ಗರ್ಭಿಣಿಗೆ ಸೋಂಕು: ಹೆಚ್ಚಿದ ಆತಂಕ
Team Udayavani, May 9, 2020, 10:05 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಪಾದರಾಯನಪುರದಲ್ಲಿ ಕೋವಿಡ್ ಸೋಂಕು ದೃಢಪಟ್ಟ ಗರ್ಭಿಣಿಯೊಬ್ಬರು ಶುಕ್ರವಾರ ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆಗೆ ಒಳಗಾದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ. ಸೋಂಕು ದೃಢಪಟ್ಟ ಮಹಿಳೆ ನಿಂತಿದ್ದ ಸರತಿ ಸಾಲಿನಲ್ಲಿ 30ಕ್ಕೂ ಹೆಚ್ಚು ಗರ್ಭಿಣಿಯರು ತಪಾಸಣೆಗೆ ಕಾಯುತ್ತಿದ್ದರು.
ಮುಂಜಾ ಗ್ರತಾ ಕ್ರಮವಾಗಿ ಚಾಮರಾಜ ಪೇಟೆಯ ಬಿಬಿಎಂಪಿ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಸೋಂಕು ನಿವಾರಕ ದ್ರಾವಣ ಸಿಂಪಡಣೆ ಸೇರಿದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಪ್ರತಿಕ್ರಿಯಿಸಿ, ಇತ್ತೀಚೆಗೆ ಪಾದರಾಯನಪುರದಲ್ಲಿ 48 ಜನರಿಗೆ ರ್‍ಯಾಂಡಮ್ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಸೇರಿ ಒಟ್ಟು ಮೂರು ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಒಬ್ಬರು ಗರ್ಭಿಣಿಗೂ ಸೋಂಕಿದೆ. ಕ್ವಾರೆಂಟೈನ್ ಮಾಡಲು ಶುಕ್ರವಾರ ಪಾದರಾಯನಪುರಕ್ಕೆ ಹೋಗುವಷ್ಟರಲ್ಲಿ ಮಹಿಳೆ ಚಾಮರಾಜ ಪೇಟೆಯಲ್ಲಿರುವ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದರು. ಕೂಡಲೇ ಅವರನ್ನು ಕ್ವಾರೆಂಟೈನ್ ಮಾಡಿ ವಿಕ್ಟೋರಿಯಾ ಆಸ್ಪತ್ರೆ ಸ್ಥಳಾಂತರಿಸಲಾಗಿದೆ ಎಂದರು.
ಆತಂಕ ಪಡುವ ಅಗತ್ಯ ಇಲ್ಲ: ಸೋಂಕು ದೃಢಪಟ್ಟ ಗರ್ಭಿಣಿ ಜತೆ ಹೆರಿಗೆ ಆಸ್ಪತ್ರೆಯಲ್ಲಿ ಸಾಲಿನಲ್ಲಿದ್ದ ಇತರೆ ಗರ್ಭಿಣಿಯರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಆದರೂ ಮುಂಜಾಗ್ರತೆಗಾಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇವರನ್ನು ಕ್ವಾರಂಟೈನ್ ಮಾಡುವ ಬಗ್ಗೆ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಇನ್ನು ಪಾದರಾಯನಪುರ ದಲ್ಲಿ ರ್‍ಯಾಂಡಮ್ ಪರೀಕ್ಷೆ ಮೇಲೆ ಸೋಂಕು ದೃಢಪಟ್ಟ ಮೂವರರೊಂದಿಗೆ ಸಂಪರ್ಕದಲ್ಲಿದ್ದ 30 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳು ತಬ್ಬಿಬ್ಬು
ಪಾದರಾಯನಪುರದಲ್ಲಿ ಗುರುವಾರ ರಾತ್ರಿಯೇ ಗರ್ಭಿಣಿಗೆ ಸೋಂಕು ದೃಢಪಟ್ಟಿತ್ತು. ಆದರೆ, ಬಿಬಿಎಂಪಿ ಆಕೆ ಆಸ್ಪತ್ರೆಗೆ ದಾಖಲಾಗುವ ಸಂಬಂಧ ಮಾಹಿತಿ ನೀಡಿರಲಿಲ್ಲ. ಆಕೆ,
ಶುಕ್ರವಾರ ಬೆಳಗ್ಗೆ ಹೆರಿಗೆ ಆಸ್ಪತ್ರೆಯೊಂದಕ್ಕೆ ತೆರಳಿ ತನ್ನ ಆರೋಗ್ಯ ತಪಾಸಣೆಗೋಸ್ಕರ ಸರತಿ ಸಾಲಿನಲ್ಲಿ ನಿಂತಿದ್ದರು. ಅತ್ತ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಗರ್ಭಿಣಿ ಮನೆಗೆ ತೆರಳಿ ವಿಚಾರಿಸಿದಾಗ ಅಲ್ಲಿರಲಿಲ್ಲ. ಆಕೆ ಆಸ್ಪತ್ರೆಗೆ ತೆರಳಿದರೆಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ತಬ್ಬಿಬ್ಟಾದ ಅಧಿಕಾರಿಗಳು ವಿವಿಧ ಆಸ್ಪತ್ರೆಗಳಿಗೆ ಅಲೆದಾಡಿದರು. ಸುಮಾರು ಮೂರು ತಾಸು ಬಳಿಕ ಆ ಮಹಿಳೆ ಹೆರಿಗೆ ಆಸ್ಪತ್ರೆಯೊಂದರ ಬಳಿ ಕಂಡುಬಂದರು!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.