭಿಯಂತರರ ಬಳಿ 43 ಸಾವಿರ ರೂ. ಪತ್ತೆಯಾಗಿದೆ. ಈ ಸಂಬಂಧ ಅವರು ನಗದು ಘೋಷಣಾ ವಹಿ ಯಲ್ಲಿ ತಮ್ಮ ಬಳಿ ಇರುವ ಹಣದ ಬಗ್ಗೆ ನಮೂದು ಮಾಡಿರುವುದಿಲ್ಲ. ಈ ನಗದಿನ ಬಗ್ಗೆ ಸಮಂಜಸ ಉತ್ತರ ನೀಡಿರುವುದಿಲ್ಲ. ಆ ನಗದನ್ನು ಮಹಜರು ಮಾಡಿ ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಲೋಪ ದೋಷ ಗಳನ್ನು ಸರಿಪಡಿಸಿ ಲೋಕಾಯುಕ್ತ ಕಚೇರಿಗೆ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಹಾಜರಾಗಿ ವರದಿ ನೀಡಲು ಲೋಕಾಯುಕ್ತರು ಸೂಚಿಸಿದ್ದಾರೆ.
ಉಪಲೋಕಾಯುಕ್ತರಿಂದಲೂ ಪರಿಶಿಲನೆ: ಉಪಾಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಅವರು ಎಆರ್‌ಓ ಕಚೇರಿ ಚಾಮರಾಜಪೇಟೆ, ವಸಂತನಗರ ಉಪವಿಭಾಗ ಹಾಗೂ ಶಿವಾಜಿನಗರ ಡಿವಿಷನ್ ಕಾರ್ಯಪಾಲಕ ಅಭಿಯಂತ ಕಚೇರಿಗಳಲ್ಲಿ ತಪಾಸಣಾ ಕಾರ್ಯ ಕೈಗೊಂಡಿದ್ದಾರೆ. ಮತ್ತೋರ್ವ ಉಪಲೋಕಾಯುಕ್ತ ನ್ಯಾ.ಬಿ. ವೀರಪ್ಪ ಅವರು ಕಾರ್ಯಪಾಲಕ ಎಂಜಿನಿಯರ್ ಚಿಕ್ಕಪೇಟೆ, ಜಯನಗರ ಡಿವಿಷನ್ ಮತ್ತು ಸೌತ್ ಎಂಡ್ ಸರ್ಕಲ್ ಎಆರ್‌ಓ ಕಚೇರಿಗಳಲ್ಲಿ ತಪಾಸಣೆ ಕೈಗೊಂಡಿದ್ದರು.
ಲಾಲ್‌ಬಾಗ್ ರಸ್ತೆಯ ಕಚೇರಿ ಭೇಟಿ ವೇಳೆ ಅಧಿಕಾರಿಗಳೇ ಇರಲಿಲ್ಲ. ಅಧಿಕಾರಿಗಳೆಲ್ಲ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಸಹಾಯಕರು ಹೇಳಿ ದ್ದರು. ವೈಕುಂಠ ಏಕಾದಶಿ ಮಾಡಲು ದೇವಸ್ಥಾನಕ್ಕೆ ಹೋದರೆ ಇಲ್ಲಿ ಯಾರು ಕೆಲಸ ಮಾಡುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಪ್ರಶ್ನಿಸಿದ ಪ್ರಸಂಗವೂ ನಡೆಯಿತು.
ಸಾರ್ವಜನಿಕರಿಂದ ದೂರು: ಬಿಬಿಎಂಪಿ ಆರ್‌ಓ ಮತ್ತು ಎಆರ್‌ಓ ಕಚೇರಿಗಳಲ್ಲಿ ಪಾಲಿಕೆಗೆ ಸಂಬಂಧಿ ಸಿದ ಸ್ವತ್ತುಗಳಿಗೆ ಇ-ಖಾತಾ ನೀಡುತ್ತಿದೆ. ಇ-ಖಾತಾ ಪಡೆಯುವಲ್ಲಿ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದ ಬಗ್ಗೆ ಅನೇಕ ದೂರುಗಳು ಲೋಕಾಯುಕ್ತಕ್ಕೆ ಬಂದಿದ್ದವು. ಜೊತೆಗೆ ಕಾರ್ಯ ಪಾಲಕ ಅಭಿಯಂತರರು ಹಾಗೂ ಸಹಾ ಯಕ ಕಾರ್ಯ ಪಾಲಕ ಅಭಿಯಂತರರು ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಹಾಗೂ ನೆಪ ಮಾತ್ರಕ್ಕೆ ನೋಟಿಸ್ ನೀಡಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವವರನ್ನು ತಡೆಯಲು ವಿಫಲಾಗಿರುವದರಿಂದ ಸಾರ್ವಜನಿಕರು ಆಗಿಂದ್ದಾಗ್ಗೆ ಲೋಕಾಯುಕ್ತ ಸಂಸ್ಥೆಯ ಗಮನ ಸೆಳೆಯುತ್ತಿದ್ದರು. 2023ರ ಆಗಸ್ಟ್‌ನಲ್ಲಿ ಲೋಕಾಯುಕ್ತರ ಆದೇಶದಂತೆ ಬಿಬಿಎಂಪಿಯ 8 ವಲಯಗಳಿಗೆ ಸಂಬಂಧಿಸಿದಂತೆ 8 ಸ್ವಯಂ ಪ್ರೇರಿತ ದೂರುಗಳನ್ನು ನೋಂದಾಯಿಸಿ ತನಿಖೆ ಮುಂದುವರಿಸಲಾಗಿತ್ತು. ಈ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಾಂಗ ಹಾಗೂ ಪೊಲೀಸ್ ಅಧಿಕಾರಿಗಳ ತಂಡಗಳನ್ನು ಸನ್ನದುಗೊಳಿಸಿ ಬೆಂಗಳೂರು ನಗರದಾದ್ಯಂತ ಇರುವ ಸುಮಾರು 54 ಬಿಬಿಎಂಪಿ ಕಚೇರಿಗಳಿಗೆ ಏಕ ಕಾಲದಲ್ಲಿ ದಿಡೀರ್ ದಾಳಿ ನಡೆಸಿ ಅಕ್ರಮಗಳನ್ನು ಪತ್ತೆ ಹಚ್ಚುವಂತೆ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಆದೇಶಿಸಿದ್ದರು.
ಮೂವರು ನೌಕರರಿದ್ದರೂ ಹಾಜರಾತಿ ಪುಸ್ತಕದಲ್ಲಿ 21 ಸಹಿ! ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಎಆರ್‌ಓ ಕಚೇರಿ ಹೆಬ್ಟಾಳ ಸಬ್ ಡಿವಿಷನ್ ಮುನಿರೆಡ್ಡಿ ಪಾಳ್ಯ ಮುಖ್ಯ ರಸ್ತೆಯಲ್ಲಿರುವ ಕಚೇರಿಗೆ ಖುದ್ದು ಭೇಟಿ ನೀಡಿದ್ದರು. ಸಹಾಯಕ ಕಾರ್ಯಪಾಲಕ ಅಭಿಯಂತರರ ಹೆಬ್ಟಾಳ ಸಬ್ ಡಿವಿಷನ್ ಕಚೇರಿಯಲ್ಲಿ ಒಟ್ಟು 22 ಜನ ನೌಕರರಿದ್ದು, ಅದರಲ್ಲಿ 21 ಜನ ಹಾಜರಾತಿ ವಹಿಗೆ ಸಹಿ ಮಾಡಿದ್ದು, ಕಚೇರಿಯಲ್ಲಿ ಕೇವಲ ಮೂರು ಜನ ಮಾತ್ರ ಇದ್ದರು. ಎಆರ್‌ಓ ಸಹ ಕಚೇರಿಯಲ್ಲಿ ಹಾಜರಿರಲಿಲ್ಲ.
ಕರೆ ಮಾಡಿ ಕೇಳಿದಾಗ ಬೆಳಗ್ಗೆ ಕಚೇರಿಗೆ ಬಂದು ನಂತರ ಮುಖ್ಯ ಕಚೇರಿಗೆ ಹೋಗಿರುವುದಾಗಿ ತಿಳಿಸಿರುತ್ತಾರೆ. ಆದರೆ ಆ ಬಗ್ಗೆ ಚಲನಾ-ವಲನಾ ವಹಿಯಲ್ಲಿ ನಮೂದು ಮಾಡಿರುವುದಿಲ್ಲ. ಎಆರ್‌ಓ ಅವರು ಬೆಳಗ್ಗೆ ಕಚೇರಿಗೆ ಬಂದು ಮಧ್ಯಾಹ್ನ ತನಕ ಕೆಲಸ ಮಾಡಿರುತ್ತೇನೆಂದು ಹೇಳಿದ್ದಾರೆ. ಆದರೆ ಹಾಜರಾತಿ ವಹಿಯಲ್ಲಿ ಅವರು ಸಹಿ ಮಾಡಿರುವುದಿಲ್ಲ. ಇದೇ ಕಚೇರಿಯಲ್ಲಿ ನಗದು ವಹಿ ಮತ್ತು ಚಲನಾ-ವಲನಾ ವಹಿಗಳನ್ನು ಆಗಸ್ಟ್- 2023 ರ ನಂತರ ನಿರ್ವಹಣೆ ಮಾಡಿರುವುದಿಲ್ಲ. ಈ ಬಗ್ಗೆ ಹಾಜರಿದ್ದ ಸಿಬ್ಬಂದಿ ಯಾವುದೇ ಸಮರ್ಪಕ ಉತ್ತರ ನೀಡಿರುವುದಿಲ್ಲ.
ತಾಯಿ ಬದಲು ಮಗ ಕೆಲಸಕ್ಕೆ! ಉಪಲೋಕಾಯುಕ್ತ ನ್ಯಾ.ವೀರಪ್ಪ ಅವರು ಸೌತ್ ಎಂಡ್ ಸರ್ಕಲ್ ಬಿಬಿಎಂಪಿ ಕಚೇರಿಗೆ ತೆರಳಿದಾಗ ಕೇಸ್ ವರ್ಕರ್ ಕವಿತಾ ಬದಲು ಅವರ ಮಗ ನವೀನ್ ಹಾಜರಾಗಿರುವುದು ಕಂಡು ಬಂದಿತ್ತು. ಮಗನ ಜೊತೆ ಸಹಾಯಕ್ಕೆ ನಿಯಮ ಉಲ್ಲಂ ಸಿ ಗೀತಾ ಎಂಬ ಸಹಾಯಕಿಯನ್ನು ಕವಿತಾ ನೇಮಿಸಿರುವುದು ಬೆಳಕಿಗೆ ಬಂದಿದೆ. ಕಚೇರಿಗೆ ದಾಳಿ ನಡೆಸಿದ ವೇಳೆ ನವೀನ್ ಅವರನ್ನು ಪ್ರಶ್ನಿಸಿದಾಗ ಆತ ತಾಯಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ. ನೇರವಾಗಿ ಕವಿತಾಗೆ ಕರೆ ಮಾಡಿದ ನ್ಯಾ.ವೀರಪ್ಪ ಗರಂ ಆಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.