![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 24, 2021, 1:39 PM IST
ಬೆಂಗಳೂರು: ರಾಜ್ಯದ ಯುವ ಜನತೆಗೆ ಉದ್ಯೋಗಾವಕಾಶ ಒದಗಿಸುವ ದೃಷ್ಟಿಯಿಂದ ಹಮ್ಮಿಕೊಂಡಿರುವ ವರ್ಚುವಲ್ ಉದ್ಯೋಗ ಮೇಳದಲ್ಲಿ ಮೊದಲ ದಿನ ಒಂದು ಸಾವಿರ ಅಭ್ಯರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.
ಕೌಶಲ್ಯಮಾಸದ ಪ್ರಯುಕ್ತ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮವು ಶುಕ್ರವಾರ ಹಮ್ಮಿಕೊಂಡಿದ್ದ ಮೊದಲ ದಿನದ ವರ್ಚುಯಲ್ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ 5,000 ಯುವಕ-ಯುವತಿಯರಲ್ಲಿ 1 ಸಾವಿರ ಯುವಜನರು ವಿವಿಧ ಪ್ರತಿಷ್ಠಿತ ಕಂಪನಿಗಳ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಬೆಂಗಳೂರಿನಲ್ಲಿ ವರ್ಚುಯಲ್ ಮೇಳದಲ್ಲಿ ಪಾಲ್ಗೊಂಡು ಸಾಂಕೇತಿಕವಾಗಿ ಕೆಲ ಯುವಕ ಯುವತಿಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿ ಮಾತನಾಡಿ, ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತ ಕಂಪನಿಗಳ ಜತೆ ಕೌಶಲ್ಯಾಭಿವೃದ್ಧಿ ನಿಗಮವು ಸೇತುವೆಯಾಗಿ ಕೆಲಸ ಮಾಡುತ್ತಿದ್ದು, ಉದ್ಯೋಗ ಮೇಳ ತಿಂಗಳು ಪೂರ್ತಿ ಮುಂದುವರಿಯಲಿದೆ ಎಂದರು.
ಈ ಮೇಳದಲ್ಲಿ ಎಚ್‌ಜಿಎಸ್, ಆದಿತ್ಯ ಬಿರ್ಲಾ, ಸನ್ ಸೆರಾ ಎಂಜಿನಿಯರಿಂಗ್, ಐಬಿಎಂ ಇಂಡಿಯಾ, ವಿಪ್ರೊ, ಟೀಮ್ ಲೀಸ್, ರಿಲಯನ್ಸ್ ಕಂಪನಿಯ ಏಳು ಸಹ ಕಂಪನಿಗಳು, ಅಫ್ರಿಮ್ ಡಾಟಾ ಸರ್ವೀಸ್, ಡ್ರೀಮ್ ಆರ್ಬಿಟ್, ಹಿಂದುಜಾ, ವಿಸ್ಟ್ರಾನ್, ಫ್ಲಿಪ್‌ಕಾರ್ಟ್, ಡಿಎಚ್‌ಎಲ್, ಅಲ್ ಲಾಜಿಸ್ಟಿಕ್ಸ್, ಮೆಡಿಝಿನಿಕಾ, ಮೆಶೋ, ಗ್ರಾಸ್‌ರೂಟ್ಸ್ ಬಿಪಿಒ, ಇಂಡಿಯನ್ ಮನಿ, ನವತಾ ರೋಡ್ ಟ್ರಾನ್ಸ್‌ಪೊರ್ಟ್, ಎಕಾಮ್ ಎಕ್ಸ್ ಪ್ರೆಸ್, ಲ್ಯಾಂಡ್‌ಮಾರ್ಕ್, ಐಟಿಸಿ, ಕ್ವೆಸ್ ಕಾರ್ಪ್, ಸ್ಟ್ರೆಪರಾವಾ ಇಂಡಿಯಾ ಸೇರಿ ಇಪ್ಪತ್ತಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ.
ದೇಶದಲ್ಲಿ ಕರ್ನಾಟಕ ಅವಕಾಶಗಳ ಆಗರವಾಗಿದ್ದು, ಪ್ರತಿ ವರ್ಷ ಸಂಘಟಿತ ವಲಯದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಭವಿಷ್ಯ ನಿಧಿ ಮತ್ತು ಇಎಸ್‌ಐ ಸೌಲಭ್ಯಕ್ಕೆ ನೋಂದಣಿ ಆಗುತ್ತಿದ್ದಾರೆ. ಇದರ ಜತೆಗೆ, 25,000ಕ್ಕೂ ಹೆಚ್ಚು ವೇತನ ಪಡೆಯುವ ಯುವಕ, ಯುವತಿಯರು ಇದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಉದ್ಯೋಗಕ್ಕೆ ಸೇರುತ್ತಿರುವ ಅಂಕಿ-ಅಂಶಗಳು ಸರ್ಕಾರದ ಬಳಿ ಇದೆ ಎಂದು ಹೇಳಿದರು.
ಐದು ಲಕ್ಷ ಭಾರತೀಯರಿಗೆ ಉದ್ಯೋಗಾವಕಾಶ ನೀಡಲು ಜಪಾನ್ ಮುಂದೆ ಬಂದಿದ್ದು, ಈ ಬಗ್ಗೆ ಭಾರತ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ. ಹಾಗೆಯೇ ಹಲವು ದೇಶಗಳು ಭಾರತೀಯ ಕೌಶಲ್ಯಾಧಾರಿತ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಇಟ್ಟಿವೆ. ಬ್ರಿಟನ್‌ಗೆ1 ಸಾವಿರ ಶುಶ್ರೂಷಕರನ್ನು ಕಳಿಸುವ ಬಗ್ಗೆಯೂ ಒಪ್ಪಂದ ಆಗಿದೆ ಎಂದು ಮಾಹಿತಿ ನೀಡಿದರು. ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಇಲಾಖೆಯ ಉಪ ಕಾರ್ಯದರ್ಶಿ ಮಾರುತಿ ಪ್ರಸನ್ನ ಇದ್ದರು.
You seem to have an Ad Blocker on.
To continue reading, please turn it off or whitelist Udayavani.