ವೃದ್ಧರ ಪ್ರವೇಶ ನಿರ್ಬಂಧದಲ್ಲಿ ದ್ವಂದ್ವ
Team Udayavani, Jun 15, 2020, 6:24 AM IST
ಬೆಂಗಳೂರು: ಸರ್ಕಾರದ ಸೂಚನೆ ಪ್ರಕಾರ 65 ವರ್ಷ ಮೇಲ್ಪಟ್ಟವರು ದೇವರ ದರ್ಶನಕ್ಕೆ ಬರುವಂತಿಲ್ಲ. ಆದರೆ, ದೇವರ ಪೂಜೆ-ಪುನಸ್ಕಾರಗಳ ಹೊಣೆ ಮಾತ್ರ ಅದೇ ಹಿರಿಯ ನಾಗರಿಕರ ಮೇಲಿದೆ. ಈ ದ್ವಂದ್ವ ನಿಲುವಿನ ಬಗ್ಗೆ ಧಾರ್ಮಿಕ ಮುಖಂಡರ ವಲಯದಲ್ಲಿ ಈಗ ಅಪಸ್ವರ ಕೇಳಿಬರುತ್ತಿದೆ. ದೂರದಿಂದ ದರ್ಶನ ಪಡೆಯುವ 65 ವರ್ಷ ಮೇಲ್ಪಟ್ಟ ಭಕ್ತರಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ದೇವರ ಸನ್ನಿಧಿಯಲ್ಲೇ ಕುಳಿತು ಪೂಜೆ ಮಾಡುವ ಅಥವಾ ಪ್ರಾರ್ಥನೆ ಬೋಧಿಸುವ ಬಹುತೇಕ ಅರ್ಚಕರು 65 ವರ್ಷ ಮೇಲ್ಪಟ್ಟವರೇ ಇದ್ದಾರೆ.
ಅವರಿಗೆ ಇರುವ ವಿನಾಯಿತಿ ಭಕ್ತರಿಗೆ ಯಾಕಿಲ್ಲ? ಸರ್ಕಾರದ ಲೆಕ್ಕಾಚಾರಗಳ ಪ್ರಕಾರ ಈ ವರ್ಗಕ್ಕೆ ಸೋಂಕಿನ ಸಾಧ್ಯತೆಗಳು ಇರುವುದಿಲ್ಲವೇ? ಈ ನಿಟ್ಟಿನಲ್ಲಿ ಸರ್ಕಾರ ರೂಪಿಸಿದ ನಿರ್ಬಂಧದ ನಿಯಮ ಗೊಂದಲದ ಗೂಡಾಗಿದೆ ಎಂದು ಅರ್ಚಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಹಿರಿಯ ನಾಗರಿಕರು ಅದರಲ್ಲೂ 65 ವರ್ಷ ಮೇಲ್ಪಟ್ಟವರು ಬಿಎಂಟಿಸಿ ಬಸ್‌ಗಳಲ್ಲಿ ಓಡಾಡಲು ಅವಕಾಶ ಇದೆ. ಮಾರುಕಟ್ಟೆ, ಊರಿಂದ ಊರುಗಳಿಗೆ ಪ್ರಯಾಣ ಮಾಡುತ್ತಾರೆ. ಆದರೆ, ದೇವಸ್ಥಾನಗಳಿಗೆ ಮಾತ್ರ ಬರುವಂತಿಲ್ಲ.
ಸಾಮಾನ್ಯವಾಗಿ ಮಂದಿರಗಳಿಗೆ ಬರುವವರಲ್ಲಿ ಬಹುತೇಕರು ಇದೇ ವರ್ಗದವರಾಗಿದ್ದು, ನಿರ್ಬಂಧ ವಿಧಿಸಿರುವುದರಿಂದ ದೇವಾಲಯ ತೆರವು ನಾಮಕೆವಾಸ್ತೆ ಆಗಿದ್ದು, ಭಕ್ತರೂ ಇಲ್ಲ ಮತ್ತು ಆದಾಯವೂ ಇಲ್ಲದಂತಾಗಿದೆ. ಆ ಹಿನ್ನೆಲೆಯಲ್ಲಿ ನಿರ್ಬಂಧ ತೆರವುಗೊಳಿಸಿ, ಪ್ರವೇಶಕ್ಕೆ ಮುಕ್ತಗೊಳಿಸಬೇಕು. ಒಂದು ವೇಳೆ ಈ ನಿರ್ಬಂಧ ತಮಗೂ ಅನ್ವಯಿಸುವುದಾದರೆ, ಕುಟುಂಬಗಳ ನಿರ್ವಹಣೆಗೆ ಏನು ಮಾಡಬೇಕು ಎನ್ನುವುದಾದರೂ ಸರ್ಕಾರ ಸ್ಪಷ್ಟಪಡಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
35 ಸಾವಿರ ದೇವಸ್ಥಾನ; 80 ಸಾವಿರ ಅರ್ಚಕರು: ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಸುಮಾರು 35 ಸಾವಿರ ದೇವಸ್ಥಾನಗಳಿದ್ದು, 80 ಸಾವಿರ ಅರ್ಚಕರು ಮತ್ತು ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ 15ರಿಂದ 20 ಸಾವಿರಕ್ಕೂ ಹೆಚ್ಚು ವಯೋವೃದ್ಧರಿದ್ದಾರೆ. ಇನ್ನು ಲಕ್ಷಕ್ಕೂ ಅಧಿಕ ಖಾಸಗಿ ದೇವಸ್ಥಾನಗಳೂ ಇದ್ದು, ಅಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ 65 ವರ್ಷ ಮೇಲ್ಪಟ್ಟ ಅರ್ಚಕರಿದ್ದಾರೆ. ಲಾಕ್‌ಡೌನ್ ತೆರವಾದ ನಂತರದಿಂದ ನಿತ್ಯ ಇವರೆಲ್ಲಾ ದೇವಸ್ಥಾನ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರದ ಈ ದ್ವಂದ್ವ ನಿಲುವು ಗೊಂದಲದಿಂದ ಕೂಡಿದೆ.
ಅಷ್ಟೇ ಅಲ್ಲ, ಅರ್ಚಕರ ಜೀವನ ನಿರ್ವಹಣೆಗೂ ಸಮಸ್ಯೆ ಉಂಟುಮಾಡಿದೆ. ಹೇಗೆಂದರೆ, ಸಾಮಾನ್ಯವಾಗಿ ವಯೋವೃದ್ಧರು ಹೆಚ್ಚಾಗಿ ಧಾರ್ಮಿಕ ಕೇಂದ್ರಗಳಿಗೆ ಬರುತ್ತಾರೆ. ಲಾಕ್ ಡೌನ್ ತೆರವಾದರೂ ದೇವಸ್ಥಾನಗಳಿಗೆ ಬರಲು ನಿರ್ಬಂಧ ವಿಧಿಸಲಾಗಿದೆ. ಪರಿಣಾಮ ನಿರೀಕ್ಷಿತ ಸಂಖ್ಯೆಯಲ್ಲಿ ಭಕ್ತರು ಬರುತ್ತಿಲ್ಲ. ಜತೆಗೆ ವಿಶೇಷ ಪೂಜೆ, ಅರ್ಚನೆ, ಮಂಗಳಾರತಿ ಸೇರಿದಂತೆ ಯಾವುದಕ್ಕೂ ಅವಕಾಶ ಇಲ್ಲ. ಇದರಿಂದ ಅರ್ಚಕರಿಗೆ ಆದಾಯ ಇಲ್ಲದಂತಾಗಿದೆ ಎಂದು ಅಖೀಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಅಲವತ್ತುಕೊಂಡರು.
ನಿರ್ಬಂಧ ಇದ್ರೂ ಯಾಕೆ ಬಂದ್ರಿ ಅಂತಾರೆ?: ಬೆಂಗಳೂರು ನಗರದಲ್ಲೇ ಸುಮಾರು 1,017 ದೇವಸ್ಥಾನಗಳಿದ್ದು, ಅಲ್ಲಿ ಅರ್ಚಕರು ಮತ್ತು ಪ್ರಧಾನ ಅರ್ಚಕರು ಸುಮಾರು 3000 ಮಂದಿ ಇದ್ದಾರೆ. ಈ ಪೈಕಿ 65 ವರ್ಷ ಮೇಲ್ಪಟ್ಟವರು ಸಾವಿರಕ್ಕೂ ಅಧಿಕ. ಪ್ರಸಿದ್ಧ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನ, ಮಹಾಗಣಪತಿ ದೇವಸ್ಥಾನ, ಲಕ್ಷ್ಮೀನರಸಿಂಹ ದೇವಸ್ಥಾನಗಳು ಸೇರಿದಂತೆ ಹಲವೆಡೆ ವಯೋವೃದ್ಧರಿದ್ದಾರೆ. “65 ವರ್ಷ ಮೇಲ್ಪಟ್ಟವರು ಬರುವಂತಿಲ್ಲ ಎಂದು ಸರ್ಕಾರ ಹೇಳಿದೆ. ಆದರೂ ಬಂದಿದ್ದೀರಲ್ಲಾ’ ಎಂದು ಭಕ್ತರು ಕೇಳುತ್ತಾರೆ. ಆದರೆ, ಕುಟುಂಬ ನಿರ್ವಹಣೆಗೆ ಪರ್ಯಾಯ ಮಾರ್ಗಗಳೇ ಇಲ್ಲ’ ಎಂದು ದೀಕ್ಷಿತ್ ಮಾಹಿತಿ ನೀಡಿದರು.
65 ವರ್ಷ ಮೇಲ್ಪಟ್ಟವರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ಮನೆಯಲ್ಲಿದ್ದು ಸ್ವಯಂ ಶಿಸ್ತು ಪಾಲಿಸುವಂತೆ ಸೂಚಿಸಲಾಗಿದೆ. ಈ ನಿಯಮ ಭಕ್ತರಿಗೆ ಮತ್ತು ಅರ್ಚಕರಿಗೂ ಅನ್ವಯಿಸುತ್ತದೆ. ಸಾಧ್ಯವಾದಷ್ಟು ನಿಯಮಗಳನ್ನು ಪಾಲಿಸಬೇಕು.
-ಕೋಟಾ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ
* ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.