ಪ್ರತಿಸ್ಪರ್ಧಿಗಳ ಧಮ್ ತಿಳಿದು ಸಜ್ಜಾಗಲು ಕಾಂಗ್ರೆಸ್ ಸಮೀಕ್ಷೆ
ಸದ್ದಿಲ್ಲದೇ ಆರಂಭವಾದ ಕ್ಷೇತ್ರವಾರು ಸಮೀಕ್ಷೆ
Team Udayavani, Apr 18, 2022, 12:46 PM IST
ಬೆಂಗಳೂರು: ವರ್ಷಕ್ಕೆ ಮುಂಚೆಯೇ ರಾಜ್ಯ ರಾಜಕೀಯ ಚುನಾವಣಾ “ಮೂಡ್ ‘ನತ್ತ ಹೊರಳಿದ್ದು, ಅಧಿಕಾರದ ಗದ್ದುಗೆಗೇರಲು ಕಾಂಗ್ರೆಸ್, ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಸಂಗ್ರಹ, ಕ್ಷೇತ್ರವಾರು ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲು ಮುಂದಾಗಿದೆ.
ಕಾಂಗ್ರೆಸ್ ಗೆಲ್ಲಬೇಕಾದರೆ ಬಿಜೆಪಿ ಹಾಗೂ ಜೆಡಿಎಸ್‌ನ ಸವಾಲು ಎದುರಿಸುವುದು ಮುಖ್ಯವಾದ್ದರಿಂದ ಆ ಪಕ್ಷಗಳ ಹಾಗೂ ಸಂಭವನೀಯ ಅಭ್ಯರ್ಥಿಗಳ ಸಾಮರ್ಥ್ಯ, ಸ್ವ ವರ್ಚಸ್ಸು ಕುರಿತು ಹೆಚ್ಚು ತಲೆಕೆಡಿಸಿಕೊಂಡಿದೆ. ಜತೆಗೆ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆಯೂ ಕಾಂಗ್ರೆಸ್‌ಗೆ ಸವಾಲಾಗಿದೆ.
ಇದರ ನಡುವೆ, ರಾಹುಲ್‌ಗಾಂಧಿ 150 ಕ್ಷೇತ್ರಗಳ ಟಾರ್ಗೆಟ್ ಕೊಟ್ಟು, ಅದನ್ನು ರೀಚ್ ಆಗಲು ಕಾರ್ಯತಂತ್ರ ರೂಪಿಸುವಂತೆ ಸೂಚಿಸಿದ್ದು, ಅದರಂತೆ ಕ್ಷೇತ್ರವಾರು ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ. ಇದರ ಜತೆ ಜತೆಗೆ ವಿನೂತನ ಸಮೀಕ್ಷೆಯೂ ಸದ್ದಿಲ್ಲದೆ ಆರಂಭಗೊಂಡಿದೆ.
ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ತಂಡದ ಸುನೀಲ್ ಕುನಗೋಳ್ ಎಂಬುವರಿಗೆ ಕಾಂಗ್ರೆಸ್ ಸಮೀಕ್ಷಾ ಕಾರ್ಯ ವಹಿಸಿದೆ. ಸುನಿಲ್ ಅವರ ಎಬಿಎಂ ಸಂಸ್ಥೆ ಆ ಕೆಲಸ ಆರಂಭಿಸಿದೆ. ಖುದ್ದು ರಾಹುಲ್‌ಗಾಂಧಿ 6 ತಿಂಗಳ ಕಾಲ ಸಮಾಲೋಚನೆ ನಡೆಸಿ ಈ ತಂಡವನ್ನು ನಿಯೋಜಿಸಿ ಇತ್ತೀಚೆಗೆ ದೆಹಲಿಗೆ ಹೋಗಿದ್ದ ರಾಜ್ಯ ನಾಯಕರಿಗೆ ಮಾಹಿತಿ ರವಾನಿಸಿದ್ದಾರೆ.
3 ತಿಂಗಳ ಸುತ್ತಾಟ: ಸುನಿಲ್ ಕುನಗೋಳ್ ತಂಡ ಈಗಾಗಲೇ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಎಂ.ಬಿ. ಪಾಟೀಲ್, ಡಿ.ಕೆ. ಶಿವಕುಮಾರ್, ಹರಿ ಪ್ರಸಾದ್ ಸೇರಿ ರಾಜ್ಯದ ಕಾಂಗ್ರೆಸ್ ಮುಖಂಡರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದೆ. ಜಿಲ್ಲಾ ಮತ್ತು ತಾಲೂಕು ಘಟಕಗಳ ಅಧ್ಯಕ್ಷರ ಜತೆಯೂ ಚರ್ಚಿಸಿ ಮಾಹಿತಿ ಕಲೆಹಾಕಿದೆ. ಮತದಾರರ ಪಲ್ಸ್ ಅರಿಯುವ ಹಾಗೂ ಸಮುದಾಯ ಬೆಂಬಲ ಸಹಿತ ಸ್ಥಳೀಯ ಮಟ್ಟದ ನಾಯಕರ ಪ್ಲಸ್ ಹಾಗೂ ಮೈನಸ್ ಬಗ್ಗೆ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯವುಳ್ಳ 200 ಮಂದಿಯ ತಂಡ ಮುಂದಿನ 3 ತಿಂಗಳ ಕಾಲ ರಾಜ್ಯದ 224 ಕ್ಷೇತ್ರ ಸುತ್ತಾಟ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆ ಗೆಲ್ಲಬೇಕಾದರೆ ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು, ಯಾವ ವಿಷಯ ಮುಂದಿಟ್ಟುಕೊಂಡು ಹೋದರೆ ಮತದಾರನ ಮನಗೆಲ್ಲಬಹುದು ಮತ್ತು ಯಾವ ಅಭ್ಯರ್ಥಿ ಕಣಕ್ಕಿಳಿಸಿದರೆ ಗೆಲುವು ಸಾಧ್ಯ ಎಂಬುದರ ಬಗ್ಗೆ ಎಲ್ಲ ಮಗ್ಗಲುಗಳಿಂದಲೂ ಸ್ಥಳೀಯವಾಗಿ ಪರಿಶೀಲನೆ ಮಾಡಿ ಕೆಪಿಸಿಸಿ ಹಾಗೂ ಎಐಸಿಸಿಗೆ ಸುನಿಲ್ ತಂಡ ಕೆಲವೊಂದು ಸಲಹೆಗಳನ್ನು ಶಿಫಾರಸು ಮಾಡಲಿದೆ ಎಂದು ಹೇಳಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಮುಂಬರುವ ಲೋಕಸಭಾ ಚುನಾವಣಾ ಹೋರಾಟಕ್ಕೆ ಹುಮ್ಮಸ್ಸು ಬರುತ್ತದೆ, ದೇಶದ ಇತರೆ ಭಾಗದಲ್ಲಿ ಪಕ್ಷ ಸಂಘಟನೆಗೂ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ವಿನೂತನ ಸಮೀಕ್ಷೆಗೆ ಎಐಸಿಸಿ ಹಂತದಲ್ಲೇ ತೀರ್ಮಾನ ಮಾಡಿ ಎಬಿಎಂ ಸಂಸ್ಥೆಗೆ ವಹಿಸಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿರುವ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪ್ರತ್ಯೇಕವಾಗಿ ಸಮೀಕ್ಷೆಗಳನ್ನು ಮಾಡಿಸಿದ್ದರಾದರೂ ಈಗ ಈ ಸಂಸ್ಥೆ ಮಾಡುವ ಸಮೀಕ್ಷೆ ಆಧಾರದ ಮೇಲೆಯೇ ಟಿಕೆಟ್ ಹಂಚಿಕೆ ಹಾಗೂ ಕಾರ್ಯ ತಂತ್ರ ರೂಪಿತವಾಗಲಿದೆ ಎಂದು ಹೇಳಲಾಗಿದೆ.
ಹಲವರಿಗೆ ಪೀಕಲಾಟ: ರಾಜ್ಯ ವಿಧಾನಪರಿಷತ್ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು, ನಾಯಕರು ಪಂಚರಾಜ್ಯ ಚುನಾವಣೆ ಫಲಿತಾಂಶದ ನಂತರ ಹಿಂದೇಟು ಹಾಕುತ್ತಿದ್ದಾರೆ. ಜಿ.ಟಿ.ದೇವೇಗೌಡ ಸೇರಿ ಕೆಲವರು ಇರುವಲ್ಲೇ ಇರುವುದೋ ಅಥವಾ ಬಿಜೆಪಿಗೆ ಹೋಗುವುದೋ ಎಂಬ ಚಿಂತನೆಯಲ್ಲಿದ್ದರೆ ಮತ್ತೆ ಕೆಲವರು ಆಮ್ ಆದ್ಮಿ ಪಾರ್ಟಿಯತ್ತ ಮುಖ ಮಾಡಿದ್ದಾರೆ. ಗುಬ್ಬಿ ವಾಸು ಸೇರಿ ಈಗಾಗಲೇ ಕಾಂಗ್ರೆಸ್ ಜತೆ ಗುರುತಿಸಿಕೊಂಡವರು ಇದ್ದಲ್ಲೇ ಇರಲು ಆಗದೆ, ಕಾಂಗ್ರೆಸ್‌ಗೆ ಹೋಗಲೂ ಆಗದೆ ಪೀಕಲಾಟಕ್ಕೆ ಸಿಲುಕಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
● ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.