ಕಾರ್ಮಿಕರ ಕೊಂದ ಕಳಪೆ ಕಾಮಗಾರಿ
ಯಶವಂತಪುರ ಎಪಿಎಂಸಿ ಯಾರ್ಡ್‌ನ ನಿರ್ಮಾಣ ಹಂತದ ಪಾರ್ಕಿಂಗ್ ಕಟ್ಟಡದ ಚಾವಣಿ ಕುಸಿತ
Team Udayavani, Apr 6, 2019, 12:14 PM IST
ಬೆಂಗಳೂರು: ಶುಕ್ರವಾರ ಬೆಳಗಿನಜಾವ 4.40ರ ಸುಮಾರಿಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ನಿರ್ಮಾಣ ಹಂತದ ಪಾರ್ಕಿಂಗ್ ಕಟ್ಟಡದ ಚಾವಣಿ ಕುಸಿದು, ಇಬ್ಬರು ಕಾರ್ಮಿಕರು ಮೃತಪಟ್ಟು, 12 ಮಂದಿ ಗಾಯಗೊಂಡಿದ್ದಾರೆ.
ಧಾರವಾಡದ ಬಹು ಅಂತಸ್ತಿನ ಕಟ್ಟಡ ಕುಸಿತದ ಕಹಿ ಘಟನೆ ಮರೆಯುವ ಮುನ್ನವೇ ಮತ್ತೂಂದು ಕಟ್ಟಡ ಕುಸಿದಿದದೆ. ವಾಹನಗಳ ಪಾರ್ಕಿಂಗ್‌ಗಾಗಿ ನಿರ್ಮಿಸುತ್ತಿದ್ದಕಟ್ಟಡದ ಎರಡನೇ ಮಹಡಿ ಚಾವಣಿ ಮೋಲ್ಡಿಂಗ್
ಮಾಡುವಾಗ ಸೆಂಟ್ರಿಂಗ್ ಸಡಿಲಗೊಂಡಿದ್ದರಿಂದ, ಚಾವಣಿ ಕುಸಿದಿದೆ. ಬಿಹಾರ ಮೂಲದ ರಾಕೇಶ್ (21) ಮತ್ತು ರಾಹುಲ್ (18) ಎಂಬ
ಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ. ಹನುಮಂತಪ್ಪ (21), ನಾಸಿರ್ ಶೇಖ್ (32), ಸಿದ್ದಪ್ಪ (23) ಮತ್ತು ಓಂ ಪ್ರಕಾಶ್ (21) ಸಾವು ಬದುಕಿನ ನಡುವೆ
ಹೋರಾಟ ನಡೆಸುತ್ತಿದ್ದಾರೆ ಎಂದು ಕಣ್ವ ಶ್ರೀಸಾಯಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಘಟನೆಯಲ್ಲಿ ದೇವರಾಜು (21), ಮಲ್ಲಿಕಾರ್ಜುನ್ (20),
ದೊಡ್ಡಪ್ಪ (21), ಗಿರಿಜ್ (35), ಅಬ್ದುಲ್ ಅಹಮದ್ ಶೇಖ್ (40), ಗೋಪಾಲಸ್ವಾಮಿ (40), ಚೋಟು ಬುಯ್ಯ (24), ನಯಾಜುಲ್ ಶೇಖ್ (30) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪ್ರಕರಣ ಸಂಬಂಧ ಕಟ್ಟಡದ ಗುತ್ತಿಗೆದಾರ ಚಂದ್ರಣ್ಣ, ಎಂಜಿನಿಯರ್ ಉಮಾಶಂಕರ್ ಎಂಬುವವರನ್ನು ಯಶವಂತಪುರ ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
“ಎಪಿಎಂಸಿ ಮಾರುಕಟ್ಟೆಯಲ್ಲಿ 77 ಕೋಟಿ ರೂ. ವೆಚ್ಚದದಲ್ಲಿ, 700ರಿಂದ 800 ವಾಹನಗಳ ನಿಲುಗಡೆ ಸಾಮರ್ಥ್ಯದ ಪಾರ್ಕಿಂಗ್ ಕಟ್ಟಡ ನಿರ್ಮಿಸುವ ಗುತ್ತಿಗೆಯನ್ನು ಸ್ಟಾರ್ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಳಿಸಲು ಎರಡು ವರ್ಷಗಳ ಗಡುವು ನೀಡಲಾಗಿತ್ತು.
ಪ್ರಕರಣದ ವಿವರವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಅನಿಲಕುಮಾರಿ ಮಾಹಿತಿ ನೀಡಿದರು
ಕೂಲಿ ಕಾರ್ಮಿಕರ ಬದುಕು ಅತಂತ್ರ
ಕೂಲಿಯನ್ನೇ ನೆಚ್ಚಿಕೊಂಡು ರಾಜಧಾನಿಗೆ ಬಂದಿದ್ದ ಹಲವು ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ದುರುಂತದಲ್ಲಿ
ಮೃತಪಟ್ಟವರು, ಗಾಯಗೊಂಡವರಿಗೆ ಕೂಲಿಯೇ ಜೀವನಾಧಾರ.
ಅವರೆಲ್ಲಾ ಹೈದರಾಬಾದ್ ಕರ್ನಾಟಕದ ಯಾದಗಿರಿ, ಪಶ್ಚಿಮ ಬಂಗಾಳ,
ಬಿಹಾರ ರಾಜ್ಯದಿಂದ ಬಂದಿದ್ದರು. ಗಾಯಾಳುಗಳನ್ನು ದಾಖಲಿಸಿದ್ದ
ನಂದಿನಿ ಲೇಔಟ್‌ನ ಖಾಸಗಿ ಆಸ್ಪತ್ರೆಗೆ ಕೆಲವರ ಸಂಬಂಧಿಕರು ಮಾತ್ರ
ಬಂದಿದ್ದರು. ಹೊರ ರಾಜ್ಯದ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿಕೊಳ್ಳಲು, ಧೈರ್ಯ ತುಂಬಲು ಅವರ ಕುಟುಂಬದವರು
ಇಲ್ಲದಿರುವುದು ಕಂಡುಬಂತು. ಕೆಲವು ಗಾಯಾಳುಗಳಿಗೆ ಪ್ರಜ್ಞೆ
ಬಂದಿರಲಿಲ್ಲ. ಇನ್ನೂ ಕೆಲವರು ನೋವಿನಿಂದ ನರಳುತ್ತಿದ್ದರು. ಬಹುತೇಕರಿಗೆ ಕಬ್ಬಿಣದ ಸರಳು ಮತ್ತು ಮರದ ತುಂಡುಗಳು ಚುಚ್ಚಿಕೊಂಡಿದ್ದು, ಬೆನ್ನು, ಕಾಲು, ಕೈ ಮತ್ತು ಮುಖಕ್ಕೆ ಗಾಯಗಳಾಗಿವೆ. ಇವರಲ್ಲಿ ಕೆಲವರಿಗೆ ಕನಿಷ್ಠ ಎರಡು ತಿಂಗಳ ವಿಶ್ರಾಂತಿ ಬೇಕು. ಮುಂದೆ ಕೂಲಿ ಕೆಲಸ ಮಾಡಲು ಸಾಧ್ಯವೋ ಇಲ್ಲವೊ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ಇವರ ದಿನದ ದುಡಿಮೆಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಕುಟುಂಬಗಳು ಅತಂತ್ರ ಸ್ಥಿತಿ ತಲುಪಿವೆ.
ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕರನ್ನು ಬಳಸಿಕೊಳ್ಳುವುದಕ್ಕೆ ಕಾರ್ಮಿಕ
ಇಲಾಖೆಯ ಅನುಮತಿ ಅಗತ್ಯ. ಆದರೆ, ಈ ಪಾರ್ಕಿಂಗ್ ಕಟ್ಟಡ
ಕಾಮಗಾರಿಗೆ ಇಲಾಖೆ ಅನುಮತಿ ಇಲ್ಲದೆ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ.
ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡ ಕಾರ್ಮಿಕರಿಗೆ
ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ ಪರಿಹಾರ
ನೀಡುವ ಬಗ್ಗೆ ಚಿಂತಿಸಲಾಗುವುದು.
● ರೇವಣ್ಣ, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ
ಪ.ಬಂಗಾಳದ ಗಿರಿಜ್ ಸಾವು ಗೆದ್ದ ಕ್ಷಣ…
ಪಶ್ಚಿಮ ಬಂಗಾಳದ ಗಿರಿಜ್ ಅವರು ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ದುರಂತವನ್ನು ಅವರು ನೆನಪಿಸಿಕೊಂಡಿದ್ದು ಹೀಗೆ; “ನೋಡ ನೋಡುತ್ತಿದ್ದಂತೆ ಕಟ್ಟಡ ಚಾವಣಿ ಮೇಲೆ ಬೀಳಲು ಪ್ರಾರಂಭಿಸಿತು. ಎಲ್ಲರೂ ಕೂಗಿಕೊಳ್ಳುತ್ತಿದ್ದರು. ಯಾರ ಮೇಲೆ ಏನು ಬೀಳುತ್ತಿದೆ, ಯಾರು ಎಲ್ಲಿ ಬೀಳುತ್ತಿದ್ದಾರೆ ಎನ್ನುವುದು ಗೊತ್ತಾಗಲೇ ಇಲ್ಲ. ನುಗ್ಗಿ ಹೊರಕ್ಕೆ ಬಂದೆ. ಕಂಬಿಗಳು ಮೇಲೆ ಬಿದ್ದವಾದರೂ ಕೆಲವೇ ನಿಮಿಷಗಳಲ್ಲಿ ನನ್ನನ್ನು ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದರು. ಆ ಕ್ಷಣದಲ್ಲಿ ನಾನು ಬದುಕುತ್ತೇನೆ ಎಂದುಕೊಂಡಿರಲಿಲ್ಲ’. ವಿದ್ಯಾಭ್ಯಾಸಕ್ಕೆ ದುಡ್ಡು ಹೊಂದಿಸಲು ಬಂದಿದ್ದ ವಿದ್ಯಾರ್ಥಿ ಸೇರಿದಂತೆ ಗಾಯಗೊಂಡವರೆಲ್ಲಾ, ದೂರದ ಊರುಗಳಿಂದ ಬಣ್ಣದ ಕನಸು ಕಟ್ಟಿಕೊಂಡು ನಗರಕ್ಕೆ
ಬಂದವರು. ಕೆಲವೇ ಕ್ಷಣಗಳಲ್ಲಿ ಅವರ ಕನಸು ನುಚ್ಚುನೂರಾಗಿದೆ. ಈ ಪೈಕಿ ಯಾದಗಿರಿಯ ಹನುಮಂತ ಸಹ ಒಬ್ಬರು. ಯಾದಗಿರಿಯಲ್ಲಿ ಪಿಯುಸಿ (ವಿಜ್ಞಾನ) ವಿದ್ಯಾಭ್ಯಾಸ ಮಾಡುತ್ತಿದ್ದ ಹನುಮಂತ, ಕಾಲೇಜು ಶುಲ್ಕ ಪಾವತಿಸಲುಎಂದು ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದ. ಈಗ ಆತನಿಗೆ
ಮೂತ್ರ ವಿರ್ಸಜನೆ ವೇಳೆ ರಕ್ತಸ್ರಾವವಾಗುತ್ತಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಹಜವಾಗಿ ಮಾತನಾಡುತ್ತಿದ್ದಾನೆ. ಮನೆಯವರಿಗೆ ವಿಷಯ ತಲುಪಿಸಿದ್ದೇವೆ. ಶನಿವಾರ ಬೆಳಗ್ಗೆ ಬೆಂಗಳೂರು ತಲುಪಲಿದ್ದಾರೆ’ ಎಂದು ಹನುಂತು ಗೆಳೆಯ ಅಬ್ದುಲ್ ರಶೀದ್ ತಿಳಿಸಿದರು.
ಚಾವಣಿ ಕುಸಿಯಲು ಕಾರಣವೇನು?
ಕಟ್ಟಡದ ಸೆಂಟ್ರಿಂಗ್ ತಳಭಾಗ ಕುಸಿದಿರುವುದೇ ಚಾವಣಿ ಕುಸಿಯಲು ಮುಖ್ಯ ಕಾರಣ ಎನ್ನಲಾಗಿದೆ. ಸೆಂಟ್ರಿಂಗ್‌ಗೆ ಯಾವುದೇ ಬಲವಾದ ಆಧಾರ ನೀಡಿರಲಿಲ್ಲ ಮತ್ತು ಸೆಂಟ್ರಿಂಗ್ ನ ಕೆಳಭಾಗದ ಮಣ್ಣು ಸಡಿಲವಾಗಿತ್ತು. ಹೀಗಾಗಿ ಎರಡನೇ ಮಹಡಿಯ ಚಾವಣಿಗೆ ಕಾಂಕ್ರೀಟ್ ಹಾಕುವಾಗ, ಸಿಮೆಂಟ್ ಮತ್ತು ಕಬ್ಬಿಣದ ಕಂಬಿಗಳ ಸಹಿತ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಎರಡನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದವರು ಮೇಲಿಂದ ಬಿದ್ದಿದ್ದಾರೆ. ಕೆಳಗಡೆ ಕೆಲಸ ಮಾಡುತ್ತಿದ್ದವರು ಕಬ್ಬಿಣ ಮತ್ತು ಸಿಮೆಂಟ್ ನಡುವೆ ಸಿಲುಕಿದ್ದು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಿಸಿದರು.
ಮುಂಜಾಗ್ರತೆ ಕ್ರಮವಿಲ್ಲ
ಪಾರ್ಕಿಂಗ್ ಕಟ್ಟಡ ಕಾಮಗಾರಿಯನ್ನು ಗಡುವಿನ ಒಳಗೆ ಪೂರ್ಣಗೊಳಿಸುವ ಭರದಲ್ಲಿ ರಾತ್ರಿ ವೇಳೆಯೂ ನಿರ್ಮಾಣ ಕೆಲಸ ನಡೆಸಲಾಗುತ್ತಿತ್ತು ಎಂದು ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಹೇಳಿದರು. ತ್ವರಿತಗತಿಯಲ್ಲಿ ಕೆಲಸ ಮುಗಿಸುವಂತೆ ಮಾಲಿಕರು ಒತ್ತಡ ಹಾಕುತ್ತಿದ್ದರು. ಈ ಅವಸರದಲ್ಲಿ ಸುರಕ್ಷತಾ ಕ್ರಮ ತೆಗೆದುಕೊಂಡಿರಲಿಲ್ಲ ಎನ್ನುವುದು ಅವರ ಆರೋಪ. ಘಟನೆ ವೇಳೆ, ಕುಸಿದ ಕಟ್ಟಡದ ಪಕ್ಕದ, ಶ್ರೀ ಗುರು
ರಾಘವೇಂದ್ರ ವಾಣಿಜ್ಯ ಕಟ್ಟಡಕ್ಕೂ ಹಾನಿಯಾಗಿದ್ದು, ಈ ಕಟ್ಟಡದ ಮಾಲೀಕರು ಕಟ್ಟಡ ಬೀಳುವ ಆತಂಕ ಎದುರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.