ಪ್ರಿಯಕರನ ವಂಚನೆ; ಕಿರುತೆರೆ ನಟಿ ಆತ್ಮಹತ್ಯೆ
Team Udayavani, Jun 2, 2020, 6:22 AM IST
ಬೆಂಗಳೂರು: ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ವಂಚನೆ ಮಾಡಿದ ಪ್ರಿಯಕರನ ವಿರುದ್ಧ ಕಿರುತೆರೆ ನಟಿಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾವರೆಕೆರೆ ನಿವಾಸಿ ಚಂದನಾ (29) ಆತ್ಮಹತ್ಯೆ ಮಾಡಿಕೊಂಡ ನಟಿ. ಈ ಸಂಬಂಧ ಪ್ರಿಯಕರ ದಿನೇಶ್, ಆತನ ತಂದೆ ಲೋಕಪ್ಪಗೌಡ, ತಾಯಿ ಗಾಯತ್ರಿ, ಚಿಕ್ಕಪ್ಪ ಶೈಲಾ, ಸೋದರ ಮಾವ ಸ್ವಾಮಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಂದನಾ ಕೆಲ ವರ್ಷಗಳಿಂದ ತಾವರೆಕೆರೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಿರುತೆರೆ ಹಾಗೂ ಜಾಹೀರಾತುಗಳಲ್ಲಿ ಚಂದನಾ ನಟಿಸಿದ್ದರು. ಐದು ವರ್ಷದಿಂದ ಬಾಷ್ ಕಂಪನಿ ಉದ್ಯೋಗಿಯಾಗಿರುವ ದಿನೇಶ್ ಎಂಬಾತನನ್ನು ಚಂದನಾ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ದಿನೇಶ್, ಚಂದನಾ ಜತೆ ಲೈಂಗಿಕ ಸಂಪರ್ಕ ಮಾಡಿದ್ದಾನೆ. ಅಲ್ಲದೆ, ಹಲವು ಬಾರಿ ಚಂದನಾಗೆ ಗರ್ಭಪಾತ ಮಾಡಿಸಿದ್ದ. ಆಕೆಯ ಬಳಿ ಐದು ಲಕ್ಷ ರೂ. ಕೂಡ ಪಡೆದಿದ್ದ. ಇತ್ತೀಚೆಗೆ ಮದುವೆ ಮಾಡಿಕೊಳ್ಳಲು ಆರೋಪಿ ಹಾಗೂ ಆತನ ಕುಟುಂಬಸ್ಥರು ನಿರಾಕರಿಸಿದ್ದರು ಎಂದು ದೂರಲಾಗಿದೆ.
ಅದೇ ವಿಚಾರಕ್ಕೆ ದಿನೇಶ್ ಹಾಗೂ ಆತನ ಮನೆಯವರು ಚಂದನಾ ಬಳಿ ಜಗಳವಾಡಿದ್ದರು. ದಿನೇಶ್ ಪ್ರೇಯಸಿಯ ನಡತೆ ಬಗ್ಗೆ ಕೆಟ್ಟದಾಗಿ ನಿಂದಿಸುತ್ತಿದ್ದ. ಅದೆಲ್ಲದರಿಂದ ಬೇಸತ್ತ ಚಂದನಾ ಮೇ. 28 ರಂದು ವಿಷ ಸೇವಿಸಿದ್ದರು. ಈ ವಿಚಾರವನ್ನು ಪ್ರಿಯಕರ ಚಂದನ್‌ಗೂ ತಿಳಿಸಿದ್ದರು. ಆತ ಕೂಡ ಸ್ಥಳಕ್ಕೆ ಬಂದಿದ್ದು, ಅಸ್ವಸ್ಥಗೊಂಡಿದ್ದ ಚಂದನಾರನ್ನು ಸ್ಥಳೀಯರ ನೆರವಿನೊಂದಿಗೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ, ಚಿಕಿತ್ಸೆ ಫಲಿಸದೇ ಚಂದನಾ ಮೇ 30 ರಂದು ಮೃತಪಟ್ಟಿದ್ದಾರೆ. ಚಂದನಾ ಸಾವಿನ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ವೈರಲ್ ವಿಡಿಯೋದಲ್ಲೇನಿದೆ?: ಚಂದನಾ ಆತ್ಮಹತ್ಯೆಗೂ ಮೊದಲು ನನ್ನ ಸಾವಿಗೆ ದಿನೇಶ್ ಕಾರಣ ಎಂದು ಸೆಲ್ಫಿ ವಿಡಿಯೋ ಮಾಡಿದ್ದಾರೆ. “ನನ್ನ ಅರ್ಥ ಮಾಡಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ದಿನೇಶ್. ನಾನು ಪಿಯುಸಿಯಲ್ಲಿ ತುಂಬ ಆಟ ಆಡಿದ್ದೀನಿ ಅಲ್ವ. ನನ್ನ ಬಗ್ಗೆ ಹೇಳಿರುವವರನ್ನು ನನ್ನ ಮುಂದೆ ಕರೆ ತನ್ನಿ. ಯಾರೊಂದಿಗೆ ಹೋಗಿದ್ದೀನಿ? ಹೋಗಿಲ್ಲ ಎಂದು ನಿಮ್ಮ ಬಳಿ ಹೇಳುತ್ತಾರೆ. ಇದುವರೆಗೂ ಬದುಕುವ ಆಸೆ ಇತ್ತು. ಇವತ್ತಿನಿಂದ ಬದುಕುವ ಆಸೆ ಇಲ್ಲ. ಒಂದು ಹೇಳುತ್ತೀನಿ. ನಾನು ಯಾವ ತಪ್ಪು ಮಾಡಿಲ್ಲ. ನಾನು ಏನು ಮಾಡಿದ್ದೆ ಎಂಬುದನ್ನು ನೀವು ಕೇಳಿದಾಗಲೇ ಹೇಳಿದ್ದೀನಿ.
ಇವತ್ತು ನಾನು ಸತ್ತೆ. ನನ್ನ ಸಾವಿಗೆ ನೀವೇ ಕಾರಣ. ಲೈಫ್‌ನಲ್ಲಿ ಯಾವ ಯುವತಿ ಜತೆ ಕೂಡ ಆಟ ಆಡಬೇಡಿ. ನನ್ನ ಲೈಫನ್ನು ಪೂರ್ಣ ಹಾಳು ಮಾಡಿದ್ದೀರಾ. ಇಷ್ಟು ದಿನ ನಾನು ಏನೇ ಮಾಡಿದ್ದರೂ, ಅದು ನಿಮ್ಮನ್ನು ಮದುವೆಯಾಗಲು ಮಾಡಿದ್ದೇ ಹೊರತು ಬೇರೆಯದ್ದಲ್ಲ. ನೀವು ಖುಷಿಯಾಗಿರಿ.” ಈ ಮಾತುಗಳನ್ನು ಹೇಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೀತಿ ಸೆಲ್ಫಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.