Farmers: ರೈತರ ಕೊರಳು ಸುತ್ತಿರುವ ರಿಂಗ್ ಕಳಚುತ್ತಾ?
Team Udayavani, Oct 23, 2023, 1:39 PM IST
ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆ ತಗ್ಗಿಸಲು ರೂಪಿಸಿರುವ ಪಿಆರ್‌ಆರ್ ಯೋಜನೆ 18 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಅಧಿಸೂಚನೆ ಬಳಿಕ ರೈತರು ಪರಿಹಾರಕ್ಕಾಗಿ ಕಾದು ಕುಳಿತಿದ್ದಾರೆ. ಸರ್ಕಾರದ ಕ್ರಮ ಹಾಗೂ ರೈತರು ಅನುಭವಿಸುತ್ತಿರುವ ಬವಣೆ ಬಗ್ಗೆ “ಉದಯವಾಣಿ’ ಸುದ್ದಿ ಸುತ್ತಾಟದ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.
ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲೆಂದು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ರೂಪಿಸಿರುವ “ಪೆರಿಫೆರಲ್ ರಿಂಗ್ ರಸ್ತೆ’ (ಪಿಆರ್‌ಆರ್) ಕಾಮಗಾರಿಗೇ ಮುಕ್ತಿ ಸಿಗುವುದು ಅನುಮಾನವಾಗಿದೆ.
ಒಂದು ಯೋಜನೆ ಆರಂಭಿಸಲು ಎಷ್ಟು ಸಮಯ ಬೇಕಾಗಬಹುದು, 18 ವರ್ಷಗಳಿಂದ ಈ ಪೆರಿಫೆರಲ್ ರಸ್ತೆ ಕಾಮಗಾರಿ ಆರಂಭಿಸಲು ಇನ್ನೂ ಕಾಲ ಕೂಡಿ ಬಂದಿಲ್ಲ. ಇದಕ್ಕೆ ತಗಲುವ 22 ಸಾವಿರ ಕೋಟಿ ರೂ. ವೆಚ್ಚ ಭರಿಸಲು ಸರ್ಕಾರ ಕಸರತ್ತು ನಡೆಸುತ್ತಿದೆ. ಇತ್ತ “ಪೆರಿಫೆರಲ್ ರಿಂಗ್ ರಸ್ತೆ’ಗಾಗಿ ಭೂಮಿ ಕಳೆದುಕೊಂಡ ರೈತರು ಪರಿಹಾರವೂ ಇಲ್ಲದೆ, ಭೂಮಿ ಮಾರಲೂ ಆಗದೆ, ಸಾಲವೂ ಸಿಗದೆ ಕಂಗಾಲಾಗಿದ್ದಾರೆ.
ಹಿಂದೆ ದುಡ್ಡಿನ ಅಗತ್ಯ ಬಿದ್ದರೆ ಭೂಮಿ ಅಡವಿಟ್ಟು ಸಾಲ ಪಡೆಯುತ್ತಿದ್ದೆವು. ಪಿಆರ್‌ಆರ್ ಯೋಜನೆಗೆ ಅಧಿಸೂಚನೆ ಹೊರಡಿಸಿದ ಬಳಿಕ ಹತ್ತಾರು ವರ್ಷಗಳಿಂದ ಸಾಲ ಪಡೆಯುವುದಿರಲಿ, ನಮ್ಮ ಸ್ವಂತ ಭೂಮಿ ಮಾರಾಟ ಮಾಡಲೂ ಅಧಿಕಾರವಿಲ್ಲ. ಇತ್ತ ಬಿಡಿಎ ಅಧಿಕಾರಿಗಳು ಪರಿಹಾರ ಕೊಡುವ ಆಶ್ವಾಸನೆ ಕೊಟ್ಟು ಹತ್ತಾರು ವರ್ಷಗಳೇ ಉರುಳಿದರೂ ಬಿಡಿಗಾಸೂ ಕೊಟ್ಟಿಲ್ಲ. ಇದುವರೆಗೆ ನಮ್ಮ ಜಮೀನೇ ನಮಗೆ ಸರ್ವಸ್ವವಾಗಿತ್ತು. ಮುಂದೆ ಜೀವನ ನಿರ್ವಹಣೆಯೇ ದೊಡ್ಡ ಸವಾಲಾಗಿದೆ… ಇದು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡಿರುವ 2 ಸಾವಿರಕ್ಕೂ ಹೆಚ್ಚಿನ ರೈತರ ಮನದಾಳದ ಮಾತುಗಳು.
ಏನಿದು ಪಿಆರ್‌ಆರ್ ಯೋಜನೆ?
2005ರಲ್ಲಿ ಸರ್ಕಾರದ ಮಟ್ಟದಲ್ಲಿ ಕುಡಿಯೊಡೆದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸುವ ಕೆಲಸ 18 ವರ್ಷವಾದರೂ ಭೂಸ್ವಾಧೀನ, ಪರಿಹಾರ ನೀಡಿಕೆ ಪ್ರಕ್ರಿಯೆಯಿಂದ ಮುಂದಕ್ಕೇ ಹೋಗಿಲ್ಲ. 2007ರ ಜೂ.29ರಲ್ಲಿ 1,527 ರೈತ ಕುಟುಂಬದ 1810.18 ಎಕರೆಯನ್ನು ಭೂಸ್ವಾಧೀನಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಿದೆ. 2006 ರಿಂದ 2022 ರವರೆಗೆ 2,565 ಎಕರೆಯನ್ನು ಸುಪರ್ದಿಗೆ ಪಡೆಯಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಇದುವರೆಗೆ ಅಂತಿಮ ಅಧಿಸೂಚನೆ ಆಗಿಲ್ಲ. ವರ್ಷದಿಂದ ವರ್ಷಕ್ಕೆ ಯೋಜನೆಯ ಸ್ವರೂಪ ಬದಲಾಗುತ್ತಲೇ ಇದ್ದು, ಸದ್ಯ ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ ಒಟ್ಟು 77 ಹಳ್ಳಿಗಳನ್ನು ಒಳಗೊಂಡಿರುವ 73 ಕಿ.ಮೀ. ವ್ಯಾಪ್ತಿಯಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ.
ದ್ವಾದಶ ಪಥ ನಿರ್ಮಾಣ
ತುಮಕೂರು ರಸ್ತೆ-ಬಳ್ಳಾರಿ ರಸ್ತೆ-ಹಳೆ ಮದ್ರಾಸ್ ರಸ್ತೆ- ಹೊಸೂರು ರಸ್ತೆಯಲ್ಲಿ ಮೊದಲ ಭಾಗದ ಪೆರಿಫೆರಲ್ ರಸ್ತೆ ಹಾದು ಹೋಗಲಿದೆ. ಹೊಸೂರು ರಸ್ತೆ-ಕನಕಪುರ ರಸ್ತೆ-ಮೈಸೂರು ರಸ್ತೆ-ಮಾಗಡಿ ರಸ್ತೆ-ತುಮಕೂರು ರಸ್ತೆಯಲ್ಲಿ ಎರಡನೇ ಭಾಗದ ಮಾರ್ಗ ನಿರ್ಮಾಣವಾಗಲಿದೆ. 8 ಪಥದ ಮುಖ್ಯರಸ್ತೆ ಹಾಗೂ 4 ಪಥದ ಸೇವಾ ರಸ್ತೆ ನಿರ್ಮಾಣದ ಯೋಜನೆ ಇದಾಗಿದ್ದು, ಪ್ರಾಧಿಕಾರವು ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ಭಾಗ-1 ರ ವಿಸ್ತೃತ ಯೋಜನಾ ವರದಿ ತಯಾರಿಸಿ ಯೋಜನೆ ಕಾರ್ಯರೂಪಗೊಳಿಸಲು ವಿವಿಧ ಆಯಾಮಗಳಲ್ಲಿ ರೂಪುರೇಷೆ ಸಿದ್ಧಪಡಿಸಿದೆ.
ನೈಸ್ ರಸ್ತೆಯ ಮಾದರಿಯಲ್ಲೇ ರೈತರಿಗೆ ಪರಿಹಾರ ನೀಡುವ ಜವಾಬ್ದಾರಿಯನ್ನೂ ಗುತ್ತಿಗೆ ಪಡೆಯುವ ಕಂಪನಿಗಳೇ ನಿರ್ವಹಿಸಬೇಕು. ಬಳಿಕ ಈ ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರಿಂದ 50 ವರ್ಷಗಳ ಕಾಲ ಟೋಲ್ ಶುಲ್ಕ ಸಂಗ್ರಹಿಸಿ, ಪರಿಹಾರ ನೀಡಿರುವ ದುಡ್ಡನ್ನು ಹಿಂತಿರುಗಿ ಪಡೆಯಬಹುದು ಎಂದು ಸರ್ಕಾರವು ಸೂಚನೆ ನೀಡಿತ್ತು. ಈ ಷರತ್ತಿಗೆ ಯಾವ ಕಂಪನಿಗಳೂ ಒಪ್ಪಲಿಲ್ಲ. ಹೀಗಾಗಿಯೇ 2021, 2022ರಲ್ಲಿ ಎರಡು ಬಾರಿ ಟೆಂಡರ್ ಕರೆದಾಗಲೂ ಯಾವುದೇ ಕಂಪನಿಗಳು ಪಾಲ್ಗೊಳ್ಳಲು ಮುಂದೆ ಬರಲಿಲ್ಲ.
ಬಿಡಿಎ ರೈತರ ಸಮಸ್ಯೆ ಪರಿಹರಿಸಲಿ:
ಜಮೀನು ಕಳೆದುಕೊಂಡ ರೈತರಿಗೆ ಬೇರೆ ಕಡೆ ಸೂಕ್ತ ನಿವೇಶನ ಕೊಡುತ್ತಿಲ್ಲ. ಬಂಡೆ, ಹಳ್ಳ ಇರುವ ಅವ್ಯವಸ್ಥಿತ ಜಾಗಗಳಲ್ಲಿ ನಿವೇಶನ ಕೊಡಲು ಬಿಡಿಎ ಅಧಿಕಾರಿಗಳು ಮುಂದಾಗಿದ್ದಾರೆ. ಭೂಮಿ ಕಳೆದುಕೊಂಡಿರುವ ರೈತರು ತಮಗಿಷ್ಟವಿದ್ದರೆ ಪರಿಹಾರ ರೂಪದಲ್ಲಿ ದುಡ್ಡು ಪಡೆಯಬಹುದು. ಇಲ್ಲವಾದರೆ ರಸ್ತೆಗೆ ಭೂಮಿ ಬಿಟ್ಟ ರೈತರಿಗೆ ಶೇ.50ರಷ್ಟು ನಿವೇಶನ ಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ರಸ್ತೆ ನಿರ್ಮಾಣಕ್ಕೆ ಭೂಮಿ ಬಿಡುವುದಿಲ್ಲ ಎಂದು 8 ಮಂದಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಬಿಡಿಎ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ರೈತರ ಸಂಕಷ್ಟ ಆಲಿಸಿ ಅವರ ಸಮಸ್ಯೆ ಬಗೆಹರಿಸಬೇಕು ಎಂದು “ಉದಯವಾಣಿ’ ಮೂಲಕ ನಾಡಪ್ರಭು ಕೆಂಪೇಗೌಡ ಬಡವಾಣೆ ಹೋರಾಟ ಸಮಿತಿಯ ಅಧ್ಯಕ್ಷ, ರೈತ ಮುಖಂಡ ಚೆನ್ನಪ್ಪ ಒತ್ತಾಯಿಸಿದ್ದಾರೆ.
ಭೂ ಪರಿಹಾರಕ್ಕೆ ಹೊಸ ಕಾಯ್ದೆಯಡಿ ಬೇಕಿದೆ 11 ಸಾವಿರ ಕೋಟಿ ರೂ. :
ಪರಿಹಾರವನ್ನು ಹಳೆ ಭೂಸ್ವಾಧೀನ ಕಾಯ್ದೆ ಪ್ರಕಾರ ಕೊಡಬೇಕಾ? ಅಥವಾ ಹೊಸ ಕಾಯ್ದೆ ಪ್ರಕಾರ ಕೊಡಬೇಕಾ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಹಲವು ಬಾರಿ ಸರ್ಕಾರಕ್ಕೆ ಬಿಡಿಎ ಪ್ರಸ್ತಾವನೆ ಸಲ್ಲಿಸಿದೆ. 4 ತಿಂಗಳ ಹಿಂದೆಯಷ್ಟೇ ಮತ್ತೂಮ್ಮೆ ಸರ್ಕಾರದ ಗಮನಕ್ಕೆ ಈ ಅಂಶ ತರಲಾಗಿದೆ. ಆದರೆ, ಇದುವರೆಗೆ ಸರ್ಕಾರದಿಂದ ಪ್ರತಿಕ್ರಿಯೆ ಬಂದಿಲ್ಲ ಎನ್ನುತ್ತಾರೆ ಬಿಡಿಎ ಅಧಿಕಾರಿಗಳು. ಇನ್ನು ಹಳೆ ಕಾಯ್ದೆ ಪ್ರಕಾರ ಪರಿಹಾರ ನೀಡಿದರೆ 4 ಸಾವಿರ ಕೋಟಿ ರೂ. ವೆಚ್ಚ ತಗುಲಲಿದೆ. ಹೊಸ ಕಾಯ್ದೆಯ ಅನ್ವಯ ಪರಿಹಾರ ಕೊಡಬೇಕಾದರೆ 11 ಸಾವಿರ ರೂ. ಬೇಕಾಗುತ್ತದೆ ಎಂದು ಬಿಡಿಎ ಅಧಿಕಾರಿಯೊಬ್ಬರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ಯೋಜನೆ ಕೈ ಬಿಟ್ಟರೆ ಒಳಿತು :
ಬಿಡಿಎಯು ಅಂತಿಮ ಅಧಿಸೂಚನೆ ಹೊರಡಿಸಿರುವ ವೇಳೆ ಆರ್‌ಟಿಸಿಯಲ್ಲಿ ರೈತರ ಭೂಮಿಯ ದಾಖಲೆ ಬಗ್ಗೆ ಉಲ್ಲೇಖೀಸಿ ರುವುದರಿಂದ ಆ ಜಾಗವನ್ನು ಮಾರಾಟ ಮಾಡಲಾಗುವುದಿಲ್ಲ. ಭೂಮಿ ಅಡವಿಟ್ಟು ಸಾಲ ಪಡೆಯಲೂ ಸಾಧ್ಯವಿಲ್ಲ. 18 ವರ್ಷಗಳ ಹಿಂದೆಯೇ ಅಂತಿಮ ಅಧಿಸೂಚನೆ ಹೊರಡಿಸಿರುವ ಬಿಡಿಎಯು ಪಿಆರ್‌ಆರ್ ಯೋಜನೆಯನ್ನು ಇನ್ನೂ ಕೈಗೆತ್ತಿಕೊಳ್ಳದೇ ಪರಿಹಾರ ನೀಡದಿರುವುದರಿಂದ ಕುಟುಂಬ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಹೀಗಾಗಿ ಯೋಜನೆ ಕೈ ಬಿಟ್ಟರೆ ಒಳ್ಳೆಯದು ಎಂದು ರೈತ ಪುಟ್ಟಣ್ಣ ಅಳಲು ತೋಡಿಕೊಂಡಿದ್ದಾರೆ.
ಒಪ್ಪೊತ್ತಿನ ಗಂಜಿಗೂ ಪರದಾಟ:
ಎರಡು ಮೂರು ಎಕರೆ ಜಾಗವನ್ನೇ ನಂಬಿ ಜೀವನ ಸಾಗಿಸುತ್ತಿದ್ದೆವು. ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರ ಕೊಟ್ಟರೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಪಟ್ಟಣದತ್ತ ಹೋಗುತ್ತೇನೆ. ಸರ್ಕಾರ ಅಧಿಸೂಚನೆ ಹೊರಡಿಸಿ ಕೈ ಕಟ್ಟಿ ಕುಳಿತ ಹಿನ್ನೆಲೆಯಲ್ಲಿ ಒಪ್ಪೊತ್ತಿನ ಗಂಜಿ ಊಟಕ್ಕೂ ಪರದಾಡುವಂತಾಗಿದೆ ಎಂದು ಭೂಮಿ ಕಳೆದುಕೊಂಡ ರೈತ ರೇಣುಕಪ್ಪ ತಿಳಿಸಿದ್ದಾರೆ.
ಸಾಲ ಸಿಗದೇ ರೈತ ಕಣ್ಣೀರು:
ತಾಯಿ ಮಧುಮೇಹದಿಂದ ಬಳಲುತ್ತಿದ್ದು, ಯಕೃತ್ತಿನ ಕಸಿ ಚಿಕಿತ್ಸೆಗೆ ದುಡ್ಡು ಬೇಕಿದೆ. ಹೂವಿನ ಕೃಷಿ ಮಾಡಿಕೊಂಡಿದ್ದೆ. ಪಿಆರ್‌ಆರ್‌ನಿಂದಾಗಿ ಕೃಷಿ ಸಾಲ ಪಡೆದು ಹೆಚ್ಚಿನ ಬೆಳೆ ಬೆಳೆಯಲು ಆಗದೇ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ರೈತ ಗೋಪಾಲ್ ಕಣ್ಣೀರು ಹಾಕಿದ್ದಾರೆ.
ಫೆರಿಫೆರಲ್ ರಿಂಗ್ ರಸ್ತೆ ನಿರ್ಮಿಸುವ ಸಂಬಂಧ ಸರ್ಕಾರದ ಹಂತದಲ್ಲಿ ಹಲವಾರು ಬಾರಿ ಸಭೆಗಳು ನಡೆದಿವೆ. ಸರ್ಕಾರವೂ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದು, ಶೀಘ್ರದಲ್ಲೇ ಕೆಲವೊಂದು ಪ್ರಕ್ರಿಯೆ ನಡೆಸಲು ಸೂಚಿಸುವ ಸಾಧ್ಯತೆಗಳಿವೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ರೈತರಿಗೆ ಪರಿಹಾರ ಕೊಡಬೇಕು. ನಂತರ ಟೆಂಡರ್ ಕರೆದು ಯೋಜನೆ ರೂಪುರೇಷೆ ಬಗ್ಗೆ ನಿರ್ಧರಿಸಬೇಕಿದೆ. -ಎನ್.ಜಯರಾಮ್, ಆಯುಕ್ತ, ಬಿಡಿಎ
ಬಿಡಿಎ ಸ್ವಾಧೀನ ಪಡಿಸಿಕೊಂಡ ಭೂಮಿಯ ಮಾಲೀಕರಿಗೆ ಪರಿಹಾರ ನೀಡುವ ಕುರಿತು ಸರ್ಕಾರದಿಂದ ಸೂಚನೆಗಳು ಬರಬೇಕಿವೆ. ಇದಾದ ಬಳಿಕ ರಸ್ತೆ ನಿರ್ಮಾಣದ ಯೋಜನೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಸರ್ಕಾರದ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. -ಡಾ|ಎಚ್.ಆರ್.ಶಾಂತಾ ರಾಜಣ್ಣ, ಅಭಿಯಂತರ ಸದಸ್ಯ. ಬಿಡಿಎ
ಫೆರಿಫೆರಲ್ ರಿಂಗ್ ರಸ್ತೆಗೆ ಸಂಬಂಧಿಸಿದಂತೆ ಹಲವಾರು ರೈತರಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪರಿಹಾರ ಒದಗಿಸಿದ ಬಳಿಕ ಸರ್ಕಾರದ ಸೂಚನೆ ಮೇರೆಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ.-ಡಾ.ಸೌಜನ್ಯ, ಉಪ ಆಯುಕ್ತೆ (ಭೂ ಸ್ವಾಧೀನ), ಬಿಡಿಎ
– ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.